ಅಭಿಮಾನಿಗಳ ಕಣ್ತಪ್ಪಿಸಲು 5 ಆ್ಯಂಬುಲೆನ್ಸ್ ಬಳಕೆ ಮಾಡ್ಬೇಕಾಯ್ತು
* ಅಭಿಮಾನಿಗಳ ಕಣ್ತಪ್ಪಿಸಲು 5 ಆ್ಯಂಬುಲೆನ್ಸ್ ಬಳಕೆ
* ಅಪ್ಪು ದರ್ಶನಕ್ಕಾಗಿ ಜನರ ಬಿಗಿಪಟ್ಟು
* ಮೃತದೇಹವನ್ನು ನಿವಾಸಕ್ಕೆ ಒಯ್ಯಲು ಸರಣಿ ಆ್ಯಂಬುಲೆನ್ಸ್ ನಿಯೋಜನೆ
* ಸಾವು ಪ್ರಕಟಿಸುತ್ತಿದ್ದಂತೆ ಅಭಿಮಾನಿಗಳ ಆಕ್ರಂದನ
ಬೆಂಗಳೂರು(ಅ. 30) ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ (Puneeth Rajkumar)ನಿಧನದಿಂದ (Death) ಶೋಕಭರಿತರಾಗಿದ್ದ ಸಾವಿರಾರು ಅಭಿಮಾನಿಗಳು ಸ್ಥಳದಲ್ಲೇ ಅಂತಿಮ ದರ್ಶನಕ್ಕಾಗಿ ಪಟ್ಟು ಹಿಡಿದಿದ್ದರಿಂದ ಸರಣಿ ಆ್ಯಂಬುಲೆನ್ಸ್ (Ambulance) ಬಳಸಿ ಅಭಿಮಾನಿಗಳ ಕಣ್ಣು ತಪ್ಪಿಸಿ ಪಾರ್ಥಿವ ಶರೀರವನ್ನು ‘ಪವರ್ ಸ್ಟಾರ್’ ನಿವಾಸಕ್ಕೆ ಒಯ್ದ ಘಟನೆ ನಡೆದಿದೆ.
ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ (Vikram Hospital) ದಾಖಲಾಗಿದ್ದ ಪುನೀತ್ ಅಸ್ವಸ್ಥರಾಗಿದ್ದ ಸುದ್ದಿ ಕೇಳಿ ಆಸ್ಪತ್ರೆಯ ಬಳಿ ಸಾವಿರಾರು ಜನರು ಜಮಾಯಿಸಿದ್ದರು. ಸಾವಿನ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆಯೇ ಅಭಿಮಾನಿಗಳ ಶೋಕ ಮೇರೆ ಮೀರಿತ್ತು. ದೇಹವನ್ನು ಸ್ಥಳದಿಂದ ಒಯ್ಯಲು ಕುಟುಂಬಸ್ಥರು ಮುಂದಾಗುತ್ತಿದ್ದಂತೆಯೇ ಮಿಲ್ಲರ್ಸ್ ರಸ್ತೆಯನ್ನು ಬಂದ್ ಮಾಡಿ ಪಾರ್ಥಿವ ಶರೀರ ತೋರಿಸುವಂತೆ ಜನರು ಪಟ್ಟು ಹಿಡಿದಿದ್ದರು. ಪೊಲೀಸರು, ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವರಾಜ್ ಅವರು ರಸ್ತೆ ಬಂದ್ ಮಾಡದಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಪೊಲೀಸರು (Bengaluru Police) ರಸ್ತೆಯಲ್ಲಿ ನಿಂತಿದ್ದ ವಾಹನಗಳನ್ನು ಸಂಪೂರ್ಣ ತೆರವುಗೊಳಿಸಿ ಅಭಿಮಾನಿಗಳನ್ನು ನಿಭಾಯಿಸಿ ಆ್ಯಂಬುಲೆನ್ಸ್ ಹೋಗುವಂತೆ ಮಾಡಲು ಹರಸಾಹಸ ಪಟ್ಟರು. ಆದರೂ ಪ್ರಯೋಜನವಾಗಲಿಲ್ಲ.
'ದೇವರಿಗೆ ನಿಸ್ವಾರ್ಥ ಆತ್ಮಗಳ ಮೇಲೆ ಪ್ರೀತಿ ಜಾಸ್ತಿ ' ಚಿರು-ಪುನೀತ್ ಪೋಟೋ ಹಂಚಿಕೊಂಡ ಮೇಘನಾ
ಹೀಗಾಗಿ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಅಭಿಮಾನಿಗಳಿಂದ ತಪ್ಪಿಸಿ ಕರೆದೊಯ್ಯಲು ಪೊಲೀಸರು ಆರು ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಮಾಡಿದ್ದರು. ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ಒಯ್ಯಲಾಗುತ್ತದೆ ಎಂಬ ಸುದ್ದಿ ಹರಿದಾಡುವಂತೆ ನೋಡಿಕೊಳ್ಳಲಾಯಿತು. ಒಂದು ಆ್ಯಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರವಿಟ್ಟು ಉಳಿದ ಐದು ಆ್ಯಂಬುಲೆನ್ಸ್‌ಗಳು ಹಿಂದೆ ಮುಂದೆ ಹೊರಡುವಂತೆ ಯೋಜನೆ ರೂಪಿಸಲಾಗಿತ್ತು. ಅಂತೆಯೇ ಅಭಿಮಾನಿಗಳ ಆಕ್ರಂದನದ ನಡುವೆಯೇ ಪಾರ್ಥಿವ ಶರೀರವನ್ನು ಪೊಲೀಸರ ಬೆಂಗಾವಲು ವಾಹನಗಳೊಂದಿಗೆ ಆ್ಯಂಬುಲೆನ್ಸ್‌ಗಳು ಜೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಸದಾಶಿವನಗರದಲ್ಲಿರುವ ಪುನೀತ್ ಅವರ ಸದಾಶಿವನಗರದ ನಿವಾಸಕ್ಕೆ ತೆರಳಿದವು.
ಇದರಿಂದ ಪುನೀತ್ ಅವರ ಪಾರ್ಥಿವ ಶರೀರ ಯಾವ ಆ್ಯಂಬುಲೆನ್ಸ್‌ನಲ್ಲಿ ಇದೆ ಎಂದು ಗೊತ್ತಾಗದೆ ಅಭಿಮಾನಿಗಳು ಗೊಂದಲಕ್ಕೊಳಗಾದರು. ಪೊಲೀಸ್ ಬೆಂಗಾವಲಿನಲ್ಲಿ ಆ್ಯಂಬುಲೆನ್ಸ್‌ಗಳು ಸರದಿ ಸಾಲಿನಲ್ಲಿ ಸಾಗುತ್ತಿದ್ದರೆ ರಸ್ತೆಗಳ ಇಕ್ಕೆಲುಗಳಲ್ಲಿ ಜನರು ನಿಂತು ಕಂಬನಿಗರೆದರು.
ಅದಕ್ಕೂ ಮುನ್ನ ಹೃದಯಾಘಾತದಿಂದ ಪುನೀತ್‌ಕುಮಾರ್ ಮೃತಪಟ್ಟಿರುವುದು ಖಚಿತವಾಗುತ್ತಲೇ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ವಸಂತ ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆಗೆ ನುಗ್ಗಲು ಯತ್ನಿಸಿದರು. ಜೊತೆಗೆ ಆಸ್ಪತ್ರೆ ಮುಖ್ಯದ್ವಾರ ಮತ್ತು ಹಿಂಭಾಗದ ಗೇಟ್ ಬಳಿಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ತಮ್ಮ ನೆಚ್ಚಿನ ನಟನ ಕಳೆದುಕೊಂಡ ಅಭಿಮಾನಿಗಳು ದೇವರಿಗೆ ಮತ್ತು ಆಸ್ಪತ್ರೆ ವೈದ್ಯರುಗಳಿಗೆ ಹಿಡಿಶಾಪ ಹಾಕುತ್ತಾ, ಕಣ್ಣೀರು ಸುರಿಸುತ್ತಾ ನೋಡಲು ಅವಕಾಶ ನೀಡುವಂತೆ ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಿದ್ದದ್ದು ಮನ ಕರಗಿಸುವಂತಿತ್ತು.