ಅಭಿಮಾನಿಗಳು ಎಲ್ಲ ಕನ್ನಡ ಸಿನಿಮಾ ಖುಷಿಯಾಗಿ ನೋಡಿ, ನಿಮ್ಮ ಬದುಕು ದೊಡ್ಡದು. ಹೀಗಾಗಿ ನಿಮ್ಮ ಬದುಕು ಕಟ್ಟಿಕೊಂಡರೆ ನಿಮ್ಮ ಸ್ಟಾರ್‌ಗಳಿಗೆ ಅದಕ್ಕಿಂತಲೂ ದೊಡ್ಡ ಖುಷಿ ಏನಿಲ್ಲ ಎಂದು ಚಿತ್ರನಟ ಡಾಲಿ ಧನಂಜಯ ಹೇಳಿದರು. 

ಬೆಳಗಾವಿ (ಡಿ.28): ಅಭಿಮಾನಿಗಳು ಎಲ್ಲ ಕನ್ನಡ ಸಿನಿಮಾ ಖುಷಿಯಾಗಿ ನೋಡಿ, ನಿಮ್ಮ ಬದುಕು ದೊಡ್ಡದು. ಹೀಗಾಗಿ ನಿಮ್ಮ ಬದುಕು ಕಟ್ಟಿಕೊಂಡರೆ ನಿಮ್ಮ ಸ್ಟಾರ್‌ಗಳಿಗೆ ಅದಕ್ಕಿಂತಲೂ ದೊಡ್ಡ ಖುಷಿ ಏನಿಲ್ಲ ಎಂದು ಚಿತ್ರನಟ ಡಾಲಿ ಧನಂಜಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಸ್ಟಾರ್ ನಟರ ಅಭಿಮಾನಿಗಳ ನಡುವಿನ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಭಿಮಾನಿಗಳಿಗೂ ಅವರವರ ಬದುಕು, ತಂದೆ, ತಾಯಿ, ಫ್ಯಾಮಿಲಿ ಇರುತ್ತದೆ. ಅಭಿಮಾನಿಗಳು ಹೊಡೆದಾಡುವ ಅವಶ್ಯಕತೆ ಇಲ್ಲ ಎಂದರು.

ಕನ್ನಡ ರಾಜ್ಯೋತ್ಸವದ ಸಮಯದಲ್ಲಿಯೂ ನಾನು ಬೆಳಗಾವಿಗೆ ಬಂದಿದ್ದೆ. ಬೆಳಗಾವಿಗೆ ಬರುವುದು ನನಗೆ ದೊಡ್ಡ ಖುಷಿ. ನಾಡು, ನುಡಿ ವಿಚಾರದಲ್ಲಿ ಪ್ರೊಡೆಕ್ಟಿವ್‌ ಆಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನಮ್ಮ ಜೀವನ ಅಂದರೆ ನಮ್ಮ ಭಾಷೆ, ಹಾಗೆಯೇ ನಾಡು, ನುಡಿ ವಿಚಾರಕ್ಕೆ ನಾವು ಬದ್ದರಾಗಿರಲೇಬೇಕು. ಇರುತ್ತೇವೆ. ಅದೇ ನಮ್ಮ ಉಸಿರು ಎಂದು ತಿಳಿಸಿದರು. ಬಳಿಕ, ನಟಿ ಸಪ್ತಮಿಗೌಡ ಮಾತನಾಡಿ, ಅಭಿಮಾನಿಗಳು ಎಲ್ಲ ನಟ, ನಟಿಯರ ಚಿತ್ರಗಳನ್ನು ನೋಡಬೇಕು. ಕನ್ನಡ ಸಿನಿಮಾಗಳು ಒಂದು ಹೋರಾಟ. ಕನ್ನಡ ಸಿನಿಮಾಗಳು ಬಂದರೆ ಯಾರೇ ಹಿರೋ, ಹಿರೋಯಿನ್‌ ಇದ್ದರೂ ನೋಡಬೇಕು. ಕನ್ನಡ ಚಿತ್ರವನ್ನು ಬೆಂಬಲಿಸಿದರೆ ಕಲಾವಿದರ ಜೀವನ ನಡೆಯುತ್ತದೆ. ಎಲ್ಲ ನಟರ ಚಿತ್ರಗಳನ್ನು ನೋಡಬೇಕು ಎಂದು ಮನವಿ ಮಾಡಿದರು.

ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ

ನಗರದ ಸರ್ದಾರ ಮೈದಾನದಲ್ಲಿ ಶನಿವಾರ ಸಂಜೆ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ಆಯೋಜಿಸಿದ್ದ ಬೆಳಗಾವಿ ಉತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು. ನೆಟ್ಟಿನ ಚಿತ್ರನಟರನ್ನು ನೋಡಿ ಸಾವಿರಾರು ಜನರು ಕುಣಿದು ಕುಪ್ಪಳಿಸಿದರು. ಚಿತ್ರನಟರಾದ ಡಾಲಿ ಧನಂಜಯ, ನಿನಾಸಂ ಸತೀಶ, ವಸಿಷ್ಠ ಸಿಂಹ, ನಟಿಯರಾದ ಸಪ್ತಮಿಗೌಡ, ರಾಗಿಣಿ ಅವರು ವೇದಿಕೆ ಹತ್ತುತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಈ ವೇಳೆ ನಟ-ನಟಿಯರು ತಮ್ಮ‌ ಸಿನಿಮಾದ ಹಾಡುಗಳಿಗೆ ಸಖತ್ ಸ್ಪೆಪ್ ಹಾಕಿದರು.

ನೀನಾಸಂ ಸತೀಶ ಮಾತನಾಡಿ, ಬೆಳಗಾವಿ ಮೈಸೂರಿನಷ್ಟೇ ಸುಂದರವಾಗಿದೆ. ಇಲ್ಲಿನ ಪರಿಸರ ತುಂಬಾ ಚೆನ್ನಾಗಿದೆ. ಅದರಂತೆಯೇ ಇಲ್ಲಿನ ಜನರೂ ಇದ್ದಾರೆ. ಕುಂದಾ, ಮಿರ್ಚಿ, ಮಂಡಕ್ಕಿ ಸವಿದೇವು. ಇದರ ಸವಿಯಂತೆಯೇ ಉತ್ತರ ಕರ್ನಾಟಕದ ಜನರ ಪ್ರೀತಿ ನಮ್ಮ ಮೇಲೆ ಇರುತ್ತದೆ. ಉತ್ತರ ಕರ್ನಾಟಕ ಭಾಗದ ಜನರು ಕೊಡುವ ಪ್ರೀತಿ ಸಾವಿರ ಕೋಟಿಗೆ ಸಮ ಎಂದು ಹಾಡಿ ಹೊಗಳಿದರು. ನಟ ವಶಿಷ್ಠ ಸಿಂಹ ಮಾತನಾಡಿ, ಬೆಳಗಾವಿ ಗಡಿ ಭಾಗ ತುಂಬಾ ಸೂಕ್ಷ್ಮ ಪ್ರದೇಶ. ಇಲ್ಲಿ ಹತ್ತು ಹಲವು ಸವಾಲುಗಳಿವೆ. ಅದಕ್ಕೆಲ್ಲ ಎದೆಗೊಟ್ಟು ನಮ್ಮ ಕನ್ನಡತನವನ್ನು ಬೆಳೆಸುವ ಕಾರ್ಯ ಇಲ್ಲಿನ ಜನ ಮಾಡುತ್ತಿದ್ದಾರೆ. ಭಾಷಾಭಿಮಾನ, ಭಾಷೆಯ ಪ್ರೀತಿ ಬೆಳಗಾವಿಯಲ್ಲಿ ಪ್ರಶಂಸನೀಯವಾಗಿದೆ. ಕುಂದಾದಷ್ಟೇ ಸಿಹಿಯಾದ ಪ್ರೀತಿ, ಇಲ್ಲಿನ ಜನರಲ್ಲಿದೆ ಎಂದರು.

ಆಯೋಜಕ, ಸಿನಿಮಾ ನಿರ್ಮಾಪಕ ಶಿವಾನಂದ ನೀಲಣ್ಣವರ ಮಾತನಾಡಿ, ಪ್ರತಿ ವರ್ಷ ಡಿ.27ಕ್ಕೆ ಬೆಳಗಾವಿ ಉತ್ಸವ ಆಯೋಜಿಸುತ್ತೇವೆ. ಇಡೀ ದೇಶಕ್ಕೆ ಮಾದರಿ‌ ಆಗುವ ನಿಟ್ಟಿನಲ್ಲಿ, ಅದೇಷ್ಟೇ ಖರ್ಚಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ.‌ ನಾಡು, ನುಡಿ, ಬಡವರಿಗೆ ಸಹಾಯ ಮಾಡಲು ನಾನು ಸದಾಸಿದ್ಧ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಟಿಯರಾದ ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಅಭಿಲಾಷ, ಸೇರಿ ಮತ್ತಿತರ ಗಣ್ಯರು ಇದ್ದರು. ನಂತರ ಖ್ಯಾತ ಗಾಯಕ ರಾಜೇಶ ಕೃಷ್ಣನ್ ಮತ್ತು ತಂಡದಿಂದ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.