ನಟ ಜೈಜಗದೀಶ್‌ ವಿರುದ್ಧ ನಾಗಮಂಗಲ ತಾಲೂಕು ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು, ವ್ಯಕ್ತಿಯೊಬ್ಬನ ಮೇಲೆ ಹಲ್ಲೆ.

ಮಂಡ್ಯ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಅವಾಚ್ಯಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಹಲ್ಲಿನಿಂದ ಕೈಕಚ್ಚಿರುವ ಆರೋಪದ ಮೇಲೆ ನಟ ಜೈಜಗದೀಶ್‌ ವಿರುದ್ಧ ನಾಗಮಂಗಲ ತಾಲೂಕು ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ಜೆ.ಸಿ.ನಗರ 6ನೇ ಕ್ರಾಸ್‌ ನಿವಾಸಿ ಜಯರಾಮೇಗೌಡ ಅವರು ಈ ದೂರು ನೀಡಿದ್ದು, ಜೂ.5 ರಂದು ಬೆಂಗಳೂರಿನಿಂದ ಸಾರಿಗೆ ಬಸ್‌ನಲ್ಲಿ ಬರುತ್ತಿರುವಾಗ ಬೆಳ್ಳೂರು ಕ್ರಾಸ್‌ನಿಂದ ಸ್ವಲ್ಪ ಹಿಂದೆ ಸುಂಕವಸೂಲಾತಿ ಕೇಂದ್ರದ ಬಳಿ ನಿಧಾನಿಸಿದಾಗ ಜಯರಾಮೇಗೌಡ ನಿರ್ವಾಹಕರಿಗೆ ತಿಳಿಸಿ ಕೆಳಗಿಳಿದರು. ಬಸ್‌ನಿಂದ ಇಳಿದು ಹೋಗುತ್ತಿರುವಾಗ ಬಸ್‌ ಹಿಂಭಾಗ ಬರುತ್ತಿದ್ದ ಟೊಯೋಟ ಇಟಿಯೋಸ್‌ (ಕೆ.ಎ.03-ಎಂಯು-3457) ಕಾರಿನ ಚಾಲಕರು ಮತ್ತು ಕಾರಿನೊಳಗಿದ್ದವರು ಜಯರಾಮೇಗೌಡರಿಗೆ ಯಾಕೋ ಬಸ್‌ನಿಂದ ಕೆಳಗೆ ಬಾಟಲ್‌ ಎಸೆಯುತ್ತೀಯೆ ಎಂದು ಕೆಟ್ಟಶಬ್ಧಗಳಿಂದ ನಿಂದಿಸಿ, ಬಟ್ಟೆಹರಿದು, ಕಪಾಳಕ್ಕೆ ಹೊಡೆದು, ಹಲ್ಲಿನಿಂದ ಕೈಯ್ಯನ್ನು ಕಚ್ಚಿ ಹಲ್ಲೆಗೆ ಯತ್ನಿಸಿದರು ಎಂದು ದೂರಿದ್ದಾರೆ. ಅವರು ಪ್ರಶ್ನಿಸುವಂತಹ ಆರೋಪವನ್ನು ನಾನು ಮಾಡದಿದ್ದರೂ ಅವಾಚ್ಯವಾಗಿ ನಿಂದಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.