ಎಂಟ್ರಿ ಆಗ್ತಿದ್ದಂಗೆನೇ ಶಿವಣ್ಣನನ್ನು ತಬ್ಬಿಕೊಂಡು ಕಿಸ್ ಮಾಡು ಅಂದ್ಬಿಟ್ರು... ಗಾಬರಿ ಬಿದ್ದೋದೆ: ನಟಿ ಅನು ಪ್ರಭಾಕರ್
1999ರಲ್ಲಿ ತೆರೆಕಂಡ 'ಹೃದಯ ಹೃದಯ' ಸಿನಿಮಾದಲ್ಲಿ ನಾಯಕ ಶಿವರಾಜ್ ಕುಮಾರ್ ಅವರನ್ನು ತಬ್ಬಿಕೊಂಡು ಕಿಸ್ ಮಾಡು ಎಂದು ನಿರ್ದೇಶಕರು ಹೇಳಿದಾಗ ಅನು ಪ್ರಭಾಕರ್ಗೆ ಆಗಿದ್ದೇನು? ಅವ್ರ ಮಾತಲ್ಲೇ ಕೇಳಿ..
1999ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್ ಅಭಿನಯದ 'ಹೃದಯ ಹೃದಯ' ಸಿನಿಮಾದಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದ ನಟಿ ಅನು ಪ್ರಭಾಕರ್ ಚಿತ್ರರಂಗದಲ್ಲಿ ಬೆಳ್ಳಿ ಮಹೋತ್ಸವ ಆಚರಿಸಿಕೊಂಡಿದ್ದಾರೆ. ಈ 25 ವರ್ಷಗಳಲ್ಲಿ ನಟಿ ಹಲವಾರು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಾಜ್ಕುಮಾರ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದಾರೆ. 85ಕ್ಕೂ ಅಧಿಕ ಚಿತ್ರಗಳಲ್ಲಿನ ಯಶಸ್ವೀ ಪಯಣ ಮುಗಿಸಿರುವ ಅನು ಪ್ರಭಾಕರ್ ಅವರು, ಈಗ 'ಹಗ್ಗ'ದ ಖುಷಿಯಲ್ಲಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸಿದರೂ ಹಾರರ್ ಚಿತ್ರ ಎಂದ್ರೆನೇ ಭಯ ಬೀಳುವ ಅನು ಅವರು, ಈಗ ಅದೇ ರೀತಿಯ ಪಾತ್ರವನ್ನು ಹಗ್ಗ ಚಿತ್ರದಲ್ಲಿ ಮಾಡಿದ್ದಾರೆ.
ನಂಗೆ ಹಾರರ್ ಸಿನಿಮಾ ಇಷ್ಟ ಇಲ್ಲ. ಈವರೆಗೆ ಒಂದೇ ಒಂದು ಹಾರರ್ ಸಿನಿಮಾವನ್ನೂ ನೋಡಿಲ್ಲ. ಈ ಹೀಗಾಗಿ ಈ ಸಿನಿಮಾದಲ್ಲಿ ನಟಿಸೋದು ಬಹಳ ಚಾಲೆಂಜಿಂಗ್ ಆಗಿತ್ತು. ಹೊಸಬರ ಉತ್ಸಾಹ, ಅವರ ಕಥೆ ಹೇಳುವ ತುಡಿತ ಇವೆಲ್ಲ ಕೆಲಸವನ್ನು ಸುಲಭವಾಗಿಸಿತು ಎಂದಿರುವ ಅನು, ನಿರ್ದೇಶಕರು ಕಥೆ ಹೇಳಿದಾಗ, ತಮ್ಮ ಪಾತ್ರದ ಚಹರೆ ಮತ್ತು ಗೆಟಪ್ಪುಗಳ ಬಗ್ಗೆ ಕೇಳಿ ಅನು ಖುಷಿಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಹಗ್ಗದ ಖುಷಿಯ ನಡುವೆಯೇ ಗೌರೀಶ್ ಅಕ್ಕಿ ಅವರ ಯೂಟ್ಯೂಬ್ ಚಾನೆಲ್ಗೆ ಅವರು ಈ ಚಿತ್ರದ ಕುರಿತು ಸಂದರ್ಶನ ನೀಡಿದ್ದಾರೆ. ಜೊತೆಗೆ ತಮ್ಮ ಸುದೀರ್ಘ ಸಿನಿ ಪಯಣದ ಕುರಿತೂ ಮಾತನಾಡಿದ್ದಾರೆ.
ವಿಷ್ಣುವರ್ಧನ್ ಬಾಬಾ ರೀತಿ ಬಟ್ಟೆ ಕಟ್ಟಿಕೊಳ್ತಿದ್ಯಾಕೆ? ಅವರ ಒಡನಾಟ ಹೇಗಿತ್ತು? ಅನು ಪ್ರಭಾಕರ್ ಮನದಾಳದ ಮಾತು...
ಹೊಸಬರಿಗೆ ರೊಮಾನ್ಸ್ ದೃಶ್ಯಗಳನ್ನು ಮಾಡುವಾಗ ಎಷ್ಟೆಲ್ಲಾ ತೊಂದರೆ ಆಗುತ್ತದೆ ಎನ್ನುವ ಕುರಿತು ಹಗ್ಗ ಚಿತ್ರದ ಕುರಿತು ಮಾತನಾಡುತ್ತಲೇ ತಮ್ಮ ಮೊದಲ ಚಿತ್ರದ ಅನುಭವ ಹೇಳಿಕೊಂಡಿದ್ದಾರೆ. 1999 ರಲ್ಲಿ ಈ ಚಿತ್ರ ತೆರೆ ಕಂಡಿತ್ತು. ಈ ಚಿತ್ರದಲ್ಲಿ ನಟಿಸುವಾಗ ಅನು ಅವರಿಗೆ ಕೇವಲ 19 ವರ್ಷ ವಯಸ್ಸು. ಶಿವರಾಜ್ ಕುಮಾರ್ ಅವರಿಗೆ 37 ವರ್ಷ ವಯಸ್ಸಾಗಿತ್ತು. ಅದು ಶಿವರಾಜ್ ಕುಮಾರ್ ಅವರ 62ನೇ ಚಿತ್ರವಾಗಿತ್ತು. ಆಗ ತಾನೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ 19 ವರ್ಷದ ನಟಿಯೊಬ್ಬಳು, ಅಷ್ಟು ದೊಡ್ಡ ಸ್ಟಾರ್ ಜೊತೆ ರೊಮಾನ್ಸ್ ಮಾಡುವುದು ಎಂದರೆ ಸುಲಭವೇನೂ ಆಗಿರಲಿಲ್ಲ. ಈ ಬಗ್ಗೆ ಅನು ಪ್ರಭಾಕರ್ ಹೇಳಿಕೊಂಡಿದ್ದಾರೆ. ಮೊದಲನೆಯ ಸೀನ್ನಲ್ಲಿಯೇ ಶಿವಣ್ಣ ಅವರನ್ನು ತಬ್ಬಿಕೊಂಡು ಮುತ್ತುಕೊಡಬೇಕಿತ್ತು. ಅದು ನನ್ನಿಂದ ಸಾಧ್ಯವೇ ಆಗ್ಲಿಲ್ಲ ಎಂದಿದ್ದಾರೆ. ಈ ಸಿನಿಮಾ ಮಾಡುವುದಕ್ಕೂ ಮುಂಚೆ ನಾನು ಅಪ್ಪಾಜಿ ಅವ್ರನ್ನು, ಅಮ್ಮನನ್ನು ಮೀಟ್ ಮಾಡಿದ್ದೆ. ಎಂಎಸ್ ರಾಜ್‌ಶೇಖರ್ ಸರ್ ಅವರನ್ನೂ ಭೇಟಿ ಮಾಡಿದ್ದೆ. ಕ್ಯಾಮೆರಾಮನ್ ಗೌರಿಶಂಕರ್ ಸರ್ ಅವರನ್ನೂ ಭೇಟಿ ಮಾಡಿದ್ದೆ. ಆದ್ರೆ ಶಿವಣ್ಣನನ್ನು ಮಾತ್ರ ಭೇಟಿನೇ ಮಾಡಿರಲಿಲ್ಲ. ಮನೆ ಫಂಕ್ಷನ್ಗಳಲ್ಲಿ ಆಗೀಗ ಅಮ್ಮನ ಜೊತೆ ಹೋಗ್ತಾ ಇದ್ದಾಗ ಶಿವರಾಜ್ ಕುಮಾರ್ ಅವರನ್ನು ನೋಡಿದ್ದೆ ಅಷ್ಟೇ. ಹೆಚ್ಚಾಗಿ ನಾನು ಅಮ್ಮನ ಜೊತೆ ಡಬ್ಬಿಂಗ್ಗೂ ಹೋಗ್ತಾ ಇರಲಿಲ್ಲ. ಅದಕ್ಕಾಗಿ ಮಾತನಾಡುವ ಅವಕಾಶವೇ ಸಿಕ್ಕಿರಲಿಲ್ಲ. ಇಂಟರ್ಯಾಕ್ಷನ್ ಆಗಿರಲಿಲ್ಲ. ಏಕಾಏಕಿ ಈ ಸೀನ್ ಮಾಡು ಎಂದಾಗ ಸಿಕ್ಕಾಪಟ್ಟೆ ಕಷ್ಟ ಆಯ್ತು ಎಂದಿದ್ದಾರೆ.
ಆ ದೃಶ್ಯ ಹೇಗಿತ್ತು ಎಂದ್ರೆ, ನಿನ್ನನ್ನು ಮೀಟ್ ಮಾಡುವುದಕ್ಕೆ ನಮ್ಮ ಅಪ್ಪ ಒಪ್ಪಿಕೊಂಡಿದ್ದಾರೆ ಎಂದು ನಾಯಕನಾಗಿರುವ ಶಿವಣ್ಣಂಗೆ ಹೇಳಬೇಕಿತ್ತು. ನೀನು ಮನೆಗೆ ಬಾ ಅಂತ ಖುಷಿಯಲ್ಲಿ ಹೋಗಿ ಹೇಳಿ ಅವರನ್ನು ತಬ್ಬಿಕೊಂಡು ಮುತ್ತು ಕೊಡಬೇಕಿತ್ತು. ಅದು ನನಗೆ ತುಂಬಾ ಕಷ್ಟವಾಯ್ತು. ಆಗ ಶಿವರಾಜ್‌ಕುಮಾರ್ ಅವರಿಗೆ ಇದು ಅರ್ಥ ಆಯ್ತು. ಎಂ.ಎಸ್.ರಾಜಶೇಖರ್ ಅವರನ್ನು ಶಿವಣ್ಣ ಕರೆದು ನೋಡಿ, ಈ ಸೀನ್ ಆಮೇಲೆ ಮಾಡೋಣ. ಈಗ ಡೈಲಾಗ್ ಮಾಡೋಣ ಅಂದ್ರು. ನಂತರ ಎಲ್ಲಾ ಡೈಲಾಗ್ ಅದೂ ಇದೂ ಎಲ್ಲಾ ಆದ ಮೇಲೆ, ಊಟ ಆದ್ಮೇಲೆ ಸಂಜೆ ಹೊತ್ತು ಮಾಡಿದ್ದೆ. ನಾನು ಚಿಕ್ಕ ಹುಡುಗಿ ಎಂದು ಅವರಿಗೆ ತಿಳಿದು ಹೀಗೆ ಹೇಳಿದ್ರು. ಇಂಥ ಸಮಯದಲ್ಲಿ ಕೋ-ಸ್ಟಾರ್ಸ್ ಅರ್ಥ ಮಾಡಿಕೊಂಡರೆ ಹೊಸದಾಗಿ ಎಂಟ್ರಿ ಕೊಡುವವರಿಗೆ ಆ್ಯಕ್ಟಿಂಗ್ ಸುಲಭವಾಗುತ್ತದೆ ಎಂದಿದ್ದಾರೆ ಅನು ಪ್ರಭಾಕರ್.
7 ಕೋಟಿ ಖರ್ಚು ಮಾಡಿ ಮದ್ವೆ ಮಾಡ್ದೆ, ಅಯ್ಯೋ... ಅನ್ನೋಕಾಗತ್ತಾ? ಡಿವೋರ್ಸ್ ಕುರಿತು ಅನು ಮನದ ಮಾತು