ನಟ ಸಂಚಾರಿ ವಿಜಯ್‌ಗೆ ಗೌರವ ಸಲ್ಲಿಸಿದ ಅಮೆರಿಕ ಫ್ರಾಂಕ್ಲಿನ್ ಥಿಯೇಟರ್!
ಅಮೆರಿಕಾದ ಪ್ರತಿಷ್ಠಿತ ಥಿಯೇಟರ್ ವತಿಯಿಂದ ಸಂಚಾರಿ ವಿಜಯ್‌ಗೆ ಗೌರವ. ಮನ ಮುಟ್ಟುವಂತಿದೆ ಸಾಲುಗಳು.
'ನಾನು ಅವನಲ್ಲ ಅವಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಂಚಾರಿ ವಿಜಯ್ ಜೂನ್ 14ರಂದು ಕೊನೆ ಉಸಿರೆಳೆದರು. ಇಂಜಿನಿಯರಿಂಗ್ ಪದವೀಧರ ರಂಗಭೂಮಿಯಲ್ಲಿ ಕೆಲಸ ಮಾಡಿ, ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೀರ್ತಿಯನ್ನು ತಂದುಕೊಟ್ಟ ಮಹಾನ್ ನಟ ಇವರು. ರಸ್ತೆ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡ ಕಾರಣ ತಮ್ಮ ಅಂಗಾಂಗಗಳನ್ನು ದಾನ ಮಾಡಿ, ಇಹಲೋಕ ತ್ಯಜಿಸಿದ್ದರು. ಆ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮರೆದರು. ಇಂಥ ಮಹಾನ್ ಕಲಾವಿದ ಸಂಚಾರಿ ವಿಜಯ್‌ಗೆ ಅಮೆರಿಕದ ಪ್ರತಿಷ್ಠಿತ ಥಿಯೇಟರ್ ಗೌರವ ಸಲ್ಲಿಸಿದೆ.
ಅಮೆರಿಕದ ಫ್ರಾಂಕ್ಲಿನ್ ಥಿಯೇಟರ್ ಮುಂಭಾಗದಲ್ಲಿ 'Always in our heart, Sanchari Vijay, Gone yet not forgotten' ಎಂದು ಬರೆಯಲಾಗಿತ್ತು. ಈ ಸಂದೇಶ ಸುಮಾರು 24 ಗಂಟೆಗಳ ಕಾಲ ಬೋರ್ಡ್ ಮೇಲೆ ಡಿಸ್‌ಪ್ಲೇ ಆಗಿತ್ತು. ಆ ಮೂಲಕ ಫ್ರಾಂಕ್ಲಿನ್ ಚಿತ್ರಮಂದಿರ ವಿಜಯ್‌ಗೆ ಗೌರವ ಸಲ್ಲಿಸಿದೆ. 'ಸದಾ ನಮ್ಮ ಹೃದಯದಲ್ಲಿ, ಸಂಚಾರಿ ವಿಜಯ್, ಹೋಗಿದ್ದಾರೆ ಆದರೆ ಮರೆಯಲ್ಲ' ಎಂಬ ಸಾಲುಗಳು ಅಮೆರಿಕದ ರಂಗಮಂದಿರವೊಂದರಲ್ಲಿ ರಾರಾಜಿಸಿದ್ದು ಕನ್ನಡಿಗರಿಗೆ ಸಿಕ್ಕ ಗೌರವ ಎಂಬುವುದು ಸತ್ಯ. ಈ ಸಾಲುಗಳನ್ನು ಓದಿದ ಕನ್ನಡಿಗರಿಗೆ ರೋಮಾಂಚನವಾಗಿತ್ತು. ಅಂದು ಇದು ಸಾಧ್ಯವಾಗಿದ್ದು, ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡಿಗ ಸಿನಿಮಾ ನಿರ್ದೇಶಕ ರವಿ ಕಶ್ಯಪ್ ಅವರಿಂದ.
ತಮ್ಮ ಸಿನಿಮಾ ಮೂಲಕ ಕನ್ನಡಿಗರ ಮನದಲ್ಲಿ ಶಾಶ್ವತವಾಗಿರ್ತಾರೆ: ಲಿಂಗದೇವರು
'ಅಮೇರಿಕದ ಫ್ರಾಂಕ್ಲಿನ್ ಥಿಯೇಟರ್‌ನವರು ವಿಜಯ್ ನೆನಪಲ್ಲಿ ಇಂದು Always in our Heart , Sanchari Vijay, Gone Yet Not Forgotten ಎಂಬ ಮೆಸೇಜ್ ಪ್ರದರ್ಶನ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ. ಅಗಲಿದ ಕನ್ನಡದ ಕಲಾವಿದನನ್ನು ಗುರುತಿಸಿದ ಫ್ರಾಂಕ್ಲಿನ್ ಥಿಯೇಟರ್ ಮತ್ತು ಕಾರಣಕರ್ತರಾದ ರವಿ ಕಶ್ಯಪ್ ರವರಿಗೆ ವಂದನೆಗಳು,' ಎಂದು ನಿರ್ದೇಶಕ ಲಿಂಗದೇವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.