ವಿವಾದದ ಸುಳಿಗೆ ಡಾಲಿ ನಟನೆಯ ಹೆಡ್‌ಬುಷ್‌ ಅನುಮತಿ ಇಲ್ಲದೆ ತಂದೆ ಬಗ್ಗೆ ಹೇಗೆ ಸಿನಿಮಾ ಮಾಡ್ತಾರೆ: ಅಜಿತ್‌ ಜಯರಾಜ್‌ ಸಿನಿಮಾ ಸೆಟ್ಟೇರಿದಾಗ ಶುಭ ಕೋರಿ, ಈಗ ವಿವಾದ ಮಾಡುತ್ತಿದ್ದಾರೆ: ಧನಂಜಯ್‌

‘ಹೆಡ್‌ಬುಷ್‌ ನಮ್ಮ ತಂದೆ ಎಂ ಪಿ ಜಯರಾಜ್‌ ಅವರ ಜೀವನ ಆಧರಿಸಿದ ಸಿನಿಮಾ. ಆದರೂ ನಮ್ಮ ಅನುಮತಿ ತಗೊಂಡಿಲ್ಲ, ನಮ್ಮ ಅನುಮತಿ ಇಲ್ಲದೆ ಅವರಿಗೆ ಬೇಕಾದಂತೆ ಕತೆ ಮಾಡಿ, ನಮ್ಮ ತಂದೆಯನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ, ಒಬ್ಬ ವ್ಯಕ್ತಿಯ ನೈಜ ಕತೆ ಹೇಳುವಾಗ ಆ ವ್ಯಕ್ತಿಗೆ ಸಂಬಂಧಿಸಿದ ಕುಟುಂಬವನ್ನು ಕೇಳಬೇಕು ಎನ್ನುವ ತಿಳುವಳಿಕೆ ಇಲ್ಲವೇ?’

- ಇದು ನಟ ಹಾಗೂ ಜಯರಾಜ್‌ಪುತ್ರ ಅಜಿತ್‌ ಜಯರಾಜ್‌ ಮಾತುಗಳು. ಅಗ್ನಿ ಶ್ರೀಧರ್‌ ಕತೆ, ಚಿತ್ರಕಥೆ ಬರೆದು, ಶೂನ್ಯ ನಿರ್ದೇಶನ ಮಾಡುತ್ತಿರುವ, ಡಾಲಿ ಧನಂಜಯ್‌ ನಟಿಸುತ್ತಿರುವ ಹೆಡ್‌ಬುಷ್‌ ಕುರಿತು ಅವರು ಸಿಟ್ಟಾಗಿದ್ದಾರೆ. ‘ಈ ಚಿತ್ರವನ್ನು ಬಿಡುಗಡೆ ಮಾಡಬಾರದು, ಯಾವ ಕಾರಣಕ್ಕೂ ತಮ್ಮ ತಂದೆಯವರ ಜೀವನದ ಬಗ್ಗೆ ಸಿನಿಮಾ ಮಾಡಲು ಅನುಮತಿ ಕೊಡಬಾರದು’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬುಧವಾರ ದೂರು ನೀಡಿದ್ದಾರೆ.

ಈ ಕುರಿತು ಕೇಳಿದಾಗ ಅಜಿತ್‌ ಜಯರಾಜ್‌, ‘ನಮ್ಮ ತಂದೆ ಎಂ ಪಿ ಜಯರಾಜ್‌ ಅವರ ಬಗ್ಗೆಯೇ ‘ಹೆಡ್‌ಬುಷ್‌’ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದೇವೆ ಎಂದು ಗೊತ್ತಾದಾಗಲೇ ನಾನು ಚಿತ್ರತಂಡವನ್ನು ಈ ಬಗ್ಗೆ ಕೇಳುವುದಕ್ಕೆ ಪ್ರಯತ್ನಿಸಿದೆ. ಅವರಿಂದ ನನಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಈಗ ಬಿಡುಗಡೆ ಆಗಿರುವ ಚಿತ್ರದ ಟ್ರೇಲರ್‌ನಲ್ಲಿ ನಮ್ಮ ತಂದೆಯವರನ್ನು ಕೆಟ್ಟವ್ಯಕ್ತಿಯಂತೆ ಬಿಂಬಿಸಿದ್ದಾರೆ. ಇಷ್ಟುದಿನ ಕಾದು, ಈಗ ಕಾನೂನು ಹೋರಾಟ ಶುರು ಮಾಡಿದ್ದೇವೆ. ಈಗ ನಮ್ಮ ತಂದೆ ಇಲ್ಲ. ಆದರೆ, ಅವರ ಮಗ ನಾನು ಇದ್ದೇನೆ. ಕುಟುಂಬ ಇದೆ. ಎಂ ಪಿ ಜಯರಾಜ್‌ ಅವರನ್ನು ನೋಡದವರು, ಅವರ ಮುಂದೆ ನಿಲ್ಲದವರು ಈಗ ಅವನು, ಇವನು ಅಂತ ಮಾತನಾಡುತ್ತಿದ್ದಾರೆ. ಇದು ವೈಯಕ್ತಿಕವಾಗಿ ನನಗೆ ತುಂಬಾ ನೋವು ತಂದಿದೆ. ವಿಷಯ ಗೊತ್ತಿಲ್ಲದೆ ನಮ್ಮ ತಂದೆಯ ಜೀವನ ಆಧರಿಸಿದ ‘ಹೆಡ್‌ಬುಷ್‌’ ಚಿತ್ರಕ್ಕೆ ಅನುಮತಿ ಕೊಡಬಾರದು ಎಂಬುದು ನನ್ನ ಒತ್ತಾಯ’ ಎನ್ನುತ್ತಾರೆ.

ಹೆಡ್‌ ಬುಷ್‌' ಚಿತ್ರ ತಂಡಕ್ಕೆ ಶ್ರುತಿ ಹರಿಹರನ್, ವಸಿಷ್ಠ ಸಿಂಹ ಎಂಟ್ರಿ!

ಪ್ರಶ್ನೆಗಳಿದ್ದರೆ ಅಗ್ನಿ ಶ್ರೀಧರ್‌ರನ್ನು ಕೇಳಲಿ: ಧನಂಜಯ್‌

ವಿವಾದದ ಕುರಿತು ನಟ, ನಿರ್ಮಾಪಕ ಧನಂಜಯ್‌ ಹೇಳಿದ್ದು ಇಷ್ಟು: ‘ಅಜಿತ್‌ ಜಯರಾಜ್‌ ಮತ್ತು ನಾನು ಒಳ್ಳೆಯ ಸ್ನೇಹಿತರು. ಈ ಸಿನಿಮಾ ಸೆಟ್ಟೇರಿದಾಗ ಅಜಿತ್‌ ಚಿತ್ರಕ್ಕೆ ಶುಭ ಕೋರಿದ್ದರು. ನೀವು ಈ ಪಾತ್ರ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದಿದ್ದರು. ನಾನು ಕೂಡ ಅವರ ಒಂದು ಚಿತ್ರಕ್ಕೆ ವಾಯ್‌್ಸ ಕೊಟ್ಟಿದ್ದೇನೆ, ಪೋಸ್ಟರ್‌ ಬಿಡುಗಡೆ ಮಾಡಿದ್ದೇನೆ. ಹೀಗೆ ಹತ್ತಿರ ಇದ್ದು, ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯುವ ಹಂತಕ್ಕೆ ಬಂದಾಗ ಚಿತ್ರ ಬಿಡುಗಡೆ ಮಾಡಬಾರದು ಎಂದು ವಾಣಿಜ್ಯ ಮಂಡಳಿಯಲ್ಲಿ ದೂರು ಕೊಡುವುದರಲ್ಲಿ ಅರ್ಥ ಇಲ್ಲ. ನಾವು ಅಗ್ನಿ ಶ್ರೀಧರ್‌ ಬರೆದಿರುವ ಕತೆಯ ಹಕ್ಕುಗಳನ್ನು ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದೇವೆ. ಅವರಿಗೆ ಏನೇ ಅನುಮಾನ ಮತ್ತು ಪ್ರಶ್ನೆಗಳು ಇದ್ದರೆ ಎಂ ಪಿ ಜಯರಾಜ್‌ ಬಗ್ಗೆ ಪುಸ್ತಕ ಬರೆದ ಅಗ್ನಿ ಶ್ರೀಧರ್‌ ಅವರ ಬಳಿ ಕೇಳಲಿ. ನಾನು ಆ ಬಗ್ಗೆ ಉತ್ತರಿಸಲ್ಲ. ಯಾಕೆಂದರೆ ನಾನು ಕಲಾವಿದನಾಗಿ, ನಿರ್ಮಾಪಕನಾಗಿ ಈ ಚಿತ್ರಕ್ಕೆ ಎಷ್ಟುಶ್ರಮ ಹಾಕಿದ್ದೇನೆ ಎಂಬುದು ಗೊತ್ತಿದೆ. ಎಷ್ಟುಹೂಡಿಕೆ ಮಾಡಿದ್ದೇವೆ ಎಂಬುದು ಚಿತ್ರರಂಗಕ್ಕೆ ಗೊತ್ತಿದೆ. ಆದರೂ ಹೀಗೆ ಇದ್ದಕ್ಕಿದ್ದಂತೆ ಚಿತ್ರಕ್ಕೆ ತೊಂದರೆ ಕೊಡುವ ರೀತಿ ವರ್ತಿಸಿದರೆ ಹೇಗೆ? ಇವರ ಹಿಂದೆ ಯಾರೋ ನಿಂತು ಹೀಗೆ ದೂರು ಕೊಡಿಸಿದ್ದಾರೆ. ಅದು ಯಾರು ಅಂತ ಗೊತ್ತಿಲ್ಲ’.

ಡಾಲಿ ಧನಂಜಯ್ 'ಹೆಡ್‌ಬುಶ್' ಚಿತ್ರಕ್ಕೆ ಪಾಯಲ್ ನಾಯಕಿ!

ನಟ ವಸಿಷ್ಠ ಸಿಂಹ ಎಂಟ್ರಿ ನೀಡುವ ಬಗ್ಗೆ ಸ್ವತಃ ಧನಂಜಯ್ ಅವರೇ ಟ್ಟೀಟ್ ಮಾಡಿ ಬಹಿರಂಗಪಡಿಸಿದ್ದಾರೆ. 'ಡಿಯರ್ ದೋಸ್ತ್ ವೆಲ್ಕ್ ಆನ್‌ ಬೋರ್ಡ್' ಎಂದು ಬರೆದುಕೊಂಡಿದ್ದಾರೆ. ಇದೀಗ ನಟಿ ಶ್ರುತಿ ಹರಿಹರನ್ ಕೂಡ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ವಸಿಷ್ಠ ಮತ್ತು ಶ್ರುತಿ ಇಬ್ಬರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲಿ ಅವರ ಪಾತ್ರದ ಬಗ್ಗೆ ಚಿತ್ರತಂಡ ರಿವೀಲ್ ಕೂಡ ಮಾಡಲಿದೆ .