ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ನಟಿ ಶ್ರುತಿ ಅವರು, ಈ ಕುರಿತು ಹೇಳಿದ್ದೇನು?
ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣುವರ್ಧನ್ (Vishnuvardhan) ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಿರುವುದು ಅವರ ಅಸಂಖ್ಯ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ತೇಲಿಸಿದೆ. ಬಾಲಣ್ಣ ಅವರ ಕುಟುಂಬಕ್ಕೆ ಸೇರಿರುವ ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ನಿರ್ಮಿಸಲಾಗಿತ್ತು. ಬಾಲಣ್ಣ ಕುಟುಂಬದವರು ಅಲ್ಲಿ ಸ್ಮಾರಕ ನಿರ್ಮಿಸದಂತೆ ಕೋರ್ಟ್ಗೆ ಹೋಗಿದ್ದರು. ಪ್ರಕರಣ ಬಾಲಣ್ಣ ಕುಟುಂಬದವರ ಪರವಾಗಿ ಆಗಿತ್ತು. ಆದರೆ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋನಲ್ಲಿ ಸ್ಮಾರಕ ನಿರ್ಮಾಣಕ್ಕೆ ಹೋರಾಡುತ್ತಲೇ ಇದ್ದರು. ಇದೀಗ ಅಭಿಮಾನ್ ಸ್ಟುಡಿಯೋನಲ್ಲಿದ್ದ ಸಮಾಧಿಯನ್ನು ತೆರವು ಗೊಳಿಸಲಾಗಿದ್ದು, ಇದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ನಟಿ ಶ್ರುತಿ ಅವರು, ತಮಗೆ ಈ ಜಮೀನಿನ ವಿವಾದ ಇರುವುದು ತಿಳಿದೇ ಇರಲಿಲ್ಲ. ಹಾಗೊಂದು ವೇಳೆ ಗೊತ್ತಿದ್ದರೆ ವಿಷ್ಣು ಅವರ ಸಮಾಧಿಗೆ ನನ್ನ ಜಮೀನನ್ನೇ ಬಿಟ್ಟುಕೊಡುತ್ತಿದ್ದೆ. ಅವರು ನಮ್ಮೆಲ್ಲರ ಆರಾಧ್ಯ ದೈವ. ಎಷ್ಟೊಂದು ಮಂದಿ ಅವರ ಸಮಾಧಿಗೆ ಸ್ಥಳ ಕೊಡಲು ತಯಾರು ಇದ್ದಾರೆ. ನನ್ನ ಬಳಿಯೂ ಚಿಕ್ಕದೊಂದು ಜಮೀನು ಇದೆ. ಅಲ್ಲಿಯೇ ಕೊಡುತ್ತಿದ್ದೆ ಎಂದು ಹೇಳಿದ್ದಾರೆ. ಈ ಬಗ್ಗೆ ಇದಾಗಲೇ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆಯಷ್ಟೇ ನಟ ವಿಜಯ ರಾಘವೇಂದ್ರ ಅವರು ಈ ಬಗ್ಗೆ ಮಾತನಾಡಿದ್ದರು.
ತುಂಬಾ ಪ್ರಾಮಾಣಿಕವಾಗಿ ಹೇಳುವುದಾದರೆ, ಇದನ್ನು ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎನ್ನುವುದು ನನಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ಈ ಬಗ್ಗೆ ದೂರವಾಣಿ ಕರೆ ಬಂದಿದೆ ಅಷ್ಟೇ. ಇದನ್ನು ಕೇಳಿದ ತಕ್ಷಣ ಭಾವನೆಗಳಿಗೆ ಹರ್ಟ್ ಆಗುವುದು ನಿಜ. ಇವುಗಳ ನಡುವೆಯೂ ಕೆಲವು ಕಿಡಿಗೇಡಿಗಳು ಇಂಥ ಕೆಲಸ ಮಾಡುತ್ತಾರೆ ಎನ್ನುತ್ತಲೇ, ಅವರೆಲ್ಲಾ ಹೀಗೆ ಏಕೆ ಮಾಡುತ್ತಾರೋ ಗೊತ್ತಿಲ್ಲ. ಆದರೆ, ಇಂಥ ಘಟನೆಯಿಂದಾಗಿ ಅವರ ಇಮ್ಮಿಡಿಯೇಟ್ ಕುಟುಂಬದವರಿಗೆ ತುಂಬಾ ಹರ್ಟ್ ಆಗಿರುತ್ತದೆ. ಅವರಿಗೆ ಆ್ಯಕ್ಷನ್ ತೆಗೆದುಕೊಳ್ಳಬೇಕು ಎನ್ನುವುದು ಮನಸ್ಸಿಗೆ ಬಂದಿರುತ್ತದೆ. ಅವರು ಕಾನೂನು ಹೋರಾಟ ಮಾಡಬಹುದು. ಆದ್ದರಿಂದ ಅವರ ಕೆಲಸವನ್ನು ಅವರಿಗೆ ಮಾಡಲು ಬಿಟ್ಟುಬಿಡಿ ಎಂದಿದ್ದರು.
ಆದರೆ, ಈ ಘಟನೆ ಕುರಿತು ವಿಷ್ಣುವರ್ಧನ್ ಕುಟುಂಬಸ್ಥರು ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಲಿಲ್ಲ. ಬಾಲಣ್ಣ ಅವರ ಮಗಳು ಗೀತಾ ಬಾಲಿ ಅವರು ಈ ಬಗ್ಗೆ ಎರಡು ವರ್ಷದ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಸಮಾಧಿ ಗೊಂದಲದ ಬಗ್ಗೆ ಮಾತನಾಡಿದ್ದರು. “2004ರಿಂದಲೇ ಈ ಜಾಗದ ಸಮಸ್ಯೆಯಿದೆ. 2009ರಲ್ಲಿ ವಿಷ್ಣುವರ್ಧನ್ ನಿಧನರಾದರು. ವಿಷ್ಣುವರ್ಧನ್ ಸಮಾಧಿಗೆ ಎರಡು ಎಕರೆ ಬಿಟ್ಟುಕೊಡಿ ಎಂದು ಬಿಶುಕುಮಾರ್ ಎನ್ನುವವರು ಹೇಳಿದ್ದರು. ಆಗ ಇದ್ದ ನ್ಯಾಯಾಧೀಶರು ಪಾರ್ಟ್ ಪಾರ್ಟ್ ಆಗಿ ಬಿಟ್ಟುಕೊಡೋಕೆ ಆಗೋದಿಲ್ಲ, ಕಾಂಪ್ರಮೈಸ್ ಮಾಡ್ಕೊಳ್ಳಿ ಎಂದರು. ಒಟ್ಟೂ 20 ಎಕರೆಯಲ್ಲಿ 10 ಎಕರೆ ಅವ್ಯವಹಾರ ಆಗಿದೆ. ಬೇರೆ ರೀತಿಯಲ್ಲಿ ಈ ಜಾಗ ಮಾರಾಟ ಆಗಿದೆ, ಇದು ನನಗೆ 2004ರಲ್ಲಿ ಗಮನಕ್ಕೆ ಬಂದಿತು. ನಾನು ಕೇಸ್ ಹಿಂಪಡೆಯೋದಿಲ್ಲ. ಎರಡು ಎಕರೆ ಜಮೀನು ಕೊಡೋದಕ್ಕೆ ನನ್ನದೇನೂ ಸಮಸ್ಯೆ ಇಲ್ಲ. ಈ ಕೇಸ್ ಬಗೆಹರಿದಮೇಲೆ ನಿಮ್ಮಿಷ್ಟ ಎಂದು ಕೋರ್ಟ್ ಕೂಡ ಹೇಳಿತ್ತಂತೆ” ಎಂದು ಗೀತಾ ಬಾಲಿ ಅವರು ಹೇಳಿದ್ದರು.
