Asianet Suvarna News Asianet Suvarna News

ನಾಟಕದ ಚಂಚಲಕುಮಾರಿ, ಸಿನಿಮಾದ ಬಿಂಕದ ಸಿಂಗಾರಿ ಲೀಲಾವತಿ: 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸುಬ್ಬಯ್ಯ ಹಾಗೂ ಸುಶೀಲಮ್ಮ ದಂಪತಿ ಪುತ್ರಿಯಾಗಿ 1937ರಲ್ಲಿ ಹುಟ್ಟಿದ ಲೀಲಾ ಕಿರಣ್‌, ಕನ್ನಡ ಚಿತ್ರರಂಗದಲ್ಲಿ ಲೀಲಾವತಿಯಾಗಿ ರಾರಾಜಿಸಿದ್ದು ಮರೆಯಲಾಗದ ಇತಿಹಾಸ. 

Actress Leelavathi is a multi lingual artist who has acted in more than 600 films gvd
Author
First Published Dec 9, 2023, 4:00 AM IST

ಬೆಂಗಳೂರು (ಡಿ.09): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸುಬ್ಬಯ್ಯ ಹಾಗೂ ಸುಶೀಲಮ್ಮ ದಂಪತಿ ಪುತ್ರಿಯಾಗಿ 1937ರಲ್ಲಿ ಹುಟ್ಟಿದ ಲೀಲಾ ಕಿರಣ್‌, ಕನ್ನಡ ಚಿತ್ರರಂಗದಲ್ಲಿ ಲೀಲಾವತಿಯಾಗಿ ರಾರಾಜಿಸಿದ್ದು ಮರೆಯಲಾಗದ ಇತಿಹಾಸ. ಐದು ರುಪಾಯಿ ಕೂಲಿಗಾಗಿ ಮನೆ ಕೆಲಸ ಮಾಡಿಕೊಂಡಿದ್ದ ಲೀಲಾ ಕಿರಣ್‌ ಅವರ ನಟನಾ ಪ್ರಪಂಚಕ್ಕೆ ಮೊದಲು ವೇದಿಕೆ ಆಗಿದ್ದು ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮಾ ಕಂಪನಿ. ಮುಂದೇ ಲೀಲಾ ಕಿರಣ್‌ ಅವರು ಲೀಲಾವತಿಯಾಗಿ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿದರು. ಈ ಪೈಕಿ 400ಕ್ಕೂ ಹೆಚ್ಚು ಕನ್ನಡ ಚಿತ್ರಗಳೇ ಆಗಿದ್ದವು ಎಂಬುದು ವಿಶೇಷ.

ಶಂಕರ್‌ ಸಿಂಗ್‌ ಭೇಟಿ, 10 ರುಪಾಯಿ ಕೂಲಿ: ಅಭಿನಯದ ಕನಸುಗಳನ್ನು ಕಟ್ಟಿಕೊಂಡು ಬಣ್ಣದ ಜಗತ್ತಿನ ಕಡೆ ಮುಖ ಮಾಡಿದಾಗ ಲೀಲಾವತಿ ಅವರು ಭೇಟಿ ಆದ ಮೊದಲ ವ್ಯಕ್ತಿ ನಿರ್ದೇಶಕ ಡಿ. ಶಂಕರ್‌ ಸಿಂಗ್‌. ಇವರ ಮೂಲಕ ಪರಿಚಯವಾಗಿದ್ದೇ ಮತ್ತೊಬ್ಬ ರಂಗಭೂಮಿ ದಿಗ್ಗಜ ಸುಬ್ಬಯ್ಯ ನಾಯ್ಡು. ಇವರ ಶ್ರೀ ಸಾಹಿತ್ಯ ಸಾಮ್ರಾಜ್ಯ ಕಂಪನಿಗೆ ಕೆಲಸಕ್ಕೆ ಸೇರಿಕೊಂಡ ಲೀಲಾವತಿ ಅವರಿಗೆ ಆಗ ದಿನಕ್ಕೆ ಸಿಗುತ್ತಿದ್ದ ಕೂಲಿ 10 ರು. ಬೆಂಗಳೂರು ಕನ್ನಡ ಕಲಿಸಲು ಸುಬ್ಬಯ್ಯ ನಾಯ್ಡು ಅವರು ಆಗ ಲೀಲಾವತಿ ಅವರಿಗೆ ಕೊಟ್ಟ ಕೆಲಸ ‘ಧರಣಿ- ಭರಣಿ’ ಎನ್ನುವ ಪದಗಳನ್ನು ಸ್ಪಷ್ಟವಾಗಿ ಉಚ್ಛಾರಣೆ ಮಾಡುವುದು. ಈ ಎರಡೂ ಪದಗಳನ್ನು ಕಲಿತ ಮೇಲೆ ಲೀಲಾವತಿ ಅವರಿಗೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿತು.

ಕನ್ನಡದ ದಿಗ್ಗಜ ನಟರ ಜೊತೆ ನಟಿಸಿದ್ದ ಲೀಲಾವತಿ ಹಳೆಯ ಫೋಟೋಸ್ ನೋಡಿ

ಸಖಿಯ ಪಾತ್ರದಲ್ಲಿ ಲೀಲಾವತಿ: ‘ಚಂದ್ರಮತಿ ಮತ್ತು ಹರಿಶ್ಚಂದ್ರ’ ನಾಟಕದಲ್ಲಿ ಬರುವ ಏಳು ಮಂದಿ ಸಖಿಯಲ್ಲಿ ಲೀಲಾವತಿ ಅವರೂ ಒಬ್ಬರಾಗಿ ಬಣ್ಣ ಹಚ್ಚಿಕೊಂಡರು. ನಾಟಕಗಳಲ್ಲಿ ಅಳುವ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವರಿಗೆ ಬ್ರೇಕ್‌ ಕೊಟ್ಟಿದ್ದು ‘ಚಂಚಲಕುಮಾರಿ’ ಎನ್ನುವ ನಾಟಕ.

ಚಂದನವನದಲ್ಲಿ ಮಾಂಗಲ್ಯ ಯೋಗ: 1949ರಲ್ಲಿ ಶಂಕರ್ ಸಿಂಗ್ ಅವರ ‘ನಾಗಕನ್ನಿಕೆ’ ಚಿತ್ರದಲ್ಲಿ ಸಖಿಯ ಪಾತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿ ಕಯಾದುವಿನ ಸಖಿಯಾಗಿ ಲೀಲಾವತಿ ಅಭಿನಯಿಸಿದ್ದರು. ಈ ಚಿತ್ರದ ನಂತರ ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಲೀಲಾವತಿ ಅವರನ್ನು ಬೆಳ್ಳಿತೆರೆ ಮೇಲೆ ನಾಯಕಿಯನ್ನಾಗಿ ಮಾಡಿದ್ದು 1958ರಲ್ಲಿ ತೆರೆಗೆ ಬಂದ ಪಿ ಕೆ ಲಾಲ್‌ ನಿರ್ದೇಶನದ ‘ಮಾಂಗಲ್ಯ ಯೋಗ’ ಚಿತ್ರ. ಈ ಚಿತ್ರದ ನಂತರ ಬೆಳ್ಳಿತೆರೆ ಮೇಲೆ ಅದ್ಭುತ ನಟಿಯಾಗಿ ಲೀಲಾವತಿ ರಾರಾಜಿಸಿದರು. ಮದುವೆ ಮಾಡಿ ನೋಡು, ಸಂತ ತುಕಾರಾಂ, ತುಂಬಿದ ಕೊಡ, ಕಣ್ತೆರೆದು ನೋಡು, ರಾಣಿ ಹೊನ್ನಮ್ಮ , ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ, ಬಿಳಿ ಹೆಂಡ್ತಿ, ನಾ ನಿನ್ನ ಮರೆಯಲಾರೆ, ಕಳ್ಳ ಕುಳ್ಳ, ಡಾಕ್ಟರ್ ಕೃಷ್ಣ , ವೀರ ಕೇಸರಿ ಹೀಗೆ ಹತ್ತಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಲೀಲಾವತಿ ಹಾಗೂ ಡಾ.ರಾಜ್‌ಕುಮಾರ್‌ ಅಭಿನಯದಲ್ಲಿ ಮೂಡಿ ಬಂದ ಮೊದಲ ಚಿತ್ರ ‘ರಣಧೀರ ಕಂಠೀರವ’. ಮುಂದೆ ‘ರಾಣಿ ಹೊನ್ನಮ್ಮ’ ಚಿತ್ರದಲ್ಲೂ ಜತೆಯಾಗಿ ನಟಿ ಯಶಸ್ಸುಕಂಡ ಮೇಲೆ ರಾಜ್‌ ಹಾಗೂ ಲೀಲಾವತಿ ಜೋಡಿ ಬೆಳ್ಳಿತೆರೆ ಮೇಲೆ ಜನಪ್ರಿಯಗೊಂಡಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಸೇರಿದಂತೆ 36ಕ್ಕೂ ಹೆಚ್ಚು ಚಿತ್ರಗಳು ಇಬ್ಬರ ಕಾಂಬಿನೇಶನ್‌ನಲ್ಲಿ ಮೂಡಿ ಬಂದವು.

ಬಹುಭಾಷೆಯ ಕಲಾವಿದೆ: ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವಾಗಲೇ ಪಕ್ಕದ ಭಾಷೆಗಳಲ್ಲೂ ನಟಿಸಿ ಯಶಸ್ಸು ಕಂಡವರು ಲೀಲಾವತಿ. ಮಲಯಾಳಂನಲ್ಲಿ ‘ಪಮಸಿರಾಜ’, ತೆಲುಗಿನಲ್ಲಿ ‘ಮರ್ಮಯೋಗಿ’, ತಮಿಳಿನ ‘ಪಟ್ಟಿನಾಥರ್‌’ ಹಾಗೂ ತುಳು ಭಾಷೆಯಲ್ಲಿ ‘ಸಾವಿರಡೊರ್ತಿ ಸಾವಿತ್ರಿ’ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಹುಭಾಷಾ ನಟಿ ಎನಿಸಿಕೊಂಡರು.

ದಿಗ್ಗಜರ ಜತೆಗೆ ತೆರೆ ಹಂಚಿಕೊಂಡ ನಟಿ: ಕನ್ನಡದ ಡಾ ರಾಜ್‌ಕುಮಾರ್‌, ತಮಿಳಿನ ಶಿವಾಜಿ ಗಣೇಶನ್‌, ಎಂಜಿಆರ್‌, ರಜನಿಕಾಂತ್‌, ಕಮಲ್‌ ಹಾಸನ್‌, ತೆಲುಗಿನ ಎನ್‌ಟಿಆರ್‌ ಹೀಗೆ ದಿಗ್ಗಜ ನಟರ ಜತೆಗೆ ತೆರೆ ಹಂಚಿಕೊಂಡ ಕೀರ್ತಿ ಲೀಲಾವತಿ ಅವರದ್ದು. ವಿಶೇಷ ಎಂದರೆ ‘ಭಲೇ ಹುಚ್ಚ’ ಚಿತ್ರದ ತಮಿಳು ರಿಮೇಕ್‌ನಲ್ಲಿ ಎಂಜಿಆರ್‌ ಅವರಿಗೆ ತಾಯಿಯಾಗಿ ನಟಿಸಿದ್ದರು. ಹೀಗೆ ನಾಯಕ ನಟಿಯಾಗಿ ಚಿತ್ರರಂಗವನ್ನು ಆಳಿದ ಲೀಲಾವತಿ, 70ರ ದಶಕದ ಹೊತ್ತಿಗೆ ಪೋಷಕ ಪಾತ್ರಗಳತ್ತ ಮುಖ ಮಾಡಿ, ಅಲ್ಲೂ ಗೆದ್ದ ಹಿರಿಮೆ ಇವರದ್ದು.

ವಿದ್ಯೆಗೂ ಮೀರಿ ಒಲಿದ ಗೌರವ: ಲೀಲಾವತಿ ಅವರು ಓದಿದ್ದು ಕೇವಲ 2ನೇ ತರಗತಿ ಮಾತ್ರ. ಆದರೆ, ಅವರಿಗೆ ಒಲಿದ ಬಂದ ಗೌರವಗಳು ಅಪಾರ. 2008ರಲ್ಲಿ ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್‌, 2000ರಲ್ಲಿ ರಾಜ್ಯ ಸರ್ಕಾರದಿಂದ ಡಾ.ರಾಜ್‌ಕುಮಾರ್‌ ಹೆಸರಿನ ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ಚಿತ್ರಗಳಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಈ ಹಿರಿಯ ನಟಿಯ ಮುಡಿಗೇರಿವೆ.

ತಾಯಿ ಲೀಲಾವತಿ ಅಗಲಿಕೆ ಆಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದ ಪುತ್ರ ವಿನೋದ್ ರಾಜ್!

ನಟನೆ ಮುಗಿದ ಮೇಲೆ...: ತಮ್ಮ ಪುತ್ರ ವಿನೋದ್‌ ರಾಜ್‌ ಅವರ ಜತೆಗೆ ನೆಲಮಂಗಲದ ಸೋಲದೇನಹಳ್ಳಿಯಲ್ಲಿ ತೋಟಮಾಡಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದರ ಜತೆ ಅದೇ ಗ್ರಾಮದಲ್ಲಿ ಪಶು ಆಸ್ಪತ್ರೆ ಆರಂಭಿಸುವ ಮೂಲಕ ಆರೋಗ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೀಗೆ ಸಿನಿಮಾ, ರಂಗಭೂಮಿ, ಟೀವಿ, ಕೃಷಿ, ಆರೋಗ್ಯ ಸೇವೆಗಳ ಮೂಲಕ ತಮ್ಮ ಛಾಪು ಮೂಡಿಸಿದ ಲೀಲಾವತಿ, ಕನ್ನಡ ಚಿತ್ರರಂಗದ ಮರೆಯಲಾಗದ ನಟಿ.

Follow Us:
Download App:
  • android
  • ios