ಕೊಡವ ನೃತ್ಯದಲ್ಲಿ ಕಂಗೊಳಿಸಿದ ನಟಿ ಹರ್ಷಿಕಾ ಪೂಣಚ್ಚ: ವಿಡಿಯೋ ನೋಡಿ ಶ್ಲಾಘನೆಗಳ ಮಹಾಪೂರ
ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕೊಡವ ನೃತ್ಯದಲ್ಲಿ ಕಂಗೊಳಿಸಿದ ನಟಿ ಹರ್ಷಿಕಾ ಪೂಣಚ್ಚ. ವಿಡಿಯೋ ವೈರಲ್ ಆಗಿದೆ.
ಸ್ಯಾಂಡಲ್ವುಡ್ ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮತ್ತು 'ಬಿಗ್ ಬಾಸ್' ಖ್ಯಾತಿಯ ನಟ, ಕೊಡಗಿನವರೇ ಆದ ಭುವನ್ ಪೊನ್ನಣ್ಣ (Bhuvan Ponnanna) ಅವರ ಮದುವೆ ಕಳೆದ ಆಗಸ್ಟ್ 24ರಂದು ಅದ್ಧೂರಿಯಾಗಿ ನಡೆದಿದೆ. ಮದುವೆ ಮುಗಿದು ಎರಡು ತಿಂಗಳು ಕಳೆದಿದೆ. ಕೆಲ ದಿನಗಳ ಹಿಂದಷ್ಟೇ ನಟಿ ತಾವು ಮದುವೆಯಾದ ಎಂಟನೆಯ ದಿನಕ್ಕೆ ಕೊಡವರ ಸಂಪ್ರದಾಯದಂತೆ ವಧುವಿನ ತಾಯಿಯ ಮನೆಯಿಂದ ಆಕೆ ಅತ್ತೆಯ ಮನೆಗೆ ಹೋಗುವ ಪಯಣದ ಕುರಿತು ವಿಡಿಯೋ ಶೇರ್ ಮಾಡಿಕೊಂಡಿದ್ದರು. ಇನ್ನೊಂದು ಸುಂದರವಾದ ಆಚರಣೆಯಾಗಿದ್ದು, ಮದುವೆಯಾದ 8 ದಿನಗಳ ನಂತರ ವಧು ಮತ್ತು ವರರು ವಧುವಿನ ಮನೆಗೆ ಹೋಗುತ್ತಾರೆ ಮತ್ತು ಮರುದಿನ ಮನೆಯಿಂದ ಹೊರಡುವಾಗ, ವಧುವಿನ ತಾಯಿಯು ಕಬ್ಬಿನ ಪೆಟ್ಟಿಗೆಯಲ್ಲಿ 8 ವಿಧದ ತಿಂಡಿಗಳನ್ನು ತುಂಬುತ್ತಾರೆ. ವಧು ಅದನ್ನು ತಲೆಯ ಮೇಲೆ ಹೊತ್ತುಕೊಂಡು ವರನ ಮನೆಗೆ ಪ್ರಯಾಣ ಮಾಡಬೇಕು ಎಂದು ಈ ಸಂಪ್ರದಾಯದ ಬಗ್ಗೆ ಹರ್ಷಿಕಾ ಬರೆದುಕೊಂಡಿದ್ದರು. ಈ ಆಚರಣೆಗೆ ಪಾಲಿಯಾ ಎಂದು ಕರೆಯುತ್ತಾರೆ ಎಂದಿದ್ದರು.
ಇದೀಗ ನಟಿ ಕೊಡವರ ಸಂಪ್ರದಾಯದಂತೆ ನರ್ತಿಸುತ್ತಾ ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ್ದಾರೆ. ಕೊಡಗಿನ ಸಂಪ್ರದಾಯ ಉಡುಗೆಯಲ್ಲಿ ಕಂಗೊಳಿಸುತ್ತಿರುವ ನಟಿ ಹರ್ಷಿಕಾ, ಅಲ್ಲಿಯ ನೃತ್ಯಕ್ಕೆ ಸ್ಟೆಪ್ ಹಾಕಿದ್ದಾರೆ. ನನ್ನ ಎಲ್ಲಾ ಪ್ರೀತಿಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಹಬ್ಬದ ಹಾರ್ಧಿಕ ಶುಭಾಶಯಗಳು . ಹಬ್ಬದ ಪ್ರಯುಕ್ತ ನಮ್ಮ ಕೊಡಗಿನ ನೃತ್ಯ ನಿಮಗೋಸ್ಕರ ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ. ಇದಕ್ಕೆ ನೂರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೂಪರ್ ಎಂದು ಹಲವರು ಕಮೆಂಟ್ ಮಾಡಿದ್ದರೆ, ನಮ್ಮ ಪ್ರೀತಿಯ ಕೊಡವತಿ ಎಂದಿದ್ದಾರೆ ಹಲವರು. ಬೇಬಿ ಡಾಲ್ ಎಂದು ಇನ್ನು ಕೆಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ತವರಿನಿಂದ ಗಂಡನ ಮನೆಗೆ ಪಯಣ... ಕೊಡವ ಸಂಪ್ರದಾಯದ ವಿಡಿಯೋದಲ್ಲಿ ಕಂಗೊಳಿಸಿದ ನಟಿ ಹರ್ಷಿಕಾ
ಇನ್ನು ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ಜೋಡಿಯ ಬಗ್ಗೆ ಹೇಳುವುದಾದರೆ, ಇಬ್ಬರೂ ಕೊಡಗಿನವರೇ. ಚಿತ್ರರಂಗ ಮಾತ್ರವಲ್ಲದೇ ಇಬ್ಬರೂ ಜೊತೆಯಾಗಿ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ. ಕೋವಿಡ್ ಲಾಕ್‌ಡೌನ್ (Lockdown) ಸಂದರ್ಭದಲ್ಲಿ ಅನೇಕರಿಗೆ ಅವರು ನೆರವು ನೀಡಿದ್ದಾರೆ. ಆಗಲೇ ಇಬ್ಬರ ನಡುವೆ ಪ್ರೀತಿ ಹಬ್ಬಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಜೋಡಿ ಮಾತ್ರ ಗಪ್ಚುಪ್ ಆಗಿತ್ತು. ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ ಜೋಡಿ. ಒಬ್ಬ ಗೆಳೆಯನನ್ನು ಮದುವೆ ಆಗ್ತೀನಿ ಅನ್ನೋದು ಖುಷಿ ವಿಷಯ. ಹೊಸ ಜೀವನಕ್ಕೆ ಕಾಲಿಡುತ್ತಿದ್ದೇವೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆ ಆಗುತ್ತಿರೋದು ಖುಷಿ ಆಗಿದೆ. ಭುವನ್ ಅವರು ನಿರ್ದೇಶನ ಮಾಡುತ್ತಿರುವ, ನಟಿಸುತ್ತಿರುವ ಸಿನಿಮಾವನ್ನು ನಾನೇ ಪ್ರೊಡ್ಯೂಸ್ ಮಾಡುತ್ತಿದ್ದೇನೆ. ನನ್ನ ಸಿನಿಮಾಗಳ ಕೆಲಸ ಕೂಡ ಇವೆ ಎಂದು ತಮ್ಮ ಮದುವೆಯ ಕುರಿತು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದರು.
ಇನ್ನು ಹರ್ಷಿಕಾ ಅವರು ಸಿನಿ ಪಯಣದ ಕುರಿತು ಹೇಳುವುದಾದರೆ, ಇವರು 2008ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. PUC ಸಿನಿಮಾ ಮೂಲಕ ಹರ್ಷಿಕಾ ಮಿಂಚಿದರು. ಬಳಿಕ ಕೊಡುವ ಸಿನಮಾಗಳಲ್ಲೂ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭೋಜಪುರಿ ಮತ್ತು ತಮಿಳು ಸಿನಿಮಾಗಳಲ್ಲಿ ಹರ್ಷಿಕಾ ಮಿಂಚಿದ್ದಾರೆ. ಕೊನೆಯದಾಗಿ ಹರ್ಷಿಕಾ ಬೇರಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಭುವನ್ ಪೊನ್ನಣ್ಣ (Bhuvan Ponnanna) ಸಿನಿಮಾ ಜೀವನದ ಬಗ್ಗೆ ಹೇಳುವುದಾದರೆ, ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. 2010ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಕೂಲ್ ಸಖತ್ ಹಾಟ್ ಮಗ, ಕುಚಿಕು ಕುಚಿಕು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ರಾಂದವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಳಿಕ ಮತ್ತೆ ಭುವನ್ ತೆರೆಮೇಲೆ ಕಾಣಿಸಿಕೊಂಡಿಲ್ಲ.