Bhavana Ramanna: ದನಿ, ನಗು ಕೇಳಿ, ರೂಪ ನೋಡಿ ಛೇ ಎಲ್ಲಿಂದ ಕರ್ಕೊಂಡು ಬಂದ್ರಿ ಇವ್ಳನ್ನ ಅಂದಿದ್ರು...

ಹಲವಾರು ಹಿಟ್​ ಚಿತ್ರಗಳನ್ನು ನೀಡಿರುವ ನಟಿ ಭಾವನಾ ರಾಮಣ್ಣ ಸಿನಿಮಾ ರಂಗ ಪ್ರವೇಶದ ಆರಂಭದಲ್ಲಿ ತಮಗಾಗಿರುವ ಹಲವಾರು ಅನುಭವಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಅವರು ಹೇಳಿದ್ದೇನು?
 

Actress Bhavna Ramanna has reminisced about her many experiences in film industry

ಒಂದು ಕಡೆ ಸಿನಿಮಾ ಮತ್ತೊಂದು ಕಡೆ ಕಿರುತೆರೆ ಮಗದೊಂದು ಕಡೆ ರಾಜಕೀಯ ಅಂತ ಸದಾ ಬ್ಯುಸಿ ಇರುವವರು ಭಾವನಾ ರಾಮಣ್ಣ. ಭರತನಾಟ್ಯ ನೃತ್ಯಗಾರ್ತಿಯಾದ ಅವರು ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಮತ್ತು ಗಿನ್ನಿಸ್ ದಾಖಲೆಗೆ ಸೇರಿದ ಶಾಂತಿ ಚಿತ್ರದಲ್ಲಿ ನಟಿಸಿದ್ದಾರೆ. ಹೋಮ್‌ಟೌನ್ ಪ್ರೊಡಕ್ಷನ್ಸ್ ಎಂಬ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆಯನ್ನು ಇವರು ಸ್ಥಾಪಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ  (Loksabha Election) ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರಲ್ಲಿ ಒಬ್ಬರೆಂದು ಗುರುತಿಸಿಕೊಂಡವರು. ಡಾಲಿ ಧನಂಜಯ ನಟನೆಯ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ'ದಲ್ಲಿ ಇವರ ಪಾತ್ರಕ್ಕೆ ಜನ ಭೇಷ್ ಅಂತಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಭಾವನಾ ಹೆಸರು ನಂದಿನಿ ರಾಮಣ್ಣ ಅಂತಿತ್ತು. ನಿರ್ದೇಶಕ ಕೋಡ್ಲು ರಾಮಕೃಷ್ಣ, ನಂದಿನಿ ಹೆಸರನ್ನು ಭಾವನಾ ರಾಮಣ್ಣ ಎಂದು ಬದಲಿಸಿದರು. 1996ರಲ್ಲಿ ತುಳು ಚಿತ್ರದ ಮೂಲಕ ನಟನೆ ಆರಂಭಿಸಿದ ಭಾವನಾ 1997ರಲ್ಲಿ 'ನೀ ಮುಡಿದ ಮಲ್ಲಿಗೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ನಂತರ ನಂ 1 (No.1), ಚಂದ್ರಮುಖಿ ಪ್ರಾಣಸಖಿ, ದೇವೀರಿ, ದೀಪಾವಳಿ, ಎಲ್ಲರ ಮನೆ ದೋಸೆನೂ, ಕುರಿಗಳು ಸಾರ್‌ ಕುರಿಗಳು, ಪರ್ವ, ನಿನಗಾಗಿ, ಚೆಲ್ವಿ, ರಾಂಗ್‌ ನಂಬರ್‌, ಪ್ರೀತಿ ಪ್ರೇಮ ಪ್ರಣಯ, ಶಾಂತಿ, ಫ್ಯಾಮಿಲಿ, ಇಂತಿ ನಿನ್ನ ಪ್ರೀತಿಯ, ಆಪ್ತರಕ್ಷಕ, ಚಿಂಗಾರಿ, ಭಾಗೀರಥಿ, ಕ್ರೇಜಿ ಸ್ಟಾರ್‌, ನಿರುತ್ತರ ಸಿನಿಮಾಗಳಲ್ಲಿ ಭಾವನಾ ನಟಿಸಿದ್ದಾರೆ.

ಇಷ್ಟೆಲ್ಲಾ ಚಿತ್ರಗಳಲ್ಲಿ  ನಟಿ ಭಾವನಾ (Bhavana Ramanna) ನಟಿಸಿದರೂ ಅವರು ಎಂದಿಗೂ ಗ್ಲಾಮರಸ್​ ನಟಿ ಎಂದು ಎನಿಸಿಕೊಳ್ಳಲೇ ಇಲ್ವಂತೆ! ಈ ಕುರಿತು ಯೂಟ್ಯೂಬ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ ನೋವಿನಿಂದಲೇ ನುಡಿದಿದ್ದಾರೆ. ಗ್ಲಾಮರಸ್​ ಎನಿಸಿಕೊಳ್ಳಬೇಕಿದ್ದರೆ ತೆಳ್ಳಗೆ, ಬೆಳ್ಳಗೆ ಇರಬೇಕು. ಆದರೆ ನಾನು ಹಾಗೆ ಇಲ್ಲ. ದಾವಣಗೆರೆಯ ಮಿಡ್ಲ್​ ಕ್ಲಾಸ್​ ಫ್ಯಾಮಿಲಿಯಿಂದ ಬಂದ ನಾನು ಹುಡುಗಿಯಾಗಿದ್ದಾಗ 30 ಕೆ.ಜಿಗಿಂತಲೂ ಕಡಿಮೆ ಇದ್ದೆ. ಆಗಲೂ ತೂಕ ಕಡಿಮೆ ಎಂದು ಲೇವಡಿ ಮಾಡುತ್ತಿದ್ದರು. ಈಗಲೂ ಗ್ಲಾಮರಸ್​ ನಟಿಯಾಗಿ ನಾನು ಗುರುತಿಸಿಕೊಂಡಿಲ್ಲ. ಗ್ಲಾಮರಸ್​ ಲುಕ್​ಗೆ ಬೇಕಾಗುವ ಯಾವುದೇ ಅರ್ಹತೆ ನನಗೆ ಇಲ್ಲ ಎಂದೇ ಹೇಳುತ್ತಾರೆ ಎಂದಿದ್ದಾರೆ. ಮೊದಲ ಸಿನಿಮಾ ತುಳು ಮಾರಿಬಲೆಯಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಆಕಸ್ಮಿಕ ಎನ್ನುವ ನಟಿ, ಯಾವುದೇ ಕಾರಣಕ್ಕೂ ಸಿನಿಮಾದಲ್ಲಿ ನಟಿಸುವ ಆಸೆಯೇ ಇರಲಿಲ್ಲ ಎಂದಿದ್ದಾರೆ.

ಇಷ್ಟು ವರ್ಷವಾದರೂ ಭಾವನಾ ರಾಮಣ್ಣ ಮದ್ವೆ ಆಗದೇ ಇರೋದಕ್ಕೆ ಇದೇ ಕಾರಣವಂತೆ!

'ನನ್ನ ಅಪ್ಪ-ಅಮ್ಮ ಯಾರೂ ಸಿನಿಮಾ ರಂಗದವರಲ್ಲ. ನಾನು ಶಾಸ್ತ್ರೀಯ ನೃತ್ಯಗಾತಿಯಾಗಿ (Classical Dancer) ಮುಂದುವರೆಯುವ ಇಚ್ಛೆ ಇತ್ತು. ನಮ್ಮ ಮನೆಯಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯದ ಪರಿಸರವಿತ್ತು. ನನ್ನ ತಮ್ಮ ಮನೆಯಲ್ಲಿ ತಿಳಿಯದಂತೆ ಕದ್ದುಮುಚ್ಚಿ ಸಿನಿಮಾ ಡಾನ್ಸ್​ ಮಾಡುತ್ತಿದ್ದ. ತಂಗಿನೂ ಅದ್ಹೇಗೋ ಸಿನಿಮಾ ಡಾನ್ಸ್​ ಕಲಿತಿದ್ದಳು. ಅವಳು ಡಾನ್ಸ್​ ಮಾಡಲು ಮನೆಯಲ್ಲಿ ಓಕೆ ಅಂದಿದ್ದರು. ಆದರೆ ನನಗೆ ಮಾತ್ರ ಕಟ್ಟುನಿಟ್ಟಿನ ರೂಲ್ಸ್​ ಇತ್ತು. ಅಷ್ಟಕ್ಕೂ ನನಗೆ ಸಿನಿಮಾ ಡಾನ್ಸ್​ ಅಂದ್ರೆ ಇಷ್ಟನೂ ಆಗ್ತಿರಲಿಲ್ಲ. ಭರತನಾಟ್ಯವೇ ನನ್ನ ಜೀವವಾಗಿತ್ತು. ಅಂತವಳನ್ನು ಕರ್ಕೊಂಡು ಹೋಗಿ ಸಿನಿಮಾ ಡಾನ್ಸ್​ ಮಾಡಿಸಲು ಶುರು ಮಾಡಿದ್ರು... ನನ್ನ ಸ್ಥಿತಿ ಯಾರಿಗೂ ಬೇಡ...' ಎಂದು ಸಂದರ್ಶನದಲ್ಲಿ ನಟಿ ಹೇಳಿಕೊಂಡಿದ್ದಾರೆ. ಕೆ.ವಿ.ರಾಜು ಸರ್ ಬಂದು ಸಿನಿಮಾದಲ್ಲಿ ನಟಿಸುವಂತೆ ಅಪ್ಪ-ಅಮ್ಮನ ಮನಸ್ಸು ಒಲಿಸಿದರು. ನಿಮ್ಮ ಮಗಳನ್ನು ನಮ್ಮ ಮಗಳ ಹಾಗೆ ನೋಡಿಕೊಳ್ತೇವೆ ಎಂದಿದ್ರು. ಅದಕ್ಕೆ ಮನೆಯಲ್ಲಿ ಒಪ್ಪಿದ್ರು. ಆದರೆ ನನಗೆ ಸಿನಿಮಾದಲ್ಲಿ ಆ್ಯಕ್ಟ್​ ಮಾಡುವ ಮೈಂಡ್​ಸೆಟ್ಟೂ ಇರಲಿಲ್ಲ.  ಬಾಡಿ ಸ್ಟ್ರಕ್ಟರೂ ಇರಲಿಲ್ಲ. ನಾನು ನಟಿಯಾಗ್ತೇನೆ ಅಂದುಕೊಂಡಿರಲಿಲ್ಲ. ಆದರೆ ಏನೂ ಬರದಿದ್ದರೂ ನಟಿಯಾದೆ ಎಂದಿದ್ದಾರೆ ಭಾವನ.

ಭರತನಾಟ್ಯವನ್ನು ಹೀಗೆಯೇ ಮಾಡಬೇಕು ಎನ್ನುವ ರೂಲ್ಸ್​ ಇರುತ್ತದೆ. ಸಿನಿಮಾ ನೃತ್ಯ ಅದಕ್ಕೆ ತದ್ವಿರುದ್ಧ. ನನಗೆ ಏನೂ ಗೊತ್ತಿರಲಿಲ್ಲ. ಮೊದಲೇ ನನ್ನ ರೂಪ ಸಿನಿಮಾ ನಿರ್ದೇಶಕರಿಗೆ ಹಿಡಿಸಿರಲಿಲ್ಲ. ಗ್ಲಾಮರಸ್​ ಇರಲಿಲ್ವಲ್ಲಾ ನಾನು. ಇನ್ನು ಡಾನ್ಸೂ ಮಾಡಲು ಬರುತ್ತಿರಲಿಲ್ಲ. ಇವಳನ್ನು ಎಲ್ಲಿಂದ ಕರ್ಕೊಂಡು ಬಂದ್ರಿ ಎಂದು ಕೇಳಿದವರೂ ಇದ್ದಾರೆ ಎಂದು ನಟಿ ನೆನಪಿಸಿಕೊಂಡರು. ನನ್ನ ಲುಕ್​ಗೆ ಗ್ಲಾಮರಸ್​ (Glamours look) ಪಾತ್ರ ಸೂಟ್​ ಆಗಲ್ಲ ಎಂದ್ರು. ಸ್ಕಿನ್​ ಟೋನ್ ನೋಡಿ ಹಳ್ಳಿ ಪಾತ್ರನೂ ಆಗಲ್ಲ ಅಂದ್ರು, ಇನ್ನು ಆರ್ಟ್​ ಫಿಲ್ಮ್​ಗೂ ಅಷ್ಟೆಲ್ಲಾ ಅವಕಾಶ ಕೊಡಲು ಆಗಲ್ಲ ಎಂದರು.ಇದರ ಹೊರತಾಗಿಯೂ ಹಲವು ಚಿತ್ರಗಳು ಹಿಟ್​ ಆಗಿವೆ ಎಂದು ನಟಿ ತಮ್ಮ ಅನುಭವ ಶೇರ್​ ಮಾಡಿಕೊಂಡರು. ಇನ್ನು ನನ್ನ ದೊಡ್ಡ ದನಿ ಯಾವ ಪಾತ್ರಕ್ಕೂ ಸೂಟ್​ ಆಗುತ್ತಿರಲಿಲ್ಲ.ಸರ್ವಮಂಗಳ ಅವರು ಡಬ್ಬಿಂಗ್​ ಮಾಡುತ್ತಿದ್ದರು. ನನ್ನದು ಸುಮಧುರ ದನಿ ಅಲ್ಲದ ಕಾರಣ ನಾನೇ ದನಿ ನೀಡುವೆ ಎಂದರೂ ಕೇಳುತ್ತಿರಲಿಲ್ಲ. ಒಂದು ಸಿನಿಮಾದಲ್ಲಿ ನನ್ನ ದನಿ ಹಾಗೂ ಆ್ಯಕ್ಸೆಂಟ್​ ಕಂಠ ಕಲಾವಿದರಿಗೆ ನೀಡುವುದು ಕಷ್ಟವಾಯಿತು. ಆಗ ಕೆ.ವಿರಾಜು ಸರ್​ ಅವರು ನನಗೇ ಅವಕಾಶ ಕೊಟ್ಟರು. ಅಲ್ಲಿಂದ ನನ್ನ ಚಿತ್ರಕ್ಕೆ ನಾನು ಡಬ್ಬಿಂಗ್​ ಮಾಡುತ್ತಿದ್ದೆ ಎಂದರು ಭಾವನಾ.

ಸುಶ್ಮಿತಾ ಸೇನ್ ಆದ್ಮೇಲೆ ಪ್ರೇಮಾನೇ ತುಂಬಾ ಹೈಟ್‌; ಚಿತ್ರರಂಗದ ಅಚ್ಚರಿ ಸತ್ಯಗಳನ್ನು ತೆರೆದಿಟ್ಟ ನಟಿ ಭಾವನ

ಕೆ.ವಿ.ರಾಜು ಅವರಿಂದ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಮೊದಲ ದಿನ ನೀನು ಈ ಚಿತ್ರಕ್ಕೆ ಸಿಗರೇಟ್​ ಸೇದಬೇಕು,  ಹಾರ್ಸ್​ ರೈಡಿಂಗ್​ ಮಾಡಬೇಕು, ಸ್ವಿಮ್ಮಿಂಗ್​ ಕಲಿಯಬೇಕು ಎಂದರು. ಎಲ್ಲವನ್ನೂ ಕಲಿತೆ.  ಆದರೆ ಸಿನಿಮಾ ಡಾನ್ಸ್​ ಮಾಡುವಾಗ ಮಾತ್ರ  ಮೈ ತಿರುತ್ತಾ ಇರಲಿಲ್ಲ,  ಮನಸ್ಸು ಕೇಳ್ತಾ ಇರಲಿಲ್ಲ,  ಅಳು ಬರ್ತಾ ಇತ್ತು. ಅಂತೂ ಕೊನೆಗೆ ಅದನ್ನೂ ಕಲಿತೆ.  ಇನ್ನು ನನ್ನ ನಗು ದೊಡ್ಡದಾಗಿದೆ.  ಯಾವ ಪ್ಯಾಟರ್ನ್​ನಲ್ಲೂ ನನ್ನ ನಗು ಸೆಟ್​ ಆಗ್ತಾ ಇರಲಿಲ್ಲ. ಅದಕ್ಕಾಗಿಯೂ ಸಾಕಷ್ಟು ಕೇಳಿಸಿಕೊಳ್ಳಬೇಕಾಯ್ತು ಎಂದರು.  ನಂ.1 ಸಿನಿಮಾದಿಂದ ನನ್ನ ಸಂಪೂರ್ಣ ಪಾತ್ರಕ್ಕೆ  ಡಬ್ಬಿಂಗ್ (Dubbing) ಮಾಡಲು ಕೊನೆಗೂ ಅವಕಾಶ ಸಿಕ್ಕಿತು ಎಂದರು.

Latest Videos
Follow Us:
Download App:
  • android
  • ios