ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಭಾವನಾ ರಾಮಣ್ಣ ಅವರು ಮದುವೆಯಾಗದೆ, ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಖ್ಯಾತ ನಟಿ, ರಾಜಕಾರಣಿ, ಡ್ಯಾನ್ಸರ್ ಭಾವನಾ ರಾಮಣ್ಣ ಅವರು ಮದುವೆಯಾಗದೆ, 40ನೇ ವಯಸ್ಸಿನಲ್ಲಿ ತಾಯಿಯಾಗುತ್ತಿದ್ದಾರೆ. ಭಾವನಾ ಈಗ ಆರು ತಿಂಗಳು ಗರ್ಭಿಣಿಯಾಗಿದ್ದು, ಅವಳಿ ಮಗು ಅಂತೆ. ಈ ಬಗ್ಗೆ ಸ್ವತಃ ಭಾವನಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಅವಳಿ ಮಗುವಿನ ನಿರೀಕ್ಷೆ!
ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಭಾವನಾ ಅವರು, "ಪಾಲಕರು, ಮೂವರು ಒಡಹುಟ್ಟಿದವು, ಸಂಬಂಧಿಕರು, ಸ್ನೇಹಿತರು ಇರುವ ಮನೆಯಲ್ಲಿ ನಾನು ಬೆಳೆದೆನು. ನನಗೆ ಮಕ್ಕಳೆಂದರೆ ತುಂಬ ಇಷ್ಟ. ಆದರೆ ನಾನು 20ನೇ ವಯಸ್ಸಿನಲ್ಲಿ ಮಗು ಮಾಡಿಕೊಳ್ಳುವ ಬಗ್ಗೆ ಯೋಚಿಸಿರಲಿಲ್ಲ. ನನಗೆ 30 ವಯಸ್ಸು ಆದಾಗ ಲವ್‌ಮಾಡಲು ರೆಡಿ ಇದ್ದೆ. 40 ಇದ್ದಾಗ ಮಗು ಮಾಡಿಕೊಳ್ಳೋದನ್ನು ಇಗ್ನೋರ್ ಮಾಡಲು ಆಗೋದಿಲ್ಲ. ಈ ವರ್ಷಾಂತ್ಯದಲ್ಲಿ ನಾನು ಅವಳಿ ಮಗುವನ್ನು ನಿರೀಕ್ಷೆ ಮಾಡ್ತಿದ್ದೇನೆ" ಎಂದು ಹೇಳಿದ್ದಾರೆ.
ಕಾನೂನು ಬೆಂಬಲಿಸಿರಲಿಲ್ಲ!
ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಭಾವನಾ ರಾಮಣ್ಣ ಅವರು ಮದುವೆಯಾಗದೆ, ಮಗುವಿನ ನಿರೀಕ್ಷೆಯಲ್ಲಿದ್ದಾರೆ. "ನಾನು ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ಆದರೆ ತಾಯಿ ಆಗುವ ಆಸೆ ಇತ್ತು, ಅದೀಗ ನೆರವೇರುತ್ತಿದೆ. ತುಂಬ ಸಮಯದಿಂದ ಮಹಿಳೆಯರು ಸಿಂಗಲ್ ಪೇರೆಂಟ್ ಆಗೋದನ್ನು ಕಾನೂನು ಬೆಂಬಲಿಸಿರಲಿಲ್ಲ. ಕಾನೂನು ಕೆಲಸ ಆದಬಳಿಕ ನಾನು ಈ ನಿರ್ಧಾರಕ್ಕೆ ಬಂದೆ. ಐವಿಎಫ್ ಕ್ಲಿನಿಕ್ ಹೋಗಿ ನಾನು ಈ ಬಗ್ಗೆ ವಿಚಾರಿಸಿದೆ" ಎಂದು ಹೇಳಿದ್ದಾರೆ.
ಐವಿಎಫ್ ಮೊರೆ ಹೋದೆ!
"ನಮ್ಮ ಮನೆ ಬಳಿ ಇರುವ ಕ್ಲಿನಿಕ್ ಹೋಗಿ ಅಲ್ಲಿ ಚಿಕಿತ್ಸೆ ಪಡೆದೆ. ವೈದ್ಯರು ನನಗೆ ತುಂಬ ಸಲಹೆ ಕೊಟ್ಟರು. ಮೊದಲ ಪ್ರಯತ್ನದಲ್ಲೇ ನಾನು ತಾಯಿಯಾಗಿರೋದು ಖುಷಿ ಕೊಟ್ಟಿದೆ. ನಾನು ತಾಯಿ ಆಗ್ತಿದೀನಿ ಅಂತ ಗೊತ್ತಾದಾಗ ನನ್ನ ತಂದೆ ತುಂಬ ಖುಷಿಪಟ್ಟರು. ನೀನು ಮಹಿಳೆ, ನಿನಗೆ ತಾಯಿ ಆಗುವ ಹಕ್ಕಿದೆ ಎಂದು ನನ್ನ ತಂದೆ ಹೇಳಿದ್ದಾರೆ. ಇನ್ನೂ ಕೆಲವರು ಇದರ ಬಗ್ಗೆ ಪ್ರಶ್ನೆ ಮಾಡಿದರು. ನನ್ನ ಕಥೆ ಕೇಳಿ ಓರ್ವ ಮಹಿಳೆಗೆ ಏಕಾಂಗಿಯಲ್ಲ ಅಂತ ಅನಿಸಿದರೆ, ಅದೇ ನನ್ನ ಜಯ” ಎಂದಿದ್ದಾರೆ.
ತಂದೆಯಿಲ್ಲ
"ನಾನು ನನ್ನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ್ದೇನೆ. ನನ್ನ ಮಕ್ಕಳ ಭವಿಷ್ಯಕ್ಕೆ ನಾನು ತಯಾರಿ ಮಾಡಿಕೊಂಡಿದ್ದೇನೆ. ನನ್ನ ತಾಯಿ ಬದುಕಿದ್ದಿದ್ದರೆ ಈ ವಿಷಯ ಕೇಳಿ ಫುಲ್ ಖುಷಿಯಾಗುತ್ತಿದ್ದಳು. ತಂದೆಯಿಲ್ಲದೆ ಮಕ್ಕಳನ್ನು ಬೆಳೆಸಿದರೆ ಸಮಾಜವು ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತದೆ ಎನ್ನೋದು ನನಗೆ ಗೊತ್ತಿದೆ. ನಾನು ಪುರುಷ ವಿರೋಧಿಯಲ್ಲ, ಆದರೆ ಪುರುಷನಿಲ್ಲದೆ ಬದುಕೋದು ಸರಿ ಅಂತ ಕೂಡ ಹೇಳುತ್ತಿಲ್ಲ. ಜೀವನದಲ್ಲಿ ಪ್ರೀತಿ ಮುಖ್ಯ, ಪ್ರಾಮಾಣಿಕತೆ ಇರಬೇಕು ಎನ್ನೋದನ್ನು ನನ್ನ ಮಕ್ಕಳಿಗೆ ಕಲಿಸಿಕೊಡ್ತೀನಿ” ಎಂದಿದ್ದಾರೆ.
