ಅಭಿಮಾನಿಗಳ ಸಾವಿನ ಶಾಕ್‌ನಿಂದ ಚೇತರಿಸಿಕೊಳ್ಳದ ಯಶ್; ಸಿನಿಮಾನೂ ಮಾಡ್ತಿಲ್ಲ, ಹೊರಗೂ ಹೋಗ್ತಿಲ್ಲ!
ಹುಟ್ಟು ಹಬ್ಬದ ಬ್ಯಾನರ್ ಕಟ್ಟುವಾಗ ಗದಗಿನ ಮೂವರು ಅಭಿಮಾನಿಗಳ ಸಾವಿಗೀಡಾದ ಶಾಕ್‌ನಿಂದ ನಟ ಯಶ್ ಇನ್ನೂ ಚೇತರಿಸಿಕೊಂಡಿಲ್ಲ.
ಗದಗ (ಜ.17): ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟ ಹಬ್ಬದ ನಿಮಿತ್ತ ಬೃಹತ್ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ತಂತಿ ತಗುಲಿ ಮೂವರು ಅಭಿಮಾನಿಗಳು ಸಾವನ್ನಪ್ಪಿದ ದುರ್ಘಟನೆಯಿಂದ ನಟ ಯಶ್ ಇನ್ನೂ ಹೊರಬಂದಿಲ್ಲ. ಯಶ್ ಅವರು ಯಾವ ಕೆಲಸದಲ್ಲಿಯೂ ತೊಡಗಿಕೊಳ್ಳುತ್ತಿಲ್ಲ. ಸಿನಿಮಾ ಶೂಟಿಂಗ್‌ನಲ್ಲಿಯೂ ಭಾಗವಹಿಸಿಲ್ಲ ಎಂದು ಅವರ ಸ್ನೇಹಿತರು ಹೇಳಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಬ್ಯಾನರ್ ಕಟ್ಟುವಾಗ ನಡೆದ ವಿದ್ಯುತ್ ಅವಘಡದಿಂದ ಮೃತಪಟ್ಟ ಯಶ್ ಅಭಿಮಾನಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದ ನಂತರ ಅವರ ಸ್ನೇಹಿತ ರಾಕೇಶ್ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ. ಸೂರಣಗಿ ಘಟನೆ ನಂತ್ರ ಯಶ್ ಹೆಚ್ಚು ಮಾತ್ನಾಡಿಲ್ಲ, ಚಿತ್ರದ ಕೆಲಸಗಳನ್ನೂ ಮಾಡಿಲ್ಲ. ಇನ್ನೂ ಯಾವ ಕೆಲಸದಲ್ಲೂ ಅವರು ತೊಡಗಿಸಿಕೊಂಡಿಲ್ಲ. ಸೂರಣಗಿ ಅಭಿಮಾನಿಗಳ ಸಾವಿನಿಂದ ಯಶ್ ತುಂಬಾ ಆಘಾತಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ರಾಕಿಂಗ್ ಸ್ಟಾರ್ ಯಶ್ ಮಾನವೀಯತೆ ದರ್ಶನ: ಮೃತ ಅಭಿಮಾನಿಗಳ ಕುಟುಂಬಕ್ಕೆ 5 ಲಕ್ಷ ರೂ. ನೆರವು!
ಯಶ್ ಅವರ ಅಭಿಮಾನಿಗಳ ಸಾವು ಆಗಬಾರದಿತ್ತು, ಆಗೋಗಿದೆ. ಯಶ್ ಅವರ ಸೂಚನೆಯಂತೆ ಮೃತ ಕುಟುಂಬಕ್ಕೆ ಪರಿಹಾರ ನೀಡಿದ್ದೇವೆ. ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಗಾಯಾಳುಗಳ ಡಿಟೈಲ್ ಪಡೆದಿದ್ದೇವೆ. ಎರಡು ದಿನದಲ್ಲಿ ಅವರಿಗೂ ಪರಿಹಾರ ಕೊಡಲಾಗುವುದು. ಯಶ್ ಅವರಿಗೆ ತುಂಬಾ ನೋವಾಗಿದೆ. ಬರ್ತ್ ಡೇ ಆದಾಗಿನಿಂದ ಆ್ಯಕ್ಟಿವ್ ಆಗಿಲ್ಲ. ಮನೆಗೆ ಹೋಗಿ ಹಣ ತಲುಪಿಸಿ ಬನ್ನಿ, ಅವರ ಕುಟುಂಬದೊಂದಿಗೆ ನಾವ್ ಇದೀವಿ ಅಂತಾ ಹೇಳಿ ಬರೋದಕ್ಕೆ ಹೇಳಿದ್ದಾರೆ. ಆದ್ದರಿಂದ ನಾವು ಬಂದು ಪರಿಹಾರದ ಚೆಕ್ ನೀಡಿದ್ದೇವೆ ಎಂದರು.
ಇನ್ನು ಗಾಯಾಳುಗಳು ಕೂಡ ಮಾತನಾಡುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ಯಶ್ ಅಭಿಮಾನಿಗಳ ಸಾವಿನ ನೋವಿನಿಂದ ಹೊರ ಬಂದಿಲ್ಲ. ಹುಟ್ಟಿದ ಹಬ್ಬ ಅಂದ್ರೆ ನನಗೆ ಭಯವಾಗುತ್ತಿದೆ ಎಂದು ಯಶ್ ಹೇಳಿದ್ದಾರೆ. ಯಶ್ ಅವರು ಮುಂದೆಯೂ ಮೃತ ಕುಟುಂಬದ ಜೊತೆ ಇರ್ತಾರೆ ಎಂದು ಹೇಳಿದರು.
ಅಭಿಮಾನಿಗಳ ನಿಧನ ಬೇಸರದಲ್ಲಿ ನಟ ಯಶ್: ಟಾಕ್ಸಿಕ್ ಶೂಟಿಂಗ್‌ಗೆ ಬ್ರೇಕ್ ಹಾಕಿ ಗೋವಾ ಸೇರಿದ ನಟ!
ಈ ಕುರಿತು ಮೃತ ಅಭಿಮಾನಿಗಳ ಕುಟುಂಬಸ್ಥರು ಮಾತನಾಡಿ, ಯಶ್ ಮಾತಿನಂತೆ ನಡೆದುಕೊಂಡಿದ್ದಾರೆ. ಆದ್ರೆ ಅವರು ಕೊಟ್ಟ ಹಣ ಮಕ್ಕಳನ್ನ ಮರಳಿಸಲ್ಲ. ಹಣ ತೆಗೆದುಕೊಂಡು ಏನ್ ಮಾಡೋದು ಮಕ್ಕಳು ಮತ್ತ ಬರ್ತಾರಾ.? ಮಗ ಇದ್ದರೆ ಎಷ್ಟು ಗಳಿಸುತ್ತಿದ್ದನು. ಹಣ ತೆಗೆದುಕೊಂಡು ಏನ್ ಮಾಡೋಣ? ಎಂದು ಮೃತ ನವೀನ್ ತಾಯಿ ಮುತ್ತತ್ವ ಕಣ್ಣೀರು ಹಾಕಿದರು. ಚೆಕ್ ನಲ್ಲಿ ಮಗ ಬರೋದಕ್ಕೆ ಸಾಧ್ಯವಾ? ಕಷ್ಟ ಪಟ್ಟು ಬೆಳೆಸಿದ ಮಗ ಮತ್ತೆ ಬರಲ್ಲ. ಹಣ ಎಷ್ಟೆ ಕೊಟ್ಟರೂ ಮಕ್ಕಳು ಮತ್ತೆ ಬರಲ್ಲ. ಸೂರಣಗಿ ಪ್ರಕರಣ ಎಲ್ಲ ಅಭಿಮಾನಿಗಳಿಗೆ ಪಾಠವಾಗಬೇಕು ಎಂದು ಮೃತ ಹನುಮಂತ ತಾಯಿ ಶೋಭಾ ನೋವಿನ ಮಾತುಗಳನ್ನಾಡಿದರು.