ರಾಕಿಂಗ್ ಸ್ಟಾರ್ ಯಶ್ ಮಾನವೀಯತೆ ದರ್ಶನ: ಮೃತ ಅಭಿಮಾನಿಗಳ ಕುಟುಂಬಕ್ಕೆ 5 ಲಕ್ಷ ರೂ. ನೆರವು!
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದ ಅಭಿಮಾನಿಗಳ ಕುಟುಂಬಕ್ಕೆ ಯಶ್ ತಲಾ 5 ಲಕ್ಷ ರೂ. ಸಹಾಯಧನ ನೀಡಿದ್ದಾರೆ.
ಬೆಂಗಳೂರು (ಜ.17): ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಅಂಗವಾಗಿ ಗದಗ ಜಿಲ್ಲೆಯ ಸೂರಣಗಿಯಲ್ಲಿ ಬ್ಯಾನರ್ ಕಟ್ಟುವಾಗ ವಿದ್ಯುತ್ ಅವಘಡಕ್ಕೆ ಮೂವರು ಅಭಿಮಾನಿಗಳು ಬಲಿಯಾಗಿದ್ದರು. ಅಭಿಮಾನಿಗಳ ಸಾವಿನ ಬೆನ್ನಲ್ಲಿಯೇ ಮೃತರ ಮನೆಗೆ ತೆರಳಿಗೆ ನೋವಿನಲ್ಲಿ ಭಾಗಿಯಾಗಿದ್ದ ಯಶ್, ಈಗ ತಲಾ 5 ಲಕ್ಷ ರೂ. ಸಹಾಯಧನವನ್ನು ನೀಡಿ ಮಾನವೀಯತೆ ಪ್ರದರ್ಶನ ಮಾಡಿದ್ದಾರೆ.
ನಟ ಯಶ್ ಜನ್ಮದಿನ ಸಮಯದಲ್ಲಿ ಬೃಹತ್ ಬ್ಯಾನರ್ ಕಟ್ಟಲು ಹೋದಾಗ ವಿದ್ಯುತ್ ತಂತಿ ತಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ಮೂಬರು ಯುವಕರು ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ನಟನ ಕಡೆಯಿಂದ ಪರಿಹಾರದ ಚೆಕ್ ಅನ್ನು ನೀಡಲಾಗಿದೆ. ಯಶೋಮಾರ್ಗ ಫೌಂಡೇಶನ್ ಕಡೆಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ಯಶ್ ಅವರ ಸ್ನೇಹಿತರು ಗ್ರಾಮಕ್ಕೆ ಭೇಟಿ ನೀಡಿ ಮೃತಪಟ್ಟ ಯುವಕರ ಕುಟುಂಬಸ್ಥರಿಗೆ ತಲುಪಿಸಿದ್ದಾರೆ. ಯಶ್ ಸ್ನೇಹಿತರು ಬಂದು ಪರಿಹಾರ ಹಣ ನೀಡಿದ್ದಾಗ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಯಶ್ ಬರ್ತ್‌ಡೇಗೆ ಕಟೌಟ್ ನಿಲ್ಲಿಸಲು ಹೋಗಿ ಭಾರೀ ಅನಾಹುತ; ವಿದ್ಯುತ್ ತಗುಲಿ ಮೂವರು ಅಭಿಮಾನಿಗಳು ಸ್ಥಳದಲ್ಲೇ ಸಾವು!
ಇನ್ನು ನಟ ಯಶ್ ಸ್ನೇಹಿತರು ಮೃತ ಅಭಿಮಾನಿಗಳ ಕುಟುಂಬಕ್ಕೆ ಚೆಕ್ ವಿತರಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಅಭಿಮಾನಿಗಳು ಮೃತಪಡಬಾರದಿತ್ತು. ಆದರೆ ಈಗ ಎಲ್ಲ ಆಗಿ ಹೋಗಿದೆ. ಯಶ್ ಅವರು ಹೇಳಿದ್ದಂತೆ ನಾವು ಮೃತ ಕುಟುಂಬಕ್ಕೆ ಪರಿಹಾರ ನೀಡಿದ್ದೇವೆ. ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಗಾಯಾಳುಗಳು ಯಾರೆಲ್ಲ ಎಂಬ ಬಗ್ಗೆ ಮಾಹಿತಿಯನ್ನು ನಾವು ಪಡೆದುಕೊಂಡಿದ್ದೇವೆ. ಇನ್ನು ಎರಡು ಮೂರು ದಿನಗಳಲ್ಲಿ ಅವರಿಗೂ ಕೂಡಾ ಪರಿಹಾರವನ್ನು ನೀಡಲಾಗುತ್ತದೆ. ಈಗ ಮೃತ ಯುವಕರ ಮನೆಗೆ ಹೋಗಿ ಹಣ ತಲುಪಿಸಿದ್ದೇವೆ ಎಂದರು.
ಗದಗ ಜಿಲ್ಲೆಯ ಸೊರಣಗಿ ಗ್ರಾಮದ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಜನವರಿ 7ರ ಮಧ್ಯರಾತ್ರಿ ತಯಾರಿ ಮಾಡುತ್ತಿದ್ದರು. ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿದ್ದು ಈ ಅನಾಹುತ ನಡೆದಿದೆ. ಮುರಳಿ, ನವೀನ್ ಮತ್ತು ಹನುಮಂತ ಮೃತಪಟ್ಟಿದ್ದರು. ಇನ್ನು ಮೃತರ ಕುಟುಂಬಗಳನ್ನು ಭೇಟಿ ಮಾಡಿದ್ದ ಯಶ್ ಅವರು ಎಲ್ಲ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿ ಬಂದಿದ್ದರು. ನಿಮ್ಮ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಕಣ್ಣೀರು ಹಾಕಿದ್ದರು.
ಮೃತ ಯುವಕರ ಕುಟುಂಬಸ್ಥರಿಗೆ ಯಶ್ ಸಾಂತ್ವನ, ಕಣ್ಣೀರಿಟ್ಟ ರಾಕಿಂಗ್ ಸ್ಟಾರ್!
ಬರ್ತಡೇ ಯಾಕಾದ್ರೂ ಬರುತ್ತೆ ಎಂದಿದ್ದ ಯಶ್:
ಮೃತ ಅಭಿಮಾನಿಗಳ ಕುಟುಂಬವನ್ನು ಭೇಟಿ ಮಾಡಿ ಮಾತನಾಡಿದ ನಟ ಯಶ್, ಬರ್ತ್‌ಡೇ ಬಂತು ಅಂದ್ರೆ ಭಯ ಆಗುತ್ತೆ, ಯಾಕಾದ್ರೂ ಇದು ಬರುತ್ತೋ ಅನ್ಸುತ್ತೆ. ಪ್ಲೀಸ್ ಯಾರೂ ಈ ಥರ ಬ್ಯಾನರ್ ಕಟ್ಟೋಕೆ ಹೋಗಿ. ಇಂಥ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ನಾನು ಬೇಕು ಅಂತಲೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಇನ್ನು ಬ್ಯಾನರ್ ಕಟ್ಟೋಕೆ ಹೋಗಬೇಡಿ. ಇದೇ ನೀವು ನನಗೆ ಕೊಡುವ ಅಭಿಮಾನ. ನನ್ನ ಮೇಲೆ ಪ್ರೀತಿ ಇದ್ದರೆ ಒಳ್ಳೆಯ ಕೆಲಸಗಳನ್ನು ಮಾಡಿ. ಅಭಿಮಾನದ ಹೆಸರಲ್ಲಿ ಜೀವ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ನಮ್ಮಂತೆ ನೀವು ಬೆಳೆದರೆ ನಮಗೂ ಸಂತೋಷ. ಈ ರೀತಿ ಬ್ಯಾನರ್ ಹಾಕೋದನ್ನು ಯಾರೂ ಇಷ್ಟಪಡೋದಿಲ್ಲ. ಬರ್ತ್‌ಡೇ ಬೇಡ ಅಂದ್ರೆ ಬೇಸರ ಮಾಡ್ಕೋತಾರೆ. ನಮ್ಮಿಂದ ಯಾರಿಗೂ ತೊಂದರೆಯಾಗಬಾರದು. ಕುಟುಂಬಕ್ಕೆ ನನ್ನ ಕೈಲಾದಷ್ಟು ಸಹಾಯ ಮಾಡಲಿದ್ದೇನೆ ಎಂದು ಯಶ್ ಹೇಳಿದ್ದಾರೆ.