‘ನಾನು ಕೋಟಿ ರು. ಸಂಭಾವನೆ ಕೇಳ್ತೀನಿ ಅಂತ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದು ಸರಿಯಲ್ಲ. ದಯವಿಟ್ಟು ನನ್ನ ತಟ್ಟೆಯ ಅನ್ನಕ್ಕೆ ಒದೆಯಬೇಡಿ’ ಎಂದು ವಿನೋದ್ ಪ್ರಭಾಕರ್ ನೋವು ತೋಡಿಕೊಂಡಿದ್ದಾರೆ. 

ವರದ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಕುರಿತಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತಾನಾಡಿದರು.

‘ಕೋವಿಡ್ ಕಾರಣಕ್ಕೆ ನಿರ್ಮಾಪಕರು ಸಿನಿಮಾ ಮಾಡಲು ಅಂಜುವ ಸನ್ನಿವೇಶ ಇದೆ. ನಾನು ಮೊದಲಿಂದಲೂ ನಿರ್ಮಾಪಕ ನಟ. ನನಗೆ ಕತೆ ಹೇಳಲು ಬರುವ ಹೊಸ ನಿರ್ಮಾಪಕರಲ್ಲಿ ಮೊದಲು ಕೇಳೋದೇ ಬಜೆಟ್ ಎಷ್ಟು ಅಂತ. 25 ಲಕ್ಷ ರು. ನಿಂದ 50 ಲಕ್ಷ ರು.ವರೆಗಿನ ಬಜೆಟ್‌ನಲ್ಲಿ ಸಿನಿಮಾ ಮಾಡಿ ಅಂತಲೇ ಹೇಳುತ್ತೇನೆ. ನನ್ನನ್ನು ಹಾಕಿಕೊಂಡು ಮಾಡಿದ ಸಿನಿಮಾ ಎಷ್ಟು ರಿಟರ್ನ್‌ಸ್ ಕೊಡಬಲ್ಲದು ಅನ್ನೋದು ನನಗೆ ಗೊತ್ತು. ನಾನ್ಯಾವತ್ತೂ ನಿರ್ಮಾಪಕರಿಗೆ ಹೊರೆಯಾಗಲ್ಲ. ಈ ವರದಾ ಚಿತ್ರದಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ’ ಎಂದರು.

ನನ್ನದಲ್ಲದ ತಪ್ಪಿಗೆ ನಾನು ಬೆಲೆ ತೆರಬೇಕಾಗಿದೆ: ವಿನೋದ್ ಪ್ರಭಾಕರ್ 

ನಿರ್ಮಾಪಕ ಕಂ ನಿರ್ದೇಶಕ ಉದಯ ಪ್ರಕಾಶ್ ಮಾತನಾಡಿ, ‘ಈ ಸಿನಿಮಾ ತಂದೆ ಮಕ್ಕಳ ದ್ವೇಷದ ಕತೆಯ ಮೇಲೆ ನಿಂತಿದೆ. ಮೋಶನ್ ಪೋಸ್ಟರ್‌ನಲ್ಲಿರುವ ಫೋರ್ಸ್ ಇಡೀ ಸಿನಿಮಾದಲ್ಲಿ ಕ್ಯಾರಿ ಆಗಿದೆ. 60 ದಿನಗಳ ಕಾಲ ಮೈಸೂರು, ಕುಂದಾಪುರ ಮೊದಲಾದೆಡೆ ಶೂಟಿಂಗ್ ನಡೆದಿದೆ’ ಎಂದರು.

ಹಿರಿಯ ನಟ ಚರಣ್ ರಾಜ್, ಸಿನಿಮಾಟೋಗ್ರಫಿ ಮಾಡಿದ ಭಜರಂಗಿ ಆನಂದ್ ಮತ್ತಿತರರು ಉಪಸ್ಥಿತರಿದ್ದರು.