ನಟ ಪ್ರಥಮ್‌ಗೆ ಬೆದರಿಕೆ ಹಾಕಿದ ಆರೋಪದ ಮೇಲೆ ರೌಡಿಶೀಟರ್ ಯಶಸ್ವಿನಿ ಮತ್ತು ಬೇಕರಿ ರಘು ಬಂಧನಕ್ಕೊಳಗಾಗಿದ್ದರು. ದೊಡ್ಡಬಳ್ಳಾಪುರ ನ್ಯಾಯಾಲಯ ಇಬ್ಬರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಯಶಸ್ವಿನಿ ಆರೋಪಗಳನ್ನು ನಿರಾಕರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ (ಜು.31): ನಟ ಪ್ರಥಮ್ ಮೇಲೆ ಡ್ರ್ಯಾಗರ್ (ಚಾಕು) ಇಟ್ಟು ಬೆದರಿಕೆ ಹಾಕಲಾಗಿದೆ ಎಂಬ ಆರೋಪದ ಕುರಿತು ದಾಖಲಾಗಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ರೌಡಿಶೀಟರ್ ಯಶಸ್ವಿನಿ ಮತ್ತು ಬೇಕರಿ ರಘುಗೆ ದೊಡ್ಡಬಳ್ಳಾಪುರ ನ್ಯಾಯಾಲಯ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದೆ.
ನಿರೀಕ್ಷಣಾ ಜಾಮೀನಿಗೆ ಅರ್ಜಿ, ಮಧ್ಯಾಹ್ನ ವಿಚಾರಣೆ: ಯಶಸ್ವಿನಿ ಮತ್ತು ರಘು ಜಾಮೀನು ಅರ್ಜಿ ಸಲ್ಲಿಸಿದ ಬಳಿಕ, ಮಧ್ಯಾಹ್ನ 3 ಗಂಟೆಗೆ ಈ ಅರ್ಜಿ ವಿಚಾರಣೆ ನಡೆಯಿತು. ನ್ಯಾಯಾಧೀಶರು ಕೆಲವು ಷರತ್ತುಗಳಡಿಯಲ್ಲಿ ಇಬ್ಬರಿಗೂ ಜಾಮೀನು ನೀಡಿರುವ ಬಗ್ಗೆ ನ್ಯಾಯಾಂಗ ಮೂಲಗಳು ತಿಳಿಸಿವೆ.
ಯಶಸ್ವಿನಿ ಸ್ಪಷ್ಟನೆ – 'ನಾನು ಯಾರಿಗೂ ಬೆದರಿಕೆ ಹಾಕಿಲ್ಲ'
ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಯಶಸ್ವಿನಿ, 'ಆ ಫಂಕ್ಷನ್‌ಗೆ ಮಹೇಶ್ ಅವರೇ ನನ್ನನ್ನು ಕರೆದುಕೊಂಡು ಹೋಗಿದ್ದರು. ದಾಸ ಕಾರ್ಯಕ್ರಮವಿತ್ತು. ಅಲ್ಲಿ ನಟ ಪ್ರಥಮ್ ಸಹ ಇದ್ದ. ಅವನೇ ನಾನೊಬ್ಬಳೇ ನಿಂತಿದ್ದಾಗ ಬಂದು ಮಾತುಕತೆ ಆರಂಭಿಸಿದ. ‘ಅಕ್ಕ ಚೆನ್ನಾಗಿದ್ದೀಯ’ ಅಂತ ಮಾತು ಹಿಗ್ಗಿಸುತ್ತಾ ಬಂದ. ನಾನು ಕೂಡ 'ಸೂರಿ ಅಣ್ಣ' ಸಿನಿಮಾ ಪ್ರಚಾರಕ್ಕಾಗಿ ಓಡಾಡುತ್ತಿದ್ದೆ. ಬೇಕರಿ ರಘು ಆ ಕಾರ್ಯಕ್ರಮಕ್ಕೆ ಬಂದೆ ಇರ್ಲಿಲ್ಲ. ಇನ್ನು ಡ್ರ್ಯಾಗರ್ ಇಟ್ಟು ಹಲ್ಲೆಗೆ ಯತ್ನಿಸಿದ್ದಾರೆ ಎಂಬುದೆಲ್ಲಾ ಸುಳ್ಳು. ಅಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿಕೊಂಡು ಬಂದಿದ್ದೇವೆ. ಆದರೆ, ಇಲ್ಲಿ ನನಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ನಾಟಕ ಮಾಡುತ್ತಾ ಕಥೆ ಕಟ್ಟುತ್ತಿದ್ದಾನೆ. ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಇವನೇನು ನಾವು ಬೆದರಿಕೆ ಹಾಕುವಷ್ಟು ದೊಡ್ಡವನಾ? ನಾನು ಪ್ರಥಮ್ ವಿರುದ್ಧ ಕೌಂಟರ್ ಕಂಪ್ಲೇಂಟ್ ಕೊಡ್ತೀನಿ. ಮಾನನಷ್ಟ ಮೊಕದಮ್ಮೆ ಸಹ ಹಾಕುತ್ತೇನೆ ಎಂದು ಹೇಳಿದರು.
ಸಿನಿಮಾ ಪಬ್ಲಿಸಿಟಿಗೆ ಇವೆಲ್ಲಾ ನಾಟಕ:
ಯಶಸ್ವಿನಿ ಮತ್ತು ರಘು ಪರ ವಕೀಲರು ನ್ಯಾಯಾಲಯದಲ್ಲಿ ಸಲ್ಲಿಸಿದ ಮಾಹಿತಿ ಪ್ರಕಾರ, ಪ್ರಥಮ್ ಈ ಎಲ್ಲ ಆರೋಪಗಳನ್ನು ತನ್ನ ಹೊಸ ಚಿತ್ರಗಳ ಪಬ್ಲಿಸಿಟಿಗೆ ಬಳಸುತ್ತಿರುವ ಸಾಧ್ಯತೆಯಿದೆ ಎಂದು ಕೋರ್ಟ್‌ನಲ್ಲಿ ವಾದಿಸಿದ್ದಾರೆ. ಆದರೆ, ನಟ ಪ್ರಥಮ್ ಪರವೂ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದು, ಅವರ ಮೇಲೆ ಹಲ್ಲೆಗೆ ಯತ್ನ ಮಾಡಲಾಗಿದೆ ಎಂಬ ಆರೋಪದ ಕುರಿತು ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಮೂಲಗಳು ತಿಳಿಸುತ್ತಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಪೊಲೀಸರ ನಿಗಾ ಮುಂದುವರಿಕೆ:
ಈ ಪ್ರಕರಣದ ಬಗ್ಗೆ ಪೊಲೀಸರ ಗಮನ ವಹಿಸಿಕೊಂಡಿದ್ದು, ಎಲ್ಲಾ ದೃಶ್ಯಾವಳಿಗಳು, ಸಿಸಿಟಿವಿ ಫೂಟೇಜ್, ಕಾರ್ಯಕ್ರಮದ ಸಾಕ್ಷ್ಯಾಧಾರಗಳ ಪರಿಶೀಲನೆ ನಡೆಯುತ್ತಿದೆ. ಸಂಬಂಧಿತ ವ್ಯಕ್ತಿಗಳ ಹೇಳಿಕೆಗಳು ಮತ್ತು ಘಟನೆಯ ಬಗ್ಗೆ ತನಿಖೆ ಮುಂದುವರಿಯಲಿದೆ. ಈ ವಿವಾದದಲ್ಲಿ ರೌಡಿಶೀಟರ್ ಹೆಸರುಗಳು, ಜಾಮೀನು ವಿಚಾರ ಹಾಗೂ ನಟ-ನಟಿಯರ ನಡುವಿನ ಮಾತುಕತೆ ಕುರಿತು ಮಾಧ್ಯಮಗಳಲ್ಲಿ ಭಾರೀ ಚರ್ಚೆ ಆಗುತ್ತಿದೆ. ಇದೀಗ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ನೀಡಿದ ಬಳಿಕ, ಪ್ರಕರಣ ಮತ್ತಷ್ಟು ಹೊಸ ತಿರುವು ಪಡೆದುಕೊಂಡಿದೆ. ಆದರೆ, ಇದೆಲ್ಲವೂ ಕೇವಲ ಪಬ್ಲಿಸಿಟಿ ಸ್ಟಂಟ್ನಾ? ಅಥವಾ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆಯೇ ಎಂಬುದು ಪೊಲೀಸರ ಮುಂದಿನ ವಿಚಾರಣೆ ಮತ್ತು ತನಿಖೆ ಸ್ಪಷ್ಟತೆ ನೀಡಲಿದೆ.
ಪ್ರತಿ ಭಾನುವಾರ ಪೊಲೀಸ್ ಠಾಣೆಗೆ ಹೋಗಿ ಸಹಿ ಮಾಡಿ ಬರಬೇಕು:
ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ ಆರೋಪಿಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಆರೋಪಿ ಬೇಕರಿ ರಘುಗೆ ಪ್ರತಿ ಭಾನುವಾರ ಠಾಣೆಗೆ ಹೋಗಿ ಸೈನ್ ಮಾಡಿ ಬರಬೇಕು ಎಂದು ತಿಳಿಸಿದೆ. ಇನ್ನು ಯಶಸ್ವಿನಿಗೆ ಪ್ರತಿ ತಿಂಗಳ ಮೊದಲ ಭಾನುವಾರ ಠಾಣೆಗೆ ಹೋಗಿ ಸೈನ್ ಮಾಡಬೇಕು ಎಂದು ಸೂಚಿಸಿದೆ. ಜೊತೆಗೆ ಸಾಕ್ಷಿಗಳ ಮೇಲೆ ದೂರುದಾರ ಮೇಲೆ ಯಾವುದೇ ಪ್ರಭಾವ ಬಿರಬಾರದು ಎಂದು ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.
