ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯವನ್ನು ನೀಡಿ ಅಭಿಮಾನಿ ಆಗಿದ್ದ ಬೇಕರಿ ರಘು, ಇದೀಗ ನಟ ಪ್ರಥಮ್‌ಗೆ ಡ್ರ್ಯಾಗರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ಪ್ರಥಮ್‌ಗೆ ಬೆದರಿಕೆ ಹಾಕಲಾಗಿದೆ. ಈ ಘಟನೆ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯದಲ್ಲಿ ನಡೆದಿದೆ.

ಬೆಂಗಳೂರು (ಜು.28): ನಟ ದರ್ಶನ್ ಅಂಡ್ ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಈಗಾಗಲೇ ಜೈಲಿಗೆ ಹೋಗಿದ್ದರು. ಈ ವೇಳೆ ನಟ ಪ್ರಥಮ್ ದರ್ಶನ್ ಮತ್ತು ಅವರ ಅಭಿಮಾನಿಗಳ ಬಗ್ಗೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳ ಹಿಂದೆ ದೇವಸ್ಥಾನಕ್ಕೆ ತೆರಳಿದ್ದ ನಟ ಪ್ರಥಮ್‌ನನ್ನು ಎಳೆದೊಯ್ದು, ಇನ್ನೊಮ್ಮೆ ಡಿ ಬಾಸ್ ಬಗ್ಗೆ ಮಾತನಾಡದಂತೆ ಬೇಕರಿ ರಘು ಎನ್ನುವಾತ ಡ್ರ್ಯಾಗರ್ ಹಿಡಿದು ಕೊಲೆ ಬೆದರಿಕೆಯನ್ನು ಹಾಕಿದ್ದಾನೆ. ಇದೀಗ ಪೊಲೀಸರು ಬೇಕರಿ ರಘು ಯಾರು? ಆತನ ಹಿನ್ನೆಲೆಯೇನು? ದರ್ಶನ್‌ಗೆ ಹೇಗೆ ಸಂಬಂಧ ಎಂಬ ಸತ್ಯವನ್ನು ಪತ್ತೆ ಹಚ್ಚಿದ್ದಾರೆ.

ನಟ ದರ್ಶನ್ ಈಗಾಗಲೇ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ. ಹೆಂಡತಿ ಮೇಲೆ ಹಲ್ಲೆ ಮಾಡಿದ್ದ ಕೇಸ್, ರೇಣುಕಾಸ್ವಾಮಿ ಕೇಸಿನಲ್ಲಿ ಜೈಲೂಟ ತಿಂದು ಬಂದಿರುವ ದರ್ಶನ್‌ಗೆ ರೌಡಿಗಳೇ ಸ್ನೇಹಿತರಾಗಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದ ಸ್ನೇಹಿತರು ಈಗ ನಟ ದರ್ಶನ್‌ಗೆ ಅಭಿಮಾನಿಗಳೆಂದು ಮೆರೆಯುತ್ತಿದ್ದಾರೆ. ಇದರ ಜೊತೆಗೆ, ನಟ ದರ್ಶನ್ ಬಗ್ಗೆ ಯಾವುದೇ ಸಣ್ಣ ಪುಟ್ಟ ವ್ಯಕ್ತಿಗಳು, ನಟ-ನಟಿಯರು ಮಾತನಾಡಿದರೆ ಅವರಿಗೆ ಕೆಟ್ಟದಾಗಿ ಬೈಯುವುದು, ಅಶ್ಲೀಲ ಮೆಸೇಜ್ ಮಾಡುವುದು, ಕೊಲೆ ಬೆದರಿಕೆ ಹಾಕುವ ಕೆಲಸವನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ಇದೇ ರೀತಿ ನಟ ದರ್ಶನ್ ಜೈಲಿಗೆ ಹೋಗಿದ್ದಾಗ ರಾಜಾತಿಥ್ಯವನ್ನು ನೀಡಿದ್ದ ಬೇಕರಿ ರಘು ಈಗ ನಟ ಪ್ರಥಮ್‌ನನ್ನು ಎತ್ತಾಕೊಂಡು ಹೋಗಿ ಡ್ರ್ಯಾಗರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ.

ಹೆಂಡತಿಗೆ ಹೊಡೆದು ಜೈಲಿಗೆ ಹೋಗಿದ್ದಾಗ ಬೇಕರಿ ರಘು ಪರಿಚಯ:

ನಟ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿ, ಗಂಭೀರ ಆರೋಪದಲ್ಲಿ ಜೈಲು ಸೇರಿದ್ದರು. ಆಗ ಜೈಲಿನಲ್ಲಿ ಬೇಕರಿ ರಘು ದರ್ಶನ್‌ಗೆ ರಾಜಾತಿಥ್ಯ ನೀಡಿದ್ದನು. ಅಲ್ಲಿ ಪರಿಚಿತವಾಗಿದ್ದ ಬೇಕರಿ ರಘು, ದರ್ಶನ್ ಅಭಿಮಾನಿ ಆಗಿದ್ದಾನೆ. ದರ್ಶನ್ ಕುರಿತು ಯಾರೇ ಮಾತನಾಡಿದರೂ ಅವರಿಗೆ ಧಮ್ಕಿ ಹಾಕುತ್ತಿರುತ್ತಾನೆ. ಇತ್ತೀಚೆಗೆ, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಜೈಲಲ್ಲಿದ್ದ ವೇಳೆ ನಟ ಪ್ರಥಮ್ ದರ್ಶನ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಈ ವೇಳೆ ಪ್ರಥಮ್‌ಗೆ ಕೆಲವರು ನಿರಂತರವಾಗಿ ಕರೆ ಮಾಡಿ ಹಲ್ಲೆ ಮತ್ತು ಕೊಲೆ ಬೆದರಿಕೆ ಹಾಕಿದ್ದರು. ಇದಾದ ನಂತರ ಪ್ರಥಮ್ ಪೊಲೀಸ್‌ ಠಾಣೆಗೆ ದೂರು ನೀಡಿದ ನಂತರ ದರ್ಶನ್ ಅಭಿಮಾನಿಗಳ ಕಿರುಕುಳ ನಿಂತಿತ್ತು.

ಕಳೆದೆರಡು ದಿನಗಳ ಹಿಂದೆ ನಟ ದರ್ಶನ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ದೊಡ್ಡಬಳ್ಳಾಪುರ ಬಳಿಯ ರಾಮಯ್ಯನಪಾಳ್ಯ ಬಳಿಯ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ರಾಮಯ್ಯನ ಪಾಳ್ಯದ ದೇವಸ್ಥಾನದ ಅನತಿ ದೂರದಲ್ಲಿ ದರ್ಶನ್ ಸಹಚರ ಬೇಕರಿ ರಘು ಬರ್ತಡೇ ಕಾರ್ಯಕ್ರಮ ಆಯೋಜನೆ ಮಾಡಿದ್ದನು. ಅಲ್ಲಿ ಗುಂಡು-ತುಂಡು ಎಲ್ಲವನ್ನೂ ಆಯೋಜನೆ ಮಾಡಲಾಗಿತ್ತು. ರಕ್ಷಕ್ ಬುಲೆಟ್ ಈ ಪಾರ್ಟಿಗೆ ಹೋಗಿದ್ದನು. ಈ ವೇಳೆ ನಟ ಪ್ರಥಮ್ ಕೂಡ ದೇವಸ್ಥಾನಕ್ಕೆ ಬಂದಿದ್ದ ಮಾಹಿತಿ ನೀಡಿದ್ದಾರೆ.

ಕೂಡಲೇ ರೊಚ್ಚಿಗೆದ್ದ ಬೇಕರಿ ರಘು, ಎತ್ತಾಕೊಂಡ್ ಬಾ ಅವ್ನ.. ಡಿಬಾಸ್ ಬಗ್ಗೆ ಮಾತಾಡ್ತಾನೆ ಎಂದು ಚೇಲಾಗಳಿಗೆ ಹೇಳಿದ್ದಾನೆ. ಆಗ ರಘು ಹಿಂಬಾಲಕರು ದೇವಸ್ಥಾನದ ಬಳಿ ಬಂದು ಬಾಸ್ ನಿನ್ನ ಬರೋಕೆ ಹೇಳಿದ್ದಾರೆ ಎಂದು ಕರೆದಿದ್ದಾರೆ. ನಂತರ ಬಲವಂತವಾಗಿ ಅಲ್ಲಿಗೆ ನಟ ಪ್ರಥಮ್‌ನನ್ನು ಕರೆದೊಯ್ದಿದ್ದಾರೆ. ಅಲ್ಲಿಗೆ ಹೋದ ನಂತರ ನಟ ಪ್ರಥಮ್‌ಗೆ ಡ್ರ್ಯಾಗರ್ ಇಟ್ಟು ಚುಚ್ಚೋದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ. ಇನ್ನೊಮ್ಮೆ ಬಾಸ್ ಬಗ್ಗೆ ಮಾತಾಡಿದರೆ ಸರಿ ಇರಲ್ಲ ಎಂದು ವಾರ್ನ್ ಮಾಡಿದ್ದರು. ನಟ ಪ್ರಥಮ್‌ಗೆ ಡ್ರ್ಯಾಗರ್ ಇಟ್ಟಾಗಲೂ ರಕ್ಷಕ್ ಬುಲೆಟ್ ಸುಮ್ಮನೆ ನಿಂತಿದ್ದರು.

ನಟ ಪ್ರಥಮ್‌ಗೆ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದ್ದರೂ ಪೊಲೀಸ್ ಇಲಾಖೆಗೆ ನಟ ಪ್ರಥಮ್ ಮಾತ್ರ ಯಾವುದೇ ದೂರು ನೀಡಿಲ್ಲ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ನಟ ಪ್ರಥಮ್‌ಗೆ ಕರೆ ಮಾಡಿ, ದರ್ಶನ್ ಅಭಿಮಾನಿಗಳು ಕೊಲೆ ಬೆದರಿಕೆ ಹಾಕಿದ ಘಟನೆ ಬಗ್ಗೆ ಮಾಹಿತಿ ಕೇಳಿದ್ದಾರೆ. ಆಗಲೂ ನಟ ಪ್ರಥಮ್ ಯಾವುದೇ ಲಿಖಿತ ದೂರು ನೀಡದೇ, ಮೌಖಿಕವಾಗಿ ಮಾಹಿತಿ ನೀಡಿ ಸುಮ್ಮನಾಗಿದ್ದಾರೆ.