ಯೂಟ್ಯೂಬ್ ಚಾನೆಲ್‌ಗಳ ಉಗ್ರ ಥಂಬ್‌ನೇಲ್‌ಗಳ ಬಗ್ಗೆ ನವರಸ ನಾಯಕ Jaggesh ಮಾತು!
ಯೂಟ್ಯೂಬ್‌ನಲ್ಲಿ ಬರುವುದೆಲ್ಲವೂ ಸತ್ಯ ಅನ್ನೋ ಥರ ಆಗಿದೆ. ಪತ್ರಿಕೆ, ಟಿವಿಗಳು ಹಿಂದೆ ಸರಿದಿವೆ. ಮೊಬೈಲ್ ನೋಡುವಾಗ ಅದ್ಯಾವುದೋ ವಿಡಿಯೋದ ಥಂಬ್‌ನೇಲ್ ಕಾಣುತ್ತದೆ. ಕೆಟ್ಟಕುತೂಹಲ ಮೂಡಿಸುವಂತಿರುವ ಆ ವಿಡಿಯೋದ ಒಳಗೆ ಏನೂ ಇರುವುದಿಲ್ಲ.- Jaggesh
ಸಿನಿಮಾ ಪ್ರಚಾರ ಕಾರ್ಯ, ಸಿನಿಮಾ ಮಾರಾಟ ಒಟ್ಟಾರೆ ಸಿನಿಮಾ ಜಗತ್ತೇ ಬದಲಾಗಿರುವ ಕಾಲ ಇದು. ಅದರಿಂದ ಕೆಲವರಿಗೆ ಖುಷಿ ಇದೆ, ಮತ್ತೆ ಹಲವರಿಗೆ ಆತಂಕ. ಹಳೆಯ ದಿನಗಳು, ಹೊಸ ಕಷ್ಟಗಳು, ಯೂಟ್ಯೂಬ್ ಚಾನಲ್‌ಗಳ ಉಗ್ರ ಥಂಬ್‌ನೇಲ್‌ಗಳು ಇವೆಲ್ಲದರ ಕುರಿತು ಹಿರಿಯ ನಟ ಜಗ್ಗೇಶ್ ‘ತೋತಾಪುರಿ’ (Totapuri) ಸುದ್ದಿಗೋಷ್ಠಿಯಲ್ಲಿ ಗಹನವಾಗಿ, ಸುದೀರ್ಘವಾಗಿ ಮಾತನಾಡಿದರು.
ನಮ್ಮ ಕಾಲ ಬೇರೆಯೇ ಇತ್ತು. ನಾವು ದುಡ್ಡಿಗೆ ಬೇಕಾಗಿ ಯಾವ ಸಿನಿಮಾ ಬೇಕಾದರೂ ಒಪ್ಪಿಕೊಳ್ಳುತ್ತಿದ್ದೆವು. ಒಬ್ಬ ನಟನ ಹೆಸರು ಜನರ ಮನಸ್ಸಿನಲ್ಲಿ ನಿಲ್ಲುವುದಕ್ಕೆ 10ರಿಂದ 15 ವರ್ಷ ಬೇಕಾಗುತ್ತಿತ್ತು. ನನ್ನ ಹೆಸರು ಸ್ವಲ್ಪ ಜನರ ಗಮನಕ್ಕೆ ಬಂದಿದ್ದು ಸಂಗ್ರಾಮ ಸಿನಿಮಾದಿಂದ. ಅಷ್ಟುಹೊತ್ತಿಗೆ ನಾನು ಚಿತ್ರರಂಗಕ್ಕೆ ಬಂದು 8 ವರ್ಷ ಕಳೆದಿತ್ತು. ಆದರೆ ಈಗ ಹಾಗಿಲ್ಲ. ಹಾಯ್ ಹೆಲೋ ಫ್ರೆಂಡ್‌್ಸ ಅಂತ ಯೂಟ್ಯೂಬಲ್ಲಿ (Youtube channel) ಮಾತನಾಡುವವರಿಗೆ 8 ಲಕ್ಷ ವ್ಯೂಸ್ ಸಿಗುತ್ತದೆ. ಒಂದೇ ದಿನದಲ್ಲಿ ಲಕ್ಷಗಟ್ಟಲೆ ಹಿಟ್ಸ್ ಸಿಗುತ್ತದೆ. ಹೀಗೆಲ್ಲಾ ಆದಾಗ ನನಗೆ ಇದೆಲ್ಲಾ ಸರಿಯೋ ಇಲ್ಲವೋ ಎಂಬ ಅನುಮಾನ ಶುರುವಾಗಿಬಿಟ್ಟಿದೆ.
ಯೂಟ್ಯೂಬ್‌ನಲ್ಲಿ ಬರುವುದೆಲ್ಲವೂ ಸತ್ಯ ಅನ್ನೋ ಥರ ಆಗಿದೆ. ಪತ್ರಿಕೆ, ಟಿವಿಗಳು ಹಿಂದೆ ಸರಿದಿವೆ. ಮೊಬೈಲ್ ನೋಡುವಾಗ ಅದ್ಯಾವುದೋ ವಿಡಿಯೋದ ಥಂಬ್‌ನೇಲ್ ಕಾಣುತ್ತದೆ. ಕೆಟ್ಟಕುತೂಹಲ ಮೂಡಿಸುವಂತಿರುವ ಆ ವಿಡಿಯೋದ ಒಳಗೆ ಏನೂ ಇರುವುದಿಲ್ಲ. ಆದರೆ ಆ ಥಂಬ್‌ನೇಲ್ ಅನ್ನು ಜನ ನಂಬುವಂತಾಗಿದೆ. ಹಾಗಾಗಿ ನಾನು ಹೆಚ್ಚು ಮಾತನಾಡುವುದನ್ನು ಬಿಟ್ಟಿದ್ದೇನೆ. ಮನೆಯಿಂದ ಹೊರಗೆ ಹೋಗಬೇಕಾದರೆ ಯೋಚಿಸಿ ಹೆಜ್ಜೆ ಇಡುವ ಪರಿಸ್ಥಿತಿ ಇದೆ. ಮಾತನಾಡಿದ್ದೆಲ್ಲವನ್ನೂ ತಪ್ಪಾಗಿ ಬಿಂಬಿಸುವ ಸಂದರ್ಭದಲ್ಲಿ ನಾವಿದ್ದೇವೆ. ಮಾತನಾಡುವುದಕ್ಕೇ ಭಯ ಆಗುತ್ತದೆ. ಒಳ್ಳೆಯವರನ್ನು ಹಣಿಯುತ್ತಾರೆ. ಒಂದೇ ಕ್ಷಣದಲ್ಲಿ ಕೆಟ್ಟವನನ್ನಾಗಿ ಮಾಡಿಬಿಡುತ್ತಾರೆ. ಅಂಥವರ ಕೈಯಲ್ಲಿ ನಾನು ಯಾಕಾದರೂ ಸಿಕ್ಕಿ ಬೀಳಬೇಕು ಎಂದುಕೊಳ್ಳುತ್ತೇವೆ.
ಅಪರೂಪದ ಸಿನಿಮಾಗಳಲ್ಲಿ ಒಂದು Totapuri: ಜಗ್ಗೇಶ್
ನನಗೆ ಒಬ್ಬಳೇ ಹೆಂಡತಿ ಇರುವುದು. ಒಳ್ಳೆಯ ಕುಟುಂಬ ಜೊತೆಗಿದೆ. ಸಿನಿಮಾದಲ್ಲಿ ನಟಿಸಿದರೆ 2 ಕೋಟಿ ರೂಪಾಯಿ ಕೊಡುತ್ತಾರೆ. ಕಿರುತೆರೆಗೆ ಹೋದೆ 3 ಕೋಟಿ ರೂಪಾಯಿ ಬರುತ್ತದೆ. ನಾನು ಆರಾಮಾಗಿ ಇದ್ದೇನೆ.
ಮೊದಲು ಹೀಗಿರಲಿಲ್ಲ. ನಮ್ಮ ಕಾಲದ ನಿರ್ದೇಶಕರು ಡೇರ್‌ಡೆವಿಲ್‌ಗಳ ಥರ ಇದ್ದರು. ಬಾಯಿಬಂದಂತೆ ಬೈಯುತ್ತಿದ್ದರು. ಅದೆಷ್ಟೋ ಸಲ ನಾನು ಮರದ ಕೆಳಗೆ ಹೋಗಿ ಅತ್ತುಕೊಂಡು ಕುಳಿತಿದ್ದಿದೆ. ಕಪಾಳಕ್ಕೆ ಹೊಡೆಸಿಕೊಂಡಿದ್ದಿದೆ. ಬೂಟಲ್ಲಿ ಹೊಡೀತೀನಿ ಅನ್ನೋ ಮಾತುಗಳನ್ನು ಕೇಳಿದ್ದಿದೆ. ಆದ್ದರಿಂದ ನಾವು ಇವತ್ತಿಗೂ ಗಟ್ಟಿಇದ್ದೇವೆ. ಇವತ್ತು ನಟರೇ ನಿರ್ದೇಶಕರನ್ನು ಅದು ಬೇಡ, ಇದು ಬೇಡ ಎಂದು ಹೇಳುತ್ತಿರುತ್ತಾರೆ. ಅವತ್ತು ನಾಕಾಣೆ ಸಿಕ್ಕಾಗಲೂ ನಾವು ರಾಜರ ಥರ ಇದ್ದೆವು. ಆದರೆ ಇವತ್ತು ಕೋಟಿ ಕೊಟ್ಟರೂ ಸಮಾಧಾನ ಇಲ್ಲ.
ತೋತಾಪುರಿ; ಕಾಫಿನಾಡು ಚಂದು ಸ್ಟೈಲ್ ನಲ್ಲಿ ಜಗ್ಗೇಶ್ ಕಾಮಿಡಿ
ನಮ್ಮನ್ನು ಮೆರೆಸುವುದಕ್ಕೆ ಅಂತಲೇ ಸೋಷಿಯಲ್ ಮೀಡಿಯಾ (Social Media) ಅಕೌಂಟ್ ಮಾಡುವವರಿದ್ದಾರೆ. ಏಳು ಲಕ್ಷ ಕೊಡಿ ಸಾರ್ ಅಂತಾರೆ. ನಾನು ಪಾಪದವನು. ಅದೆಲ್ಲಾ ಬೇಡ ಅಂತ ನನ್ನ ಸೆಲ್ಫಿ ಹಾಕಿಕೊಂಡು ಸುಮ್ಮನಾಗುತ್ತೇನೆ. ಈಗ ಸಿನಿಮಾಗೆ, ಸಿನಿಮಾದವರಿಗೆ ಎಲ್ಲವೂ ಇದೆ. ಆದರೆ ಈ ವೇಗದ ಯುಗದಲ್ಲಿ ನಾವು ಯಾವುದನ್ನೂ ಸರಿಯಾಗಿ ಗಮನಿಸದೇ ಹೋಗುತ್ತಿದ್ದೇವೆ. ಫೇಸ್‌ಬುಕ್‌ನಲ್ಲಿ (Facebook) ಫೋಟೋ ಹಾಕಿದರೆ ಅದನ್ನು ಓದುವ ಸಂಯಮ ಕೂಡ ಯಾರಿಗೂ ಇರುವುದಿಲ್ಲ. ಇಂಥದ್ದೊಂದು ಡೇಂಜರಸ್ ಕಾಲದಲ್ಲಿ ಆತಂಕವೇ ನಮ್ಮನ್ನು ಆಳುತ್ತಿದೆ.