ನಿಜವಾದ ಸಮಸ್ಯೆಗಳು ಹಲವಾರಿವೆ, ಮೈಂಡ್‌ಲೆಸ್ ನನ್ನ ಪದವಲ್ಲ; 'KGF'ಬಗ್ಗೆ ಹೇಳಿಕೆಗೆ ನಟ ಕಿಶೋರ್ ಸ್ಪಷ್ಟನೆ
ಕೆಜಿಎಫ್ ಸಿನಿಮಾದ ಹೇಳಿಕೆ ಬಗ್ಗೆ ನಟ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ. ಮೈಂಡ್ ಲೆಸ್ ಪಗ ನನ್ನದಲ್ಲ ಎಂದು ಕಿಶೋರ್ ಹೇಳಿದ್ದಾರೆ.

ಕನ್ನಡದ ಖ್ಯಾತ ನಟ ಕಿಶೋರ್ ‘ಕೆಜಿಎಫ್’ ಸಿನಿಮಾ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ಕೆಜಿಎಫ್ ಮೈಂಡ್ ಲೆಸ್ ಸಿನಿಮಾ ಎಂದು ಹೇಳಿದ್ದಾರೆ ಎನ್ನುವುದು ವೈರಲ್ ಆಗಿತ್ತು. ಈ ಬಗ್ಗೆ ಇದೀಗ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವೇ ದಿನಗಳ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಶೋರ್ ಅವರು ‘ಕೆಜಿಎಫ್’ ಸಿನಿಮಾ ಬಗ್ಗೆ ಮಾತನಾಡಿದ್ದರು. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕಿಶೋರ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.‘ಮೈಂಡ್ ಲೆಸ್’ ಮೈಂಡ್‌ಲೆಸ್ ನನ್ನ ಪದವಲ್ಲ ಎಂದು ಕಾಂತಾರ ನಟ ಸ್ಪಷ್ಟನೆ ನೀಡಿದ್ದಾರೆ. ಕಿಶೋರ್ ಅವರ ಈ ಪೋಸ್ಟ್ಗೆ ಹಲವು ರೀತಿಯ ಕಾಮೆಂಟ್ಗಳು ಬಂದಿವೆ.
ಕಿಶೋರ್ ಸ್ಪಷ್ಟನೆಯ ಪೋಸ್ಟ್
‘ಚರ್ಚಿಸಲು, ಚಿಂತಿಸಲು ನಿಜವಾದ ಸಮಸ್ಯೆಗಳು ಹಲವಿರುವಾಗ ನನ್ನ ಲೋಕಾಭಿರಾಮದ ಯಾವುದೋ ಮಾತು ಚರ್ಚೆಗೆ ಗ್ರಾಸವಾಗುವುದೋ, ಜನರ ಸಮಯ ಹಾಳುಮಾಡುವುದೋ ನನ್ನ ಮಟ್ಟಿಗೆ ಅಕ್ಷಮ್ಯ. ಆದರೂ ಅದಕ್ಕಾಗಿ ಕ್ಷಮೆಯಿರಲಿ. ನಾನು ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಇಷ್ಟು ಚರ್ಚೆ ಆಗಿದ್ದರೆ ತೃಪ್ತಿಯಿರುತ್ತಿತ್ತು. ಅದೇನೇ ಇರಲಿ ರಶ್ಮಿಕಾ ವಿಷಯದ ಚರ್ಚೆಯಲ್ಲಿ, ಆಯ್ಕೆಯ ಸ್ವಾತಂತ್ರದ ಮಾತುಗಳ ನಡುವೆ ಹೇಗೋ ಸುಳಿದ ಈ ಮಾತುಗಳಲ್ಲಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿರಲಿಲ್ಲ’ ಎಂದು ಕಿಶೋರ್ ಹೇಳಿದ್ದಾರೆ.
KGF-2 ನೋಡಿಲ್ಲ; ಕಾರಣ ಬಿಚ್ಚಿಟ್ಟ 'ಕಾಂತಾರ' ನಟ ಕಿಶೋರ್
‘ಮೈಂಡ್ ಲೆಸ್ ನನ್ನ ಪದವಲ್ಲ. ಬರೆದವರು ನನ್ನ ಯಾವ ಪದವನ್ನು ಸಮೀಕರಿಸಿ ಆ ಪದ ಬಳಸಿದರೋ, ಭಾಷಾಂತರದಲ್ಲಿ ಯಾವ ಪದದರ್ಥ ಏನಾಯ್ತೊ ಗೊತ್ತಿಲ್ಲ. ‘ನೋಡಿಲ್ಲ’ದಿಂದ ‘ನೋಡುವುದಿಲ್ಲ’ದವರೆಗೆ ಅವರವರ ಇಷ್ಟದಂತೆ ಬರೆದಿದ್ದಾರಲ್ಲ ಹಾಗೆ. ಒಂದು ಸಿನಿಮಾವನ್ನು ನೋಡದ ನಾನು ಅದನ್ನು ಈ ಥರದ ಪದಬಳಸಿ ತೀರ್ಪು ಕೊಡುವುದು ಸಾಧ್ಯವೂ ಇಲ್ಲ. ಮಾಡಿದರೆ ತಪ್ಪೂ ಸಹ. ಆದರೆ ಪ್ರೇಕ್ಷಕನಾಗಿ ಎಲ್ಲರಿಗೂ ಇರುವಂತೆ ಅಭಿರುಚಿ, ಆಯ್ಕೆಯ ಸ್ವಾತಂತ್ರ್ಯ ನನ್ನದು’ ಎಂದಿದ್ದಾರೆ ಕಿಶೋರ್.
‘ಯಾರೂ ಯಾರನ್ನೂ ಥಿಯೇಟರಿನ ಒಳಗೂ ತಳ್ಳಲಾಗದು, ಹೊರಗೂ ಸಹ. ನನ್ನ ಸಿನಿಮಾವಾದರೂ ಸರಿ, ಯಾವ ಸಿನಿಮಾದರೂ ಸರಿ. ಒಟ್ಟಿನಲ್ಲಿ ನನ್ನ ಅಭಿರುಚಿಯೋ ಅಲ್ಲವೋ KGF ಸಿನಿಮಾದ ಯಶಸ್ಸಿನ ಬಗ್ಗೆ ಸಂತೋಷವಿದೆ ಹಾಗೂ ಆ ಯಶಸ್ಸಿನಿಂದ ನನ್ನಲ್ಲಿನ ಸಿನಿಮಾ ತಂತ್ರಜ್ಞ ಕಲಿತದ್ದು, ಕಲಿಯುವುದೂ ಸಾಕಷ್ಟಿದೆ. ನನ್ನ KGF ಕಲ್ಪನೆ ಬೇರೆಯೇ ಆದರೂ ಸಹ’ ಎಂದು ಕಿಶೋರ್ ದೀರ್ಘವಾಗಿ ಬರೆದುಕೊಂಡಿದ್ದಾರೆ.
ಟ್ವಿಟರ್ ಸಸ್ಪೆಂಡ್ ಆದದ್ದು ದೈವದ ಬಗ್ಗೆ ಬರೆದ ಪೋಸ್ಟ್‌ನಿಂದಲ್ಲ; ಊಹಾಪೋಹಗಳಿಗೆ ನಟ ಕಿಶೋರ್ ಬ್ರೇಕ್
ಕೆಜಿಎಫ್ ಬಗ್ಗೆ ಕಿಶೋರ್ ಮಾತು
'ನನೆಗ ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ನಾನು ಕೆಜಿಎಫ್-2 ನೋಡಿಲ್ಲ. ಇದು ನನ್ನ ಪ್ರಕಾರದ ಸಿನಿಮಾ ಅಲ್ಲ. ಇದು ವೈಯಕ್ತಿಕ ಆಯ್ಕೆಯಾಗಿದೆ. ನಾನು ಸಕ್ಸಸ್ ಕಾಣದ ಕನ್ನಡದ ಚಿಕ್ಕ ಸಿನಿಮಾಗಳನ್ನು ನೋಡುತ್ತೇನೆ ಆದರೆ ಇಂಥ ಬುದ್ದಿ ಇಲ್ಲದ (ಮೈಂಡ್ ಲೆಸ್) ಸಿನಿಮಾ ನೋಡಲ್ಲ' ಎಂದು ಹೇಳಿದ್ದರು ಅಂತ ವೈರಲ್ ಆಗಿತ್ತು.