Kichcha Sudeep: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಅಭಿನಯ ಚಕ್ರವರ್ತಿ
ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದುಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ವೊಂದು 'ವಿಕ್ರಾಂತ್ ರೋಣ' (Vikranth Rona) ರೂಪದಲ್ಲಿ ಕಾಯುತ್ತಿದೆ. ಈಗಾಗಲೇ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಮಧ್ಯೆ ಸುದೀಪ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದುಕೊಂಡಿದ್ದಾರೆ. ಮಂತ್ರಾಲಯದಲ್ಲಿ (Mantralayam) ಗುರುವೈಭವೋತ್ಸವ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆ ದೇವಸ್ಥಾನಕ್ಕೆ ಭೇಟಿ ನೀಡಿರುವ ಕಿಚ್ಚ ಸುದೀಪ್ ರಾಯರ ಬೃಂದಾವನ ದರ್ಶನ ಪಡೆದುಕೊಂಡಿದ್ದಾರೆ.
ಹೌದು! ಶುಕ್ರವಾರ ಸಂಜೆ ಮಂತ್ರಾಲಯಕ್ಕೆ ಆಗಮಿಸಿದ ಸುದೀಪ್ ಶ್ರೀಮಠಕ್ಕೆ (Mantralaya Raghavendra Temple) ಭೇಟಿ ನೀಡಿದರು. ಆರಂಭದಲ್ಲಿ ರಾಯರ ಮೂಲ ಬೃಂದಾವನ ದರ್ಶನ ಪಡೆದುಕೊಂಡು ನಂತರ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿದರು. ಶ್ರೀಮಠದಲ್ಲಿ ರಾಯರ 401ನೇ ಪಟ್ಟಾಭಿಷೇಕ ಹಾಗೂ 427ನೇ ವರ್ಧಂತಿ ಉತ್ಸವದ ಹಿನ್ನೆಲೆ ಸುದೀಪ್ ಅವರಿಗೆ ಅನುಗ್ರಹ ಪ್ರಶಸ್ತಿ (Anugraha Award) ನೀಡಿ ಗೌರವಿಸಲಾಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರು (Sri Subudhendra Teertha Swamiji) ಆಶಿರ್ವಚನ ನೀಡಿ ಸುದೀಪ್‌ಗೆ ಸನ್ಮಾನಿಸಿದರು.
Vikranth Rona ಸಿನಿಮಾದ ಇಂಗ್ಲೀಷ್ ವರ್ಷನ್‌ಗೆ ಕಿಚ್ಚ ಸುದೀಪ್ ಡಬ್ಬಿಂಗ್!
ರಾಯರ ಪಟ್ಟಾಭಿಷೇಕ ಹಾಗೂ ಜನ್ಮದಿನಾಚರಣೆಯನ್ನು ಗುರುವೈಭವೋತ್ಸವವಾಗಿ ಆಚರಿಸಲಾಗಿದೆ. ಗುರುವೈಭವೋತ್ಸವ ಹಿನ್ನೆಲೆ ಮಠದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನೂ ಸನ್ಮಾನಿಸಲಾಯಿತು. ಸುದೀಪ್ ಅವರು ಮಂತ್ರಾಲಯಕ್ಕೆ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯ ಅಭಿಮಾನಿಗಳು (Fans) ಸಹ ದೇವಸ್ಥಾನಕ್ಕೆ ಆಗಮಿಸಿದ್ದರು. ಶ್ರೀಮಠದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮಠದ ಯೋಗಿಂದ್ರ ಸಭಾ ಭವನದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿಶೇಷವಾಗಿ ಕಳೆದ ಎರಡು ದಿನಗಳ ಹಿಂದೆಯಷ್ಟೇ ನಟ ಧ್ರುವ ಸರ್ಜಾ (Dhruva Sarja) ಕೂಡ ಮಂತ್ರಾಲಯಕ್ಕೆ ತೆರಳಿದ್ದರು. ಮಂತ್ರಾಲಯ ಸ್ಯಾಂಡಲ್‌ವುಡ್‌ನ ಶ್ರದ್ಧಾ ಕೇಂದ್ರವಾಗಿದ್ದು ನಟ ಡಾ.ರಾಜ್ ಕುಮಾರ್‌ರಿಂದ (Dr Rajkumar) ಆರಂಭಿಸಿ ಜಗ್ಗೇಶ್ (Jaggesh) ಹಾಗೂ ಸುದೀಪ್, ಪುನೀತ್ ರಾಜ್‌ಕುಮಾರ್‌ವರೆಗೂ (Puneeth Rajkumar) ಎಲ್ಲರೂ ಮಂತ್ರಾಲಯಕ್ಕೆ ಭೇಟಿ ನೀಡುವ ಅಭ್ಯಾಸವಿಟ್ಟುಕೊಂಡಿದ್ದಾರೆ. ಇನ್ನೂ ಸುದೀಪ್ ಬಹುನೀರಿಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ವಿಚಾರಕ್ಕೆ ಬರೋದಾದರೇ ಇದೇ ಮೊದಲ ಬಾರಿಗೆ ಕನ್ನಡದ ನಟರೊಬ್ಬರು ಇಂಗ್ಲಿಷ್‌ನಲ್ಲಿ ಡಬ್ ಮಾಡಿದ ಖ್ಯಾತಿಗೆ ಪಾತ್ರವಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ 'ವಿಕ್ರಾಂತ್ ರೋಣ'ಗೆ ಇಂಗ್ಲೀಷ್ ನಲ್ಲೂ ಕೂಡ ನಟ ಸುದೀಪ್ ಡಬ್ ಮಾಡಿದ್ದು, ಈ ವಿಚಾರವನ್ನು ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
Kichcha Sudeep: 'ಬಿಲ್ಲಾ ರಂಗ ಭಾಷ' ಹಿಂದೆ ಹೊರಟ ಬಾದ್‌ಷಾ!
ಸಿನಿಮಾದ ಸಾಂಗ್, ಟ್ರೇಲರ್ ಎಲ್ಲವೂ ರಿಲೀಸ್ ಗೆ ಸಿದ್ಧವಾಗಿದೆ. ಯಾವ ಯಾವಾಗ ಏನೇನು ತೆರೆಗೆ ಬರುತ್ತೆ ಅನ್ನೋದನ್ನು ಚಿತ್ರತಂಡ ತನ್ನ ರೂಟ್ ಮ್ಯಾಪ್ ಮೂಲಕ ವಿವರಿಸಿ ಗಮನ ಸೆಳೆದಿದೆ. ಮೂಲಗಳ ಪ್ರಕಾರ ದೇಶದ ನಾನಾ ರಾಜ್ಯಗಳಲ್ಲಿ ಚಿತ್ರದ ಇವೆಂಟ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದ್ದು, ಹಲವು ಭಾಷೆಗಳಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಯಾಗುತ್ತಿದೆ. ಹಾಗಾಗಿ ಆಯಾ ಭಾಷೆಯ ಚಿತ್ರರಂಗದ ಗಣ್ಯರ ಮಧ್ಯೆ ಇವೆಂಟ್ ಮಾಡುವ ಯೋಜನೆ ಸಿದ್ಧವಾಗಿದೆಯಂತೆ. ಚಿತ್ರದಲ್ಲಿ ನಿರೂಪ್ ಭಂಡಾರಿ (Nirup Bhandari), ಮಿಲನಾ ನಾಗರಾಜ್ (Milana Nagaraj) ಹಾಗೂ ನೀತಾ ಅಶೋಕ್ (Neetha Ashok) ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜೊತೆಗೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ (Jacqueline Fernandez) 'ಗಡಂಗ್ ರಕ್ಕಮ್ಮ' ಪಾತ್ರದಲ್ಲಿ ಕಿಚ್ಚನ ಜೊತೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ವಿಲಿಯಮ್ ಡೇವಿಡ್ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿದೆ.