ಅಜಯ್ ದೇವಗನ್ ಗೆ ಸುದೀಪ್ ಟ್ವೀಟ್ ಏಟು, ಬೆಂಬಲಕ್ಕೆ ನಿಂತ ದಕ್ಷಿಣ ಭಾರತ!
ಹಿಂದಿ ರಾಷ್ಟ್ರಭಾಷೆ ವಿಚಾರವಾಗಿ ಇಂದು ನಟ ಕಿಚ್ಚ ಸುದೀಪ್ ಅವರನ್ನು ಟ್ವೀಟ್ ಮೂಲಕ ಅಜಯ್ ದೇವಗನ್ ಕೆಣಕಿದ್ದರು. ಅದಕ್ಕೆ ಸುದೀಪ್ ತಕ್ಕ ಉತ್ತರವನ್ನೂ ನೀಡಿದ್ದರು. ಈಗ ಸುದೀಪ್ ಅವರ ಟ್ವೀಟ್ ಗೆ ಇಡೀ ದಕ್ಷಿಣ ಭಾರತ ಬೆಂಬಲ ನೀಡಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಲ್ಲದೆ, ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು, ರಾಜಕೀಯ ವ್ಯಕ್ತಿಗಳು ಪ್ರತಿಕ್ರಿಯೆ ನೀಡಿ ಬೆಂಬಲ ನೀಡಿದ್ದಾರೆ.
ಬೆಂಗಳೂರು (ಏ.27): ಭಾರತದ ರಾಷ್ಟ್ರ ಭಾಷೆಯ ಬಗ್ಗೆ ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kiccha Sudeep ) ಅವರ ಕಾಮೆಂಟ್‌ಗೆ ಅಜಯ್ ದೇವಗನ್ (ajay devgan) ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ ಮಾತಿಗೆ, ಹಾಗಾದರೆ ಹಿಂದಿ ಭಾಷೆಯಲ್ಲೇಕೆ ನಿಮ್ಮ ಚಿತ್ರಗಳನ್ನು ಡಬ್ ಮಾಡುತ್ತೀರಿ ಎಂದು ಸಂಪೂರ್ಣ ಹಿಂದಿಯಲ್ಲಿಯೇ ಬರೆದ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. ಆದರೆ, ಅಜಯ್ ದೇವಗನ್ ಅವರ ಟ್ವೀಟ್ ಗೆ (Tweet) ಸುದೀಪ್ ಕೂಡ ತಕ್ಕ ಉತ್ತರ ನೀಡಿದ್ದರು.
ಸ್ಟಾರ್ ಗಳ ನಡುವಿನ ಭಾಷಾ ಚರ್ಚೆ ಕೆಲ ಸಮಯದಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ವಿಚಾರವೆನಿಸಿತು. ಸುದೀಪ್ ಅವರ ಮಾತಿಗೆ ಕನ್ನಡದ ನಟ ನೀನಾಸಂ ಸತೀಶ್ (Ninasam Satish), ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (siddaramaiah), ನಟಿ ಹಾಗೂ ರಾಜಕಾರಣಿ ರಮ್ಯಾ (Ramya) ಸೇರಿದಂತೆ ಹಲವರು ಸುದೀಪ್ ಮಾತಿಗೆ ದನಿಗೂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದಾರೆ.
ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಅಜಯ್ ದೇವಗನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. "ಹಿಂದಿ ಎಂದಿಗೂ ಮತ್ತು ಎಂದೆಂದಿಗೂ ನಮ್ಮ ರಾಷ್ಟ್ರೀಯ ಭಾಷೆಯಾಗುವುದಿಲ್ಲ. ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಪ್ರತಿಯೊಂದು ಭಾಷೆಯು ಅದರ ಜನರು ಹೆಮ್ಮೆಪಡಲು ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ. ನಾನು ಕನ್ನಡಿಗ ಎಂದು ಹೆಮ್ಮೆಪಡುತ್ತೇನೆ! !" ಎಂದು ಬರೆದಿದ್ದಾರೆ.
ಇದಕ್ಕೆ ಕಾಂಗ್ರೆಸ್ ಪಕ್ಷದ ನಾಯಕಿ ಹಾಗೂ ನಟಿ ರಮ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಇಲ್ಲ, ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ಅಜಯ್ ದೇವಗನ್ ಅವರೇ ನಿಮ್ಮ ಅಜ್ಞಾನವು ನನಗೆ ಅಚ್ಚರಿ ತಂದಿದೆ. ಕೆಜಿಎಫ್, ಪುಷ್ಪ ಮತ್ತು ಆರ್‌ಆರ್‌ಆರ್‌ನಂತಹ ಚಲನಚಿತ್ರಗಳು ಹಿಂದಿ ಬೆಲ್ಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದು ಅದ್ಭುತ ಸಂಗತಿ. ಯಾಕೆಂದರೆ, ಕಲೆಗೆ ಯಾವುದೇ ಭಾಷೆಯ ತಡೆ ಇಲ್ಲ. ನಿಮ್ಮ ಚಲನಚಿತ್ರಗಳನ್ನು ನಾವು ಆನಂದಿಸಿದಂತೆ ದಯವಿಟ್ಟು ನಮ್ಮ ಚಲನಚಿತ್ರಗಳನ್ನು ಆನಂದಿಸಿ' ಎಂದು ಬರೆದಿದ್ದು, ಹಿಂದಿ ಹೇರಿಕೆ ಬೇಡ ಎನ್ನುವ ಟ್ಯಾಗ್ ಕೂಡ ಹಾಕಿದ್ದಾರೆ.
ಹಿಂದಿ ರಾಷ್ಟ್ರಭಾಷೆಯಲ್ಲ, ಹಿಂದಿ ಸಿನಿಮಾಗಳನ್ನು ದಕ್ಷಿಣದಲ್ಲಿ ರಿಲೀಸ್ ಮಾಡಲು ಒದ್ದಾಡುತ್ತಿದ್ದಾರೆ- ಸುದೀಪ್
" ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ,ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ,ನಮ್ಮಂತೆ ನೀವು ನಮ್ಮನ್ನು, ನಮ್ಮ ಬಾಷೆಯನ್ನು ಗೌರವಿಸಿ.ಹಿಂದಿ ಅಂದಿಗೂ ಎಂದಿಗೂ ನಮ್ಮ ರಾಷ್ತ್ರ ಭಾಷೆಯಲ್ಲ.ನಿಮ್ಮ ಧ್ವನಿಗೆ ನಮ್ಮ ಧ್ವನಿ ಕಿಚ್ಚ ಸುದೀಪ್ ಸರ್' ಎಂದು ನಟ, ನಿರ್ದೇಶಖ ಸತೀಶ್ ನೀನಾಸಂ ಬರೆದಿದ್ದಾರೆ.
ಹಿಂದಿಯ ಟ್ವೀಟ್‌ಗೆ ನೀವು ಕನ್ನಡದಲ್ಲಿ ಉತ್ತರಿಸಿದರೆ ಏನು ಎಂಬ ನಿಮ್ಮ ಪ್ರಶ್ನೆಗಿಂತ ಉತ್ತಮವಾಗಿ ನೀವು ಈ ವಿಚಾರವನ್ನು ಅಜಯ್ ದೇವಗನ್ ಗೆ ಹೇಳಲು ಸಾಧ್ಯವಾಗುತ್ತಿರಲಿಲ್ಲ. ನಿಮಗೆ ವಂದನೆಗಳು ಸುದೀಪ್. ಉತ್ತರ ಮತ್ತು ದಕ್ಷಿಣ ಇಲ್ಲ ಮತ್ತು ಭಾರತವು 1 ಎಂದು ಎಲ್ಲರೂ ಅರಿತುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಸದ್ಯ ಬಾಲಿವುಡ್ ನ ಪ್ರಖ್ಯಾತ ನಿರ್ದೇಶಕ ಹೈದರಾಬಾದ್ ಮೂಲದ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.
ಕಿಚ್ಚನ ಏಟಿಗೆ ನಟ ಅಜಯ್ ದೇವಗನ್ ಥಂಡಾ
ನಾವೆಲ್ಲರೂ ಭಾರತಕ್ಕೆ ಸೇರಿದವರು ಮತ್ತು ಪ್ರತಿ ಭಾಷೆಯನ್ನು ಗೌರವಿಸೋಣ ಮತ್ತು ಪ್ರೀತಿಸೋಣ. ಪ್ರೀತಿಯನ್ನು ಹಂಚಿರಿ ಎಂದು ನಟಿ ಆಶಿಕಾ ರಂಗನಾಥ್ ಟ್ವೀಟ್ ಮಾಡಿದ್ದಾರೆ. ವಿವಾದದ ಬೆನ್ನಲ್ಲಿಯೇ ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಭಾರತದಾದ್ಯಂತ ಟ್ರೆಂಡಿಂಗ್ ನಲ್ಲಿದ್ದಾರೆ. ಇನ್ನು ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ಗೆ ಈಗಾಗಲೇ 56 ಸಾವಿರ ಲೈಕ್ಸ್ ಗಳು ಬಂದಿದ್ದರೆ, 12300 ರೀಟ್ವೀಟ್ ಹಾಗೂ19 ಸಾವಿರ ಕೋಟ್ ಟ್ವೀಟ್ ಗಳಾಗಿವೆ. ಆ ಮೂಲಕ ಸುದೀಪ್ ಅವರೆ ಈವರೆಗಿನ ಅತ್ಯಂತ ಪ್ರಖ್ಯಾತ ಟ್ವೀಟ್ ಎನಿಸಿದೆ.