ಲೂಸ್ ಮಾದ ಯೋಗಿ ಹಾಗೂ ದುನಿಯಾ ವಿಜಯ್ ಕುಟುಂಬದ ಮಧ್ಯೆ ಮನಸ್ತಾಪ ಆಗಿದ್ದು, ಈ ಎರಡೂ ಕುಟುಂಬಗಳು ಪರಸ್ಪರ ಮಾತನಾಡಿ ಎಷ್ಟು ವರ್ಷಗಳು ಕಳೆದಿತ್ತೋ ಏನೋ! ಪರಸ್ಪರ ಶುಭ ಸಮಾರಂಭದಲ್ಲಿ ಕೂಡ ಈ ಕುಟುಂಬಗಳು ಭಾಗಿ ಆಗುತ್ತಿರಲಿಲ್ಲ. ಈಗ ಈ ಬಗ್ಗೆ ವಿಜಯ್, ಯೋಗಿ ಮಾತನಾಡಿದ್ದಾರೆ.
ಲೂಸ್ ಮಾದ ಯೋಗಿ ಹಾಗೂ ದುನಿಯ ವಿಜಯ್ ನಡುವೆ ಮನಸ್ತಾಪ ಇತ್ತು ಎನ್ನೋದು ಹಳೆಯ ವಿಚಾರ. ಈಗ ಈ ವಿಚಾರವಾಗಿ ಲೂಸ್ ಮಾದ ಯೋಗಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತ ಲೂಸ್ ಮಾದ ಯೋಗಿ ಅವರು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಏನು ಮನಸ್ತಾಪ?
ಲೂಸ್ ಮಾದ ಯೋಗಿ ಮದುವೆಗೆ ದುನಿಯಾ ವಿಜಯ್ ಕುಟುಂಬಸ್ಥರು ಆಗಮಿಸಿರಲಿಲ್ಲ. ಇವರಿಬ್ಬರ ಮಧ್ಯೆ ಮನಸ್ತಾಪ ಇರೋದು ಬಯಲಾಗಿದ್ರೂ ಕೂಡ ಈ ಬಗ್ಗೆ ಇವರಿಬ್ಬರು ಅಷ್ಟು ಮಾತನಾಡಿರಲಿಲ್ಲ. ಇವರ ಮಧ್ಯೆ ಏನಾಗಿತ್ತು? ಏನು ನಡೆದಿತ್ತು? ಮಾತು ಬಿಡುವಷ್ಟರ ಮಟ್ಟಿಗೆ ಏನು ನಡೆದಿತ್ತು ಎನ್ನುವ ಪ್ರಶ್ನೆ ಉದ್ಭವವಾಗಿತ್ತು. ಅದಕ್ಕೆ ಉತ್ತರ ಸಿಕ್ಕಿರಲಿಲ್ಲ.
ಲೂಸ್ ಮಾದ ಯೋಗಿ ಏನಂದ್ರು?
ಆದರೆ ಈಗ ʼಸಿದ್ಲಿಂಗು 2ʼ ಸಿನಿಮಾದ ಪ್ರಚಾರದ ವೇಳೆ ಲೂಸ್ ಮಾದ ಯೋಗಿ ಮಾತನಾಡಿ, “ದುನಿಯಾ ವಿಜಯ್ ಅವರು ಎರಡು ಸಿನಿಮಾ ಲಾಂಚ್ ಮಾಡಿದ್ದಾರೆ. ಸಿನಿಮಾ ಫಸ್ಟ್‌ಲುಕ್‌ಗಳು ಚೆನ್ನಾಗಿವೆ. ಅವರಿಗೆ ಜನ್ಮದಿನದ ಶುಭಾಶಯ ತಿಳಿಸುವೆ. ನಾನು ವಿಜಯ್ ಅವರ ಜೊತೆ ಸಿನಿಮಾ ಮಾಡಬೇಕಿತ್ತು, ಆದರೆ ಆಗಲಿಲ್ಲ. ಒಮ್ಮೆ ಎರಡು ಕುಟುಂಬಗಳ ಮಧ್ಯೆ ಮನಸ್ತಾಪ ಇತ್ತು, ಮಾತನಾಡುತ್ತಿರಲಿಲ್ಲ. ಈಗ ಅಂಥಹ ಸಮಸ್ಯೆ, ಮನಸ್ತಾಪ ಏನೂ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ನ್ಯೂಸ್ ಹರಡಿರಬಹುದು. ಆದರೆ ಎರಡೂ ಫ್ಯಾಮಿಲಿಗಳು ನಾವು ಚೆನ್ನಾಗಿದ್ದೇವೆ. ಭೀಮ ಸಿನಿಮಾ ಟೈಮ್‌ನಲ್ಲಿ ನಾನು ನಟಿಸೋದು ಬಹುತೇಕ ಫೈನಲ್ ಆಗಿದ್ರೂ ನಟಿಸೋಕೆ ಆಗಲಿಲ್ಲ. ದುನಿಯಾ ಆದ್ಮೇಲೆ ಬರೀ ಕಾಂಟ್ರವರ್ಸಿ ಆಗೋಯ್ತು, ನಾವು ಎಲ್ಲಿಯೂ ಕಾಣಿಸಿಕೊಳ್ಳೋಕೆ ಆಗಲಿಲ್ಲ” ಎಂದು ಲೂಸ್ ಮಾದ ಯೋಗಿ ಹೇಳಿದ್ದಾರೆ.
ಡಬಲ್ ಮೀನಿಂಗ್ ಕಮ್ಮಿ ಇದೆ ಎಮೋಷನ್ ಜಾಸ್ತಿ ಇದೆ: ಸಿದ್ಲಿಂಗು- 2 ಸೀಕ್ರೆಟ್ ರಿವೀಲ್ ಮಾಡಿ ಯೋಗಿ
ದುನಿಯಾ ವಿಜಯ್ ಏನಂದ್ರು?
ಲೂಸ್ ಮಾದ ಯೋಗಿ ಅವರ ಹೇಳಿಕೆ ಬಗ್ಗೆ ಖಾಸಗಿ ವಾಹಿನಿಯೊಂದು ಪ್ರಶ್ನೆ ಮಾಡಿದೆ. ಆಗ ದುನಿಯಾ ವಿಜಯ್ ಅವರು ಉತ್ತರ ನೀಡಿದ್ದಾರೆ. “ಲೂಸ್ ಮಾದ ಯೋಗಿ ನನ್ನ ಅಕ್ಕನ ಮಗ. ಅವನನ್ನು ನಾನು ಚಿಕ್ಕ ವಯಸ್ಸಿನಿಂದ ಎತ್ತಿ ಆಡಿಸಿದೆ. ನಮ್ಮ ಮನೆಯಲ್ಲಿ ಹುಟ್ಟಿದ ಮೊದಲ ಮಕ್ಕಳು ಅವರು. ಹೀಗಾಗಿ ಪ್ರೀತಿ, ಅಭಿಮಾನ ಕೂಡ ಇದ್ದೇ ಇರುತ್ತದೆ. ಎಷ್ಟೇ ದೂರದಲ್ಲಿದ್ದರೂ ಕೂಡ ನಾನು ಅವರೆಲ್ಲ ಚೆನ್ನಾಗಿರಲಿ ಅಂತ ಹಾರೈಸುವೆ. ಭೀಮ ಸಿನಿಮಾದಲ್ಲಿ ಯೋಗಿ ನಟಿಸಬೇಕಿತ್ತು, ಆಗಲಿಲ್ಲ. ಇನ್ಮುಂದೆ ನಾನು, ಯೋಗಿ ಸಿನಿಮಾ ಮಾಡ್ತೀವಿ. ನಾನೇ ಡೈರೆಕ್ಟರ್ ಆಗಿರೋದಿಕ್ಕೆ ಸಿನಿಮಾ ಮಾಡುವ ಅವಕಾಶ ಇದೆ. ಸೋದರಮಾವನಾಗಿ ನಾನು ಯೋಗಿಗೆ ಒಳ್ಳೆಯದಾಗಲಿ ಅಂತ ಹಾರೈಸುವೆ” ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಇದು ಫೇಕ್ ಪ್ರಪಂಚ; ಹೆಣ್ಣು ಮಕ್ಕಳಿಬ್ಬರಿಗೂ ಎರಡು ಸಲಹೆ ಕೊಟ್ಟ ದುನಿಯಾ ವಿಜಯ್!
“ನನ್ನ ಲ್ಯಾಂಡ್‌ಲಾರ್ಡ್ ಎನ್ನುವ ಸಿನಿಮಾ ಘೋಷಣೆ ಆಗಿದೆ. ಒಂದು ಸ್ಕ್ರಿಪ್ಟ್ ಮಾತುಕತೆ ವೇಳೆ ಯೋಗಿಯನ್ನು ಹಾಕಿಕೊಂಡು ಸಿನಿಮಾ ಮಾಡೋಣ ಅಂತ ಹೇಳಿದ್ದೇನೆ, ಅದಿನ್ನು ಫೈನಲ್ ಆಗಬೇಕಿದೆ” ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ದುನಿಯಾ ವಿಜಯ್ ಅವರ ಅಕ್ಕ ಅಂಬಿಕಾ ಮಗ ಲೂಸ್ ಮಾದ ಯೋಗಿ. ಇವರಿಬ್ಬರು ʼದುನಿಯಾʼ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆ ನಂತರ ಎರಡು ಕುಟುಂಬದ ಮಧ್ಯೆ ಮನಸ್ತಾಪ ಆಗಿದ್ದು, ನಿಖರವಾಗಿ ಏನಾಯ್ತು ಎಂಬ ಬಗ್ಗೆ ಮಾಹಿತಿ ಇಲ್ಲ. ಅಂದಹಾಗೆ ಲೂಸ್ ಮಾದ ಯೋಗಿ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದು, ದುನಿಯಾ ವಿಜಯ್ ಅವರು ಕೂಡ ಸಿನಿಮಾದಲ್ಲಿ ನಟಿಸುತ್ತ, ನಿರ್ದೇಶನವನ್ನು ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರು ಯಾವಾಗ ನಟಿಸ್ತಾರೆ ಎಂದು ಕಾದು ನೋಡಬೇಕಿದೆ.
