ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ದರ್ಶನ್, ಪವಿತ್ರಾ ಸೇರಿ ೧೬ ಆರೋಪಿಗಳು ಹಾಜರಾದರು. ಹೆಚ್ಚುವರಿ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದ್ದು, ಪೂರಕ ಸಾಕ್ಷ್ಯಗಳನ್ನು ಒಳಗೊಂಡಿದೆ. ದರ್ಶನ್ ತಮ್ಮ ಹೊಸ ಫೋನ್ ನಂಬರ್ ಅನ್ನು ಪವಿತ್ರಾಗೆ ನೀಡಿದರು. ಮುಂದಿನ ವಿಚಾರಣೆ ಜುಲೈ ೧೦ಕ್ಕೆ ಮುಂದೂಡಲ್ಪಟ್ಟಿದೆ. ಸೀಜ್ ಮಾಡಿದ ಹಣ ಬಿಡುಗಡೆ ಅರ್ಜಿ ವಿಚಾರಣೆ ಜೂನ್ ೩ಕ್ಕೆ ಮುಂದೂಡಲ್ಪಟ್ಟಿದೆ.

ಬೆಂಗಳೂರು (ಮೇ 20): ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಗೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 16 ಜನ ಆರೋಪಿಗಳು ಕೋರ್ಟ್‌ಗೆ ಹಾಜರಾದರು. ಈ ವೇಳೆ ಕೋರ್ಟ್ ವಿಚಾರಣೆ ಮುಗಿಯುವವರೆಗೆ ಗಪ್ ಚುಪ್ ಆಗಿದ್ದ ದರ್ಶನ್ ಮತ್ತು ಪವಿತ್ರಾ ಗೌಡ ಅವರು, ಕೊನೆಗೆ ವಿಚಾರಣೆ ಮುಗಿಸಿ ಹೊರಗೆ ಹೋಗುವಾಗ ನಟಿ ಪವಿತ್ರಾ ಕೈ ಹಿಡಿದು ಕೇಳಿದ್ದಕ್ಕೆ ತನ್ನ ಹೊಸ ನಂಬರ್ ಕೊಟ್ಟಿದ್ದಾರೆ.

ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ:
ತನಿಖಾ ತಂಡವು ಈಚೆಗೆ ಪಡೆದ ಎಫ್‌ಎಸ್‌ಎಲ್ ವರದಿ, ತಾಂತ್ರಿಕ ದಾಖಲೆಗಳು ಮತ್ತು ಕೃತ್ಯಕ್ಕೆ ಬಳಸಲಾಗಿದ್ದ ವಾಹನಗಳ ಬಿಡುಗಡೆಗೆ ಸಂಬಂಧಪಟ್ಟ ದಾಖಲೆಗಳನ್ನು ಈ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಸಲ್ಲಿಕೆ ಮಾಡಲಾಗಿದೆ. ಈ ಮೂಲಕ ಆರೋಪಿಗಳ ವಿರುದ್ಧ ಮತ್ತಷ್ಟು ಪೂರಕ ಸಾಕ್ಷ್ಯಗಳು ಕೋರ್ಟ್ ಮುಂದೆ ಸಲ್ಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿಗಳ ಹೆಸರು ಕೂಗಿ ಹಾಜರಾತಿ ಖಚಿತಪಡಿಸಿಕೊಂಡ ಕೋರ್ಟ್:
ರೇಣುಕಾಸ್ವಾಮಿ ಕೊಲೆ ಕೇಸಿನ ಎಲ್ಲಾ ಆರೋಪಿಗಳ ಹೆಸರುಗಳನ್ನು ಕೂಗುತ್ತಲೇ ಕೋರ್ಟ್ ಸಿಬ್ಬಂದಿ ಹಾಜರಾತಿ ಪರಿಶೀಲನೆ ನಡೆಸಿದರು. ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರು. ಆದರೆ 'ಎ3' ಪವನ್ ಅಲಿಯಾಸ್ ಪುಟ್ಟಸ್ವಾಮಿ ಮಾತ್ರ ಗೈರುಹಾಜರಾಗಿದ್ದಾನೆ. ದರ್ಶನ್ ಪರ ವಕೀಲರು 'ಹೆಚ್ಚುವರಿ ಚಾರ್ಜ್‌ಶೀಟ್ ಪ್ರತಿಯನ್ನು ಇನ್ನೂ ಪಡೆಯಿಲ್ಲ' ಎಂದು ಕೋರ್ಟ್ ಬಳಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ನ್ಯಾಯಾಧೀಶರು 'ನೀವು ಶೀಘ್ರದಲ್ಲೇ ಪಡೆಯುತ್ತೀರಿ' ಎಂದು ಸ್ಪಷ್ಟಪಡಿಸಿದರು.

ದರ್ಶನ್–ಪವಿತ್ರಾ ಗೌಡ ಗಪ್‌ಚುಪ್: 
ಪವಿತ್ರಾ ಗೌಡ ಮೊದಲೇ ಒಂದು ಕಾರಿನಲ್ಲಿ ಬಂದು ಕಾಯುತ್ತಾ ಕುಳಿತರೆ, ದರ್ಶನ್ ಮತ್ತೊಂದು ಕಾರಿನಲ್ಲಿ ಬಂದು ಸೀದಾ ಕೋರ್ಟ್ ಆವರಣದೊಳಗೆ ಹೋದರು. ಅಲ್ಲಿಯೇ ಇದ್ದ ಪವಿತ್ರಾ ಅವರನ್ನು ಕೈ ಹಿಡಿದುಕೊಂಡು ನಾನಿದ್ದೇನೆ ಭಯ ಬೇಡ ಎನ್ನುವ ಧೈರ್ಯ ತುಂಬುವ ಮಾದರಿಯಲ್ಲಿ ಕೋರ್ಟ್‌ ಒಳಗೆ ಕರೆದುಕೊಂಡು ಹೋದರು. ನಂತರ ವಿಚಾರಣೆ ಆರಂಭ ಆಗುತ್ತಿದ್ದಂತೆ ಆರೋಪಿಗಳ ಹೆಸರನ್ನು ಕರೆಯಲಾರಂಭಿಸಿದಾಗ ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರೂ ಒಂದೇ ಹಾಲ್‌ನೊಳಗೆ ಇದ್ದರೂ ದೂರ ದೂರ ಕುಳಿತಿದ್ದರು. ಆಗ ಇಬ್ಬರೂ ಯಾವುದೇ ಮಾತುಕತೆ ನಡೆಸಲಿಲ್ಲ.

ಕೈ ಹಿಡಿದು ಹೊಸ ಫೋನ್ ನಂಬರ್ ಪಡೆದ ಪವಿತ್ರಾ ಗೌಡ:
ಕೋರ್ಟ್‌ನ ವಿಚಾರಣೆ ಮುಗಿದ ನಂತರ ಮುಂದಿನ ವಿಚಾರಣಾ ದಿನಾಂಕವನ್ನು ತಿಳಿಸಲಾಯಿತು. ಆಗ ಕೋರ್ಟ್‌ನಿಂದ ದರ್ಶನ್ ಹೊರಬಂದು ಮನೆಗೆ ಹೋಗಲು ಲಿಫ್ಟ್‌ ಸೇರಿಕೊಂಡರು. ಆಗ ಹಿಂದಿನಿಂದ ಓಡಿಕೊಂಡು ಬಂದು ದರ್ಶನ್ ಇರುವ ಲಿಫ್ಟ್‌ನೊಳಗೆ ಹೋದ ಪವಿತ್ರಾ ಗೌಡ, ದರ್ಶನ್ ಕೈ ಹಿಡಿದುಕೊಂಡು ಮಾತನಾಡಿಸಿ ಫೋನ್ ನಂಬರ್ ಕೊಡುವಂತೆ ಕೇಳಿದರು. ಆಗ ಫೋನ್ ನಂಬರ್ ಅನ್ನು ಹೇಳದೇ ಪವಿತ್ರಾಳ ಮೊಬೈಲ್ ಪಡೆದು, ಅದರಲ್ಲಿ ತನ್ನ ಹೊಸ ನಂಬರ್ ಡಯಲ್ ಮಾಡಿಕೊಟ್ಟರು. ಈ ದೃಶ್ಯವು ಕೋರ್ಟ್ ವಲಯದಲ್ಲಿ ಭಾರೀ ಗಮನ ಸೆಳೆಯಿತು. ಉಳಿದಂತೆ ಎಲ್ಲ ಆರೋಪಿಗಳು ಹೆಚ್ಚಾಗಿ ಮಾತನಾಡಿಸದೇ ತಮ್ಮ ಪಾಡಿಗೆ ಬಂದು ಅಲ್ಲಿಂದ ತಮ್ಮ ತಮ್ಮ ಮನೆಗೆ ತೆರಳಿದರು.

ಮತ್ತೊಂದು ಅರ್ಜಿ ವಿಚಾರಣೆ ಮುಂದೂಡಿಕೆ: 
ದರ್ಶನ್ ಹಾಗೂ ಇತರರಿಂದ ಸೀಜ್ ಮಾಡಲಾಗಿದ್ದ ಹಣ ಬಿಡುಗಡೆಗೆ ಸಲ್ಲಿಸಲಾದ ಅರ್ಜಿ ವಿಚಾರಣೆಯೂ ನಡೆಯಿತು. ಈ ಅರ್ಜಿ ವಿಚಾರಣೆಯನ್ನು ಕೋರ್ಟ್ ಜೂನ್ 3ಕ್ಕೆ ಮುಂದೂಡಿದೆ. ಇನ್ನು ಕೊಲೆ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಧೀಶರಾದ ಜಯಶಂಕರ್ ಅವರು ಜುಲೈ 10ಕ್ಕೆ ಮುಂದೂಡಿದ್ದಾರೆ. ಇತ್ತೀಚೆಗೆ ಸಲ್ಲಿಕೆ ಮಾಡಲಾದ ಎಲ್ಲಾ ದಾಖಲೆಗಳ ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.