ದರ್ಶನ್ ಅವರ ಮೇಕಪ್ ಆರ್ಟಿಸ್ಟ್ ಹೊನ್ನೇಗೌಡ್ರು ನಿಧನರಾಗಿದ್ದಾರೆ. ೨೫ ವರ್ಷಗಳಿಂದ ದರ್ಶನ್ ಜೊತೆ ಕೆಲಸ ಮಾಡಿದ್ದ ಹೊನ್ನೇಗೌಡ್ರು ಅವರ ಕಲೆ, ನಿಷ್ಠೆ, ನಗುಮೊಗವನ್ನು ದರ್ಶನ್ ಸ್ಮರಿಸಿದ್ದಾರೆ. ಶೈಲಜಾ ನಾಗ್ ಕೂಡ ತಮ್ಮ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಹೊನ್ನೇಗೌಡ್ರನ್ನು ನೆನೆದು ಸಂತಾಪ ಸೂಚಿಸಿದ್ದಾರೆ.
ನಟ ದರ್ಶನ್ ಅವರು ʼಮೆಜೆಸ್ಟಿಕ್ʼ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಅವರು ಹೀರೋ ಆಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಕೆಲ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು, ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದರು. ಕಳೆದ 25 ವರ್ಷಗಳಿಂದ ಮೇಕಪ್ ಆರ್ಟಿಸ್ಟ್ ಆಗಿದ್ದ ಹೊನ್ನೇಗೌಡ್ರು ನಿಧನರಾಗಿದ್ದಾರೆ. ಈ ಬಗ್ಗೆ ನಟ ದರ್ಶನ್ ತೂಗುದೀಪ ಅವರೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಟ ದರ್ಶನ್ ಹೇಳಿದ್ದೇನು?
“25 ವರ್ಷಗಳಿಂದ ನನ್ನೊಂದಿಗೆ ಕೆಲಸಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ್ರು ಇಂದು ಅಗಲಿದ ಸುದ್ಧಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು.ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೇ ಗೌಡರ ಆತ್ಮಕ್ಕೆ ಶಾಂತಿ ದೊರೆಯಲಿ. ಓಂ ಶಾಂತಿ!” ಎಂದು ನಟ ದರ್ಶನ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಶೈಲಜಾ ನಾಗ್ ಹೇಳಿದ್ದೇನು?
ಇನ್ನು ಸಂಗೀತ ಸಂಯೋಜಕ, ಗಾಯಕ ವಿ ಹರಿಕೃಷ್ಣ ಕೂಡ ಹೊನ್ನೇಗೌಡ್ರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇನ್ನು ನಿರ್ಮಾಪಕಿ ಶೈಲಜಾ ನಾಗ್ ಕೂಡ ಕೂಡ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. “ಮೇಕಪ್ ಆರ್ಟಿಸ್ಟ್ ಹೊನ್ನೇಗೌಡ ಅವರು ನಮ್ಮ ಪ್ರೊಡಕ್ಷನ್ ಹೌಸ್‌ನಿಂದ ಹೊರಬಂದ ಯಜಮಾನ ಹಾಗೂ ಕ್ರಾಂತಿ ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಎಲ್ಲರನ್ನು ನಗಿಸುತ್ತಿದ್ದ ಒಳ್ಳೆಯ ಮನುಷ್ಯನನ್ನು ಕಳೆದುಕೊಂಡಿರುವುದು ತುಂಬ ಬೇಸರ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಅವರು ಹೇಳಿದ್ದಾರೆ.


