ನವೆಂಬರ್ 27ರಂದು ಲಕ್ಷ್ಮೀಪುತ್ರ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಪ್ರಚಾರದ ಭಾಗವಾಗಿ ಹೊಸಪೇಟೆಗೆ ಆಗಮಿಸಿದ್ದ ಚಿಕ್ಕಣ್ಣ ದರ್ಶನ್ ಅವರ ಬಗ್ಗೆ ಏನೂ ಹೇಳುವ ಹಾಗಿಲ್ಲ ಎಂದು ಹೇಳಿ ತಮ್ಮ ಹೇಳಿಕೆಯಿಂದ ನುಣುಚಿಕೊಂಡುರು.
ವಿಜಯನಗರ: ಕನ್ನಡ ಚಿತ್ರರಂಗದ ಹಾಸ್ಯ ನಟ, ನಾಯಕ ನಟ ಚಿಕ್ಕಣ್ಣ ದರ್ಶನ ಅವರನ್ನ ಸದ್ಯಕ್ಕೆ ಭೇಟಿ ಆಗೋಲ್ಲ ಎಂದಿದ್ದಾರೆ. ತಮ್ಮ ಅಭಿನಯದ ಬಹುನಿರೀಕ್ಷಿತ 'ಲಕ್ಷ್ಮೀಪುತ್ರ' ಸಿನಿಮಾ ಇದೇ ನವೆಂಬರ್ 27ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣುತ್ತಿದೆ. ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಚಿತ್ರತಂಡ, ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಭೇಟಿ ನೀಡಿ ದಿವಂಗತ ಪವರ್ ಸ್ಟಾರ್ ಡಾ. ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಚಿತ್ರದ ನಾಯಕ ನಟ ಚಿಕ್ಕಣ್ಣ ಹಾಗೂ ನಟಿ ವಂದಿತಾ ಸೇರಿದಂತೆ 'ಲಕ್ಷ್ಮೀಪುತ್ರ' ಚಿತ್ರತಂಡದ ಸದಸ್ಯರು ಅಪ್ಪು ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದರು. ಈ ವೇಳೆ ನೆರೆದಿದ್ದ ಅಭಿಮಾನಿಗಳು ಹಾಗೂ ಚಿತ್ರತಂಡದ ಸದಸ್ಯರು ಅಪ್ಪು ಪರವಾಗಿ ಮುಗಿಲು ಮುಟ್ಟುವಂತೆ ಜೈಕಾರ ಹಾಕಿ ಸಂಭ್ರಮಿಸಿದರು.
ಅಪ್ಪು ಆಶೀರ್ವಾದವೇ ನಮಗೆ ಶ್ರೀರಕ್ಷೆ
ಮಾಲಾರ್ಪಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಚಿಕ್ಕಣ್ಣ, ಇದೇ ನವೆಂಬರ್ 27ರಂದು ನಮ್ಮ 'ಲಕ್ಷ್ಮೀಪುತ್ರ' ಸಿನಿಮಾ ಬಿಡುಗಡೆಯಾಗುತ್ತಿದೆ. ಸಾಮಾನ್ಯವಾಗಿ ಕನ್ನಡದ ಎಲ್ಲಾ ಸಿನಿಮಾಗಳ ಬಿಡುಗಡೆಗೂ ಮುನ್ನ ಚಿತ್ರತಂಡಗಳು ಹೊಸಪೇಟೆಗೆ ಆಗಮಿಸಿ ಅಪ್ಪು ಅವರ ಆಶೀರ್ವಾದ ಪಡೆಯುವ ಸಂಪ್ರದಾಯವಿದೆ. ಅದೇ ರೀತಿ ನಾನು ಮತ್ತು ನಮ್ಮ ಚಿತ್ರತಂಡ ಕೂಡ ಅಪ್ಪು ಸರ್ ಅವರ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇವೆ. ಪ್ರೇಕ್ಷಕರು ಮತ್ತು ಅಪ್ಪು ಅಭಿಮಾನಿಗಳು ನಮ್ಮ ಚಿತ್ರವನ್ನು ಕೈಹಿಡಿಯುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.
ದರ್ಶನ್ ಭೇಟಿ ಕುರಿತು ಚಿಕ್ಕಣ್ಣ ಸ್ಪಷ್ಟನೆ
ಇದೇ ಸಂದರ್ಭದಲ್ಲಿ ನಟ ದರ್ಶನ್ ಅವರ ಭೇಟಿ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಿಕ್ಕಣ್ಣ, "ನಾನು ಸದ್ಯಕ್ಕೆ ದರ್ಶನ್ ಅವರನ್ನು ಭೇಟಿಯಾಗುವುದಿಲ್ಲ. ಅಲ್ಲದೆ, ಈ ವಿಚಾರವಾಗಿ ನಾನು ಈಗ ಏನನ್ನೂ ಮಾತನಾಡುವ ಹಾಗಿಲ್ಲ" ಎಂದು ಹೇಳಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದ ಚಿಕ್ಕಣ್ಣ
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ಆರೋಪದ ಮೇಲೆ ನಟ ದರ್ಶನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ ಅವರು ಇತ್ತೀಚೆಗಷ್ಟೇ ಬೆಂಗಳೂರಿನ 59ನೇ ಸಿಸಿಎಚ್ (CCH) ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಹಾಜರಾಗಿ ತಮ್ಮ ಅಧಿಕೃತ ಹೇಳಿಕೆಯನ್ನು ದಾಖಲಿಸಿದ್ದರು. ಪ್ರಕರಣವು ನ್ಯಾಯಾಲಯದ ವಿಚಾರಣಾ ಹಂತದಲ್ಲಿರುವುದರಿಂದ ಹಾಗೂ ತಾವು ಪ್ರಮುಖ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಚಿಕ್ಕಣ್ಣ ಅವರು ದರ್ಶನ್ ಕುರಿತು ಯಾವುದೇ ಹೇಳಿಕೆ ನೀಡದೆ ಎಚ್ಚರಿಕೆಯ ನಡೆ ಅನುಸರಿಸಿದ್ದಾರೆ.














