ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ವೇಳೆ ಸಾಕ್ಷಿ ಹೇಳಲು ಬಂದ ನಟ ಚಿಕ್ಕಣ್ಣ ಟೆನ್ಷನ್‌ನಿಂದಾಗಿ ಕಾಲಾವಕಾಶ ಕೋರಿದ್ದಾರೆ. ಮತ್ತೊಂದೆಡೆ ನಟ ಯಶಸ್ ಸೂರ್ಯ ಹೇಳಿಕೆ ನೀಡಿದ್ದು, ಅವರನ್ನು ಭಾಗಶಃ ಸಾಕ್ಷಿ ಎಂದು ಪರಿಗಣಿಸಲು ಮನವಿ ಮಾಡಲಾಗಿದೆ. ಜೈಲಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಪವಿತ್ರಾ ಗೌಡ ಪರದಾಡುತ್ತಿದ್ದು, ಜಡ್ಜ್ ಭೇಟಿಗೆ ವಕೀಲರು ಆಗ್ರಹಿಸಿದ್ದಾರೆ.

ಬೆಂಗಳೂರು: ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಹಾಗೂ ಡಿ ಗ್ಯಾಂಗ್ ವಿರುದ್ಧದ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಹಿನ್ನೆಲೆ ತಮ್ಮ ಹೇಳಿಕೆ ದಾಖಲಿಸಲು ಪ್ರಮುಖ ಸಾಕ್ಷಿಗಳಾದ ನಟ ಚಿಕ್ಕಣ್ಣ ಹಾಗೂ ನಟ ಯಶಸ್ ಸೂರ್ಯ ಅವರು ಸೋಮವಾರ ಕೋರ್ಟ್‌ಗೆ ಹಾಜರಾಗಿದ್ದರು.

ಸಾಕ್ಷಿ ಪೀಠದಲ್ಲಿ ಟೆನ್ಷನ್ ಒಳಗಾದ ನಟ ಚಿಕ್ಕಣ್ಣ, ಸಮಯಾವಕಾಶ ನೀಡಿದ ಕೋರ್ಟ್

ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಹಾಸ್ಯನಟ ಚಿಕ್ಕಣ್ಣ ಬೆಳಿಗ್ಗೆಯೇ ನಗರದ 59ನೇ ಸೆಷನ್ಸ್ ನ್ಯಾಯಾಲಯಕ್ಕೆ ಆಗಮಿಸಿ, ತಮ್ಮ ಕಾರಿನಲ್ಲಿಯೇ ಕಾಯುತ್ತಿದ್ದರು. ಮಧ್ಯಾಹ್ನ 12 ಗಂಟೆಗೆ ವೇಳೆಗೆ ಕೋರ್ಟ್ ವಿಚಾರಣೆಗೆ ಪೀಠಕ್ಕೆ ಬಂದು "ನಾನು ಸತ್ಯವನ್ನೇ ಹೇಳುತ್ತೇನೆ" ಎಂದು ತಮ್ಮ ಹೇಳಿಕೆ ದಾಖಲಿಸಲು ಮುಂದಾದರು.

ಆದರೆ, ಸಾಕ್ಷಿ ಪೀಠವೇರಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವ ವೇಳೆ ಚಿಕ್ಕಣ್ಣ ತೀವ್ರ ಟೆನ್ಷನ್‌ಗೆ ಮಾಡುಕೊಂಡರು ಇದನ್ನು ಗಮನಿಸಿದ ಎಸ್‌ಪಿಪಿ ಮತ್ತು ನ್ಯಾಯಾಧೀಶರು, ಅಷ್ಟೊಂದು ಟೆನ್ಷನ್ ಮಾಡಿಕೊಳ್ಳಬೇಡಿ, ಘಟನೆಯ ದಿನ ನಟ ದರ್ಶನ್ ಜೊತೆ 'ಸ್ಟೋನಿ ಬ್ರೂಕ್' ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಹೋಗಿರುವುದರಲ್ಲಿ ಯಾವುದೇ ತಪ್ಪಲ್ಲ. ಧೈರ್ಯವಾಗಿರಿ. ಬೇಕಿದ್ದರೆ ಸ್ವಲ್ಪ ಸಮಯ ತೆಗೆದುಕೊಳ್ಳಿ ಎಂದು ಸಮಯ ನೀಡಿದರು. ಬಳಿಕ ಸಾಕ್ಷಿ ಹೇಳಿಕೆ ಮುಂದೂಡಲು ಚಿಕ್ಕಣ್ಣ ಸಮಯಾವಕಾಶ ಕೋರಿದರು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಸಾಕ್ಷಿ ಹೇಳಿಕೆಗೆ ಮುಂದಿನ ದಿನಾಂಕ ನೀಡಿ ಹೊಸದಾಗಿ ಸಮನ್ಸ್ ಜಾರಿ ಮಾಡಿದೆ.

ನಟ ಯಶಸ್ ಸೂರ್ಯ ಹೇಳಿಕೆ

ಮತ್ತೊಬ್ಬ ಪ್ರಮುಖ ಸಾಕ್ಷಿ ನಟ ಯಶಸ್ ಸೂರ್ಯ ನ್ಯಾಯಾಲಯದ ಕಟಕಟೆಯಲ್ಲಿ ತಮ್ಮ ಹೇಳಿಕೆ ದಾಖಲಿಸಿದರು. ಘಟನೆಯ ದಿನ ನಾವು ನಮ್ಮ ಮುಂಬರುವ ಸಿನಿಮಾವೊಂದರ ಬಗ್ಗೆ ಚರ್ಚಿಸಲು ದರ್ಶನ್ ಅವರನ್ನು ಭೇಟಿಯಾಗಿದ್ದೆವು. ಈ ಹಿಂದೆ ಪೊಲೀಸರ ಮುಂದೆ ಹಾಗೂ ಸೆಕ್ಷನ್ 164ರ ಅಡಿಯಲ್ಲಿ ನ್ಯಾಯಾಧೀಶರ ಎದುರು ಈ ಹೇಳಿಕೆ ನೀಡಿದ್ದೆ ಎಂದು ತಮ್ಮ ಹೇಳಿಕೆ ನೀಡಿದರು.

ವಿಚಾರಣೆ ವೇಳೆ, ಊಟದ ಸಮಯದಲ್ಲಿ ಪವನ್ ಬಂದು ಹೋದ ಬಗ್ಗೆ ಹೇಳುವಂತೆ ಪೊಲೀಸರು ಹೇಳಿದ್ದರು. ನಾನು ಪೋನ್ ನಲ್ಲಿ ಮಾತಾಡ್ತಾ ಇದ್ದರಿಂದ ಪವನ್ ಬಂದು ಹೋಗಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದರು. ನಟ ಯಶಸ್ ಸೂರ್ಯ ಅವರನ್ನು 'ಭಾಗಶಃ ಹಾಸ್ಟೈಲ್ ವಿಟ್ನೆಸ್' ಎಂದು ಪರಿಗಣಿಸುವಂತೆ ಎಸ್‌ಪಿಪಿ ಕೋರ್ಟ್‌ಗೆ ಮನವಿ ಮಾಡಿದರು. ಸಾಕ್ಷಿಯನ್ನ ಹಾಸ್ಟೈಲ್‌ ವಿಟ್ನೆಸ್ ಎಂದು ಪರಿಗಣಿಸಲು ದರ್ಶನ್ ಪರ ವಕೀಲರು ಮನವಿ ಮಾಡಿದರು.

ಆರೋಪಿ ಪರ, ವಿರೋಧ ಏನು ಹೇಳೋಕೆ ಆಗಲ್ಲ

ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ, ಇಂದು ಇಬ್ಬರೂ ಸಾಕ್ಷಿಗಳು ಅರ್ಧಮರ್ಧ ಸಾಕ್ಷಿ ನುಡಿದಿದ್ದಾರೆ. ಯಶಸ್ ಸೂರ್ಯ ಅವರ ಸಾಕ್ಷಿಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಕ್ರಾಸ್ ಎಕ್ಸಾಮಿನ್ ಮಾಡಲು ಸಮಯಾವಕಾಶ ಕೋರಿದ್ದಾರೆ. ಚಿಕ್ಕಣ್ಣ ಅವರ ಸಾಕ್ಷಿಯೂ ಅರ್ಧಕ್ಕೆ ನಿಂತಿದ್ದು, ಮುಂದಿನ ದಿನಾಂಕ ನಿಗದಿಯಾಗಿದೆ. ಆರೋಪಿ ಪರವಾಗಿ ಸಾಕ್ಷಿ ಹೇಳಿದ್ರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಪಾಷಾ, ಅವರ ಸಾಕ್ಷಿ ಪೂರ್ತಿ ಆಗೋವರೆಗೂ ಏನು ಹೇಳಲು ಆಗಲ್ಲ. ಆರೋಪಿ ಪರ, ವಿರೋಧ ಏನು ಹೇಳೋಕೆ ಆಗಲ್ಲ. ಸ್ಟೊನಿ ಬ್ರೂಕ್ ನಲ್ಲಿ ಊಟ ಮಾಡಿದ್ದರ ಬಗ್ಗೆ ಹೇಳಿದ್ದಾರೆ ಎಂದರು.

ಜೈಲಿನಲ್ಲಿ ಅವ್ಯವಸ್ಥೆ: ಸ್ವತಃ ಜಡ್ಜ್ ಭೇಟಿ ನೀಡಲು ಪವಿತ್ರಾ ಗೌಡ ವಕೀಲರ ಮನವಿ!

ಇದೇ ವೇಳೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರ ಪರ ವಕೀಲ ನಾರಾಯಣ ಸ್ವಾಮಿ ಅವರು ನ್ಯಾಯಾಲಯಕ್ಕೆ ಮಹತ್ವದ ಅರ್ಜಿ ಸಲ್ಲಿಸಿದರು. "ಜೈಲು ಅಧಿಕಾರಿಗಳು ಕೋರ್ಟ್ ನೀಡಿರುವ ಆದೇಶಗಳನ್ನು ಗೌರವಿಸುತ್ತಿಲ್ಲ ಮತ್ತು ಪಾಲಿಸುತ್ತಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ಅವರಿಗೆ ಮೂಲಭೂತ ಸೌಕರ್ಯಗಳಿಲ್ಲದೆ ತೀವ್ರ ಅವ್ಯವಸ್ಥೆಯಾಗಿದೆ. ಹೀಗಾಗಿ ನ್ಯಾಯಾಧೀಶರು ಸ್ವತಃ ಜೈಲಿಗೆ ಭೇಟಿ ನೀಡಿ ಪರಿಶೀಲಿಸಬೇಕು ಅಥವಾ ಕೋರ್ಟ್ ಕಮಿಷನರ್ ನೇಮಕ ಮಾಡಬೇಕು. ಜೈಲು ಅಧಿಕಾರಿಗಳು ಕೋರ್ಟ್ ಆದೇಶ ಪಾಲನೆ ಅಂತ ಹೇಳ್ತಾರೆ. ಆದ್ರೆ ಯಾವುದೇ ಪಾಲನೆ ಮಾಡಲ್ಲ ಎಂದು ಪವಿತ್ರಾಗೌಡ ಪರ ವಕೀಲ ನಾರಾಯಣ ಸ್ವಾಮಿ ಮತ್ತೆ ಆರೋಪ ಮಾಡಿದರು. ಈ ಬಗ್ಗೆ ಮಾಹಿತಿ ಪಡೆದು ತಿಳಿಸುವುದಾಗಿ ಎಸ್ಪಿಪಿ ಹೇಳಿದರು