ಬಿಬಿಎಂಪಿ ಅನಧಿಕೃತ ಪುತ್ಥಳಿಗಳ ತೆರವು: ನಟ ಅನಿರುದ್ಧ ಪ್ರತಿಕ್ರಿಯೆ
ಕನ್ನಡ ಚಿತ್ರರಂಗದ ಹಿರಿಯ ನಟರ ಪುತ್ಥಳಿಗಳು ಹಾಗೂ ಫ್ಲಾಗ್ ಪೋಲ್‌ಗಳ ಬಿಬಿಎಂಪಿ ತೆಗೆದು ಕೊಂಡಿರುವ ನಿರ್ಧಾರದ ಬಗ್ಗೆ ನಟ ಅನಿರುದ್ಧ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಡಾ.ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಶಂಕರ್ ನಾಗ್ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳ ಪ್ರತಿಮೆಯನ್ನು ಅಭಿಮಾನಿಗಳು ತಾವು ಕಟ್ಟಿಕೊಂಡಿರುವ ಸಂಘದ ಬಳಿ ಅಥವಾ ಏರಿಯಾದಲ್ಲಿ ಸ್ಥಾಪಿಸಿದ್ದಾರೆ. ಬಿಬಿಎಂಪಿ ಜಾರಿಗೊಳಿಸಿರುವ ಹೊಸ ನಿಯಮದಂತೆ, ಅನುಮತಿ ಪಡೆಯದೇ ಸ್ಥಾಪಿತಗೊಂಡಿರುವ ಗಣ್ಯರ ಪುತ್ಥಳಿಗಳನ್ನು ತೆರವು ಮಾಡುವುದಕ್ಕೆ ಮುಂದಾಗಿದೆ. ಈ ವಿಚಾರದ ಬಗ್ಗೆ ಕನ್ನಡ ಚಿತ್ರರಂಗವನ್ನಾಳದ ಡಾ.ವಿಷ್ಣುವರ್ಧನ್ ಅವರ ಅಳಿಯ, ನಟ ಅನಿರುದ್ಧ ಖಾಸಗಿ ಮಾಧ್ಯಮದಲ್ಲಿ ಮಾತನಾಡಿದ್ದಾರೆ.
ಮೂಕ ಪ್ರಾಣಿಗಳಿಗೆ ದನಿಯಾದ ಅನಿರುದ್ಧ.. ಯಾರ ಪಾಪಕ್ಕೆ ಈ ಪ್ಲಾಸ್ಟಿಕ್?ಸರ್ಕಾರ ಹೊರಡಿಸಿರುವ ಒಂದು ಆದೇಶ ನಿಜಕ್ಕೂ ತುಂಬಾ ನಾಜೂಕಾದಂತಹ ವಿಷಯ. ನಮ್ಮ ಕನ್ನಡಿಗರು ಬಹಳ ಶ್ರದ್ಧೆಯಿಂದ, ಶ್ರಮದಿಂದ ಆ ಕಂಬಗಳನ್ನು, ಪುತ್ಥಳಿಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈಗ ಇದ್ದಕ್ಕಿದ್ದಂತೆ ಅದನ್ನು ತೆರವುಗೊಳಿಸಬೇಕು, ಎಂದು ಸರ್ಕಾರ ಹೇಳಿದರೆ ಅದು ಬಹಳ ಕಷ್ಟವಾದ ಕಲಸ, ಎಂದು ಅನಿರುದ್ಧ ಅಭಿಪ್ರಾಯ ಪಟ್ಟಿದ್ದಾರೆ.
ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಕೂಡ ಇದೆ. ನಮ್ಮ ಅಭಿಮಾನಿಗಳು ಹಾಗೂ ಕನ್ನಡಿಗರಿಂದ ತಪ್ಪಾಗಿರುವುದು ಹೌದು. ಸರ್ಕಾರದ ಜವಾಬ್ದಾರಿ ಕೂಡ ಇತ್ತು. ಸ್ಥಾಪನೆ ಮಾಡುವ ವೇಳೆ ಸರ್ಕಾರ ಒಂದು ಸೂಕ್ತವಾದ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ತೆಗೆದುಕೊಂಡಿಲ್ಲ. ಹಲವು ವರ್ಷಗಳ ಮೇಲೆ ಈಗ ಪುತ್ಥಳಿಗಳನ್ನು ತೆರವುಗೊಳಿಸಬೇಕು, ಎಂದರೆ ಅದು ಸುಲಭವಲ್ಲ. ಈಗ ಅದು ಪೂಜಾ ಸ್ಥಳವಾಗಿರುತ್ತದೆ. ಈಗ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಈಗಿರುವ ಜಾಗದಿಂದ ಹತ್ತಿರದಲ್ಲಿಯೇ ಸೂಕ್ತವಾದ ಜಾಗವನ್ನು ಗುರುತಿಸಿ, ಅಲ್ಲಿ ಪುತ್ಥಳಿಗಳನ್ನು ಪ್ರತಿಸ್ಠಾಪನೆ ಮಾಡಬೇಕು ಎಂದಿದ್ದಾರೆ ಅನಿರುದ್ಧ.