Asianet Suvarna News Asianet Suvarna News

ಪಾಲ್ ಚಂದಾನಿ ಲುಕ್‌ನಲ್ಲಿ ಅನಂತ್‌ನಾಗ್; ಮೇಡ್ ಇನ್ ಬೆಂಗಳೂರು ಪೋಸ್ಟರ್ ಬಿಡುಗಡೆ!

ಅನಂತ್‌ನಾಗ್, ಪ್ರಕಾಶ್ ಬೆಳವಾಡಿ, ಸಾಯಿ ಕುಮಾರ್ ಕಾಂಬಿನೇಶನ್‌ನ ಹೊಸ ಚಿತ್ರ ‘ಮೇಡ್ ಇನ್ ಇಂಡಿಯಾ’. ಇದರಲ್ಲಿ ಅನಂತ್‌ನಾಗ್ ಸಿಂಧಿ ಬ್ಯುಸಿನೆಸ್‌ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ
 

Actor Anant Nag in Pal Chandani Made in Bengaluru poster release vcs
Author
Bangalore, First Published Aug 23, 2021, 4:41 PM IST

ಹೊಸ ನಿರ್ದೇಶಕ ಪ್ರದೀಪ್ ಶಾಸ್ತ್ರಿ ಅವರ ‘ಮೇಡ್ ಇನ್ ಬೆಂಗಳೂರು’ ಚಿತ್ರದಲ್ಲಿ ಅನಂತ್‌ನಾಗ್ ಕನ್ನಡ ಚಿತ್ರರಂಗದ ಹಿರಿಯ ಹಂಚಿಕೆದಾರ ದಿವಂಗತ ಪಾಲ್ ಚಂದಾನಿ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೀರ್ಷಿಕೆ ಬಿಡುಗಡೆ ಸಂದರ್ಭ ಅನಂತ್‌ನಾಗ್ ಈ ವಿಷಯ ಬಹಿರಂಗಪಡಿಸಿದ್ದಾರೆ.

‘ಈ ಸಿನಿಮಾದ ಸ್ಕ್ರಿಪ್‌ಟ್ ಇಷ್ಟ ಆಗಿತ್ತು. ಆದರೂ ಈ ಚಿತ್ರ ಒಪ್ಪಿಕೊಳ್ಳಲು ಸ್ವಲ್ಪ ಸಮಯ ತಗೊಂಡೆ. ಇದರಲ್ಲಿ ನನ್ನದು ಸಿಂಧಿ ಬ್ಯುಸಿನೆಸ್‌ಮ್ಯಾನ್ ಪಾತ್ರ. ಈ ಪಾತ್ರದ ಮ್ಯಾನರಿಸಂ ಸ್ಕ್ರಿಪ್‌ಟ್ನಲ್ಲಿ ಇರುವಂತೆ ಮಾಡಬೇಕಾ ಅಥವಾ ನನಗೆ ಬೇಕಾದ ಹಾಗೆ ಬದಲಾಯಿಸಬಹುದಾ ಅನ್ನುವ ಪ್ರಶ್ನೆ ಬಂತು. ಮ್ಯಾನರಿಸಂ ರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ನನಗೇ ನೀಡಿದರು. ನಾನು ಹತ್ತಿರದಿಂದ ನೋಡಿದ ಚಿತ್ರ ವಿತರಕ ಪಾಲ್ ಚಂದಾನಿ ಅವರೂ ಸಿಂಧಿ ಮೂಲದವರು, ಜೊತೆಗೆ ಬ್ಯುಸಿನೆಸ್‌ಮ್ಯಾನ್. ಹೀಗಾಗಿ ಅವರ ಮ್ಯಾನರಿಸಂನಲ್ಲೇ ಈ ಪಾತ್ರದಲ್ಲಿ ನಟಿಸಲು ನಿರ್ಧರಿಸಿದೆ. ಈ ಚಿತ್ರದ ನನ್ನ ಪಾತ್ರ ಚಂದಾನಿ ಅವರಿಗೆ ಅರ್ಪಣೆ’ ಎಂದು ಅನಂತ್‌ನಾಗ್ ಹೇಳಿದರು.

ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಾರೆ ಎಂದು ಮೊದಲೇ ತಿಳಿಸಿದ್ದ ಅನಂತ್‌ ನಾಗ್‌

ಕನ್ನಡಪ್ರಭ ಪತ್ರಿಕೆಯ ಪುರವಣಿ ವಿಭಾಗದ ಪ್ರಧಾನ ಸಂಪಾದಕ ಜೋಗಿ ಮಾತನಾಡಿ, ‘ವಲಸೆ ಬಂದ ಪ್ರತಿಯೊಬ್ಬರಲ್ಲೂ ಬೆಂಗಳೂರು ಭಿನ್ನ ಬಗೆಯಲ್ಲಿ ರೂಪು ತಳೆಯುತ್ತದೆ. ಗಿರೀಶ್ ಕಾರ್ನಾಡ್ ಗೆಳೆಯರ ಮದುವೆಗೆಂದು ಅಪರಾತ್ರಿಯಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಬರುತ್ತಾರೆ. ರಾತ್ರಿ ಛತ್ರ ಸಿಗದೇ ಅಲೆಯುತ್ತಿದ್ದಾಗ ಅಪರಿಚಿತ ವೃದ್ಧರೊಬ್ಬರು ಅವರನ್ನು ಮನೆಯೊಳಗೆ ಕರೆದು ಊಟ ಕೊಟ್ಟು, ಮಲಗಲು ವ್ಯವಸ್ಥೆ ಮಾಡುತ್ತಾರೆ. ಈ ಘಟನೆಯ ಬಳಿಕ ಅವರ ಬೆಂಗಳೂರಿನ ಕಲ್ಪನೆ ಬದಲಾಗುತ್ತದೆ. ಹೀಗೆ ಬೆಂಗಳೂರು ಪ್ರತಿಯೊಬ್ಬನೊಳಗೂ ರೀಮೇಡ್ ಆಗುತ್ತಾ ಹೋಗುತ್ತದೆ. ಬೆಂಗಳೂರಿನ ಹಿನ್ನೆಲೆಯ ಈ ಚಿತ್ರ ಯಶಸ್ವಿಯಾಗಲಿ’ ಎಂದು ಹಾರೈಸಿದರು.

ಸಾಯಿಕುಮಾರ್ ಮಾತನಾಡಿ, ‘ಆಂಧ್ರ ಮೂಲ, ತೆಲುಗು ಮಾತೃಭಾಷೆ ಆದರೂ ನಾನೂ ಮೇಡ್ ಇನ್ ಬೆಂಗಳೂರಿನವನು. ಹಿಂದೆ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಅನಂತ್‌ನಾಗ್ ಅವರ ನಾರದ ಪಾತ್ರಕ್ಕೆ ನಾನೇ ಧ್ವನಿ ನೀಡಿದ್ದೆ. ಈಗ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ. ಒಬ್ಬ ತಮಾಷೆಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದರು. ರಂಭೂಮಿಗೆ ಬಂದು 50 ವರ್ಷಗಳಾದ ನೆನಪಿನಲ್ಲಿ ಅವರ ನಾಟಕದ ಡೈಲಾಗ್ ಹೇಳಿದರು.ಪ್ರಕಾಶ್ ಬೆಳವಾಡಿ, ‘ನಾನು ಮೂಲತಃ ನಟ ಅಲ್ಲ. ನಾಟಕದಲ್ಲಿ ಯಾರಾದ್ರೂ ಕಲಾವಿದರು ಕೈಕೊಟ್ಟರೆ ಆ ಪಾತ್ರ ಮಾಡುತ್ತಿದ್ದೆ ಅಷ್ಟೇ. ಆದರೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಈ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರರಂಗದಲ್ಲಿ ಹೊಸ ಗಾಳಿಯಂತೆ ಬರುವ ಇಂಥಾ ಚಿತ್ರಗಳಿಗೆ ಇಡೀ ಚಿತ್ರರಂಗದಲ್ಲಿ ಮಹತ್ವದ ಬದಲಾವಣೆ ತರುವ ಶಕ್ತಿ ಇದೆ’ ಎಂದರು.

ಸ್ಟಾರ್ಟ್‌ಅಪ್ ಆರಂಭಿಸುವ ಮೂವರು ಯುವಕರ ಕತೆ ಈ ಸಿನಿಮಾದ್ದು. ನಿರ್ದೇಶಕ ಪ್ರದೀಪ್ ಶಾಸ್ತ್ರಿ, ನಿರ್ಮಾಪಕ ಬಾಲಕೃಷ್ಣ ಬಿ ಎಸ್ ಮತ್ತಿತರರು ಉಪಸ್ಥಿತರಿದ್ದರು. ರಜನಿ ಥರ್ಸ್ ಡೇ ಸ್ಟೋರೀಸ್ ಬ್ಯಾನರ್‌ನಲ್ಲಿ ಸಿನಿಮಾ ತಯಾರಾಗಿದೆ.

Follow Us:
Download App:
  • android
  • ios