ಅನಂತ್‌ ನಾಗ್‌ ಕಲಾವಿದರಷ್ಟೇ ಅಲ್ಲ; ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕಾರಣದ ಕುರಿತು ಮಾಹಿತಿ ಇರುವ ಮುತ್ಸದ್ಧಿ. ಸಿನಿಮಾದಿಂದ ಹಿಡಿದು ಭಗವದ್ಗೀತೆವರೆಗೆ, ಚಿಕ್ಕ ವಯಸ್ಸಿನಲ್ಲಿ ಕಲಿತ ಶ್ಲೋಕದಿಂದ ಹಿಡಿದು ನಿನ್ನೆ ಮೊನ್ನೆ ನೋಡಿದ ವೆಬ್‌ ಸೀರೀಸ್‌ ಕುರಿತು ಕೂಡ ಕಾಡುವ ಹಾಗೆ ಮಾತನಾಡುತ್ತಾರೆ. ಅವರು ಮಾತು ನಿಲ್ಲಿಸಿದಾಗಿನ ಒಂದರೆ ಕ್ಷಣ ಮೌನದಲ್ಲೂ ಅವರು ಹೇಳಲು ಬಾಕಿ ಉಳಿದಿದ್ದನ್ನು ಹೇಳಿರುತ್ತಾರೆ.

 ಅನಂತ್‌ ನಾಗ್‌ ಅವರು ಸಿಎಂ ಹುದ್ದೆಗೆ ಬಸವರಾಜ ಬೊಮ್ಮಾಯಿ ಅವರ ಹೆಸರು ಕೇಳಿಬರುವ ಒಂದು ದಿನ ಮೊದಲೇ ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಾರೆ ಅನ್ನುವುದನ್ನು ಮೊದಲೇ ಊಹಿಸಿದ್ದರು. ಊಹಿಸಿದ್ದಷ್ಟೇ ಅಲ್ಲ, ಮಾಧ್ಯಮದ ವ್ಯಕ್ತಿಯೊಬ್ಬರಿಗೆ ತಿಳಿಸಿದ್ದರು.

ನಿಮಗೆ ಹೇಗೆ ಗೊತ್ತಾಯಿತು ಎಂದು ಕೇಳಿದರೆ ಅನಂತ್‌ ನಾಗ್‌ ಅರ್ಥಗರ್ಭಿತವಾಗಿ ನಗುತ್ತಾರೆ. ‘ನನಗೇನೂ ಮೊದಲೇ ಗೊತ್ತಿರಲಿಲ್ಲ. ನನ್ನ ಕೇಳಿ ಯಾರೂ ಆಯ್ಕೆ ಮಾಡಿದ್ದೂ ಅಲ್ಲ. ನಾನು ಅರೆ ನಿದ್ರೆಯಲ್ಲಿ ಅತ್ತ ಕನಸೂ ಅಲ್ಲದ ಇತ್ತ ಎಚ್ಚರವೂ ಅಲ್ಲದ ಸ್ಥಿತಿಯಲ್ಲಿ ಇದ್ದೆ. ಆ ಹೊತ್ತಿಗೆ ಫೋನ್‌ ಬಂತು. ಮಾತನಾಡುತ್ತಾ ಅಂತಃಪ್ರಜ್ಞೆಗೆ ಏನೋ ಹೊಳೆಯಿತು. ಅದಕ್ಕೆ ಅವರ ಹೆಸರನ್ನು ಹೇಳಿದೆ ಹೊರತು ಬೇರೇನೂ ಇಲ್ಲ’ ಎನ್ನುತ್ತಾರೆ.

ಅನಂತ್‌ ನಾಗ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌ಆರ್‌ ಬೊಮ್ಮಾಯಿ ಅವರಿಗೆ ಆಪ್ತರಾಗಿದ್ದವರು. ಜನತಾ ಪರಿವಾರ ಕ್ರಿಯಾಶೀಲವಾಗಿದ್ದ ದಿನಗಳಲ್ಲಿ ಹಿರಿಯರ ಒಡನಾಟ ಇದ್ದವರು. ಅದನ್ನು ನೆನಪಿಸಿಕೊಳ್ಳುತ್ತಾ, ‘ಎಸ್‌ಆರ್‌ ಬೊಮ್ಮಾಯಿ ಅವರು ಎಂಟು ತಿಂಗಳು ಮುಖ್ಯಮಂತ್ರಿಯಾಗಿದ್ದರು. ನಂತರ ಶಾಸಕರು ಬೆಂಬಲ ವಾಪಸ್‌ ತೆಗೆದುಕೊಂಡಿದ್ದರಿಂದ ಮುಖ್ಯಮಂತ್ರಿ ಪದವಿ ಕಳೆದುಕೊಂಡಿದ್ದರು. ಅವರಿಗೆ ಅನ್ಯಾಯ ಆಗಿತ್ತು. ಅವರ ಮಗ ಬಸವರಾಜ ಬೊಮ್ಮಾಯಿ ಹಲವು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇನ್ನೂ 61 ವರ್ಷ ವಯಸ್ಸು. ಅವರು ಯಾಕೆ ಸಿಎಂ ಆಗಬಾರದು ಎಂದು ಯೋಚಿಸುತ್ತಿದ್ದೆ. ಅಲ್ಲಿಗೆ ತಂದೆಯವರಿಗಾದ ಅನ್ಯಾಯ ಸರಿ ಹೋಗಬಹುದು ಎಂದು ಬಯಸಿದ್ದೆ’ ಎನ್ನುತ್ತಾರೆ.

ಬೊಮ್ಮಾಯಿಗೆ ಸಿಎಂ ಹುದ್ದೆ : ನಿಜವಾಯ್ತು ಕಾಡಸಿದ್ದೇಶ್ವರ ಭವಿಷ್ಯ

    ಅನಂತ್‌ ನಾಗ್‌ ಅವರ ಕತೆ ಕೇಳುವುದೇ ಖುಷಿ. ಜನತಾ ಪರಿವಾರದ ಹಿರಿಯರ ಒಡನಾಟ ನೆನೆಸಿಕೊಂಡು ಅವರು ಹೇಳಿದ ಕತೆ ಹೀಗಿದೆ:

    ‘ಜನತಾ ಪರಿವಾರದ ರಾಮಕೃಷ್ಣ ಹೆಗ್ಡೆ, ಜೆಎಚ್‌ ಪಟೇಲ್‌, ಎಸ್‌ಆರ್‌ ಬೊಮ್ಮಾಯಿ, ದೇವೇಗೌಡ ಅವರ ಜೊತೆಗೆ ನಾನು ಓಡಾಡುತ್ತಿದ್ದೆ. ಎಲೆಕ್ಷನ್‌ ಸಂದರ್ಭದಲ್ಲಿ ಅವರು ಎಲ್ಲೆಲ್ಲಿ ಹೋಗುತ್ತಿದ್ದರೋ ಅಲ್ಲಿಗೆಲ್ಲಾ ಹೋಗುತ್ತಿದ್ದೆ. ಒಮ್ಮೆ ಎಸ್‌ಆರ್‌ ಬೊಮ್ಮಾಯಿ ಅವರು ನನ್ನನ್ನೂ ನನ್ನ ತಮ್ಮ ಶಂಕರನನ್ನೂ ತಿಂಡಿಗೆ ಕರೆದಿದ್ದರು. ಅವರ ಮನೆಗೆ ಹೋಗಿದ್ದೆವು. ನಂತರ ತಮ್ಮ ನನ್ನ ಬಿಟ್ಟು ದೂರಹೋದ. ನಾನು ರಾಜಕಾರಣದಲ್ಲಿದ್ದೆ. ಎಂಎಲ್‌ಸಿ ಕೂಡ ಆಗಿದ್ದೆ. ಒಮ್ಮೆ ಅವರ ಜೊತೆಗೆ ಓಡಾತ್ತಿದ್ದಾಗ ಒಂದು ಸಲ ಬೊಮ್ಮಾಯಿಯವರು ನನ್ನನ್ನು ಕರೆದು, ಬೆಳಿಗ್ಗೆ ತಿಂಡಿಗೆ ಮನೆಗೆ ಬಾ. ಏನೋ ಹೇಳುವುದಿದೆ ಎಂದರು. ನಾನು ಅವರ ಮನೆಗೆ ಹೋದೆ. ಅವತ್ತು ಅವರು, ನಿನಗೆ ಬೇರೆ ಎಲ್ಲಾ ಗೊತ್ತಿದೆ. ಆದರೆ ಸಂವಿಧಾನದಲ್ಲಿರುವ ಹಾಗೆ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಹೇಗೆ ಕೆಲಸ ಮಾಡುತ್ತದೆ, ಅದರ ಕಾರ್ಯಚಟುವಟಿಕೆಗಳೇನು ಎಂಬುದರ ಬಗ್ಗೆ ನೀನು ತಿಳಿದುಕೊಳ್ಳಲೇಬೇಕು ಎಂದರು. ಅವತ್ತು ಅವರು ನನಗೆ ಅರ್ಧ ಗಂಟೆ ಪಾಠ ಮಾಡಿದ್ದರು. ನನಗಿಂತ ಸುಮಾರು 12 ವರ್ಷ ಕಿರಿಯ ವಯಸ್ಸಿನ ಬಸವರಾಜ ಬೊಮ್ಮಾಯಿ ದೂರದಿಂದ ನಿಂತು ನಮ್ಮಿಬ್ಬರನ್ನು ನೋಡುತ್ತಿದ್ದ ನೆನಪು ನನಗೆ. ಇವತ್ತು ಅವರು ಮುಖ್ಯಮಂತ್ರಿ ಆಗಿದ್ದಾರೆ. ನನಗೆ ಎಸ್‌ಆರ್‌ ಬೊಮ್ಮಾಯಿ ತುಂಬಾ ನೆನಪಾಗುತ್ತಿದ್ದಾರೆ.’