ದೊಡ್ಡ ಭರವಸೆ, ಸಣ್ಣ ಪ್ರಮಾಣದಲ್ಲಿ ಭಯ, ಸಾಕಷ್ಟುಧೈರ್ಯದೊಂದಿಗೆ ಲಾಕ್‌ಡೌನ್ ಬಳಿಕ ಪ್ರೇಕ್ಷಕರ ಮುಂದೆ ಬಂದ ಸಿನಿಮಾ ‘ಆಕ್ಟ್ 1978’. ಈಗ ಚಿತ್ರತಂಡದಲ್ಲಿ ಭಯ ಇಲ್ಲ. ಯಶಸ್ಸಿನ ಸಂಭ್ರಮ ಮನೆ ಮಾಡಿದೆ. ಅದಕ್ಕೆ ಕಾರಣ ಚಿತ್ರ, 50 ಚಿತ್ರಮಂದಿರಗಳಲ್ಲಿ 25 ದಿನ ಯಶಸ್ವಿಯಾಗಿ ಪೂರೈಸಿ 50ನೇ ದಿನದತ್ತ ಮುಖ ಮಾಡಿದೆ.
ಈ ಸಂಭ್ರಮವನ್ನು ಹೇಳಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂತು. ನಿರ್ದೇಶಕ ಮಂಸೋರೆ, ನಿರ್ಮಾಪಕ ದೇವರಾಜ್ ಆರ್, ಚಿತ್ರದಲ್ಲಿ ನಟಿಸಿರುವ ಬಿ ಸುರೇಶ್, ದತ್ತಣ್ಣ, ಪ್ರಮೋದ್ ಶೆಟ್ಟಿ, ರಾಘು ಶಿವಮೊಗ್ಗ, ಅಶ್ವಿನ್ ಮುಂತಾದವರು ಹಾಜರಿದ್ದರು. ‘ಒಂದು ಸಣ್ಣ ಭಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡಿದ್ವಿ. ನಮ್ಮ ನಿರೀಕ್ಷೆಗೂ ಮೀರಿ ಚಿತ್ರವನ್ನು ಗೆಲ್ಲಿಸಿದ್ದಾರೆ. ಕೊರೋನಾ ಸಂಕಷ್ಟದಲ್ಲೂ 50 ಚಿತ್ರಮಂದಿರಗಳಲ್ಲಿ 25 ದಿನ ಯಶಸ್ವಿಯಾಗಿ ಪ್ರದರ್ಶನ ಆಗುವುದು ದೊಡ್ಡ ಸಾಧನೆ ಎನ್ನಬಹುದು. ಅಂಥದ್ದೊಂದು ದೊಡ್ಡ ಸಂಭ್ರಮ ನಮ್ಮ ಚಿತ್ರಕ್ಕೆ ಪ್ರೇಕ್ಷಕರು ನೀಡಿದ್ದಾರೆ’ ಎಂದರು ಮಂಸೋರೆ.
ಲಾಕ್‌ಡೌನ್ ನಂತರ ಬಂದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್, ವೀರೇಶ್ ಚಿತ್ರಮಂದಿರ ಹೌಸ್‌ಫುಲ್
ಕೆಆರ್‌ಜಿ ಸ್ಟುಡಿಯೋ ಸಿನಿಮಾ ಬಿಡುಗಡೆಗೆ ಬೆಂಬಲವಾಗಿ ನಿಂತಿದ್ದನ್ನು ನಿರ್ದೇಶಕರು ನೆನಪಿಸಿಕೊಂಡರು. ‘ಕಮರ್ಷಿಯಲ್ಲಾಗಿ ಗೆಲ್ಲುತ್ತೋ ಇಲ್ವೋ ಗೊತ್ತಿಲ್ಲ. ನಮ್ಮ ಸಂತೋಷಕ್ಕಾದರೂ ಈ ಚಿತ್ರ ನಿರ್ಮಿಸೋಣ ಎಂದು ‘ಆಕ್ಟ್ 1978’ ಚಿತ್ರವನ್ನು ಶುರು ಮಾಡಿದೆವು. ಈಗ 25ನೇ ದಿನ ಮುಗಿಸಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಸಿನಿಮಾ ನೋಡಿ ಪಿಡಿಒ ಮಹಿಳೆಯೊಬ್ಬರು ತಮಗಾದ ಅನ್ಯಾಯವನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಅವರ ಹೋರಾಟಕ್ಕೆ ನಮ್ಮ ಸಿನಿಮಾ ಕಾರಣವಾಯಿತು ಎಂಬುದು ಒಬ್ಬ ನಿರ್ಮಾಪಕನಾಗಿ ನನಗೆ ಖುಷಿ ಕೊಟ್ಟವಿಚಾರ. ಇಂಥ ಚಿತ್ರ ನಿರ್ಮಿಸಿದ್ದಕ್ಕೂ ಸಾರ್ಥಕ ಅನಿಸುತ್ತಿದೆ’ ಎಂದರು ದೇವರಾಜ್ ಆರ್.
ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಅದ್ಭುತವಾದ ಅಭಿನಯ ನೀಡಿದವರು ಬಿ ಸುರೇಶ್. ‘ಮಾತೇ ಇಲ್ಲದ ಪಾತ್ರ ನನ್ನದು. ಆದರೂ ಎಲ್ಲರೂ ಮೆಚ್ಚಿದ್ದಾರೆ ಎಂದರೆ ಅದಕ್ಕೆ ಕಾರಣ ಆ ಪಾತ್ರವನ್ನು ಸೃಷ್ಟಿಸಿದ ನಿರ್ದೇಶಕರ ಪ್ರತಿಭೆ ಸಿಕ್ಕ ಜಯ. ಅಪರೂಪದ ಕತೆ ಬರೆದು, ಎಲ್ಲರ ಮನಸ್ಸಿಗೆ ತಾಗುವ ಸಿನಿಮಾ ಮಾಡಿದ್ದೇವೆ. ನನ್ನ ತಾಯಿಗೂ ಈ ಸಿನಿಮಾ ತೋರಿಸಿ, ಅವರೂ ಅಳುತ್ತ ಎಮೋಷನ್ ಆದರು. ಅಲ್ಲಿಗೆ ನಾನು ಒಂದು ಒಳ್ಳೆಯ ಚಿತ್ರದಲ್ಲಿ ನಟಿಸಿದ್ದೇನೆಂಬ ಭರವಸೆ ಹೆಚ್ಚಾಯಿತು’ ಎಂದರು ಸುರೇಶ್. ‘ಎರಡನೇ ದಿನ ನಾನು ಈ ಸಿನಿಮಾ ನೋಡಿದೆ. ತುಂಬಾ ವಿಮರ್ಶಾತ್ಮಕವಾಗಿ ಸಿನಿಮಾ ನೋಡುವ ನನಗೆ ಈ ಚಿತ್ರ ಹಿಡಿಸಿತು. ಈ ಚಿತ್ರ ನೋಡುವಂತೆ ಹಲವರಿಗೆ ಹೇಳಿದ್ದೂ ಇದೆ. ವೈಯಕ್ತಿಕವಾಗಿಯೂ ತುಂಬಾ ಖುಷಿ ಕೊಟ್ಟಸಿನಿಮಾ ಇದು’ ಎಂದರು ಹಿರಿಯ ನಟ ದತ್ತಣ್ಣ.
ಕನ್ನಡ ಗೌರವ ಹೆಚ್ಚಿಸುವ ಸಿನಿಮಾ ಆಕ್ಟ್ 1978: ಹಂಸಲೇಖ
ಸಂಚಾರಿ ವಿಜಯ್ ಅವರು ಪ್ರೇಕ್ಷಕರು ಕೊಟ್ಟಈ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಿದರು. ‘ಮುಂದೆ ಈ ಸಿನಿಮಾ ಯಶಸ್ವಿಯಾಗಿ 50, 75, 150 ದಿನ ಪ್ರದರ್ಶನ ಆಗಲಿ’ ಎಂದು ಚಿತ್ರಕ್ಕೆ ಹಾರೈಸಿದ್ದು ನಟ ಪ್ರಮೋದ್ ಶೆಟ್ಟಿ. ಟಿ.ಕೆ ದಯಾನಂದ್, ನಟಿ ಶರಣ್ಯ, ರಾಘು ಶಿವಮೊಗ್ಗ, ವೀರೇಂದ್ರ ಮಲ್ಲಣ್ಣ ಅವರು ಚಿತ್ರದ ಯಶಸ್ಸಿನ ಕುರಿತು ಹೇಳಿಕೊಂಡರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 18, 2020, 10:00 AM IST