ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನ|  ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಎಲೆಕ್ಟ್ರಾನಿಕ್‌ ಉಪಕರಣ ಜಪ್ತಿ| ಕಳೆದ ಮೂರು ದಿನಗಳಿಂದ ನಿರಂತರವಾಗಿ ಬೆಳಗಿನ ಪ್ರದರ್ಶನಕ್ಕೆ ಚಿತ್ರ ವೀಕ್ಷಣೆಗೆ ಬರುತ್ತಿದ್ದ ಆರೋಪಿ| ಹಣಕ್ಕಾಗಿ ಈ ಕೃತ್ಯ ಎಸಗಿದ್ದ ಬಂಧಿತ ಆರೋಪಿ| 

ಬೆಂಗಳೂರು(ಮಾ.14): ಖ್ಯಾತ ನಟ ದರ್ಶನ್‌ ಅಭಿನಯದ ‘ರಾಬರ್ಟ್‌’ ಸಿನಿಮಾವನ್ನು ಪೈರಸಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕನಕಪುರದ ಕಲ್ಲನಕುಪ್ಪ ನಿವಾಸಿ ಮಧು (28) ಬಂಧಿತ ಆರೋಪಿಯಾಗಿದ್ದಾನೆ.

ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ರಿಲೀಸ್ ಆದ ಒಂದೇ ದಿನಕ್ಕೆ ಫ್ರೀ ಡೌನ್‌ಲೋಡ್: ರಾಬರ್ಟ್‌ಗೆ ಪೈರಸಿ ಕಾಟ

ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರ ಮಾ.11ರಂದು ಕರ್ನಾಟಕ ಹಾಗೂ ನೆರೆರಾಜ್ಯಗಳಲ್ಲಿ ಬಿಡುಗಡೆಯಾಗಿದೆ. ಜೆ.ಪಿ. ನಗರದಲ್ಲಿರುವ ಸಿದ್ದೇಶ್ವರ ಚಿತ್ರಮಂದಿರದಲ್ಲೂ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆರೋಪಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಬೆಳಗಿನ ಪ್ರದರ್ಶನಕ್ಕೆ ಚಿತ್ರ ವೀಕ್ಷಣೆಗೆ ಬರುತ್ತಿದ್ದ. ಅನುಮಾನಗೊಂಡ ಚಿತ್ರಮಂದಿರದ ಸಿಬ್ಬಂದಿ ಆರೋಪಿಯನ್ನು ಪರಿಶೀಲನೆ ನಡೆಸಿದಾಗ ಚಿತ್ರ ಸೆರೆ ಹಿಡಿಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಚಿತ್ರಮಂದಿರದ ಸಿಬ್ಬಂದಿ ನಿರ್ಮಾಪಕರಿಗೆ ಮಾಹಿತಿ ನೀಡಿದ್ದರು. ನಿರ್ಮಾಪಕ ಉಮಾಪತಿ ಅವರು ಕೊಟ್ಟದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಫುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಹಣಕ್ಕಾಗಿ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.