ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್‌ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್‌ ಕಶ್ಯಪ್‌ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ ಮುಖ್ಯ ಪಾತ್ರದಲ್ಲಿದ್ದಾರೆ.

ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿ ಮೂಡಿಬರುತ್ತಿರುವ ‘ಹರ್ಮುಖ್‌’ ಸಿನಿಮಾ ಇಂದು (ಜೂ.25) ಕಾಶ್ಮೀರದಲ್ಲಿ ಪ್ರೀಮಿಯರ್‌ ಆಗುತ್ತಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್‌ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್‌ ಕಶ್ಯಪ್‌ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ ಮುಖ್ಯ ಪಾತ್ರದಲ್ಲಿದ್ದಾರೆ. ಕನ್ನಡಿಗ ಸೋನಲ್‌ ನಾಯಕನಾಗಿದ್ದಾರೆ. ಜಮ್ಮುವಿನ ನಟಿ ಇಶಾ ಶರ್ಮಾ ನಾಯಕಿ.

ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ ನಾಗಾಭರಣ, ಈವರೆಗೆ ಆಗಿರದ ಹೊಸಬಗೆಯ ಪ್ರಯೋಗವಿದು. ನೈಜ ಘಟನೆಯನ್ನೂ ಸೇರಿಸಿ ಹಿಂದೂ ಮುಸ್ಲಿಂ ಗೆಳೆಯರ ಬಾಂಧವ್ಯವನ್ನು ಸೊಗಸಾಗಿ ತೋರಿಸಿದ್ದಾರೆ. ನಾನು ಅಮರನಾಥ್ ಎಂಬ ಆರ್ಕಿಯಲಾಜಿಕಲ್‌ ಇಲಾಖೆ ಉದ್ಯೋಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆಯಶ್‌ ಆರಿಫ್‌ ನನ್ನ ಕಶ್ಮೀರಿ ಮುಸ್ಲಿಂ ಗೆಳೆಯನ ಪಾತ್ರದಲ್ಲಿ ನಟಿಸಿದ್ದಾರೆ.

ಕಾಶ್ಮೀರಿ ಭಾಷೆಯ ಹೆಸರಾಂತ ಕಲಾವಿದರು ಚಿತ್ರದಲ್ಲಿದ್ದಾರೆ. ಹರ್ಮುಖ್‌ ಕಣಿವೆ ಸಿನಿಮಾದುದ್ದಕ್ಕೂ ಪಾತ್ರದಂತೆ ಬರುತ್ತದೆ. ಇಲ್ಲಿ ಕೊರೆಯುವ ಚಳಿಯಲ್ಲಿ ರಾತ್ರಿ 1 ಗಂಟೆಯವರೆಗೆ ಶೂಟಿಂಗ್‌ ಮಾಡಿದ್ದು ಅದ್ಭುತ ಅನುಭವ ಎಂದಿದ್ದಾರೆ. ನಿರ್ದೇಶಕ ಅಶೋಕ್‌ ಕಶ್ಯಪ್, ‘ಸೆಪ್ಟೆಂಬರ್‌ ವೇಳೆಗೆ ಕನ್ನಡದಲ್ಲಿ ಬಿಡುಗಡೆ ಮಾಡುತ್ತೇವೆ. ಕರ್ನಾಟಕದಲ್ಲಿ ತೆರೆಕಂಡ ಬಳಿಕ ಕಾಶ್ಮೀರದಲ್ಲಿ ರಿಲೀಸ್‌ ಆಗುತ್ತದೆ. ಕನ್ನಡದಲ್ಲಿ ಈ ಸಿನಿಮಾ ಶೀರ್ಷಿಕೆ ಬದಲಾಗಲಿದೆ. ನಾನು ದಶಕದ ಕಾಲ ಕಾಶ್ಮೀರದ ದೂರದರ್ಶನದಲ್ಲಿ ಕೆಲಸ ಮಾಡುತ್ತಿದ್ದೆ.

ಹೀಗಾಗಿ ನನಗೆ ಕಾಶ್ಮೀರದಲ್ಲಿ ಅನೇಕ ಸ್ನೇಹಿತರಿದ್ದಾರೆ. ನಾವೆಲ್ಲ ಸೇರಿ ಈ ಸಿನಿಮಾ ಮಾಡಿದ್ದೇವೆ. ಕಾಶ್ಮೀರದಲ್ಲಿ ಇಂಥಾ ಸಿನಿಮಾಗಳಿಗೆ ಉತ್ತಮ ಸಬ್ಸಿಡಿ ಸಿಗುತ್ತದೆ. ಕರ್ನಾಟಕದಿಂದಲೂ ಸಿಗುತ್ತಿದೆ. ಜೊತೆಗೆ ನಾವು ನಾಲ್ವರು ಸ್ನೇಹಿತರು ಬಂಡವಾಳ ಹೂಡಿದ್ದೇವೆ. ಈ ಸಿನಿಮಾದಲ್ಲಿ ಗಡಿ ಭಾಷೆಗಳ ಚೌಕಟ್ಟನ್ನು ಮೀರಿದ ಸ್ನೇಹದ ಕಥೆ ಹೇಳುತ್ತಿದ್ದೇನೆ. ತಂದೆ, ಮಕ್ಕಳ ಕಥೆಯೂ ಹೌದು. ಒಂದೊಳ್ಳೆ ಅನುಭವ ಕೊಟ್ಟ ಚಿತ್ರವಿದು’ ಎಂದಿದ್ದಾರೆ.