ನನ್ನ ಕಣ್ಣುಗಳನ್ನು ಉಪೇಂದ್ರ ಮೆಚ್ಚಿದ್ದರು: A ಸಿನಿಮಾ ನಟಿ ಚಾಂದಿನಿ
ಎ ಚಿತ್ರದಲ್ಲೊಂದು ಡೈಲಾಗ್ ಇದೆ, ಗಾಡ್ ಈಸ್ ಗ್ರೇಟ್ ಅಂತ. ನನ್ನ ಪಾಲಿಗೂ ಆ ಡೈಲಾಗ್ ಸತ್ಯ. ಇಲ್ಲದಿದ್ದರೆ ಎಲ್ಲೋ ಇದ್ದ ನಾನು ಚಿತ್ರರಂಗಕ್ಕೆ ಬರುವ ಸಾಧ್ಯತೆ ಬಹಳ ಕಡಿಮೆ ಇತ್ತು. ಆಗ ನನ್ನ ಸ್ಕೂಲು ಮುಗಿದಿತ್ತು.
ಒಂದು ಸಿನಿಮಾ ಜೀವನವನ್ನು ಬದಲಿಸಬಹುದು ಎಂಬುದಕ್ಕೆ ಉದಾಹರಣೆ ಕಲಾವಿದೆ ಚಾಂದಿನಿ. ಅಮೆರಿಕಾದ ನ್ಯೂಯಾರ್ಕಲ್ಲಿ ಇದ್ದವರನ್ನು ಒಪ್ಪಿಸಿ ಕರೆಸಿ ‘ಎ’ ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದು ಉಪೇಂದ್ರ. ಆ ಒಂದು ಸಿನಿಮಾ ಚಾಂದಿನಿಯವರನ್ನು ಇನ್ನೂ ಜನಮಾನಸದಲ್ಲಿ ಇರಿಸಿದೆ ಎಂದರೆ ತಪ್ಪೇನಿಲ್ಲ. ಎ ಸಿನಿಮಾ ಇವತ್ತು ಮರುಬಿಡುಗಡೆ ಆಗುತ್ತಿದೆ. ಈ ಹೊತ್ತಲ್ಲಿ ಚಾಂದಿನಿ ಎ ಸಿನಿಮಾವನ್ನು, ಚಿತ್ರೀಕರಣಗೊಂಡ ಸಂದರ್ಭವನ್ನು, ಸಿನಿಮಾ ತಂಡವನ್ನು ಪ್ರೀತಿಯಿಂದ ನೆನಪಿಸಿಕೊಂಡಿದ್ದಾರೆ. ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. ಕನ್ನಡಿಗರ ಪ್ರೀತಿಯ ಚಾಂದಿನಿಯ ಮಾತುಗಳನ್ನು ಓದಿಕೊಳ್ಳಿ.
- ಎ ಚಿತ್ರದಲ್ಲೊಂದು ಡೈಲಾಗ್ ಇದೆ, ಗಾಡ್ ಈಸ್ ಗ್ರೇಟ್ ಅಂತ. ನನ್ನ ಪಾಲಿಗೂ ಆ ಡೈಲಾಗ್ ಸತ್ಯ. ಇಲ್ಲದಿದ್ದರೆ ಎಲ್ಲೋ ಇದ್ದ ನಾನು ಚಿತ್ರರಂಗಕ್ಕೆ ಬರುವ ಸಾಧ್ಯತೆ ಬಹಳ ಕಡಿಮೆ ಇತ್ತು. ಆಗ ನನ್ನ ಸ್ಕೂಲು ಮುಗಿದಿತ್ತು. ಅದೊಂದು ದಿನ ಮಧ್ಯರಾತ್ರಿ ನಾನು ಮುಂದೇನು ಮಾಡಬೇಕು ಎಂಬ ಯೋಚನೆಯಲ್ಲಿ ಪ್ರಾರ್ಥನೆಯಲ್ಲಿದ್ದೆ. ಆಗ ಫೋನ್ ರಿಂಗ್ ಆಯಿತು. ಅಮೆರಿಕಾದಲ್ಲಿ ಆಗ ರಾತ್ರಿ 1 ಗಂಟೆ ಆಗಿದ್ದಿರಬಹುದು. ಭಾರತದಲ್ಲಿ ಹಗಲು. ಫೋನಲ್ಲಿ ಆ ಕಡೆಯಿಂದ ಸಿನಿಮಾ ತಂಡದವರು. ಆ ಒಂದು ಫೋನ್ ಕಾಲ್ ನನ್ನ ಬದುಕಿನ ದಾರಿಯನ್ನೇ ಬದಲಿಸಿಬಿಟ್ಟಿತು.
ಪ್ರಗತಿ ಜೊತೆ ರಿಷಬ್ ಬ್ಯೂಟಿಫುಲ್ ವೆಕೇಷನ್: ಹೋಯ್ ಶೆಟ್ರೆ ಕಾಂತಾರ ಅಪ್‌ಡೇಟ್ ಕೊಡಿ ಎಂದ ಫ್ಯಾನ್ಸ್!
- ನನಗೆ ಸಿನಿಮಾ ಹಿನ್ನೆಲೆ ಇರಲಿಲ್ಲ. ಅದ್ಯಾರೋ ಒಬ್ಬರು ಫೋಟೋಗ್ರಾಫರ್ ನನ್ನ ಫೋಟೋ ತೆಗೆದು ಬೆಂಗಳೂರಿನ ಫೋಟೋಗ್ರಾಫರ್‌ಗೆ ಕಳುಹಿಸಿಕೊಟ್ಟಿದ್ದರು. ಆಗ ತಾನೇ ಉಪೇಂದ್ರ ಎ ಸಿನಿಮಾ ಶುರು ಮಾಡಿ ಅದರ ನಾಯಕಿಗಾಗಿ ಹುಡುಕುತ್ತಿದ್ದರು. ಅವರಿಗೆ ಎಷ್ಟು ಫೋಟೋ ನೋಡಿದರೂ ಸಮಾಧಾನ ಆಗುತ್ತಿರಲಿಲ್ಲ. 200-300 ನಟಿಯರನ್ನು ರಿಜೆಕ್ಟ್ ಮಾಡಿದ್ದರು ಅಂತ ಆಮೇಲೆ ಗೊತ್ತಾಯಿತು. ಅಂಥಾ ಹೊತ್ತಲ್ಲಿ ಯಾರೋ ಒಬ್ಬರು ನನ್ನ ಫೋಟೋವನ್ನು ಉಪೇಂದ್ರ ಅವರಿಗೆ ಕೊಟ್ಟಿದ್ದಾರೆ. ನನ್ನ ಫೋಟೋ ನೋಡಿ ಉಪೇಂದ್ರ ಇವಳೇ ನನ್ನ ಎ ಸಿನಿಮಾದ ನಾಯಕಿ ಅಂತ ಹೇಳಿಬಿಟ್ಟಿದ್ದಾರೆ. ಅಲ್ಲಿಂದ ಶುರುವಾಯಿತು ನನಗಾಗಿ ಹುಡುಕಾಟ. ಹೇಗೋ ನಂಬರ್ ಕಲೆಕ್ಟ್ ಮಾಡಿ ಫೋನ್ ಮಾಡಿದ್ದರು.
- ನನ್ನ ಅಮ್ಮ ಭಾರತಕ್ಕೆ ಬಂದು ಉಪೇಂದ್ರ ಜೊತೆ ಮಾತನಾಡಿ, ತಂಡದ ಬಗ್ಗೆ ವಿಚಾರಿಸಿ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ ವಾಪಸ್ ಬಂದು ನನಗೆ ಹೇಳಿದರು, ‘ನಿರ್ದೇಶಕ ಉಪೇಂದ್ರ ನೀನೇ ಬೇಕು ಅಂತ ಕೂತಿದ್ದಾರೆ. ಆ್ಯಕ್ಟ್ ಮಾಡಬಹುದು’.
- ನಾನು ಒಬ್ಬಳೇ ಅಮೆರಿಕಾದಿಂದ ಬಂದೆ. ನಾನು ಬರುವಾಗ ಸಿನಿಮಾದ ಮುಹೂರ್ತ ಆಗಿತ್ತು. ಮಣಿರತ್ನಂ ಅವರೇ ಬಂದು ತಂಡಕ್ಕೆ ಹಾರೈಸಿದ್ದರು. ನಾನು ಸುಸ್ತಾಗಿ ಬಂದೆ. ಆಗಷ್ಟೇ ಸ್ಕೂಲು ಮುಗಿಸಿದ್ದ ಹುಡುಗಿ ನಾನು. ಸಣ್ಣ ಹುಡುಗಿ ಥರ ಕಾಣುತ್ತಿದ್ದೆ. ನನ್ನನ್ನು ನೋಡಿ ಇಡೀ ತಂಡಕ್ಕೆ ಒಂಥರಾ ಅನ್ನಿಸಿತು. ಉಪೇಂದ್ರರಿಗೂ ಕನ್ಫ್ಯೂಸ್ ಆಯಿತು ಅನ್ನಿಸುತ್ತದೆ. ಆದರೂ ತಕ್ಷಣ ಪತ್ರಿಕೆಯವರಿಗೆ ಕೊಡಬೇಕು ಅಂತ ಫೋಟೋ ತೆಗೆಸಿಕೊಳ್ಳಲು ಹೇಳಿದರು. ನಾನು ಸಿದ್ಧಳಾದೆ. ಆಗ ಯಾರೋ ಒಬ್ಬರು ಗ್ಲಿಸರಿನ್ ತಂದರು. ಯಾಕೆ ಅಂತ ಕೇಳಿದೆ. ಇದನ್ನು ಹಾಕಿಕೊಂಡರೆ ಕಣ್ಣೀರು ಬರುತ್ತದೆ ಎಂದರು. ಅದಕ್ಕೆ ಗ್ಲಿಸರಿನ್ ಯಾಕೆ ಬೇಕು ಎಂದು ಸುಸ್ತಾಗಿದ್ದಕ್ಕೋ ಏನೋ ಕಣ್ಣಲ್ಲಿ ನೀರು ತಂದುಕೊಂಡೆ. ಅದನ್ನು ನೋಡಿ ತಂಡಕ್ಕೆ ಅಚ್ಚರಿ ಆಯಿತು ಅನ್ನಿಸುತ್ತದೆ.
- ನನಗೆ ನಟನೆ ಗೊತ್ತಿರಲಿಲ್ಲ. ಸಿನಿಮಾ ಬಗ್ಗೆಯೂ ಗೊತ್ತಿರಲಿಲ್ಲ. ನಟಿಯಾಗುವ ಆಸೆಯೂ ಇರಲಿಲ್ಲ. ಆದರೂ ಉಪೇಂದ್ರ ಮಾತ್ರ ಹಠದಿಂದ ನಾನೇ ಎ ಸಿನಿಮಾದ ನಾಯಕಿ ಎಂದು ಕೂತಿದ್ದರು. ಚಾಂದಿನಿ ಎಂಬ ನನ್ನ ಹೆಸರನ್ನೇ ಪಾತ್ರಕ್ಕೂ ಇಟ್ಟರು. ಮೊದಲ ದಿನ ಶೂಟಿಂಗು. ಮಾರಿಮುತ್ತು ಅವರು ನನ್ನ ಕೂದಲು ಹಿಡಿದು ಎಳೆಯುವ ಸೀನ್. ಆ ಸೀನ್ ಮುಗಿದಾಗ ಎಲ್ಲರಿಗೂ ನನ್ನ ಮೇಲೆ ನಂಬಿಕೆ ಬಂದಿತ್ತು. ಅಲ್ಲಿಂದ ನಂತರ ಎಲ್ಲರೂ ನನಗೆ ಕೊಡುತ್ತಿದ್ದ ಮರ್ಯಾದೆಯೇ ಬದಲಾಯಿತು.- ಉಪೇಂದ್ರ ಮುಂದೊಂದು ದಿನ ನನಗೆ ಹೇಳಿದ್ದು ನೆನಪಿದೆ. ನಾನು ನಿಮ್ಮನ್ನು ಆಯ್ಕೆ ಮಾಡಿದ್ದು ನಿಮ್ಮ ಕಣ್ಣುಗಳನ್ನು ನೋಡಿ. ಎ ಸಿನಿಮಾದ ಶೇ.80 ಭಾಗವನ್ನು ನೋಡಿ ಪ್ರೇಕ್ಷಕರು ನಾಯಕಿಯನ್ನು ದ್ವೇಷಿಸುತ್ತಾರೆ. ಕೊನೆಯ ಐದರಿಂದ ಹತ್ತು ನಿಮಿಷಗಳು ಮಾತ್ರ ಆಕೆಯ ಮೇಲಿನ ಭಾವನೆ ಬದಲಾಗುತ್ತದೆ. ಅವಳು ಅವನನ್ನು ಇಷ್ಟಪಟ್ಟಿದ್ದು ತಿಳಿಯುತ್ತದೆ. ಆ ಹತ್ತು ನಿಮಿಷಗಳು ನನಗೆ ಮುಖ್ಯ. ಆಕೆ ತುಂಬಾ ಪಾಪ ಅನ್ನಿಸಬೇಕು. ಆ ಹತ್ತು ನಿಮಿಷ ಸರಿಯಾಗಿ ಬರದೇ ಇದ್ದರೆ ಈ ಸಿನಿಮಾ ನಿಲ್ಲುವುದಿಲ್ಲ. ಅದಕ್ಕಾಗಿ ನಂಗೆ ನೀವೇ ನಾಯಕಿಯಾಗಿ ಬೇಕಿತ್ತು.
- ಉಪೇಂದ್ರ ಎ ಸಿನಿಮಾದ ಸಂದರ್ಭದಲ್ಲಿ 24 ಗಂಟೆ ಕೆಲಸ ಮಾಡುತ್ತಿದ್ದರು. ಆಗ ಒಂದು ಹಾಡಿಗೆ ಅವರಿಗೂ ನನಗೂ ನಾನೇ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದೆ. ತಂಡ ಅದನ್ನು ಒಪ್ಪಿಕೊಂಡಿತ್ತು. ಇಡೀ ತಂಡ ನನ್ನನ್ನು ಪ್ರೀತಿಯಿಂದ ನೋಡಿಕೊಂಡಿತ್ತು. ಅದಕ್ಕಾಗಿ ನಾನು ಉಪೇಂದ್ರ, ಮಂಜುನಾಥ್ ಮತ್ತು ತಂಡಕ್ಕೆ ಋಣಿ.
- ನಾನು ಸಿನಿಮಾ ಮುಗಿಸಿ ವಾಪಸ್ ಅಮೆರಿಕಾಗೆ ಹೋದೆ. ಸಿನಿಮಾ ಬಿಡುಗಡೆ ಆಗಿ ಆರು ತಿಂಗಳ ನಂತರ ಬೆಂಗಳೂರಿಗೆ ಬಂದರೆ ನನಗೆ ತರಕಾರಿ ತರುವುದಕ್ಕೆ ಹೋಗಲೂ ಆಗಲಿಲ್ಲ. ಅಷ್ಟೊಂದು ಜನ ಹತ್ತಿರ ಬರುತ್ತಿದ್ದರು. ಎಲ್ಲರೂ ಪ್ರೀತಿ ತೋರುತ್ತಿದ್ದರು. ಅಷ್ಟು ಅಗಾಧವಾದ ಪ್ರೀತಿ ಸಿಗುತ್ತದೆ ಅಂತ ನಾನು ನೆನೆಸಿಕೊಂಡೇ ಇರಲಿಲ್ಲ. ಅವತ್ತಿನಿಂದ ಇವತ್ತಿನವರೆಗೂ ಕನ್ನಡದ ಜನ ನನಗೆ ಅಷ್ಟೇ ಪ್ರೀತಿ ತೋರಿಸಿದ್ದಾರೆ. ಅದಕ್ಕಾಗಿ ನಾನು ಕನ್ನಡ ಜನತೆಗೆ ಸದಾ ಕೃತಜ್ಞಳು.
- ಆಮೇಲೆ ನಾನು ಡಿಗ್ರಿ ಸೇರಿದೆ. ಸಾಕಷ್ಟು ಆಫರ್‌ಗಳು ಬಂದರೂ ಕೆಲವು ಮಾತ್ರ ಒಪ್ಪಿಕೊಂಡೆ. ಅದ್ಭುತವಾದ ಪಾತ್ರ ಸಿಕ್ಕರೆ ಮಾತ್ರ ಮಾಡುತ್ತೇನೆ ಎಂದುಕೊಂಡೆ. ಗುಜರಾತಿ, ಭೋಜ್‌ಪುರಿ, ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡೆ. ವಿತರಣೆಯಲ್ಲಿ ತೊಡಗಿಸಿಕೊಂಡೆ. ಮಣಿಪಾಲ ಯೂನಿವರ್ಸಿಟಿಯಲ್ಲಿ ಫಿಲಂ ವಿಭಾಗದ ಎಚ್‌ಓಡಿ ಆಗಿ ಸುಮಾರು 800 ಮಂದಿ ವಿದ್ಯಾರ್ಥಿಗಳಿಗೆ ಸಿನಿಮಾ ಜಗತ್ತಿನ ದಾರಿ ತೋರಲು ನೆರವಾಗಿದ್ದೇನೆ ಎಂಬ ಖುಷಿ ಇದೆ.
- ನಾನು ಪ್ರಾರ್ಥನೆಯನ್ನು ನಂಬುತ್ತೇನೆ. ದೈವಿಕತ್ವವನ್ನು ನಂಬುತ್ತೇನೆ. ಎ ಸಿನಿಮಾದ ಪ್ರಯಾಣ ಕೂಡ ಒಂದು ದೈವಿಕ ಪ್ರಯಾಣವೇ ಇರಬೇಕು. ಇಲ್ಲದಿದ್ದರೆ ನಾನು ಇಲ್ಲಿಯವರೆಗೂ ಜನರ ಮನಸ್ಸಲ್ಲಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ.
ಬೆಡ್ ರೂಂನಲ್ಲಿ ಬರ್ತ್‌ಡೇ ಆಚರಿಸಿಕೊಂಡ ಪುಷ್ಪಾ ನಟಿ: ಇದ್ಯಾವ ಸೀಮೆ ಸೆಲೆಬ್ರೇಷನ್ ಎಂದ ಫ್ಯಾನ್ಸ್!
- ಉಪೇಂದ್ರ ಇಡೀ ದೇಶವೇ ಹೆಮ್ಮೆ ಪಡುವ ನಿರ್ದೇಶಕ. ಅವರ ಎ ಸಿನಿಮಾ ನೋಡಲು ದೇಶದ ದೊಡ್ಡ ದೊಡ್ಡ ಸ್ಟಾರ್‌ಗಳೆಲ್ಲಾ ಬಂದಿದ್ದರು. ಈ ಸಿನಿಮಾ ಜಪಾನ್‌ನಲ್ಲೂ ಪ್ರದರ್ಶನ ಆಗಿತ್ತು. ಅವರು ವಿಷನರಿ. ಅವರ ಯುಐ ಚಿತ್ರದಲ್ಲಿ ಏನು ಮಾಡಿರಬಹುದು ಎಂಬ ಕುತೂಹಲ ನನಗಿದೆ. ಕನ್ನಡದಲ್ಲಿ ಒಳ್ಳೆಯ ಕತೆ, ಪಾತ್ರ ಸಿಕ್ಕರೆ ಮತ್ತೆ ನಟಿಸಬೇಕು ಎಂಬ ಆಸೆ ನನಗಿದೆ. ಒಳ್ಳೆಯ ಸಮಯಕ್ಕಾಗಿ ಕಾಯುತ್ತಿದ್ದೇನೆ.