ವಿ ರವಿಚಂದ್ರನ್‌ ನಟನೆಯ ‘ದೃಶ್ಯ 2’ ಸೇರಿ ಆರು ಸಿನಿಮಾಗಳು ಇಂದು ಬಿಡುಗಡೆಯ ಭಾಗ್ಯ ಪಡೆಯಲಿವೆ. ಸ್ಟಾರ್‌ ನಟರ ಚಿತ್ರಗಳು, ಪರಭಾಷೆಯ ಸಿನಿಮಾ ಅಬ್ಬರಗಳಿದ್ದಾಗ ಸಣ್ಣ ಬಜೆಟ್‌ನ ಚಿತ್ರಗಳು ಥೇಟರಿಗೆ ಬರಲು ಕೊಂಚ ಅನುಮಾನಿಸುತ್ತವೆ. ಆದರೆ ಈ ವಾರ ಪೈಪೋಟಿ ಕಡಿಮೆ ಇರುವ ಕಾರಣಕ್ಕೋ ಏನೋ ಒಟ್ಟು ಆರು ಸಿನಿಮಾಗಳು ಒಂದೇ ದಿನ ಬೆಳ್ಳಿ ಪರದೆಗೆ ಲಗ್ಗೆ ಇಟ್ಟಿವೆ.

1. ದೃಶ್ಯ 2

ವಿ ರವಿಚಂದ್ರನ್‌ ನಟನೆಯ ‘ದೃಶ್ಯ 2’ ಫ್ಯಾಮಿಲಿ ಥ್ರಿಲ್ಲರ್‌. ದೃಶ್ಯ ಸಿನಿಮಾ ತೆರೆಕಂಡು ಏಳು ವರ್ಷಗಳಾದ ಬಳಿಕ ಅದರ ಸೀಕ್ವಲ್‌ ಇದೀಗ ಬಿಡುಗಡೆಯಾಗುತ್ತಿದೆ. ಮಲಯಾಳಂನ ‘ದೃಶ್ಯಂ 2’ ನ ರಿಮೇಕ್‌ ಇದಾದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರೀಕರಿಸಿರುವ ಕಾರಣ ಹೊಸ ಚಿತ್ರದ್ದೇ ಅನುಭವ ನೀಡಲು ಸಜ್ಜಾಗಿದೆ. ಕೊಡಗಿನ ಅದ್ಭುತ ಪ್ರಕೃತಿಯ ಸೊಬಗಿನಲ್ಲಿ ರಾಜೇಂದ್ರ ಪೊನ್ನಪ್ಪ ಮತ್ತು ಕುಟುಂಬದ ಕತೆ ರೀ ಓಪನ್‌ ಆಗಲಿದೆ. ರಾಜ್ಯಾದ್ಯಂತ ಸುಮಾರು 142 ಥೇಟರ್‌ಗಳ 560 ಸ್ಕ್ರೀನ್‌ಗಳಲ್ಲಿ ‘ದೃಶ್ಯ 2’ ಬಿಡುಗಡೆಯಾಗಲಿದೆ. ಪಿ ವಾಸು ಈ ಚಿತ್ರದ ನಿರ್ದೇಶಕರು. ನಿರ್ಮಾಣದ ಹೊಣೆ ಹೊತ್ತಿರುವುದು ಈ 4 ಎಂಟರ್‌ಟೈನ್‌ಮೆಂಟ್‌ ಸಂಸ್ಥೆ. ಅನಂತ್‌ನಾಗ್‌, ನವ್ಯಾ ನಾಯರ್‌, ಆರೋಹಿ, ಉನ್ನತಿ, ಆಶಾ ಶರತ್‌ ಸೇರಿದಂತೆ ದೊಡ್ಡ ತಾರಾಗಣವಿದೆ. ಸಾಧುಕೋಕಿಲಾ ಕಾಮಿಡಿ ದೃಶ್ಯಗಳೂ ಚಿತ್ರದಲ್ಲಿವೆ.

Drishya 2 ಹುಟ್ಟುಹಾಕಿದ ಪ್ರಶ್ನೆಗಳು, ಹಿರಿಯ ನಟ ಅನಂಗ್‌ನಾಗ್ ಲೇಖನ!

2. ಮಡ್ಡಿ

ಕನ್ನಡ, ಮಲಯಾಳಂ ಸೇರಿ ಆರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ. ದೇಶಾದ್ಯಂತ ಆರು ಭಾಷೆಗಳಲ್ಲಿ 400 ಥಿಯೇಟರ್‌ಗಳಲ್ಲಿ ಇಂದು ರಿಲೀಸ್‌ ಆಗಲಿದೆ. ಮಡ್‌ ರೇಸ್‌ ಕುರಿತಾದ ಕತೆ ಈ ಚಿತ್ರದ್ದು. ರವಿ ಬಸ್ರೂರು ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಡಾ ಪ್ರಗ್ಬಲ್‌ ನಿರ್ದೇಶಕರು. ಪ್ರೇಮಕೃಷ್ಣ ದಾಸ್‌ ನಿರ್ಮಾಪಕರು. ಯವನ್‌ ಕೃಷ್ಣ, ರಿಧಾನ್‌ ಕೃಷ್ಣ, ಅನುಷಾ ಸುರೇಶ್‌, ಅಮಿತ್‌ ಶಿವದಾಸ್‌ ನಟಿಸಿದ್ದಾರೆ.

3. ಎರಡು ಸಾವಿರದ ಇಪ್ಪತ್ತು ಗೋಪಿಕೆಯರು

ಶೀರ್ಷಿಕೆಗೂ ಕತೆಗೂ ನೇರ ಸಂಬಂಧ ಇಲ್ಲದಿದ್ದರೂ ಇದೊಂದು ಪ್ರೇಮ ಕತೆ, ಹೆಣ್ಣಿನ ಕಥೆ ಎಂದಿದ್ದಾರೆ ನಿರ್ದೇಶಕ ನಾರಾಯಣ ಸ್ವಾಮಿ. ಐಪಿಎಸ್‌ ಅಧಿಕಾರಿ ಕುಚ್ಚಣ್ಣ ಶ್ರೀನಿವಾಸ್‌ ನಿರ್ಮಾಣದ ಈ ಚಿತ್ರದಲ್ಲಿ ಬಾಲಾಜಿ ಶರ್ಮಾ ಹಾಗೂ ಪ್ರಿಯಾಂಕಾ ಚಿಂಚೋಳಿ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

Film Review: ಮದಗಜ

4. ಕನ್ಸೀಲಿಯಂ

ಐಟಿ ಉದ್ಯೋಗಿಗಳು ನಿರ್ಮಿಸುತ್ತಿರುವ ಚಿತ್ರ ಕನ್ಸೀಲಿಯಂ. ಇದು ಸೈನ್ಸ್‌ ಫಿಕ್ಷನ್‌ ಸೈಕಲಾಜಿಕಲ್‌ ಥ್ರಿಲ್ಲರ್‌. ಡಿಎನ್‌ಎ, ಸ್ಪೇಸ್‌ ಟೆಕ್ನಾಲಜಿ ಇತ್ಯಾದಿ ಅಂಶಗಳನ್ನಿಟ್ಟು ಸಿನಿಮಾ ಮಾಡಲಾಗಿದೆ. ಈ ಹಿಂದೆ ಇದನ್ನು ಓಟಿಟಿಯಲ್ಲಿ ಬಿಡುಗಡೆ ಮಾಡೋದಾಗಿ ಚಿತ್ರತಂಡ ಹೇಳಿತ್ತಾದರೂ ಇದೀಗ ಮನಸ್ಸು ಬದಲಿಸಿ ಚಿತ್ರಮಂದಿರಕ್ಕೆ ಬಂದಿದೆ. ಸಮಥ್‌ರ್‍ ಈ ಚಿತ್ರದ ನಿರ್ದೇಶಕ ಹಾಗೂ ನಾಯಕ. ಇವರ ಪತ್ನಿ ರೇಶ್ಮಾ ರಾವ್‌ ಚಿತ್ರದ ಕಾರ್ಯಕಾರಿ ನಿರ್ಮಾಪಕಿ.

5. ಬ್ರೇಕ್‌ ಫೇಲ್ಯೂರ್‌

ಅದಿತ್‌ ನವೀನ್‌ ಮೊದಲ ಬಾರಿಗೆ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಚಿತ್ರವಿದು. ಸಾಕ್ಷ್ಯ ಚಿತ್ರ ಚಿತ್ರೀಕರಣಕ್ಕಾಗಿ ಕಾಡಿಗೆ ಹೋಗುವ ಕಾಲೇಜು ವಿದ್ಯಾರ್ಥಿಗಳು ಅಲ್ಲಿ ವಿಲಕ್ಷಣ ವ್ಯಕ್ತಿಯೊಬ್ಬನ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಕಥೆ ಚಿತ್ರದ್ದು. 30ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿದು ಬಿಡುಗಡೆ ಆಗಲಿದೆ. ನವೀನ್‌, ಸುರೇಶ್‌, ಕೃತಿ ಗೌಡ, ಅಂಜಲಿ ನಟಿಸಿದ್ದಾರೆ.

Film Review: ಸಖತ್‌

6. ಶ್ರೀ ಜಗನ್ನಾಥ ದಾಸರು

ಹೆಸರೇ ಹೇಳುವಂತೆ ಇದು ಭಕ್ತಿ ಪ್ರಧಾನ ಚಿತ್ರ. ಮಧುಸೂದನ್‌ ಹವಾಲ್ದಾರ್‌ ಈ ಚಿತ್ರದ ನಿರ್ದೇಶಕರು. ಶರತ್‌ ಜೋಶಿ ಅವರು ಜಗನ್ನಾಥ ದಾಸರ ಪಾತ್ರದಲ್ಲಿ ನಟಿಸಿದ್ದಾರೆ. ತ್ರಿವಿಕ್ರಮ ಜೋಶಿ, ಪ್ರಭಂಜನ್‌ ದೇಶಪಾಂಡೆ ತಾರಾಗಣದಲ್ಲಿದ್ದಾರೆ.