ನೂರಾರು ಕೋಟಿ ವ್ಯವಹಾರ ಮಾಡುವ ಕನ್ನಡ ಚಿತ್ರರಂಗದಲ್ಲಿ ಗೆದ್ದವರೆಷ್ಟು? ಸೋತವರು ಯಾರು? ಲೆಕ್ಕ ತೆಗೆದರೆ ಬೇಸರವಾಗುತ್ತದೆ. ಸಿನಿಮಾ ಎಂಬ ಉತ್ವನ್ನವನ್ನು ಎಲ್ಲಿ ಮಾರಬೇಕು. ಎಲ್ಲಿ ಮಾರಿದರೆ ಖಚಿತ ಲಾಭ ಸಿಗುತ್ತದೆ ಎಂಬ ಐಡಿಯಾ ಇಲ್ಲದ ಕಾಲವಿದು. ಪರಿಹಾರ ಗೊತ್ತಿಲ್ಲದ ಸಮಸ್ಯೆಗಳ ಪಟ್ಟಿ ಇಲ್ಲಿದೆ.  

ಕಳೆದ ವರ್ಷ ಸುಮಾರು 200 ಸಿನಿಮಾಗಳು ಬಿಡುಗಡೆಯಾಗಿದ್ದವು. ಅದರಲ್ಲಿ ಬಿಸಿನೆಸ್‌ ಆಗಿದ್ದು ಸುಮಾರು 50 ಸಿನಿಮಾಗಳಿಗೆ. ಆ 50ರಲ್ಲಿ 25 ಸಿನಿಮಾಗಳ ವ್ಯಾಪಾರ ಲಾಭದ್ದು. ಉಳಿದ 25 ಚಿತ್ರಕ್ಕೆ ಅಲ್ಲಿಗಲ್ಲಿಗೆ ಸರಿಹೋಗಿರುವ ವ್ಯಾಪಾರ. ಉಳಿದ 150 ಸಿನಿಮಾಗಳ ನೋವನ್ನು ಕೇಳುವುದಕ್ಕೆ ಯಾರಿಗೂ ಪುರುಸೊತ್ತಿಲ್ಲ.

ಈ ಅಂದಾಜು ಲೆಕ್ಕಾಚಾರ ಚಿತ್ರರಂಗದ ಸದ್ಯದ ಪರಿಸ್ಥಿತಿಗೆ ಹಿಡಿದ ಕನ್ನಡಿ. ವರ್ಷಕ್ಕೆ ಸಾವಿರಗಟ್ಟಲೆ ವಹಿವಾಟು ನಡೆಸುವ ಉದ್ಯಮ ಕಷ್ಟದಲ್ಲಿದೆ. ಆದರೆ ಪರಿಹಾರ ಯಾವುದು, ಈ ಕುರಿತು ಯಾರು ಜಾಗೃತರಾಗಬೇಕು ಎಂಬ ಪ್ರಶ್ನೆಗೆ ಸದ್ಯ ಮೌನವಷ್ಟೇ ಉತ್ತರ.

ವಾರಕ್ಕೆ 5-6-8 ಸಿನಿಮಾಗಳು ಬಿಡುಗಡೆಯಾಗುವ ಸಮಯ ಮತ್ತೆ ಬಂದಿದೆ. ಆದರೆ ಈ ಎಲ್ಲಾ ಸಿನಿಮಾಗಳಿಗೆ ಯಶಸ್ಸು ಸಿಗುತ್ತದೆಯೇ? ಬಹುತೇಕ ಇಲ್ಲ. ಜನಮಾನಸದಲ್ಲಿ ಛಾಪು ಮೂಡಿಸಿದ ಸಿನಿಮಾಗಳಿಗೆ ಜನ ಬರುತ್ತಿದ್ದಾರೆಯೇ ಹೊರತು ಸಣ್ಣ ಸಣ್ಣ ಸಿನಿಮಾಗಳ ಕಡೆಗೆ ಯಾರೂ ಬರುತ್ತಿಲ್ಲ. ಅದು ಕಟು ವಾಸ್ತವ. ಹಾಗಾದರೆ ದಾರಿ ಯಾವುದು ಎಂದು ಕೇಳಿದಾಗ ಓಟಿಟಿ, ಸ್ಯಾಟಲೈಟ್‌ ಎಂಬ ಸುಲಭದ ಉತ್ತರ ಬರುತ್ತದೆ. ದುರದೃಷ್ಟವಶಾತ್‌ ಈಗ ಓಟಿಟಿಗಳೂ ಕನ್ನಡ ಚಿತ್ರರಂಗಕ್ಕೆ ಆಗಿಬರುತ್ತಿಲ್ಲ. ನೆಟ್‌ಫ್ಲಿಕ್ಸ್‌ ಕನ್ನಡ ಕಂಟೆಂಟ್‌ ಖರೀದಿ ಮಾಡುವುದಿಲ್ಲ. ಅಮೆಜಾನ್‌ ಪ್ರೈಮ್‌ ದೊಡ್ಡ ದೊಡ್ಡ ಸಿನಿಮಾಗಳನ್ನು ಬಿಟ್ಟರೆ ಸಣ್ಣ ಸಿನಿಮಾಗಳ ಖರೀದಿಸುವುದಿಲ್ಲ. ಪೇ ಪರ್‌ ವ್ಯೂ ಅವಕಾಶ ಕೊಡುತ್ತದೆಯಾದರೂ 1000 ಸಿನಿಮಾ ಹೋದರೆ ಆಯ್ಕೆ ಮಾಡುವುದು ಒಂದೋ ಎರಡೋ ಮಾತ್ರ. ಇನ್ನುಳಿದಂತೆ ಜೀ5, ವೂಟ್‌ಗಳು ಸದ್ಯಕ್ಕೆ ಸಿನಿಮಾ ಖರೀದಿಗೆ ಹೆಚ್ಚು ಗಮನ ಕೊಡುತ್ತಿಲ್ಲ ಅನ್ನುವುದು ಬಲ್ಲವರ ಹೇಳಿಕೆ.

ಸ್ಯಾಟಲೈಟ್‌ ಹಕ್ಕಿನ ಕಡೆಗೆ ಆಸೆಯಿಂದ ನೋಡಿದರೆ ಅಲ್ಲೂ ಕಾದಿರುವುದು ನಿರಾಸೆ. ಕಲರ್ಸ್‌ ಕನ್ನಡ ಇತ್ತೀಚೆಗೆ ಖರೀದಿ ಮಾಡಿರುವ ಸಿನಿಮಾ ಕಬ್ಜ ಒಂದೇ ಎನ್ನಲಾಗಿದೆ. ಝೀ ಸಂಸ್ಥೆಯೂ ಸಿನಿಮಾ ಖರೀದಿಯಲ್ಲಿ ಹಿಂದೆಯೇ ಉಳಿದಿದೆ. ಸ್ಟಾರ್‌ ಸುವರ್ಣದವರು ಸಣ್ಣ ಸಿನಿಮಾ ಖರೀದಿ ಮಾಡುತ್ತಾರಾದರೂ ಅವರಿಗೆ ಅವರಿಗೆ ವರ್ಷಕ್ಕೆ ಬೇಕಿರುವುದು 48 ಸಿನಿಮಾಗಳು. ಅದರಲ್ಲಿ ಅರ್ಧ ಡಬ್ಬಿಂಗ್‌ನಿಂದ ಬಂದಿರುವ ದೊಡ್ಡ ಸಿನಿಮಾಗಳು ಸಿಗುತ್ತವೆ. ದೊಡ್ಡ ಸಿನಿಮಾಗಳು ಮಿಕ್ಕ ಲೆಕ್ಕ ಭರ್ತಿ ಮಾಡುತ್ತವೆ. ಸಣ್ಣವರು ಕಾದು ಕಾದು ಕಣ್ಣು ಒದ್ದೆ ಮಾಡಿಕೊಳ್ಳುವುದಷ್ಟೇ.

ದಕ್ಷಿಣದ ಈ ಬಿಗ್‌ ಬಜೆಟ್‌ ಸಿನಿಮಾಗಳು ಫ್ಲಾಫ್‌, ಕಲೆಕ್ಷನ್‌ ಮಾಡಿದ್ದಿಷ್ಟೇ!

ಅದಕ್ಕೂ ಕಾರಣ ಇದೆ. ಓಟಿಟಿ, ಸ್ಯಾಟಲೈಟ್‌ನವರಿಗೂ ಕಷ್ಟಇದೆ. ಇತ್ತೀಚೆಗೆ ಕನ್ನಡದ ಟಿವಿ ಚಾಲನ್‌ ಒಂದು ಸಿನಿಮಾವನ್ನು ರು.4 ಕೋಟಿ ಕೊಟ್ಟು ಖರೀದಿ ಮಾಡಿತು. ಆದರೆ ಅವರಿಗೆ ಮೊದಲ ಪ್ರದರ್ಶನದಲ್ಲಿ ಜಾಹೀರಾತು ಹುಟ್ಟಿದ್ದು 14 ಲಕ್ಷ ರೂಪಾಯಿ ಮಾತ್ರ ಎನ್ನುತ್ತವೆ ಮೂಲಗಳು.

ವಿತರಕರೂ ಕಷ್ಟದಲ್ಲಿದ್ದಾರೆ, ಥಿಯೇಟರ್‌ ಮಾಲೀಕರೂ ತೊಂದರೆಯಲ್ಲಿದ್ದಾರೆ. ಕರೆಂಟ್‌ ಬಿಲ್‌ ಕಟ್ಟುವುದಕ್ಕೂ ಕಷ್ಟಉಂಟಾಗಿದೆ. ಹಾಗಿದ್ದರೂ ವಾರಕ್ಕೆ ಏಳೆಂಟು ಸಿನಿಮಾಗಳು, ವರ್ಷಕ್ಕೆ 200 ಸಿನಿಮಾ ಯಾಕೆ ಬರುತ್ತವೆ? ಸಿನಿಮಾ ಒಂದು ಮಾಯೆ. ಎಲ್ಲರೂ ಅದರ ಹಿಂದೆ ಬಿದ್ದಿದ್ದಾರೆ. ನಿರ್ಮಾಪಕರಿಗೆ ಒಪ್ಪಿಸುವಾಗ ಅನೇಕ ಲಾಭದ ದಾರಿಗಳನ್ನೂ ಹೇಳಿರುತ್ತಾರೆ. ಸಿನಿಮಾ ಮುಗಿದು ವ್ಯಾಪಾರಕ್ಕೆ ಬರುವ ಹೊತ್ತಿಗೆ ಆ ದಾರಿಗಳೆಲ್ಲಾ ಮುಚ್ಚಿರುತ್ತವೆ ಎನ್ನುತ್ತಾರೆ ನೊಂದ ನಿರ್ಮಾಪಕರೊಬ್ಬರು.

ಇದಕ್ಕೆ ಕೆಲವು ಅಪವಾದಗಳಿವೆ. ಲೇಟೆಸ್ಟ್‌ ಉದಾಹರಣೆ ಕೊಡುವುದಾದರೆ ಬಿಎಸ್‌ ಲಿಂಗದೇವರು ನಿರ್ದೇಶನದ ‘ವಿರಾಟಪುರದ ವಿರಾಗಿ’. ಅವರು ಆ ಸಿನಿಮಾವನ್ನು ಟಾರ್ಗೆಟ್‌ ಮಾರ್ಕೆಟಿಂಗ್‌ ಮಾಡಿದರು. ಅದರಿಂದಾಗಿ ಆ ಸಿನಿಮಾ ಬಿಡುಗಡೆಗೂ ಮೊದಲೇ ಬಿಸಿನೆಸ್‌ ವಿಚಾರದಲ್ಲಿ ಗೆದ್ದಿತ್ತು.

High Budget Cinema: ಭಾರತೀಯ ಸಿನಿಮಾ ಇತಿಹಾಸದ ಅತೀ ದೊಡ್ಡ ಬಜೆಟ್‌ ಸಿನಿಮಾಗಳಿವು

ಕಡೆಗೆ ಇದಕ್ಕೆ ಪರಿಹಾರ ಏನು ಎಂದು ನೋಡಿದರೆ ಎರಡು ವಿಚಾರ ಗಮನಿಸಬಹುದು. ಒಂದನೇಯದು ಎಕ್ಟ್ರಾರ್ಡಿನರಿ ಕಂಟೆಂಟ್‌. ಇನ್ನೊಂದು ಆಯಾಯ ಸಿನಿಮಾಗೆ ತಕ್ಕ ಪ್ರಮೋಷನ್‌ ಮಾಡಬೇಕು. ಈ ಎರಡನ್ನೂ ಆಯಾಯ ತಂಡಗಳೇ ಕಂಡುಕೊಳ್ಳಬೇಕು. ಆ ತಂಡಗಳಿಗೆ ದಾರಿದೀಪವಾಗುವ ಕೆಲಸವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಜಳಿ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ ಮಾಡಬಲ್ಲುದೇ?