ಫೆ.11ರಂದು ಬಿಡುಗಡೆಯಾಗುತ್ತಿರುವ ನಿರೀಕ್ಷಿತ ಚಿತ್ರ ‘ಓಲ್ಡ್‌ಮಾಂಕ್’ನ ನಿರ್ದೇಶಕ ಶ್ರೀನಿ ಮತ್ತು ಅವರ ತಂಡ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಲು ವಿಭಿನ್ನ, ವಿನೂತನ ಯೋಜನೆಯನ್ನು ಮಾಡಿದ್ದಾರೆ. ರಾಜ್ಯದ 70 ಕಡೆಗಳಲ್ಲಿ ಅನಾಗ್ಲಿಫ್ ಎಂದು ಕರೆಯಲ್ಪಡುವ 3ಡಿ ಸ್ಟಾಂಡಿಯನ್ನು ಇಟ್ಟಿದ್ದಾರೆ.
ಫೆ.11ರಂದು ಬಿಡುಗಡೆಯಾಗುತ್ತಿರುವ ನಿರೀಕ್ಷಿತ ಚಿತ್ರ ‘ಓಲ್ಡ್‌ಮಾಂಕ್’ನ (Old Monk) ನಿರ್ದೇಶಕ ಶ್ರೀನಿ (Srini) ಮತ್ತು ಅವರ ತಂಡ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಲು ವಿಭಿನ್ನ, ವಿನೂತನ ಯೋಜನೆಯನ್ನು ಮಾಡಿದ್ದಾರೆ. ರಾಜ್ಯದ 70 ಕಡೆಗಳಲ್ಲಿ ಅನಾಗ್ಲಿಫ್ ಎಂದು ಕರೆಯಲ್ಪಡುವ 3ಡಿ ಸ್ಟಾಂಡಿಯನ್ನು ಇಟ್ಟಿದ್ದಾರೆ. ಕೆಂಪು ಮತ್ತು ನೀಲಿ ಬಣ್ಣದ 3ಡಿ ಗ್ಲಾಸಿನ ಮೂಲಕ ಈ ಪೋಸ್ಟರ್ ನೋಡಿದ ಎಲ್ಲಾ ಪ್ರೇಕ್ಷಕರು ಈ ಹೊಸ ತಂತ್ರಕ್ಕೆ ಮರುಳಾಗಿದ್ದಾರೆ.
ಇದೊಂದು 3ಡಿ ಪೋಸ್ಟರ್ ಆಗಿದ್ದು, ಒಂದು ಕಡೆಯಿಂದ ನೋಡಿದರೆ ನಾರದ ಪಾತ್ರ, ಇನ್ನೊಂದು ಕಡೆಯಿಂದ ನೋಡಿದರೆ ನಾಯಕನ ಪಾತ್ರ ಕಾಣಿಸುತ್ತದೆ. ಈ ಎರಡು ಪಾತ್ರಗಳು ಚಿತ್ರದ ಪ್ರಮುಖ ಪಾತ್ರಗಳಾಗಿದ್ದು, ಈ ಪಾತ್ರಗಳನ್ನು ತೋರಿಸುವ ಮೂಲಕ ಓಲ್ಡ್‌ಮಾಂಕ್ ಅನ್ನು ಜನರಿಗೆ ಹತ್ತಿರವಾಗಿಸುವ ಪ್ರಯತ್ನ ಚಿತ್ರತಂಡದ್ದು. ವಿಶೇಷ ಎಂದರೆ ಸಿನಿಮಾವೊಂದರ ಪ್ರಚಾರಕ್ಕೆ ಈ ಅನಾಗ್ಲಿಫ್ 3ಡಿ ಪೋಸ್ಟರ್ ಅನ್ನು ಬಳಸುತ್ತಿರುವುದು ಇದೇ ಮೊದಲಬಾರಿಗೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರು ಮತ್ತು ಚಿತ್ರರಂಗ ಶ್ರೀನಿಯವರ ಈ ವಿಶಿಷ್ಟ ಪ್ರಯತ್ನವನ್ನು ಮೆಚ್ಚುಗೆಯಿಂದ ನೋಡುತ್ತಿದೆ.
Old Monk Movie: ಫೆಬ್ರವರಿಗೆ ಶ್ರೀನಿ-ಅದಿತಿ ಪ್ರಭುದೇವ ಜೋಡಿಯ ಸಿನಿಮಾ ರಿಲೀಸ್
ಈ ಕುರಿತು ಶ್ರೀನಿ, ‘ವಿಭಿನ್ನವಾಗಿ ನಮ್ಮ ಸಿನಿಮಾವನ್ನು ಜನರಿಗೆ ತಲುಪಿಸುವ ಉದ್ದೇಶ ಇತ್ತು. ನಮ್ಮ ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳಿವೆ. ಅದನ್ನೇ ಬೇರೆ ರೀತಿಯಲ್ಲಿ ಜನರಿಗೆ ತೋರಿಸಬೇಕು ಅನ್ನಿಸಿ ಈ ಪ್ರಯತ್ನ ಮಾಡಿದ್ದೇವೆ. ಜನ ಮೆಚ್ಚಿಕೊಂಡು 3ಡಿ ಗ್ಲಾಸಲ್ಲಿ ಈ ಪೋಸ್ಟರ್ ನೋಡಿ ಖುಷಿ ಪಡುತ್ತಿದ್ದಾರೆ. ಅದನ್ನು ನೋಡಿ ನಮ್ಮ ವಿಶ್ವಾಸ ಹೆಚ್ಚಾಗಿದೆ’ ಎನ್ನುತ್ತಾರೆ.
ಭಾರತದ ಪ್ರಮುಖ ವಿತರಣಾ ಸಂಸ್ಥೆ ಅಭಿಜಿತ್ ಎಂಟರ್‌ಪ್ರೈಸಸ್‌ನಿಂದ ವಿತರಣೆ: ಶ್ರೀನಿ, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಫೆ.11ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಬಾಲಿವುಡ್‌ನ ಪ್ರಮುಖ ಸಿನಿಮಾಗಳನ್ನು ವಿತರಣೆ ಮಾಡಿದ ಖ್ಯಾತಿ ಹೊಂದಿರುವ ಅಭಿಜಿತ್ ಎಂಟರ್‌ಪ್ರೈಸಸ್ ಸಂಸ್ಥೆ ‘ಓಲ್ಡ್‌ಮಾಂಕ್’ ಸಿನಿಮಾ ವಿತರಣೆ ಮಾಡುತ್ತಿದೆ. ಈ ಮೂಲಕ ಅಭಿಜಿತ್ ಎಂಟರ್‌ಪ್ರೈಸಸ್ ವಿತರಣೆ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾ ಎಂಬ ಕೀರ್ತಿಗೆ ‘ಓಲ್ಡ್‌ಮಾಂಕ್’ ಪಾತ್ರವಾಗಿದೆ.
ಚಿತ್ರದಲ್ಲಿ ಓಲ್ಡ್ ಮಾಂಕ್ ಅಂದರೆ ನಾರದ. ಪ್ರೀತಿಸಿ ಮದುವೆಯಾಗುವ ಶಾಪಕ್ಕೆ ತುತ್ತಾಗಿ ಭೂಲೋಕಕ್ಕೆ ಬರುವ ನಾರದ ಏನೆಲ್ಲಾ ರಂಪಾಟ ಮಾಡಿದ ಅನ್ನುವುದು ಚಿತ್ರದ ಕತೆಯ ಒನ್‌ಲೈನ್. ಇತ್ತೀಚೆಗೆ ಚಿತ್ರದ 'ಗಿಚ್ಚ ಗಿಲಿಗಿಲಿ' (Giccha Gili Gili) ಹೆಸರಿನ ಹಾಡು ಬಿಡುಗಡೆಯಾಗಿದೆ. ಶ್ರೀನಿ ಹಾಗೂ ಚಿತ್ರದ ನಾಯಕಿ ಅದಿತಿ ಪ್ರಭುದೇವ (Aditi Prabhudeva) ಈ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ. ಸೌರಭ್ ಮತ್ತು ವೈಭವ್ ಸಂಗೀತವಿರುವ ಈ ಚಿತ್ರದ ಹಾಡಿಗೆ ಮುದಕಣ್ಣ ಮೊರಬ (Mudakanna Moraba) ಸಾಹಿತ್ಯದ ಜೊತೆ ಹಾಡನ್ನು ಹಾಡಿದ್ದಾರೆ. ಎ.ಹರ್ಷ ನೃತ್ಯ ಸಂಯೋಜನೆ ಈ ಹಾಡಿಗಿದೆ.
'ಓಲ್ಡ್ ಮಾಂಕ್' ಟ್ರೇಲರ್ ಬಿಡುಗಡೆ ಮಾಡಿದ ಪುನೀತ್ ರಾಜ್‌ಕುಮಾರ್!
ಹಿರಿಯ ನಟ ರಾಜೇಶ್, ಡಿಂಗ್ರಿ ನಾಗರಾಜ್, ಎಸ್ ನಾರಾಯಣ್. ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್, ಸುನೀಲ್ ರಾವ್, ಸುಜಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರದೀಪ್ ಶರ್ಮಾ ಚಿತ್ರದ ನಿರ್ಮಾಪಕರು. ಭರತ್ ಪರಶುರಾಮ್ ಛಾಯಾಗ್ರಹಣ, ಸೌರಭ್-ವೈಭವ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಹಲವು ವರ್ಷಗಳ ನಂತರ ಹಿರಿಯ ನಟ ರಾಜೇಶ್ ಬಣ್ಣ ಹಚ್ಚಿದ್ದಾರೆ.
