ಸರ್ಕಾರ ನೀಡಿರುವ ಚಿತ್ರಮಂದಿರಗಳಲ್ಲಿ ಶೇ.50 ಸೀಟು ಭರ್ತಿ ಆದೇಶದಿಂದಾಗಿ ಕನ್ನಡ ಚಿತ್ರರಂಗ ಅತಂತ್ರವಾಗಿದೆ. ಬಿಡುಗಡೆ ದಿನಾಂಕ ಘೋಷಿಸಿಕೊಂಡಿದ್ದ ಚಿತ್ರತಂಡಗಳು ಬಿಡುಗಡೆಯನ್ನು ಮುಂದಕ್ಕೆ ಹಾಕಿವೆ.

ಸಿನಿಮಾಗಳೆಲ್ಲಾ ರಿಲೀಸಾಗದೆ ಉಳಿದು, ಮುಂದೆ ವಾರಕ್ಕೆ ಹತ್ತಾರು ಸಿನಿಮಾಗಳು ಬಿಡುಗಡೆಯಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಈಗಾಗಲೇ ಇನ್ನೂರಕ್ಕೂ ಹೆಚ್ಚು ಸಿನಿಮಾಗಳು ಸೆನ್ಸಾರ್ ಆಗಿದ್ದು, ಆ ಎಲ್ಲಾ ಚಿತ್ರತಂಡಗಳು ಆತಂಕದಲ್ಲೇ ದಿನ ಕಳೆಯುತ್ತಿವೆ.

ಕೊರೋನಾ ವ್ಯಾಕ್ಸೀನ್ ಫಸ್ಟ್ ಡೋಸ್ ಪಡೆದ ಪುನೀತ್ ರಾಜ್‌ಕುಮಾರ್

ಮೂಲಗಳ ಪ್ರಕಾರ ಮೇ ತಿಂಗಳಾಂತ್ಯದವರೆಗೂ ಶೇ.50 ಸೀಟು ಭರ್ತಿ ನಿಯಮ ಜಾರಿಯಲ್ಲಿದೆ ಎನ್ನಲಾಗಿದೆ. ಈ ಕಾರಣ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಕೂಡ ಮುಂದಕ್ಕೆ ಹೋಗಲಿದೆ ಎನ್ನಲಾಗಿದೆ. ಮೊದಲೇ ನಿರ್ಧರಿಸಿದಂತೆ ಆ ಸಿನಿಮಾ ಏ.29ರಂದು ಬಿಡುಗಡೆ ಆಗಬೇಕಿತ್ತು.

ದುನಿಯಾ ವಿಜಯ್ ನಿರ್ದೇಶನ, ನಟನೆಯ ‘ಸಲಗ’ ಚಿತ್ರ ಏ.16ರಂದು ಬಿಡುಗಡೆಯಾಗಬೇಕಿತ್ತು. ಈ ಚಿತ್ರದ ರಿಲೀಸ್ ಕೂಡ ಮುಂದಕ್ಕೆ ಹೋಗಿದೆ. ‘ಚಿತ್ರಮಂದಿರಗಳಲ್ಲಿ ಶೇ.100 ಸೀಟು ಭರ್ತಿಗೆ ಅವಕಾಶ ನೀಡುವವರೆಗೂ ಯಾವ ಕಾರಣಕ್ಕೂ ನನ್ನ ಸಿನಿಮಾ ಬಿಡುಗಡೆ ಮಾಡುವುದಿಲ್ಲ’ ಎಂದು ಸಲಗ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹೇಳಿದ್ದಾರೆ.

ಬಾಡಿ ಶೇಮಿಂಗ್ ವಿರುದ್ಧ ದನಿ ಎತ್ತಿದ ಶೀತಲ್ ಶೆಟ್ಟಿ

ಈ ಎರಡು ಸ್ಟಾರ್ ಸಿನಿಮಾಗಳು ಸೇರಿ ಸುಮಾರು 15 ಸಿನಿಮಾಗಳು ಅತಂತ್ರ ಸ್ಥಿತಿಯಲ್ಲಿವೆ. ಸುಮಂತ್ ಶೈಲೇಂದ್ರ ನಟನೆಯ ‘ಗೋವಿಂದ ಗೋವಿಂದ’, ಸೂರಜ್ ಗೌಡ ಅಭಿನಯದ ‘ನಿನ್ನ ಸನಿಹಕೆ’ ಸಿನಿಮಾಗಳು ತಮ್ಮ ಸಿನಿಮಾಗಳ ರಿಲೀಸ್ ದಿನಾಂಕ ಘೋಷಿಸಿಕೊಂಡು ಪ್ರಚಾರ ಕೂಡ ಆರಂಭಿಸಿದ್ದವು. ಆದರೆ ಈಗ ಸರ್ಕಾರದ ನಿಯಮದಿಂದಾಗಿ ಬಿಡುಗಡೆ ಮುಂದಕ್ಕೆ ಹಾಕಿಕೊಂಡಿವೆ.

ರಾಬರ್ಟ್, ಯುವರತ್ನ ಸಿನಿಮಾಗಳಿಗೆ ಜನ ತೋರಿಸಿದ ಪ್ರೀತಿಯನ್ನು ನೋಡಿ ಕನ್ನಡ ಚಿತ್ರರಂಗ ಹರ್ಷಗೊಂಡು ಅನೇಕ ಸಿನಿಮಾಗಳು ರಿಲೀಸ್ ಡೇಟ್ ಘೋಷಿಸಿಕೊಂಡಿದ್ದವು. ಆದರೆ ಈಗ ಶೇ.೫೦ ಆದೇಶ ಎಲ್ಲರನ್ನೂ ಕಂಗೆಡಿಸಿದೆ. ಈ ಕುರಿತು ನಿರ್ಮಾಪಕರ ಸಂಘ ಚಿತ್ರಮಂದಿರಗಳಲ್ಲಿ ಈಗಿರುವ ಶೇ.100 ಸೀಟು ಭರ್ತಿ ಅವಕಾಶ ಮುಂದುವರಿಸಬೇಕು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರಿಗೆ ಮನವಿ ಮಾಡಿದೆ.

ಮಾಜಿ ಪ್ರೇಯಸಿ ಬರ್ತ್‌ಡೇಗೆ ಸ್ಪೆಷಲ್ ವಿಡಿಯೋ ಪೋಸ್ಟ್ ಮಾಡಿ ವಿಶ್ ಮಾಡಿದ ರಕ್ಷಿತ್ ಶೆಟ್ಟಿ

ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ‘ನಾವು ಸರ್ಕಾರದ ಎಲ್ಲಾ ನಿಯಮಗಳನ್ನೂ ಪಾಲಿಸುತ್ತೇವೆ. ಈವರೆಗೆ ಚಿತ್ರಮಂದಿರದಿಂದ ಕೋವಿಡ್ ಹರಡಿದ ಉದಾಹರಣೆಗಳಿಲ್ಲ. ಜೊತೆಗೆ ಬೇರೆ ರಾಜ್ಯಗಳಲ್ಲೂ ಶೇ.50 ಸೀಟು ಭರ್ತಿ ಆದೇಶ ನೀಡಲಾಗಿಲ್ಲ. ಆದರೆ ನಮ್ಮಲ್ಲಿ ಮಾತ್ರ ಇಂಥದ್ದೊಂದು ಮಲತಾಯಿ ಧೋರಣೆ ಹೇರಲು ಹೊರಟಿರುವುದು ಸರಿಯಲ್ಲ. ಈ ಬಗ್ಗೆ ಸುಧಾಕರ್ ಅವರ ಬಳಿ ಚರ್ಚಿಸಲಾಗಿದೆ. ಅವರು, ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ಮಾಡಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಯವರನ್ನೂ ಭೇಟಿ ನೀಡಿ ಹೌಸ್‌ಫುಲ್ ಪ್ರದರ್ಶನಕ್ಕೆ ಮನವಿ ಮಾಡುತ್ತೇವೆ. ಈ ಮನವಿಯ ಹೊರತಾಗಿ ಸರ್ಕಾರ ಶೇ.೫೦ ಸೀಟು ಭರ್ತಿಗೆ ಆದೇಶಿಸಿದರೆ, ಕಲಾವಿದರು, ನಿರ್ಮಾಪಕರು, ನಿರ್ದೇಶಕರೆಲ್ಲ ಒಟ್ಟಾಗಿ ಇದರ ವಿರುದ್ಧ ದನಿ ಎತ್ತುತ್ತೇವೆ’ ಎಂದು ಹೇಳಿದ್ದಾರೆ.

ಮನವಿ ಸಲ್ಲಿಸುವ ವೇಳೆ ನಿರ್ಮಾಪಕರ ಸಂಘದಿಂದ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಎಂಜಿ ರಾಮಮೂರ್ತಿ, ಗೌರವ ಕಾರ್ಯದರ್ಶಿ ಕೆ ಮಂಜು, ರಮೇಶ್ ಯಾದವ್ ಇದ್ದರು.