ವರ್ಕ್-ಲೈಫ್ ಬ್ಯಾಲೆನ್ಸ್ ವಿಷಯಕ್ಕೆ ಬಂದರೆ ಯಾವಾಗಲೂ ಮಹಿಳೆಯರೇ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕಾಗುವುದು. ಪುರುಷರಿಗೂ ಕೆಲ ವಿಷಯಗಳು ಸವಾಲಾಗಬಹುದು. ಆದರೆ, ಮಹಿಳೆ ಎದುರಿಸುವ ಸವಾಲುಗಳೆದುರು ಅವೆಲ್ಲ ಸಣ್ಣವೆನಿಸಿಕೊಳ್ಳುತ್ತವೆ. ವಿವಾಹವಾಗುತ್ತಿದ್ದಂತೆಯೇ ಮನೆಯನ್ನು ನಿಭಾಯಿಸುವ ಜವಾಬ್ದಾರಿ ಹೇಳದೆಯೇ ಮಹಿಳೆಯ ಹೆಗಲಿಗೆ ಬಂದು ಬೀಳುತ್ತದೆ. ಈಗ ಬಹುತೇಕ ಯುವತಿಯರು ಉದ್ಯೋಗದಲ್ಲಿರುವುದರಿಂದ ಎಲ್ಲರೂ ವಿವಾಹವಾದ ಮೇಲೆ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನ ನಿಭಾಯಿಸಲು ಹೆಣಗಾಡಬೇಕಾಗುತ್ತದೆ. ಅದರಲ್ಲೊಂದು ಬ್ಯಾಲೆನ್ಸ್ ಕಂಡುಕೊಳ್ಳುವ ಸಲುವಾಗಿ ಕಡೆಗೂ ಉದ್ಯೋಗದಲ್ಲೊಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ, ಒಂದಿಷ್ಟು ಕಳೆದುಕೊಳ್ಳಬೇಕಾಗುತ್ತದೆ. ಹಾಗೆ ವೈವಾಹಿಕ ಜೀವನಕ್ಕಾಗಿ ವೃತ್ತಿಯಲ್ಲಿ ಮಾಡಿಕೊಂಡ ಹೊಂದಾಣಿಕೆಗಳನ್ನು ಇಲ್ಲಿ ಕೆಲ ಮಹಿಳೆಯರು ಹಂಚಿಕೊಂಡಿದ್ದಾರೆ. 

ಅಡುಗೆ ಕಲಿಯಲು ಒತ್ತಾಯ
'ವಿವಾಹಕ್ಕೆ ಮುನ್ನವೇ ನನಗೆ ಚೆನ್ನಾಗಿ ಅಡುಗೆ ಮಾಡಲು ಬರುವುದಿಲ್ಲವೆಂದು ಪತಿಗೆ ಹೇಳಿದ್ದೆ. ಆದರೆ, ವಿವಾಹದ ಬಳಿಕ ಆತನ ತಾಯಿ ನಮ್ಮೊಂದಿಗಿರಲು ಬಂದವರು ಅಡುಗೆ ಕಲಿಯಲು ಒತ್ತಾಯಿಸತೊಡಗಿದರು. ನಾನು ಹಾಗೂ ಪತಿ ಇಬ್ಬರೂ ಕೆಲಸದಲ್ಲಿರುವುದರಿಂದ ಮನೆಯ ಜವಾಬ್ದಾರಿಗಳನ್ನೂ ಹಂಚಿಕೊಂಡು ಮಾಡುವ ಕಲ್ಪನೆಯಲ್ಲಿ ನಾನಿದ್ದೆ. ಆದರೀಗ ಅತ್ತೆಯ ಹೇರಿಕೆಯ ಕಲಿಕೆಯಿಂದಾಗಿ ಅಡುಗೆಯೇನೋ ಕಲಿತಿದ್ದೇನೆ. ಆದರೆ, ಅಡುಗೆ ಮಾಡಿ ಕಚೇರಿ ಕೆಲಸ ಮುಗಿಸುವುದಕ್ಕಾಗಿ ಅರ್ಧ ರಾತ್ರಿಯವರೆಗೂ ಒದ್ದಾಡುತ್ತೇನೆ. ನನ್ನ ಈ ಒದ್ದಾಟವನ್ನು ನನ್ನ ಕರ್ತವ್ಯವೆಂಬಂತೆ ಎಲ್ಲ ನೋಡುತ್ತಿದ್ದಾರೆಯೇ ಹೊರತು, ಸಹಾನುಭೂತಿಯ ತೃಣಮಾತ್ರವೂ ಸಿಗುತ್ತಿಲ್ಲ.'

ಮದುವೆಯಾದ ಹೆಣ್ಣಿನ ಮೇಲೆ ಲವ್ವಾಗೋಯ್ತು! ಮುಂದೇನು?

ಪದೇ ಪದೆ ರಜೆ ತೆಗೆದುಕೊಳ್ಳಬೇಕಾಯಿತು..
'ನಾವು ಡೇಟ್ ಮಾಡುವಾಗ ಆತ ನನ್ನ ಮಾಧ್ಯಮ ಉದ್ಯೋಗವನ್ನು ಎಲ್ಲರೊಂದಿಗೆ ಹೇಳಿ ಕೊಚ್ಚಿಕೊಳ್ಳುತ್ತಿದ್ದ. ಹಾಗಾಗಿ, ನನ್ನ ವೃತ್ತಿ ಆತನಿಗೆ ಯಾವತ್ತೂ ಗೌರವದ ವಿಷಯ ಎಂದು ಸಮಾಧಾನ ಪಟ್ಟಿದ್ದೆ. ಆದರೆ, ವಿವಾಹವಾಗುತ್ತಿದ್ದಂತೆಯೇ ಮನೆಯ ಸಣ್ಣ ಪುಟ್ಟ ಸಮಸ್ಯೆಗಳಿಗೆ, ಕೆಲಸಗಳಿಗೂ ರಜೆ ತೆಗೆದುಕೊಳ್ಳಲು ಹೇಳುತ್ತಿರುತ್ತಾನೆ. ಆತನ ಕೆಲಸ ಮಾತ್ರ ಮುಖ್ಯವಾದದ್ದು, ನನ್ನದು ಸುಮ್ಮನೆ ಟೈಂಪಾಸ್‌ಗೆಂಬಂತೆ ವರ್ತಿಸಲಾರಂಭಿಸಿದ್ದಾನೆ. ಮನೆಗೆಲಸದವಳು ಬರದಿದ್ದರೆ, ಅತ್ತೆಗೆ ಹುಷಾರಿಲ್ಲವಾದರೆ, ನೆಂಟರು ಬರುತ್ತಾರೆಂದರೆ ನಾನು ರಜೆ ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ ಏನೋ ಅಪರಾಧ ಮಾಡುತ್ತಿದ್ದೇನೆಂಬಂತೆ ನನ್ನತ್ತ ನೋಡಲಾಗುತ್ತದೆ. ಯಾವ ಕಾರಣಗಳಿಗೂ ಮನೆಯ ಇತರರ ಬದುಕಿನಲ್ಲಿ ವ್ಯತ್ಯಾಸವಾಗಬಾರದು. ಅವು ಸರಿಯಾಗಿರುವಂತೆ ನೋಡಿಕೊಳ್ಳಲು ನನ್ನ ಬದುಕನ್ನು ಅಲ್ಲೋಲಕಲ್ಲೋಲ ಮಾಡಿಕೊಳ್ಳಬೇಕು! '

ಡಿಮೆ ಸಂಬಳಕ್ಕೆ ಒಪ್ಪಿದೆ
'ನಮ್ಮದು ಲವ್ ಮ್ಯಾರೇಜ್. ವಿವಾಹಕ್ಕಿಂತ ಮುಂಚೆ ನಾವಿಬ್ಬರೂ ಭವಿಷ್ಯದಲ್ಲಿ ಒಬ್ಬರಿಗೊಬ್ಬರು ವೃತ್ತಿಯಲ್ಲಿ ಬೆಳೆಯಲು ಹೇಗೆ ಬೆಂಬಲ ನೀಡಿಕೊಳ್ಳುತ್ತೇವೆ, ಹೇಗೆ ಸಾಧನೆಗೆ ಸಹಾಯ ಮಾಡಿಕೊಳ್ಳುತ್ತೇವೆ ಎಂದೆಲ್ಲ ಕನಸು ಕಾಣುತ್ತಿದ್ದೆವು. ಆದರೆ, ವಿವಾಹದ ನಂತರ ಕನಸುಗಳೆಲ್ಲ ಅಡಿಮೇಲಾದವು. ಮನೆಯನ್ನು ನಿಭಾಯಿಸಲು ಹೆಣಗುತ್ತಾ ಉದ್ಯೋಗ ಸರಿಯಾಗಿ ಮಾಡಲಾಗಲಿಲ್ಲ. ಇದರಿಂದಾಗಿ ಕೆಲಸ ಕಳೆದುಕೊಂಡೆ. ಆದರೆ, ನನ್ನ ಪತಿಯೊಬ್ಬರ ದುಡಿಮೆ ಸಾಲದೆಂಬ ಕಾರಣಕ್ಕೆ ಸಣ್ಣ ಸಂಬಳದ ಕೆಲಸಕ್ಕೆ ಸೇರಿಕೊಂಡಿದ್ದೇನೆ.'

ಪ್ರಮೋಶನ್ ತ್ಯಾಗ ಮಾಡಿದೆ...
'ನಾನು ಯಾವತ್ತಿಗೂ ವೃತ್ತಿ ಜೀವನದಲ್ಲಿ ಮಹತ್ವಾಕಾಂಕ್ಷೆ ಹೊಂದಿದವಳು ಹಾಗೂ ಕೆಲಸವನ್ನು ಇತರರಿಗಿಂತ ಚೆನ್ನಾಗಿ ನಿಭಾಯಿಸಬಲ್ಲವಳು. ನನಗೆ ಪ್ರೊಮೋಶನ್ ಸಿಗುವ ಹಂತದಲ್ಲಿತ್ತು. ಈ ಬಗ್ಗೆ ಪತಿಗೂ ಖುಷಿಯಾಗಿತ್ತು. ಆದರೆ, ವೈಯಕ್ತಿಕ ಕಾರಣಗಳಿಂದ ಅದೇ ಸಮಯದಲ್ಲಿ ಆತನ ಜಾಯಿಂಟ್ ಫ್ಯಾಮಿಲಿಯಿದ್ದಲ್ಲಿಗೆ ಮನೆ ಶಿಫ್ಟ್ ಮಾಡಬೇಕಾಯಿತು. ಇದರಿಂದ ನನಗೆ ಮನೆ ಹಾಗೂ ಉದ್ಯೋಗ ಎರಡರ ಜವಾಬ್ದಾರಿಗಳನ್ನು ಸಮಾನವಾಗಿ ನಿಭಾಯಿಸಲು ಕಷ್ಟವಾಗತೊಡಗಿತು. ಪರಿಣಾಮವಾಗಿ, ಉದ್ಯೋಗದಲ್ಲಿ ಮುಂಚಿನಷ್ಟು ಪರ್ಫಾರ್ಮೆನ್ಸ್ ತೋರಿಸಲು ಸೋಲತೊಡಗಿದೆ. ಸಿಗಲಿದ್ದ ಪ್ರಮೋಶನ್ ಕೈ ತಪ್ಪಿತು. '

'ಸ್ತ್ರೀಯರ ವಿವಾಹ ಕನಿಷ್ಠ ವಯಸ್ಸು ಯಾವ ಕಾರಣಕ್ಕೂ ಏರಿಸಬೇಡಿ'

ಕೆಲಸ ಬಿಡಬೇಕಾಯಿತು
'ನಾನು ಪ್ರಗ್ನೆಂಟ್ ಆದಾಗ ಮಗು ಹಾಗೂ ಉದ್ಯೋಗವನ್ನು ನಿರ್ವಹಿಸುವ ಕುರಿತು ಹಲವಾರು ಬಾರಿ ಚರ್ಚಿಸಿದ್ದೆವು. ಆದರೆ, ಆತನ ಕುಟುಂಬವು ನಾನು ಕೆಲಸ ಬಿಟ್ಟು ಮಗುವನ್ನು ನೋಡಿಕೊಳ್ಳಬೇಕು, ಬೇಕಿದ್ದರೆ ಫ್ರೀಲ್ಯಾನ್ಸ್ ಮಾಡಿಕೊಳ್ಳಬೇಕೆಂದು ನಿರ್ಧರಿಸಿದಾಗ ಅದನ್ನು ವಿರೋಧಿಸುವ ಸ್ವಾತಂತ್ರ್ಯವಾಗಲೀ, ಬೇರೆ ಆಯ್ಕೆಗಳಾಗಲೀ ಇಲ್ಲವೆನಿಸಿತು. ಈಗ ನಾನು ಉದ್ಯೋಗ ಬಿಟ್ಟು ಮಗು ನೋಡಿಕೊಂಡಿದ್ದೇನೆ. ದುಡಿದು ಅಭ್ಯಾಸವಿದ್ದ ನನಗೆ ಎಲ್ಲಕ್ಕೂ ಪತಿಯ ಬಳಿ ಹಣ ಕೇಳಲು ಮನಸ್ಸಾಗುವುದಿಲ್ಲ. ತಿಂಗಳು ತಿಂಗಳು ಖಾತೆಗೆ ಸಂಬಳ ಬರುವುದಿಲ್ಲವೆನ್ನುವ ಹಿಂಸೆ ಅನುಭವಿಸಿಯೇ ತಿಳಿಯಬೇಕು. '

ಮಾನಸಿಕ ಯಾತನೆ
'ಕೋವಿಡ್ ಕಾರಣಕ್ಕೆ ನನ್ನ ಪತಿಯ ಉದ್ಯೋಗ ಹೋಯಿತು. ಈಗ ನನ್ನೊಬ್ಬಳ ಸಂಬಳದಿಂದಲೇ ಕುಟುಂಬ ನಡೆಯಬೇಕು. ಮುಂಚೆ ಕೆಲಸವನ್ನು ಪ್ರೀತಿಸುತ್ತಿದ್ದೆ. ಚೆನ್ನಾಗಿ ನಿಭಾಯಿಸುತ್ತಿದ್ದೆ. ಈಗ ಎಷ್ಟು ದುಡಿದರೂ ಕುಟುಂಬವನ್ನು ಸಲಹುವುದೇ ಕಷ್ಟವಾಗಿದ್ದು, ಇದು ಒತ್ತಡಕ್ಕೆ ನೂಕಿದೆ. ಮುಂಚಿನಂತೆ ಈಗ ಉದ್ಯೋಗ ಎಂಜಾಯ್ ಮಾಡಲಾಗುತ್ತಿಲ್ಲ. ಈಗೇನಿದ್ದರೂ ಅನಿವಾರ್ಯವಾಗಿ ಕೆಲಸ ಮಾಡುತ್ತಿರುವಂತಾಗಿದೆ.'