ಗಂಡ ಒಳ್ಳೆಯನಾಗಿದ್ರೆ ಸಾಕು ಎನ್ನುವವರ ಮಧ್ಯೆ ಇಲ್ಲೊಬ್ಬ ಯುವತಿ, ಒಳ್ಳೇತನ ಕಟ್ಕೊಂಡು ಏನ್​ ಮಾಡ್ಲಿ, ಅವನು ಸಕತ್​ ಬೋರ್​ ಎಂದು ಮದ್ವೆಯಾದ ನಾಲ್ಕೇ ದಿನಕ್ಕೆ ಡಿವೋರ್ಸ್​ಗೆ ಅರ್ಜಿ ಹಾಕಿದ್ದಾಳೆ. ಏನಿದು ಸ್ಟೋರಿ? 

ಇತ್ತೀಚಿನ ದಿನಗಳಲ್ಲಿ ಸಂಬಂಧ ಎನ್ನುವುದಕ್ಕೆ ಬೆಲೆಯೇ ಇಲ್ಲವೇ ಎನ್ನುವಂತಾಗಿದೆ. ಅದರಲ್ಲಿಯೂ ಕೆಲ ದಶಕಗಳಿಂದ ಡಿವೋರ್ಸ್​ ಎನ್ನುವುದು ಸಿಕ್ಕಾಪಟ್ಟೆ ಕಾಮನ್​ ಆಗಿಬಿಟ್ಟಿದೆ. ಚಿಕ್ಕಪುಟ್ಟ ಕಾರಣಕ್ಕೆ ವಿಚ್ಛೇದನ ಪಡೆಯುವವರ ದೊಡ್ಡ ಲಿಸ್ಟೇ ಇದೆ. ಡಿವೋರ್ಸ್​ ಪ್ರಕರಣ ಹೆಚ್ಚಾಗುತ್ತಿರುವ ಕಾರಣಕ್ಕೇನೇ ಕೌಟುಂಬಿಕ ಕೋರ್ಟ್​ಗಳ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ. ಇದೀಗ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಒಂದು ವಿಚಿತ್ರ ಪ್ರಕರಣ ನಡೆದಿದೆ. ಅದರಲ್ಲಿ ಪತ್ನಿಯಾದವಳು ಮದುವೆಯಾದ ನಾಲ್ಕೇ ದಿನಕ್ಕೆ ಡಿವೋರ್ಸ್​ ಕೊಟ್ಟಿದ್ದಾಳೆ. ಅದಕ್ಕೆ ಕಾರಣ ಗಂಡ ತುಂಬಾ ಸೀದಾ ಸಾದಾ ಇದ್ದು, ಬೋರಿಂಗ್​ ಕ್ಯಾರೆಕ್ಟರ್​ ಎನ್ನುವುದಕ್ಕೆ. ಅವನ ಸರಳತೆ ನನಗೆ ಇಷ್ಟವಾಗ್ತಿಲ್ಲ. ಇಂಥ ಸರಳ ಗಂಡನನ್ನು ಇಟ್ಟುಕೊಂಡು ಏನು ಮಾಡುವುದು ಎಂದು ಮಹಿಳೆ ಕೇಳಿದ್ದಾಳೆ.

ಗಂಡನಿಗೆ ತುಂಬಾ ಸಿಂಪಲ್​. ಅವನಿಗೆ ಲವ್​ನಲ್ಲಿ ಉತ್ಸಾಹವೇ ಇಲ್ಲ. ಪ್ರಣಯದ ಬಗ್ಗೆ ಏನು ಗೊತ್ತಿಲ್ಲ. ತುಂಬಾ ಬೋರಿಂಗ್​ ಕ್ಯಾರೆಕ್ಟರ್​. ಒಂದು ಸ್ವಲ್ಪವೂ ರಸಿಕತನವೇ ಇಲ್ಲ. ಇಂಥ ಗಂಡನ ಜೊತೆ ಜೀವನಪೂರ್ತಿ ಹೇಗೆ ಬಾಳುವುದು ಎಂದು ನಾಲ್ಕೇ ದಿನಕ್ಕೆ ಡಿವೋರ್ಸ್​ ಕೋರಿ ಮಹಿಳೆ ಅರ್ಜಿ ಸಲ್ಲಿಸಿದ್ದಾಳೆ. ಇವರಿಬ್ಬರನ್ನೂ ಕರೆಸಿ ಕೌನ್ಸೆಲಿಂಗ್​ ಮಾಡಿಸಲಾಯಿತಾದರೂ, ಇಂಥ ಗಂಡ ನನಗೆ ಬೇಡೇ ಬೇಡ ಎಂದು ಮಹಿಳೆ ಪಟ್ಟು ಹಿಡಿದಿದ್ದಾಳೆ. ಈತನ ಗುಣ ನನಗೆ ನಿರಾಸೆ ಮೂಡಿಸಿದೆ. ಒಳ್ಳೆಯತನ ಕಟ್ಕೊಂಡು ಏನು ಮಾಡುವುದು, ರೊಮ್ಯಾಂಟಿಕ್​ ಆಗಿಯೇ ಇಲ್ಲದಾಗ ಒಳ್ಳೆಯನತನ ಯಾವ ಮೂಲೆಗೆ ಎಂದು ಮಹಿಳೆ ಪ್ರಶ್ನಿಸಿದ್ದಾಳೆ.

ಮೊರಾದಾಬಾದ್‌ನಲ್ಲಿ ನಡೆದ ಈ ಪ್ರಕರಣದಲ್ಲಿ ವಿವಾದವನ್ನು ಪರಿಹರಿಸಲು ಪಂಚಾಯತ್, ಸ್ಥಳೀಯ ಸಮುದಾಯ ಸಭೆಗಳನ್ನು ನಡೆಸಲಾಗಿತ್ತು. ಅದು ಏನೂ ಆಗದಾಗ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಮದುವೆಯಾದ ನಾಲ್ಕೇ ದಿನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಕೊನೆಗೆ ವಿಚಾರಣೆ ನಡೆದು ಇದೀಗ ಡಿವೋರ್ಸ್​ ನೀಡಿದೆ ಕೋರ್ಟ್​.

ವರನ ಕುಟುಂಬವು ವಧುವಿನ ಕುಟುಂಬಕ್ಕೆ ರೂ. 6.5 ಲಕ್ಷ ದಂಡವನ್ನು ಪಾವತಿಸಲು ಆದೇಶಿಸಿದೆ. ಇದು ಭಾರಿ ಚರ್ಚೆಗೆ ಕಾರಣವೂ ಆಗಿದೆ. ಗಂಡನ ತಪ್ಪೇ ಇಲ್ಲದಿದ್ದರೂ, ಆತ ಪರಿಹಾರ ಕೊಡಬೇಕು ಎಂದರೆ ಕಾನೂನು ಇರುವುದು ಏಕೆ ಎಂದು ಪ್ರಶ್ನಿಸಲಾಗುತ್ತದೆ. ಮದುವೆಯಾಗುವುದು, ಡಿವೋರ್ಸ್​ ಪಡೆಯುವುದನ್ನೇ ಕೆಲವು ಹೆಣ್ಣುಮಕ್ಕಳು ದಂಧೆ ಮಾಡಿಕೊಳ್ಳುತ್ತಿದ್ದಾರೆ. ಗಂಡುಮಕ್ಕಳು ತಾವು ಮದುವೆಯಾಗಿರುವ ಒಂದೇ ಕಾರಣಕ್ಕೆ ದುಡಿದದ್ದನ್ನೆಲ್ಲಾ ಪರಿಹಾರದ ರೂಪದಲ್ಲಿ ಹೆಣ್ಣಿಗೆ ನೀಡಬೇಕಿರುವ ಕರ್ಮ ಬಂದಿದೆ ಎಂದು ನೆಟ್ಟಿಗರು ಕಾನೂನನ್ನು ಪ್ರಶ್ನಿಸುತ್ತಿದ್ದಾರೆ. ಇದರ ವಿರುದ್ಧ ಭಾರಿ ಅಸಮಾಧಾನ ಹೊರಹಾಕುತ್ತಿದ್ದಾರೆ.