ಉಪನ್ಯಾಸಕಿಯೊಬ್ಬರು 16 ವರ್ಷಗಳ ಸಂಬಂಧದ ನಂತರ ಗೆಳೆಯನ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸಿದ್ದರು. ಮದುವೆಯಾಗುವ ಭರವಸೆ ನೀಡಿ ಆತ ಮೋಸ ಮಾಡಿದನೆಂದು ಆಕೆ ವಾದಿಸಿದ್ದರು. ಆದರೆ, ಸುಪ್ರೀಂಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ. ಸುದೀರ್ಘ ಸಂಬಂಧವು ಪರಸ್ಪರ ಒಪ್ಪಿಗೆಯಿಂದ ಕೂಡಿತ್ತು, ಇದು ಅತ್ಯಾಚಾರವಲ್ಲ ಎಂದು ನ್ಯಾಯಾಲಯ ಹೇಳಿದೆ. ಮಹಿಳಾ ಪರ ಕಾನೂನುಗಳ ದುರ್ಬಳಕೆ ಸರಿಯಲ್ಲವೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಮದುವೆಯಾಗುವ ಭರವಸೆ ನೀಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅದು ಅಪರಾಧ ಎಂದು ಇದಾಗಲೇ ಕೆಲವು ಕೋರ್ಟ್ಗಳು ಹೇಳಿವೆ ನಿಜ. ಹಾಗೆಂದು ದಶಕಗಳ ಕಾಲ ಒಟ್ಟಿಗೇ ಇದ್ದು, ದಿನವೂ ಆತನಿಗೆ ಎಲ್ಲವನ್ನೂ ಒಪ್ಪಿಸಿ ಆಮೇಲೆ ಅತ್ಯಾಚಾರದ ಕೇಸ್ ಹಾಕಿದರೆ? ಇದಾಗಲೇ ಮಹಿಳಾ ಪರ ಕಾನೂನುಗಳ ದುರುಪಯೋಗದ ವಿರುದ್ಧ ಭಾರಿ ಆಕ್ರೋಶವೇ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಉಪನ್ಯಾಸಕಿಯೊಬ್ಬಳು ಈಗ 16 ವರ್ಷ ಜೊತೆಯಲ್ಲಿದ್ದವನ ವಿರುದ್ಧವೇ ಅತ್ಯಾಚಾರದ ಕೇಸ್ ಹಾಕಿಸಿಕೊಂಡು ಸುಪ್ರೀಂಕೋರ್ಟ್ನಿಂದ ಶಾಕ್ಗೆ ಒಳಗಾಗಿರುವ ಘಟನೆ ನಡೆದಿದೆ.
ಅಷ್ಟಕ್ಕೂ ಈ ಉಪನ್ಯಾಸಕಿ ಒಬ್ಬನ ಜೊತೆ 16 ವರ್ಷಗಳಿಂದ ಸಂಬಂಧದಲ್ಲಿ ಇದ್ದರು. ಅದೂ ಒಬ್ಬ ಬ್ಯಾಂಕ್ ಅಧಿಕಾರಿಯ ಜೊತೆ. ಆಕೆಯ ಹೇಳಿಕೆ ಏನೆಂದರೆ, ಆತ ಮದುವೆಯಾಗುವ ಭರವಸೆ ನೀಡಿದ್ದರಿಂದ ನಾನು ಆತನ ಜೊತೆ ಸಂಬಂಧ ಬೆಳೆಸಿದೆ. ಆತ ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ. ಆದ್ದರಿಂದ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಈ ಉಪನ್ಯಾಸಕಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಳು. ಆತ ಮದುವೆಯಾಗುವುದಾಗಿ ಹೇಳಿದ್ದರಿಂದಲೇ ನಾನು ದೈಹಿಕ ಸಂಬಂಧ ಬೆಳೆಸಿದೆ. ಅದಕ್ಕೆ ಅವನಿಗೆ ಅನುಮತಿ ನೀಡಿದೆ. ಆತ ಪದೇ ಪದೇ ಮದುವೆಯನ್ನು ಮುಂದೂಡುತ್ತಲೇ ಬಂದ. ಇದೀಗ ನಾವಿಬ್ಬರೂ ಒಟ್ಟಿಗೇ ಇದ್ದು 16 ವರ್ಷ ಆಗಿದೆ. ಆದರೆ ಇದುವರೆಗೂ ಆತ ಮದುವೆಯ ಬಗ್ಗೆ ಮಾತನಾಡುತ್ತಿಲ್ಲ. ನನಗೆ ಮೋಸ ಮಾಡಿದ್ದಾನೆ ಎಂದಿದ್ದ ಈ ಉಪನ್ಯಾಸಕಿ, ತನಗೆ ನ್ಯಾಯ ಬೇಕು ಎಂದು ಆತನ ವಿರುದ್ಧ ರೇಪ್ ಕೇಸ್ ಹಾಕಿದ್ದಳು.
ಈಕೆಯ ವಾದವನ್ನು ಕೇಳಿ ಸುಪ್ರೀಕೋರ್ಟ್ ನ್ಯಾಯಮೂರ್ತಿಗಳು ಅಚ್ಚರಿ ವ್ಯಕ್ತಪಡಿಸಿದರು. ಒಂದಲ್ಲ, ಎರಡಲ್ಲ... 16 ವರ್ಷ, ಅದೂ ಉಪನ್ಯಾಸಕಿಯಂಥ ಉನ್ನತ ಶಿಕ್ಷಣ ಪಡೆದಾಕೆ... ಎಂದು ಹೇಳಿದ ನ್ಯಾಯಮೂರ್ತಿಗಳು, ಬ್ಯಾಂಕ್ ಅಧಿಕಾರಿಯ ವಿರುದ್ಧ ಇದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದೆ. ಆತನ ವಿರುದ್ಧ ಅತ್ಯಾಚಾರದ ಕೇಸ್ ಹಾಕಿರುವುದು ಸರಿಯಲ್ಲ, 16 ವರ್ಷಗಳ ಸುದೀರ್ಘ ಅವಧಿಯಲ್ಲಿ ಇಂಥ ಸುಶಿಕ್ಷಿತೆಯೊಬ್ಬರು ದೈಹಿಕ ಸಂಪರ್ಕ ಬೆಳೆಸಿ, ಈಗ ಈ ಕೇಸ್ ಹಾಕಿರುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ಹೇಳಿದೆ. ಅತ್ಯಾಚಾರದ ಕೇಸ್ ದಾಖಲಿಗೆ ಮಾಡಿದ ಮನವಿನ್ನು ತಿರಸ್ಕರಿಸಿದೆ.
ಇಬ್ಬರೂ ವ್ಯಕ್ತಿಗಳು ಸುಶಿಕ್ಷಿತರಾದವರು ಸಮ್ಮತಿಯ ಸಂಬಂಧವನ್ನು ಉಳಿಸಿಕೊಂಡರು. ಇವರಿಬ್ಬರೂ ಬೇರೆ ಬೇರೆ ಪಟ್ಟಣಗಳಲ್ಲಿ ನಿಯೋಜಿತವಾಗಿದ್ದರೂ ಜೊತೆಯಲ್ಲಿಯೇ ಇರುತ್ತಿದ್ದರು. 16 ವರ್ಷಗಳವರೆಗೆ ಹೀಗೆ ಇದ್ದು, ಪ್ರೇಮ ಸಂಬಂಧ ಹದಗೆಟ್ಟಾಗ ಈ ರೀತಿ ಕೇಸ್ ಹಾಕುವುದುದ ಉಚಿತವಲ್ಲ. ಇಷ್ಟು ದೀರ್ಘ ಅವಧಿಯ ಸಂಬಂಧವು ಪರಸ್ಪರ ಒಪ್ಪಿಗೆಯನ್ನು ಸೂಚಿಸುತ್ತದೆಯೇ ವಿನಾ ಅಲ್ಲಿ ಯಾವುದೇ ಅತ್ಯಾಚಾರದ ಕೇಸ್ ಕಾಣಿಸುವುದಿಲ್ಲ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. " 16 ವರ್ಷಗಳ ಕಾಲ ಅರ್ಜಿದಾರ ಉಪನ್ಯಾಸಕಿ, ಆ ವ್ಯಕ್ತಿಯ ಬೇಡಿಕೆಗಳಿಗೆ ಮಣಿಯುತ್ತಲೇ ಇದ್ದರು ಎಂಬುದನ್ನು ನಂಬುವುದು ಕಷ್ಟ, ಅಷ್ಟೇ ಅಲ್ಲದೇ, ಸುಳ್ಳು ಭರವಸೆಯ ನೆಪದಲ್ಲಿ ಲೈಂಗಿಕವಾಗಿ ಶೋಷಿಸುತ್ತಿದ್ದಾರೆ ಎಂದು ಹೇಳುವ ಅವರು, ಇಷ್ಟೂ ವರ್ಷ ಯಾವುದೇ ಪ್ರತಿಭಟನೆಯನ್ನು ತೋರಿಸಲಿಲ್ಲ. ಇದು ಇಬ್ಬರ ಸಮ್ಮತಿಯ ಮೇರೆಗೇ ನಡೆದಿರುವುದು ಸ್ಪಷ್ಟವಾಗುತ್ತದೆ. ಇಷ್ಟು ಸುದೀರ್ಘ ಅವಧಿಯವರೆಗೆ ಸಂಬಂಧದಲ್ಲಿಇರುವ ಕಾರಣದಿಂದ ಅತ್ಯಾಚಾರದ ಕೇಸ್ ದಾಖಲಿಸಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಹಿಳಾ ಪರ ಕಾನೂನುಗಳನ್ನು ಹೀಗೆಲ್ಲಾ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಕೋರ್ಟ್ ಈ ತೀರ್ಪಿನಲ್ಲಿ ಸೂಚ್ಯವಾಗಿ ವಿವರಿಸಿದೆ.
ನಿದ್ದೆಗಾಗಿ ಅಮಾನತಾದ ಉದ್ಯೋಗಿ ನೆರವಿಗೆ ಹೈಕೋರ್ಟ್: ನಿದ್ರೆಯ ಪಾಠ ಮಾಡಿದ ಜಡ್ಜ್- ಕುತೂಹಲದ ಆದೇಶ
