ಅಮ್ಮ ಅಷ್ಟು ಪ್ರೀತಿ ತೋರಿಸುತ್ತಿದ್ದವರು ಅತ್ತೆಯಾದ ಮೇಲೆ ಯಾಕೆ ಹೀಗಾಗಿದ್ದಾರೆ?
ಅತ್ತೆ ಅಂದರೆ ಅಮ್ಮ ಇದ್ದಂಗೆ ಅಂತಾರೆ. ಆದರೆ ಯಾವ ಅತ್ತೆಯೂ ಯಾಕೆ ಅಮ್ಮನ ಥರ ವರ್ತಿಸಲ್ಲ? ನನ್ನ ಅತ್ತೆ ಮೊದಲು ಹೀಗಿರಲಿಲ್ಲ. ಮದುವೆಗೂ ಮೊದಲು ಅಷ್ಟು ಪ್ರೀತಿಯಿಂದ ಮಾತಾಡಿಸ್ತಿದ್ರು. ಈಗ ಸಂಪೂರ್ಣ ಬದಲಾಗಿದ್ದಾರೆ. ಏನ್ಮಾಡ್ಲೀ?
ಪ್ರಶ್ನೆ: ನಮ್ಮ ಮದುವೆಯಾಗಿ ಆರು ತಿಂಗಳಾಗಿದೆ. ಹಿರಿಯರು ಒಪ್ಪಿ ಆದ ಮದುವೆ. ಹಾಗೆ ನೋಡಿದರೆ ನಮ್ಮತ್ತೆಯೇ ನಿಂತು ಮಾಡಿಸಿದ ಮದುವೆ. ಮದುವೆಗೂ ಮೊದಲೇ ಅವರ ಪರಿಚಯ ಇತ್ತು. ನಮಗೆ ಅವರು ರಿಲೇಟಿವ್ ಆಗ್ತಾರೆ. ಅವರ ಒಳ್ಳೆಯ ಸ್ವಭಾವವನ್ನು ನನ್ನ ಅಮ್ಮ, ಬೇರೆ ಹೆಂಗಸರೆಲ್ಲ ಹೊಗಳುತ್ತಿದ್ದರು. ಆಕೆಯೇ ಅಮ್ಮನ ಬಳಿ ಮದುವೆಯ ಪ್ರೊಪೋಸಲ್ ಇಟ್ಟಿದ್ದರು. ನನ್ನ ಅಪ್ಪ ಅಮ್ಮ, ನನಗೆ ಅವರ ಮಗನಿಗಿಂತ ದೊಡ್ಡ ಕೆಲಸದಲ್ಲಿರುವ ಹುಡುಗನ ಪ್ರೊಪೋಸಲ್ ಬಂದರೂ ಅದನ್ನು ತಿರಸ್ಕರಿಸಿ ಇವರ ಮಗನ ಜೊತೆಗೆ ಮದುವೆ ಮಾಡಲು ನಿರ್ಧರಿಸಿದರು.
ಅಮ್ಮನನ್ನು ಆರಾಧಿಸಲು, ಆಕೆಯ ಖುಷಿ ಪಡಿಸಲು ಇಲ್ಲಿವೆ ಟಿಪ್ಸ್
ಹುಡುಗನನ್ನು ಮೊದಲೇ ನೋಡಿದ್ದೆ. ಇಷ್ಟವೂ ಆಗಿದ್ದ. ಜೊತೆಗೆ ಭಾವೀ ಅತ್ತೆಯೂ ಒಳ್ಳೆಯವರು. ಹಾಗಾಗಿ ಖುಷಿಯಿಂದಿದ್ದೆ. ಆದರೆ ಮದುವೆಯಾಗಿ ಆ ಮನೆ ಸೊಸೆಯಾದದ್ದೇ ಅವರ ನಿಜ ಸ್ವಭಾವ ಗೊತ್ತಾಯ್ತು. ನನ್ನ ಸಣ್ಣ ಪುಟ್ಟ ಕೆಲಸದಲ್ಲೂ ಕೊಂಕು ತೆಗೆಯಲಾರಂಭಿಸಿದರು. ಗಂಡನ ಜೊತೆಗೆ ಆಚೆ ಹೋದ್ರೆ ಇವರ ಮುಖ ದಪ್ಪ ಆಗ್ತಿತ್ತು. ಮನೆ ಕೆಲಸವನ್ನು ಮುಗಿಸಿ ಕೆಲಸಕ್ಕೆ ಹೋಗ್ಬೇಕಿತ್ತು, ಅಷ್ಟೇ ಅಲ್ಲ. ನನ್ನ ಸಂಬಳದ ಹಣವನ್ನೂ ಕೇಳ್ತಾರೆ. ಸಂಬಂಧಿಕರಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದೂ ಇತ್ತೀಚೆಗೆ ನನ್ನ ಗಮನಕ್ಕೆ ಬಂತು. ನನ್ನ ಗಂಡನೂ ಅಮ್ಮ ಹೇಳಿದಂತೆ ಕೇಳ್ತಾರೆ. ಅವರಿಗೆ ನನ್ನ ನೋವು ಅರ್ಥ ಆಗೋದೇ ಇಲ್ಲ. ಮಾತು ಮಾತಿಗೂ ಅಡ್ಜೆಸ್ಟ್ ಮಾಡ್ಕೋ ಅಂತಾರೆ. ನಂಗೆ ಈ ಲೈಫ್‌ನಲ್ಲೇ ಜಿಗುಪ್ಸೆ ಶುರುವಾಗಿದೆ. ಅಮ್ಮನ ಹತ್ರ ಹೇಳಿದ್ರೆ, ಮದುವೆಯಾದ ಶುರುವಲ್ಲಿ ಇದೆಲ್ಲ ಇದ್ದಿದ್ದೇ ಅಂತಾರೆ. ಈ ಸಂಬಂಧದಿಂದ ಹೊರಬಂದು ಒಂಟಿಯಾಗಿ ಬದುಕೋಣ ಅನಿಸ್ತಿದೆ. ಏನು ಮಾಡಲಿ?
ಅಮ್ಮನ ಬೈಗುಳ ಇಷ್ಟವಾಗಬೇಕೆಂದರೆ ಮದುವೆಯಾಗಬೇಕು!
ಉತ್ತರ: ನಿಮ್ಮ ನೋವು ಅರ್ಥ ಆಗುತ್ತೆ. ಮದುವೆಗೂ ಮೊದಲು ಅಷ್ಟು ಅಕ್ಕರೆ ತೋರುತ್ತಿದ್ದ ಅತ್ತೆ ಸಡನ್ನಾಗಿ ಹೇಗೆ ಬದಲಾದ್ರು ಅನ್ನೋ ಯೋಚನೆ ನಿಮಗೆ ಬಂದಿರಬಹುದು. ಆದರೆ ಅವರ ಈ ಸ್ವಭಾವಕ್ಕೆ ಕಾರಣ ಅಸ್ತಿರತೆ. ಹೆತ್ತು, ಇಷ್ಟು ಸಮಯ ಸಾಕಿ ಬೆಳೆಸಿದ ಮಗ ಎಲ್ಲಿ ಕೈ ತಪ್ಪಿ ಹೋಗುತ್ತಾನೋ ಅಂತ ಭಯ. ಜೊತೆಗೆ ಮಗ ನಿಮ್ಮ ಮೇಲಿನ ಪ್ರೀತಿಯಲ್ಲಿ ಎಲ್ಲಿ ತನ್ನನ್ನು ಮರೆತು ಬಿಡುವನೋ ಅಂತ ಆತಂಕ. ಹೆಚ್ಚಿನ ಭಾರತೀಯ ಮನೆಗಳಲ್ಲಿ ಇದು ಕಾಮನ್. ಏಕೆಂದರೆ ನಮಗೆ ಮಕ್ಕಳ ಜೊತೆಗೆ ಭಾವನಾತ್ಮಕ ಅಟ್ಯಾಚ್‌ಮೆಂಟ್ ಹೆಚ್ಚು. ಮಗನಿಗೆ ಮದುವೆ ಆಯ್ತು ಅಂದಕೂಡಲೇ ಆತಂಕ ಶುರುವಾಗುತ್ತದೆ.
ನೀವು ಈ ಮನೆಗೆ ಹೊಸಬರು. ನಿಮ್ಮನ್ನು ಅಕ್ಕರೆಯಿಂದ, ವಿಶ್ವಾಸದಿಂದ ಕಂಡಷ್ಟು ಅವರ ನಿಮ್ಮ ಬಂಧ ಗಟ್ಟಿಯಾಗುತ್ತಾ ಹೋಗುತ್ತದೆ ಅನ್ನೋದನ್ನು ಅವರಿಗೆ ಅರ್ಥವಾಗಿಸಲು ಪ್ರಯತ್ನಿಸಿ. ನೇರವಾಗಿ ಹೇಳಿ. ನಿಮಗನಿಸಿದ ಯಾವ ಭಾವನೆಯನ್ನೂ ಮುಚ್ಚಿಟ್ಟುಕೊಳ್ಳಬೇಡಿ. ಅಡ್ಜೆಸ್ಟ್‌ಮೆಂಟ್ ಅನ್ನೋದು ನಿಮಗೆ ಕಿರಿಕಿರಿ ಅನಿಸಿದರೆ ಅದನ್ನು ಬಿಟ್ಟುಬಿಡಿ. ಅವರನ್ನು ನಿರ್ಲಕ್ಷಿಸಿ ನಿಮ್ಮ ಪಾಡಿಗೆ ನೀವಿರೋದನ್ನು ಅಭ್ಯಾಸ ಮಾಡಿ. ನಿಧಾನಕ್ಕೆ ಅವರಿಗೆ ನಿಮ್ಮ ಬಗ್ಗೆ ಅರಿವು ಬರಬಹುದು. ಇಲ್ಲವಾದರೆ ನಿಮ್ಮ ಮನಸ್ಸಿಗಂತೂ ನೆಮ್ಮದಿ ಇರುತ್ತೆ. ಹಾಗಂತ ಅವರಿಗೆ ಯಾವತ್ತೂ ಹರ್ಟ್ ಮಾಡಲು ಹೋಗ್ಬೇಡಿ. ಮನಸ್ಸಲ್ಲಿ ನೋವು ಇಟ್ಟಷ್ಟು ಸಮಯ ಅದು ಅಲ್ಲೇ ಹುಣ್ಣಾಗಿ ಕೀವಾಗುತ್ತದೆ. ಅದಕ್ಕೆ ಆ ಗಾಯ ಹುಣ್ಣಾಗುವ ಮೊದಲೇ ಅದನ್ನು ಸರಿ ಮಾಡಿ. ಅತ್ತೆಯನ್ನು ಹೊಸ ಹೊಸ ಜಾಗಗಳಿಗೆ ಕರೆದೊಯ್ಯಿರಿ, ಅವರ ಕತೆಗಳನ್ನು ಕೇಳಿ. ಅವರ ರೆಸಿಪಿಗಳನ್ನು ಟ್ರೈ ಮಾಡಿ.
ಮ್ಯಾಜಿಕ್ ಮೊಮೆಂಟ್: ಅಮ್ಮನಿಗೆ ಕೊಟ್ಟಮೊದಲ ಉಡುಗೊರೆ!
ಇನ್ನು ಈ ಸಂಬಂಧ ಬಿಟ್ಟು ಒಂಟಿಯಾಗಿರುವುದು ಕೆಟ್ಟ ಆಯ್ಕೆಯಲ್ಲ. ಆದರೆ ಅದಕ್ಕೊಂದು ಗಟ್ಟಿತನ ಬೇಕು. ಎಂಥಾ ಕಷ್ಟವನ್ನೂ ಎದುರಿಸಬಲ್ಲೆ ಅನ್ನುವ ಮನಸ್ಥಿತಿ ಬೇಕು. ಅದು ನಿಮ್ಮಲ್ಲಿದ್ದರೆ ಒಂಟಿ ಬದುಕೂ ಸುಂದರವೇ.