Sibling Relationship: ಬಾಲ್ಯದಲ್ಲಿ ಸದಾ ಒಟ್ಟಿಗೆ ಇರುತ್ತಿದ್ದ ಅಣ್ಣ-ತಂಗಿ, ಅಕ್ಕ-ತಮ್ಮ ದೊಡ್ಡವರಾದಂತೆ ದೂರವಾಗುವುದು ಸಾಮಾನ್ಯ.. ಹಾಗಂತ ಅವರಿಬ್ಬರ ನಡುವಿನ ಪ್ರೀತಿ ಕಡಿಮೆಯಾಗಿದೆ ಎಂದರ್ಥವಲ್ಲ. ಹಾಗಿದ್ರೆ ಸಹೋದರ-ಸಹೋದರಿ ಯಾಕೆ ದೂರವಾಗುತ್ತಾರೆ ನೋಡೋಣ.

ದೊಡ್ಡವರಾದ ಮೇಲೆ ಅಣ್ಣ-ತಂಗಿ ನಡುವೆ ಮೊದಲಿನ ಆತ್ಮೀಯತೆ ಏಕಿರಲ್ಲ

ಬಾಲ್ಯದಲ್ಲಿ ಅಣ್ಣ-ತಂಗಿ ಅಥವಾ ಅಕ್ಕ-ತಮ್ಮನ ನಡುವೆ ಸಣ್ಣಪುಟ್ಟ ಜಗಳಗಳು ನಡೆಯುವುದು ಸಹಜ. ಕೆಲವೇ ನಿಮಿಷಗಳಲ್ಲಿ ಮತ್ತೆ ಒಂದಾಗಿ ಆಟವಾಡುವುದು, ಒಬ್ಬರಿಗೊಬ್ಬರು ಕೀಟಲೆ ಮಾಡುವುದು, ನಗುವುದು, ಎಲ್ಲ ವಿಚಾರಗಳನ್ನು ಹಂಚಿಕೊಳ್ಳುವುದು ದಿನನಿತ್ಯದ ಭಾಗವಾಗಿರುತ್ತದೆ. ಆದರೆ ವಯಸ್ಸು ಹೆಚ್ಚಾದಂತೆ ಈ ಸಂಬಂಧದಲ್ಲಿ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಮೊದಲಿನಂತೆ ಗಂಟೆಗಟ್ಟಲೆ ಮಾತನಾಡುವುದಿಲ್ಲ. ಫೋನ್ ಕರೆಗಳು ಕೂಡ ಅಗತ್ಯವಿದ್ದಾಗ ಮಾತ್ರ ಸೀಮಿತವಾಗುತ್ತವೆ. ಜೀವನದ ಜವಾಬ್ದಾರಿಗಳು, ಬದಲಾಗುವ ಆದ್ಯತೆಗಳು ಮತ್ತು ಮನಸ್ಸಿನಲ್ಲಿರುವ ನೋವುಗಳು ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸಬಹುದು. ಹಾಗಾದರೆ ದೊಡ್ಡವರಾದ ಮೇಲೆ ಒಡಹುಟ್ಟಿದವರ ನಡುವಿನ ಆತ್ಮೀಯತೆ ಕಡಿಮೆಯಾಗಲು ಕಾರಣಗಳೇನು? ನೋಡೋಣ.

ತಮ್ಮದೇ ಜೀವನದಲ್ಲಿ ಬ್ಯುಸಿಯಾಗುವುದು

ಬಾಲ್ಯದಲ್ಲಿ ಅಣ್ಣ-ತಂಗಿ ಅಥವಾ ಅಕ್ಕ-ತಮ್ಮನ ಹೆಚ್ಚಿನ ಸಮಯ ಒಟ್ಟಿಗೆ ಕಳೆಯುತ್ತದೆ. ಶಾಲೆ, ಆಟ, ಊಟ ಮತ್ತು ಮನೆಯ ವಿಚಾರಗಳೆಲ್ಲವೂ ಒಟ್ಟಿಗೆ ಸಾಗುತ್ತವೆ. ಆದರೆ ದೊಡ್ಡವರಾದಂತೆ ವಿದ್ಯಾಭ್ಯಾಸ, ಉದ್ಯೋಗ, ಮದುವೆ ಮತ್ತು ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹೀಗಾಗಿ ಮೊದಲಿನಂತೆ ಗಂಟೆಗಟ್ಟಲೆ ಕುಳಿತು ಮಾತನಾಡಲು ಸಮಯ ಸಿಗುವುದಿಲ್ಲ. ಆರಂಭದಲ್ಲಿ ಇದು ಸಹಜ ಎನಿಸಿದರೂ, ಕ್ರಮೇಣ ಮಾತನಾಡುವುದೇ ಕಡಿಮೆಯಾಗುತ್ತದೆ.

ಹಳೆಯ ನೋವು ಮತ್ತು ಬೇಸರಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವುದು

ಒಡಹುಟ್ಟಿದವರ ನಡುವಿನ ಹಳೆಯ ಮನಸ್ತಾಪಗಳು ಕೂಡ ಸಂಬಂಧದಲ್ಲಿ ಅಂತರ ಹೆಚ್ಚಾಗಲು ಕಾರಣವಾಗಬಹುದು. ಬಾಲ್ಯದಲ್ಲಿ ಸಣ್ಣದಾಗಿ ಕಂಡ ಕೆಲವು ಘಟನೆಗಳು ದೊಡ್ಡವರಾದ ಮೇಲೆ ಹೆಚ್ಚು ನೋವುಂಟುಮಾಡಬಹುದು. ಉದಾಹರಣೆಗೆ, ತಂದೆ-ತಾಯಿ ಯಾವಾಗಲೂ ಇನ್ನೊಬ್ಬರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು ಎಂಬ ಭಾವನೆ ಇರಬಹುದು. ಕಷ್ಟದ ಸಮಯದಲ್ಲಿ ಅಣ್ಣ ಅಥವಾ ತಂಗಿ ಜೊತೆ ನಿಲ್ಲಲಿಲ್ಲ ಎಂಬ ಬೇಸರವೂ ಮನಸ್ಸಿನಲ್ಲಿ ಉಳಿದಿರಬಹುದು.

ಹೋಲಿಕೆ ಮತ್ತು ಪೈಪೋಟಿಯ ಭಾವನೆ

ಕೆಲವು ಕುಟುಂಬಗಳಲ್ಲಿ ಒಡಹುಟ್ಟಿದವರನ್ನು ಓದು, ಉದ್ಯೋಗ, ಸಂಬಳ ಅಥವಾ ಮದುವೆಯ ವಿಚಾರದಲ್ಲಿ ಹೋಲಿಕೆ ಮಾಡಲಾಗುತ್ತದೆ. ಪದೇಪದೇ ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವುದರಿಂದ ಕೀಳರಿಮೆ ಅಥವಾ ಪೈಪೋಟಿಯ ಭಾವನೆ ಮೂಡಬಹುದು.

ಮದುವೆ ಮತ್ತು ಹೊಸ ಜವಾಬ್ದಾರಿಗಳಿಂದ ಬದಲಾವಣೆ

ಮದುವೆಯ ನಂತರ ಜೀವನದಲ್ಲಿ ಹೊಸ ಸಂಬಂಧಗಳು ಮತ್ತು ಜವಾಬ್ದಾರಿಗಳು ಸೇರ್ಪಡೆಯಾಗುತ್ತವೆ. ಗಂಡ ಅಥವಾ ಹೆಂಡತಿ, ಮಕ್ಕಳು ಮತ್ತು ಕುಟುಂಬದ ಅಗತ್ಯಗಳಿಗೆ ಸಮಯ ನೀಡಬೇಕಾಗುತ್ತದೆ. ಇದರಿಂದ ಸಹಜವಾಗಿಯೇ ಒಡಹುಟ್ಟಿದವರ ಜೊತೆ ಮಾತನಾಡುವ ಸಮಯ ಕಡಿಮೆಯಾಗಬಹುದು.

ಭಾವನೆಗಳನ್ನು ಮನಬಿಚ್ಚಿ ಹೇಳಿಕೊಳ್ಳದಿರುವುದು

ದೊಡ್ಡವರಾದಂತೆ ಅನೇಕರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ. ಅಣ್ಣ ಅಥವಾ ತಂಗಿಗೆ ತಮ್ಮ ಪ್ರೀತಿ ಮತ್ತು ಕಾಳಜಿ ಅರ್ಥವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಮನಸ್ಸಿನಲ್ಲಿ ಪ್ರೀತಿ ಇರುವುದು ಮತ್ತು ಅದನ್ನು ವ್ಯಕ್ತಪಡಿಸುವುದು ಎರಡೂ ಬೇರೆ. ಒಂದು ಸಣ್ಣ ಫೋನ್ ಕರೆ, ಆರೋಗ್ಯ ವಿಚಾರಿಸುವುದು ಅಥವಾ ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವುದು ಕೂಡ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಇಬ್ಬರೂ ಮಾತನಾಡಲು ಪ್ರಯತ್ನಿಸದಿದ್ದರೆ ಆತ್ಮೀಯ ಸಂಬಂಧವೂ ಕ್ರಮೇಣ ದೂರವಾಗುತ್ತದೆ.

ಒಡಹುಟ್ಟಿದವರ ನಡುವೆ ಮತ್ತೆ ಆತ್ಮೀಯತೆ ಹೆಚ್ಚಿಸುವುದು ಹೇಗೆ?

ನಿಮ್ಮ ಅಣ್ಣ ಅಥವಾ ತಂಗಿಯೊಂದಿಗೆ ಮೊದಲಿನಂತೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಸಣ್ಣ ಪ್ರಯತ್ನದಿಂದಲೇ ಆರಂಭಿಸಿ. ಯಾವುದೇ ವಿಶೇಷ ಕಾರಣವಿಲ್ಲದೆ ಫೋನ್ ಮಾಡಿ ಆರೋಗ್ಯ ವಿಚಾರಿಸಿ. ಹಳೆಯ ನೋವುಗಳನ್ನು ಮತ್ತೆ ಮತ್ತೆ ನೆನಪಿಸಿ ಚುಚ್ಚುವ ಬದಲು ಶಾಂತವಾಗಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಯಾವಾಗಲೂ ಎದುರಿನವರೇ ಮೊದಲು ಮಾತನಾಡಬೇಕು ಎಂದು ನಿರೀಕ್ಷಿಸಬೇಡಿ. ನೀವೂ ಒಂದು ಹೆಜ್ಜೆ ಮುಂದಿಡಿ. ಸಣ್ಣಪುಟ್ಟ ಮಾತುಕತೆ, ಪರಸ್ಪರ ಕಾಳಜಿ ಮತ್ತು ಸಮಯ ನೀಡುವ ಮೂಲಕ ಒಡಹುಟ್ಟಿದವರ ನಡುವಿನ ಹಳೆಯ ಆತ್ಮೀಯತೆಯನ್ನು ಮತ್ತೆ ಬೆಳೆಸಿಕೊಳ್ಳಬಹುದು.