ಅಮ್ಮಾ ನಾನು ಇವತ್ತು ಫ್ರೆಂಡ್ಸ್ ಜೊತೆ ಐಸ್‍ಕ್ರೀಂ ಪಾರ್ಲರ್‍ಗೆ ಹೋಗಿದ್ದೆ. ನನ್ನ ಫ್ರೆಂಡ್ ಚಿರಂತ್ ಇದ್ದಾನಲ್ಲ, ಅವನ ಬರ್ತ್‍ಡೇ ಇವತ್ತು. ಅದಕ್ಕೆ ಐಸ್‍ಕ್ರೀಂ ಪಾರ್ಟಿ ಕೊಡ್ಸಿದ್ದ’ ಹೈಸ್ಕೂಲ್ ಮೆಟ್ಟಿಲು ಹತ್ತಿರುವ ಮಗ ತನ್ನ ಮಾತು ಪೂರ್ಣಗೊಳಿಸುವ ಮುನ್ನವೇ ತಾಯಿಗೆ ಸಿಟ್ಟು ನೆತ್ತಿಗೇರಿತು.‘ಮೀಸೆ ಚಿಗುರಲು ಪ್ರಾರಂಭವಾಗಿದ್ದೆ ತಡ, ಫ್ರೆಂಡ್ಸ್, ಪಾರ್ಟಿ ಅಂತೆಲ್ಲ ಶುರು ಹಚ್ಕೊಂಡಿಯಾ? ಇರು, ಅಪ್ಪ ಬರಲಿ ಹೇಳ್ತೀನಿ. ಇದೇ ಕೊನೆ, ಇನ್ನು ಮುಂದೆ ಹೀಗೆಲ್ಲ ಫ್ರೆಂಡ್ಸ್ ಜೊತೆ ಹೋದ್ರೆ ಚೆನ್ನಾಗಿರಲ್ಲ. ಸ್ಕೂಲ್ ಬಿಟ್ಟ ತಕ್ಷಣ ಸೀದಾ ಮನೆಗೆ ಬರ್ಬೇಕು. ಓದಿನ ಕಡೆಗೆ ಗಮನ ಕೊಡು....’ ಹೀಗೆ ಸಾಗಿತ್ತು ಫುಲ್‍ಸ್ಟಾಪ್ ಇಲ್ಲದ ಅಮ್ಮನ ಬೈಗುಳ. ಮಗ ಒಂದು ಕ್ಷಣ ಶಾಕ್. ಪ್ರತಿದಿನ ಶಾಲೆ ಬಿಟ್ಟು ಬಂದ ತಕ್ಷಣ ಆ ದಿನದ ಎಲ್ಲ ಆಗುಹೋಗುಗಳ ಇಂಚಿಂಚು ಮಾಹಿತಿಯನ್ನು ಅಮ್ಮನೊಂದಿಗೆ ಹಂಚಿಕೊಳ್ಳುತ್ತಿದ್ದ ಮಗನಿಗೆ ಇವತ್ತು ಅಮ್ಮ ಗದರಿದಾಗ ಪ್ರಾರಂಭದಲ್ಲಿ ಗೊಂದಲ ಮೂಡಿದ್ದೇನೋ ನಿಜ. ಆದರೂ ಇಂಥದ್ದೇ ಒಂದೆರಡು ಘಟನೆಗಳನ್ನು ಆಮೇಲೆಯೂ ಅಮ್ಮನ ಬಳಿ ಹಂಚಿಕೊಂಡಿದ್ದ. ಆಗಲೂ ಮತ್ತದೇ ಬೈಗುಳಗಳ ಸುರಿಮಳೆ. ಅಲ್ಲಿಗೆ ಮಗನೊಂದು ನಿರ್ಧಾರಕ್ಕೆ ಬಂದ ಇನ್ನು ಅಮ್ಮನ ಬಳಿ ಎಲ್ಲ ವಿಚಾರಗಳನ್ನು ಹಂಚಿಕೊಳ್ಳಬಾರದು. ಪರಿಣಾಮ ಕೆಲವೊಂದು ವಿಷಯಗಳನ್ನು ಅಮ್ಮನಿಂದ ಮುಚ್ಚಿಡಲಾರಂಭಿಸಿದ. ಸಂಜೆ ಅಮ್ಮನಿಗೆ ವರದಿ ಒಪ್ಪಿಸುವ ಅವಧಿ ಕ್ರಮೇಣ ಕಡಿತವಾಗುತ್ತ ಬಂತು. ಕಾಲೇಜು ಮೆಟ್ಟಿಲು ಹತ್ತಿದ ಬಳಿಕವಂತೂ ನಿಂತೇ ಬಿಡ್ತು. ಉದ್ಯೋಗ ಸಿಕ್ತು, ಮದುವೆ ಆಯ್ತು ಮಗ ಅಮ್ಮನಿಂದ ಮುಚ್ಚಿಡುವ ಬುದ್ಧಿಯನ್ನು ಮಾತ್ರ ಬಿಡಲಿಲ್ಲ. ಕೆಲವೊಮ್ಮೆ ಯಾರಿಂದಲೂ ವಿಷಯ ತಿಳಿದಾಗ ತಾಯಿಗೆ ಮಗ ನನಗೇಕೆ ಇದನ್ನೆಲ್ಲ ಹೇಳುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿತ್ತು. ಮನಸ್ಸಿಗೆ ಏನೋ ಕಸಿವಿಸಿಯೂ ಆಗುತ್ತಿತ್ತು. 

ದೂರವಿದ್ದರೂ ಹತ್ತಿರವಾಗುವ ಪ್ರೀತಿಯ ರೀತಿ ಇದು!

ಸ್ನೇಹ-ಸಲುಗೆಗಿದೆ ಸಂಬಂಧ ಬೆಸೆಯುವ ಶಕ್ತಿ
ಚಿಕ್ಕವರಿರುವಾಗ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದ ಮಗ ಅಥವಾ ಮಗಳು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಅಮ್ಮನಿಂದ ಮುಚ್ಚುಮರೆ ಮಾಡೋದು ಬಹುತೇಕ ಸಾಮಾನ್ಯ. ಆದ್ರೆ ಕೆಲವು ಮಕ್ಕಳು ಮಾತ್ರ ದೊಡ್ಡವರಾದ್ರೂ ತಾಯಿ ಅಥವಾ ತಂದೆ ಬಳಿ ಯಾವುದೇ ಸಂಕೋಚವಿಲ್ಲದೆ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಅಂಥ ಕುಟುಂಬಗಳಲ್ಲಿ ಪೋಷಕರು ಮತ್ತು ಮಕ್ಕಳ ನಡುವೆ ಸಂಬಂಧಕ್ಕೂ ಮೀರಿದ ಗೆಳೆತನವಿರುತ್ತೆ. ಅಲ್ಲಿ ಗೌರವ, ಭಯದ ಬದಲು ಸ್ನೇಹ - ಸಲುಗೆ ಇರುತ್ತೆ. ಇದು ಹೆತ್ತವರು ಮತ್ತು ಮಕ್ಕಳ ನಡುವೆ ಯಾವುದೇ ಗೋಡೆ ನಿರ್ಮಾಣವಾಗದಂತೆ ತಡೆಯುತ್ತೆ.

ಬಾಯ್ಸ್‌ ಲಾಕರ್‌ ರೂಮ್‌ ಅಡ್ಮಿನ್ ಸೆರೆ! 

ಮಾಡಬೇಡ ಅಂದ್ರೆ ಅದನ್ನೇ ಮಾಡ್ತಾರೆ
ಮಕ್ಕಳು ಸರಿಯಾದ ದಾರಿಯಲ್ಲಿ ಸಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂಬ ಬಯಕೆ ಎಲ್ಲ ತಂದೆ-ತಾಯಿಗೂ ಇರುತ್ತೆ. ಆದ್ರೆ ಇದೇ ಕಾರಣಕ್ಕೆ ಮಕ್ಕಳ ಪ್ರತಿ ಮಾತು ಹಾಗೂ ನಡವಳಿಕೆಯನ್ನು ಖಂಡಿಸೋದು, ಬೈಯೋದು ಮಾಡಿದ್ರೆ ಅವರು ಹಾದಿ ತಪ್ಪಲು ಹೆತ್ತವರೇ ಪರೋಕ್ಷವಾಗಿ ಕಾರಣವಾಗುವ ಸಾಧ್ಯತೆಯೂ ಇರುತ್ತೆ. ಅದ್ರಲ್ಲೂ ಹದಿಹರೆಯ ಎಂಬ ಅತ್ಯಂತ ನಾಜೂಕಿನ ವಯಸ್ಸಿನಲ್ಲಿ ಮಕ್ಕಳನ್ನು ಬಿಗಿ ಹಿಡಿಯಲು ಹೊರಟ್ಟರೆ ಹಾದಿ ತಪ್ಪುವ ಸಾಧ್ಯತೆ ಅಧಿಕ. ಮಾಡಬಾರದು ಎಂದು ನಿರ್ಬಂಧಿಸಿದ ಕೆಲಸವನ್ನೇ ಮಾಡಿ ನೋಡುವ ಬುದ್ಧಿ ಈ ವಯಸ್ಸಿನಲ್ಲಿ ಕಾಮನ್. 

ಕೋಟಿ ಕೊಟ್ಟರೂ ಸಿಗೋದಿಲ್ಲ ಕೊಡೋದ್ರಲ್ಲಿರುವ ಸುಖ

ಬೈಯೋದ್ರಿಂದ ಕೆಲಸ ಕೆಡುತ್ತೆ
ಬೈದು, ಹೊಡೆದು ಮಕ್ಕಳನ್ನು ಹಾದಿಗೆ ತರಬಹುದು ಎಂಬ ನಂಬಿಕೆ ಕೆಲವು ಪೋಷಕರಲ್ಲಿರುತ್ತೆ. ಆದ್ರೆ ಮಕ್ಕಳು ನಿಮ್ಮ ಬಳಿ ಸತ್ಯವನ್ನು ಹೇಳಿಕೊಂಡಾಗ ಬೈಯೋದು, ಹೊಡೆಯೋದು ಮಾಡಿದ್ರೆ ಮುಂದೆ ಅವರು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬ ಮಾಹಿತಿಯೇ ನಿಮಗೆ ಸಿಗೋದಿಲ್ಲ. ಹೀಗಾಗಿ ಕೋಪದ ಕೈಗೆ ಬುದ್ಧಿ ಕೊಡುವ ಬದಲು ಜಾಣತನದಿಂದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಬೇಕು. 

ಪ್ರೀತಿಗಿದೆ ತಿದ್ದೋ ಶಕ್ತಿ
ಮಕ್ಕಳು ತಪ್ಪು ಮಾಡಿದ ಬಳಿಕ ನಿಮ್ಮ ಬಳಿ ಅದನ್ನು ಹಂಚಿಕೊಂಡಾಗ ಸಿಟ್ಟು ಬಂದ್ರೂ ಕಂಟ್ರೋಲ್ ಮಾಡಿಕೊಳ್ಳಿ. ನಿಧಾನವಾಗಿ ಅವರೇಕೆ ಹಾಗೆ ಮಾಡಿದರು ಎಂಬುದನ್ನು ಅವರಿಂದಲೇ ತಿಳಿದುಕೊಳ್ಳಿ. ನಂತರ ಆ ರೀತಿ ಮಾಡೋದ್ರಿಂದ ಏನೆಲ್ಲ ತೊಂದರೆಗಳಾಗಬಹುದು, ಅದೇಕೆ ಈ ವಯಸ್ಸಿನಲ್ಲಿ ಮಾಡಬಾರದು ಎಂಬುದನ್ನು ಸಾವಧಾನದಿಂದ ವಿವರಿಸಿ. ಬೈಯುವ ಬದಲು ಆ ವಿಷಯದ ಬಗ್ಗೆ ಚರ್ಚಿಸಿ ತಿಳಿ ಹೇಳಿದ್ರೆ ಮಕ್ಕಳಿಗೂ ಅರ್ಥವಾಗುತ್ತೆ. ಜೊತೆಗೆ ನಿಮ್ಮಿಂದ ವಿಷಯಗಳನ್ನು ಮುಚ್ಚಿಡುವ ಪ್ರಯತ್ನವನ್ನು ಕೂಡ ಅವರು ಮಾಡೋದಿಲ್ಲ.