ದಾಂಪತ್ಯಕ್ಕೆ ಸಮಯವೆಲ್ಲಿ ಕೊಟ್ಟಿದ್ದೀರಿ: ವಿಚ್ಛೇದನಕ್ಕೆ ಮುಂದಾದ ಟೆಕ್ಕಿ ದಂಪತಿಯ ಪ್ರಶ್ನಿಸಿದ ಕೋರ್ಟ್
ಬದುಕಿನಲ್ಲಿ ಹೊಂದಾಣಿಕೆ ಇಲ್ಲದೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಸಾಫ್ಟ್‌ವೇರ್ ಉದ್ಯೋಗದಲ್ಲಿದ್ದ ದಂಪತಿಯನ್ನು ಸುಪ್ರೀಂಕೋರ್ಟ್ ಮನವೊಲಿಸುವ ಪ್ರಯತ್ನ ಮಾಡಿತ್ತು.
ಬೆಂಗಳೂರು: ಗಂಡ ಹೆಂಡತಿ ಇಬ್ಬರು ಜೋಡೆತ್ತಿನಂತೆ ಕರ್ತವ್ಯ, ಜವಾಬ್ದಾರಿಯನ್ನು ಸಮವಾಗಿ ಹಂಚಿಕೊಂಡು ಒಬ್ಬರನ್ನೊಬ್ಬರು ಅರಿತುಕೊಂಡು ಸಹಬಾಳ್ವೆಯಿಂದ ಬಾಳುತ್ತಿದ್ದರೆ ದಾಂಪತ್ಯ ಒಂದು ಸುಂದರ ಅನುಬಂಧ. ಇಲ್ಲದೇ ಹೋದಲ್ಲಿ ಅದೊಂದು ನರಕ. ಇದೇ ಕಾರಣಕ್ಕೆ ಅನೇಕರು ಇರುವೊಂದು ಜೀವನ, ಜೀವನವೀಡಿ ಏಕೆ ನರಕ ಅನುಭವಿಸಬೇಕು. ಇರುವೊಂದು ಜೀವನವನ್ನು ತಮ್ಮಿಷ್ಟದಂತೆ ಬದುಕಬೇಕು ತಮ್ಮನ್ನು ಅರಿತು ಬಾಳುವವರೊಂದಿಗೆ ಬದುಕಬೇಕು ಎಂದು ವಿಚ್ಛೇದನದ ಹಾದಿ ತುಳಿಯುತ್ತಾರೆ. ಇದೇ ಕಾರಣಕ್ಕೆ ಇಂದು ವಿಚ್ಛೇದನದ ಸಂಖ್ಯೆ ಹೆಚ್ಚಿದೆ. ಹೀಗೆ ಬದುಕಿನಲ್ಲಿ ಹೊಂದಾಣಿಕೆ ಇಲ್ಲದೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಸಾಫ್ಟ್‌ವೇರ್ ಉದ್ಯೋಗದಲ್ಲಿದ್ದ ದಂಪತಿಯನ್ನು ಸುಪ್ರೀಂಕೋರ್ಟ್ ಮನವೊಲಿಸುವ ಪ್ರಯತ್ನ ಮಾಡಿತ್ತು.
ತಮ್ಮ ಈ ಬಾಂಧವ್ಯಕ್ಕೆ ನೀವು ಇದುವರೆಗೆ ಸಮಯವೇ ನೀಡಿಲ್ಲ, ಸಮಯ ನೀಡಿ ಒಂದು ಸಲ ವಿವಾಹ (wedding) ಉಳಿಸಿಕೊಳ್ಳಲು ಎರಡನೇ ಚಾನ್ಸ್ ನೀಡಬಾರದೇಕೆ ಎಂದು ಸಾಫ್ಟ್‌ವೇರ್ ದಂಪತಿಗೆ (software couple) ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಕೆಎಂ ಜೋಸೆಫ್ ಹಾಗೂ ಬಿವಿ ನಾಗರತ್ನ (B V Nagaratna) ಅವರಿದ್ದ ಪೀಠ ಪ್ರಶ್ನೆ ಮಾಡಿತ್ತು. ಆದರೆ ದಂಪತಿ ಮನವೊಲಿಕೆಗೆ ಒಪ್ಪದ ಕಾರಣ ಕೋರ್ಟ್ ಕೊನೆಯದಾಗಿ ಅವರಿಗೆ ವಿಚ್ಛೇದನ ನೀಡಿತು. ಬೆಂಗಳೂರಿನಲ್ಲಿ ಈ ದಂಪತಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು.
ಬಂಜೆ ಎಂಬ ಹೀಯಾಳಿಕೆಯಿಂದ ಡಿವೋರ್ಸ್: ವಿಚ್ಛೇದನದ ಬಳಿಕ ಮಗುವಿನ ಅಮ್ಮ!
ನಿಮ್ಮ ದಾಂಪತ್ಯಕ್ಕೆ ಸಮಯವೆಲ್ಲಿದೆ. ನೀವಿಬ್ಬರೂ ಬೆಂಗಳೂರಿನಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದೀರಿ, ಒಬ್ಬರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದರೆ ಮತ್ತೊಬ್ಬರು ಹಗಲು ಪಾಳಿಯಲ್ಲಿ ಕೆಲಸ ಮಾಡುತ್ತಿರಿ. ನಿಮಗೆ ಡಿವೋರ್ಸ್ (Divorce) ಪಡೆಯುವುದಕ್ಕೆ ಬೇಸರವಿಲ್ಲ. ಆದರೆ ಮದುವೆಯಾಗಿದ್ದಕ್ಕೆ ಬೇಸರವಿದೆ. ಹೀಗಾಗಿ ನಿಮ್ಮ ಈ ವಿವಾಹದ ಉಳಿವಿಗೆ ಒಂದು ಅವಕಾಶ ನೀಡಬಾರದೇಕೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ವಿಚ್ಛೇದನ ಸಾಮಾನ್ಯ ಎನ್ನುವಂತಹ ಸ್ಥಳ ಬೆಂಗಳೂರು ಅಲ್ಲ, ಹೀಗಾಗಿ ದಂಪತಿ ತಮ್ಮ ಮದ್ವೆಗೆ 2ನೇ ಚಾನ್ಸ್ ನೀಡಿದರೆ ಉತ್ತಮ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ಆದಾಗ್ಯೂ, ಈ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕಕ್ಷಿದಾರರ ನಡುವೆ ಇತ್ಯರ್ಥದ ಸಾಧ್ಯತೆಯನ್ನು ಅನ್ವೇಷಿಸಲು ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ ಈ ಹಿಂದೆಯೇ ಕಳುಹಿಸಲಾಗಿದೆ ಎಂದು ಪತಿ ಮತ್ತು ಪತ್ನಿ ಇಬ್ಬರ ಪರ ವಕೀಲರು ಪೀಠಕ್ಕೆ ತಿಳಿಸಿದರು. ಅಲ್ಲದೇ ಗಂಡ ಹೆಂಡತಿ ಇಬ್ಬರೂ ಒಪ್ಪಿಯೇ ಈ ವಿಚ್ಛೇದನವನ್ನು ಪಡೆಯುತ್ತಿದ್ದು, ಹಿಂದೂ ವಿವಾಹ ಕಾಯ್ದೆಯ 1995ರ ಅಡಿ ಬರುವ ಸೆಕ್ಷನ್ 138 ಮ್ಯೂಚುವಲ್ ಕಾನ್ಸೆಂಟ್ (ಪರಸ್ಪರ ಒಪ್ಪಿಗೆಯ ವಿಚ್ಚೇದನ) ಅಡಿ ತಮ್ಮ ವಿವಾಹವನ್ನು ಅಂತ್ಯಗೊಳಿಸಲು ಮುಂದಾಗಿದ್ದಾರೆ ಎಂದು ವಕೀಲರು ನ್ಯಾಯ ಪೀಠಕ್ಕೆ ತಿಳಿಸಿದರು. ಅಲ್ಲದೇ ಈ ಪ್ರಕರಣದಲ್ಲಿ ಪತಿ 12.51 ಲಕ್ಷದ ಶಾಶ್ವತ ಹಾಗೂ ಅಂತಿಮ ಪರಿಹಾರವನ್ನು ಪತ್ನಿಗೆ ನೀಡುತ್ತಿದ್ದಾರೆ ಎಂದು ಕೋರ್ಟ್‌ಗೆ ವಕೀಲರು ತಿಳಿಸಿದರು.
ವಿಚ್ಚೇದನದ ಮೇಲ್ಮನವಿ ಅವಧಿಗೂ ಕಾಯದೆ 2ನೇ ಮದುವೆಯಾದ ಮಹಿಳೆಗೆ ಸಂಕಷ್ಟ: ಹೈಕೋರ್ಟ್ ಹೇಳಿದ್ದೇನು..?
ಇತ್ತೀಚೆಗೆ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲೆಲ್ಲಾ ಗಂಡು ಮಾತ್ರ ದುಡಿಮೆ ಮಾಡುತ್ತಿದ್ದು, ಹೆಣ್ಣು ಆರ್ಥಿಕವಾಗಿ ಸಬಲವಾಗಿರಲಿಲ್ಲ. ಆದರೆ ಈಗ ಗಂಡು ಹೆಣ್ಣು ಇಬ್ಬರು ಸಮ ಸಮವಾಗಿ ದುಡಿಯುತ್ತಿರುವುದರಿಂದ ಹೆಣ್ಣು ಕೂಡ ಗಂಡಿನಷ್ಟೇ ಆರ್ಥಿಕವಾಗಿ ಸ್ವಾತಂತ್ರರಾಗಿದ್ದಾರೆ. ಇದೇ ಕಾರಣಕ್ಕೆ ಹೇಳಿದ್ದೆಲ್ಲವನ್ನು ಕೇಳಿಕೊಂಡು ನಾಲ್ಕು ಗೋಡೆಗಳ ಮಧ್ಯೆ ಕೂರಲು ಅವರು ಸಿದ್ಧರಿಲ್ಲ. ಇದೇ ಕಾರಣಕ್ಕೆ ಇಂದು ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ.