ʼಅಮ್ಮನ ಮಗʼನನ್ನು ಮದುವೆಯಾದರೆ ಹೇಗಿರುತ್ತೆ ಲೈಫ್?
ಸದಾ ಅಮ್ಮನ ಸೆರಗು ಹಿಡಿದು ಸುತ್ತಾಡುವ ಕೆಲವು ಗಂಡುಮಕ್ಕಳು, ದೊಡ್ಡವರಾದ ಮೇಲೂ ತಮ್ಮ ಈ ಸ್ವಭಾವ ಬಿಡುವುದಿಲ್ಲ. ಇಂಥವರನ್ನು ಮದುವೆಯಾಗುವ ಹುಡುಗಿ ಕೆಲವು ವಿಶಿಷ್ಟವಾದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಅವು ಯಾವುವುದು ಗೊತ್ತೆ? ಅಂಥ ವ್ಯಕ್ತಿಯನ್ನು ಮದುವೆಯಾಗೋಕೆ ಮುನ್ನ ಇವು ನಿಮಗೆ ಗೊತ್ತಿರಲಿ (marriage tips)!
ಸದಾ ಅಮ್ಮನ ಸೆರಗು ಹಿಡಿದು ಸುತ್ತಾಡುವ ಕೆಲವು ಗಂಡುಮಕ್ಕಳು, ದೊಡ್ಡವರಾದ ಮೇಲೂ ತಮ್ಮ ಈ ಸ್ವಭಾವ ಬಿಡುವುದಿಲ್ಲ. ಇಂಥವರು ಸ್ಮಾರ್ಟ್ ಆಗಿರಬಹುದು, ನೋಡಲು ಚಂದ ಇರಬಹುದು, ಕರಿಯರ್‌ನಲ್ಲೂ ಒಳ್ಳೆಯ ಸಾಧನೆಯನ್ನೇ ಮಾಡಬಹುದು, ಆದರೆ ಕೆಲವು ಸ್ವಭಾವಗಳು ಈ ʼಅಮ್ಮನ ಮಗʼ ಜಾತಿಗೇ ವಿಶಿಷ್ಟವಾಗಿವೆ! ಇಂಥ ಒಬ್ಬ ಹುಡುಗನನ್ನು ಮದುವೆಯಾದ ಹುಡುಗಿ, ಛೇ ನನಗೆ ಈವಯ್ಯನ ಈ ಲಕ್ಷಣಗಳೆಲ್ಲಾ ಮೊದಲೇ ಗೊತ್ತಿದ್ದಿದ್ದರೆ ಇನ್ನೂ ಚೆನ್ನಾಗಿತ್ತು ಎಂದುಕೊಂಡಿದ್ದಾಳೆ. ಆಕೆ ಕಲಿತ ಐದು ಪಾಠಗಳ ಬಗ್ಗೆ ಆಕೆ ಬರೆದುಕೊಂಡಿದ್ದಾಳೆ. ಅವು (marriage tips) ಹೀಗಿವೆ:
1. ತಾವು ಎಷ್ಟು ಮುದ್ದಾಗಿ ಹಾಳಾಗಿದ್ದೇವೆ ಅಂತ ಇವರಿಗೆ ಗೊತ್ತೇ ಇರುವುದಿಲ್ಲ
ಈ ಮಕ್ಕಳು ಸಾಮಾನ್ಯವಾಗಿ ಕೊನೆಯ ಮಗು ಆಗಿರುತ್ತಾರೆ ಅಥವಾ ಏಕೈಕ ಮಗು ಆಗಿರುತ್ತಾರೆ. ಹೀಗಾಗಿ ಇವರನ್ನು ಅಪ್ಪ ಅಮ್ಮ ಸಿಕ್ಕಾಪಟ್ಟೆ ಮುದ್ದು ಮಾಡಿ ಬೆಳೆಸಿರುತ್ತಾರೆ. ಅವರು ಬೆಳೆದು ದೊಡ್ಡವರಾಗಿದ್ದರೂ ಅವರ ಬಟ್ಟೆಯನ್ನು ಅಮ್ಮನೇ ತೊಳೆಯುತ್ತಾರೆ; ಆತ ಮುಂಜಾನೆ ಹಾಸಿಗೆಯಲ್ಲಿದ್ದರೂ ಅಲ್ಲಿಗೇ ಟೀ ಬರುತ್ತದೆ; ಅಮ್ಮ ಕಷ್ಟವಾದರೂ ಮನೆಕೆಲಸ ಮಾಡಿ ಮುದ್ದಾಗಿ ಮಗನನ್ನು ನೋಡಿಕೊಂಡಿರುತ್ತಾರೆ. ಇಂಥ ಮಗ ಹೆಂಡತಿಯಿಂದಲೂ ಅದೇ ಬಗೆಯ ಸೇವೆಯನ್ನು ನಿರೀಕ್ಷೆ ಮಾಡುತ್ತಾನೆ. ಎಲ್ಲ ಕಡೆಯೂ ಹೀಗಿರುವುದಿಲ್ಲ ಎಂಬುದು ಅವರಿಗೆ ತಿಳಿದೇ ಇರುವುದಿಲ್ಲ. ಇದನ್ನು ಅವರಿಗೆ ಗೊತ್ತು ಮಾಡಿಸುವುದೇ ಕಷ್ಟ!
2. ದೌರ್ಬಲ್ಯ ತೋರಿಸಿದರೆ ಜಗಳ ಶುರುಹಚ್ಚಿಕೊಳ್ಳುತ್ತಾರೆ!
ಇವರಲ್ಲಿ ಇರುವ ಅಳುಕು, ದೌರ್ಬಲ್ಯ ಮೊದಲಾದ ನೆಗೆಟಿವ್ ಸಂಗತಿಗಳನ್ನು ಇವರ ಗಮನಕ್ಕೆ ತರುವುದೇ ಕಷ್ಟ. ಜಗಳಕ್ಕೇ ನಿಂತುಬಿಡುತ್ತಾರೆ, ಆಕ್ರಮಣಕಾರಿಯಾಗುತ್ತಾರೆ. ನೆಗೆಟಿವ್ ಕಮೆಂಟ್ ಸಹಿಸುವ ಶಕ್ತಿಯೇ ಇವರಿಗೆ ಇರುವುದಿಲ್ಲ. ತಮಗೆ ಬೇಕಾದ್ದನ್ನು ಹೇಗಾದರೂ ಗಳಿಸುವ ದಾರಿ ಹುಡುಕುತ್ತಾರೆ. ಮಕ್ಕಳಂತೆ ಅಳಲೂಬಹುದು. ಆಕ್ರಮಣಕಾರಿಯಾಗಿ ಮಾತಾಡದೆ, ಬಯ್ಯದೆ, ಇವರನ್ನು ತಿದ್ದಲು ಯತ್ನಿಸಬೇಕು. ತಿದ್ದಿಕೊಳ್ಳಲು ವಾರ, ತಿಂಗಳು, ವರ್ಷವೇ ತೆಗೆದುಕೊಳ್ಳಬಹುದು.
3. ತಾಯಿಗೆ ಎಲ್ಲವನ್ನೂ ಹೇಳುತ್ತಾರೆ!
ಈ ಪುರುಷೋತ್ತಮರು ತಮ್ಮ ತಾಯಿಗೆ ಹೇಳದೇ ಇರುವ ವಿಷಯಗಳೇ ಇರುವುದಿಲ್ಲ. ಗಂಡ- ಹೆಂಡತಿ ನಡುವೆ ಖಾಸಗಿಯಾಗಿ ಇರಬೇಕಾದ ಕೆಲವು ಸಂಗತಿಗಳನ್ನೂ ಇವರು ತಾಯಿಯ ಜತೆಗೆ ಹಂಚಿಕೊಳ್ಳಬಹುದು. ಇದರಿಂದ ಖಂಡಿತವಾಗಿಯೂ ಹೊಸದಾಗಿ ಬಂದ ಪತ್ನಿಗೆ ಮುಜುಗರವಾಗದೇ ಇರದು. ಇಂಥ ಸಂದರ್ಭದಲ್ಲಿ ತಾಯಿಗೆ ತಿಳಿಯಬೇಕಾದ ವಿಷಯಗಳ್ಯಾವುವು, ಯಾವುದು ತಿಳಿಯಬಾರದು ಎಂಬುದನ್ನು ನಿಧಾನವಾಗಿ ಅರ್ಥ ಮಾಡಿಸಿಕೊಡುವ ತಾಳ್ಮೆ ತೆಗೆದುಕೊಳ್ಳಬೇಕಾಗುತ್ತದೆ.
ಸಂಬಂಧವನ್ನು ಈಸಿಯಾಗಿ ನಿಭಾಯಿಸೋ ಮಹಿಳೆಯರು ಹೇಗಿರ್ತಾರೆ ಗೊತ್ತಾ?
4. ಹೆಂಡತಿಯೂ ತಾಯಿಯಾಗಬೇಕಾಗುತ್ತದೆ!
ಈ ಮಗನಿಗೆ ತಾಯಿಯಿಂದ ಸೇವೆ ಮಾಡಿಸಿಕೊಂಡು ಗೊತ್ತಿರುತ್ತದೆಯೇ ಹೊರತು ಮನೆಕೆಲಸ ಮಾಡಿ ಚೂರೂ ಗೊತ್ತಿರುವುದಿಲ್ಲ. ಅಮ್ಮಂದಿರು ಇವರ ರಕ್ಷಕರಾಗಿರುತ್ತಾರೆ. ಮುದ್ದಿಸಿ ಹಾಳು ಮಾಡಿರುತ್ತಾರೆ. ಇಂಥ ಹೊತ್ತಿನಲ್ಲಿ ಹೆಂಡತಿ ನಂದು ನಿನ್ನ ಬಟ್ಟೆ ನೀನೇ ಒಗೆದುಕೋ ಎಂದರೆ ಆಕೆ ರಾಕ್ಷಸಿಯಂತೆ ಆತನಿಗೆ ಕಾಣಿಸುವುದು ಸಹಜ. ಆತನ ಸೇವಕಿಯಾಗದಂತೆ, ಆತ ತನ್ನ ಕೆಲಸ ತಾನೇ ಮಾಡಿಕೊಳ್ಳುವಂತೆ ರೆಡಿ ಮಾಡುವುದೇ ಸವಾಲು. ಮಾತಿನ ಕೊನೆಯಲ್ಲಿ ʼಪ್ಲೀಸ್ʼ ಎಂಬ ಒಂದು ಪದ ಆತನಿಂದ ಕೆಲವು ಕೆಲಸಗಳನ್ನು ಮಾಡಿಸಬಲ್ಲುದು.
5. ಭಾವನಾತ್ಮಕವಾಗಿ ಅಭದ್ರ ವ್ಯಕ್ತಿತ್ವದವರು
ತನ್ನನ್ನು ರಕ್ಷಿಸಲು ಅಮ್ಮ ಸದಾ ಇದ್ದೇ ಇರುತ್ತಾಳೆ ಎಂದು ಇವರು ಗಟ್ಟಿಯಾಗಿ ನಂಬಿರುತ್ತಾರೆ. ಎಲ್ಲ ಹುಡುಗಿಯರನ್ನೂ ಹಾಗೆಯೇ ಎಂದು ನಂಬಿ, ಪ್ರೇಮಿಸಿ, ಹಾಗಿಲ್ಲ ಎಂದು ಅರ್ಥವಾದಾಗ ಭಗ್ನಹೃದಯರಾಗಿರುವ ಸಾಧ್ಯತೆಯೂ ಇದೆ. ತನ್ನ ರಕ್ಷಣೆಗೆ ಬಂದಿರುವ ಜೀವ ನೀವೇ ಎಂಬುದು ಅವರ ನಂಬಿಕೆಯಾಗಿರುತ್ತದೆ. ಇದು ಚೂರಾಗದಂತೆ ನೀವು ನೋಡಿಕೊಳ್ಳಬೇಕಾಗುತ್ತದೆ. ಅದು ಸವಾಲೇ ಆಗುತ್ತದೆ.
ಪರ್ಫೆಕ್ಟ್ ಎನ್ನುವ ಮಡದಿ ಪಕ್ಕದಲ್ಲಿದ್ದರೂ, ಅವನಿಗ್ಯಾಕೆ ಬೇರೆ ಹೆಣ್ಮಕ್ಕಳ ಸಹವಾಸ?