Parenting Tips : ಮಕ್ಕಳನ್ನು ಪ್ರತ್ಯೇಕ ರೂಮ್ ನಲ್ಲಿ ಮಲಗಿಸ್ತೀರಾ? ಒಮ್ಮೆ ಈ ಸ್ಟೋರಿ ಓದಿ
ಅನೇಕರ ಮನೆಯಲ್ಲಿ ಮಕ್ಕಳಿಗಾಗಿ ಒಂದು ಕೋಣೆ ಇರುತ್ತೆ. ಆದ್ರೆ ಮಕ್ಕಳು ಪಾಲಕರ ರೂಮ್ ನಲ್ಲಿ ಮಲಗ್ತಿರುತ್ತಾರೆ. ಮಕ್ಕಳನ್ನು ಬೇರೆ ರೂಮ್ ಗೆ ಶಿಪ್ಟ್ ಮಾಡೋ ವಿಚಾರದಲ್ಲಿ ಪಾಲಕರಿಗೆ ಗೊಂದಲವಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಪಾಲಕರಾಗೋದು ಸುಲಭದ ಮಾತಲ್ಲ. ಪಾಲಕರಾದವರಿಗೆ ಮಕ್ಕಳ (Children) ಲಾಲನೆ – ಪಾಲನೆ ಬಗ್ಗೆ ಅಲ್ಪಸ್ವಲ್ಪವಾದ್ರೂ ತಿಳಿದಿರಬೇಕು. ಮಕ್ಕಳನ್ನು ಬೆಳೆಸುತ್ತ ಪಾಲಕರು ಸಾಕಷ್ಟು ವಿಷ್ಯಗಳನ್ನು ಕಲಿಯುತ್ತಾರೆ. ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಆಯಾ ವಿಷ್ಯದ ಬಗ್ಗೆ ಜ್ಞಾನ (Knowledge) ನೀಡದೆ ಹೋದ್ರೆ ಸಮಸ್ಯೆ ಶುರುವಾಗುತ್ತದೆ. ಭಾರತ (India) ದಲ್ಲಿ ಮಕ್ಕಳ ಪಾಲನೆ – ಪಾಲನೆಗೆ ತಾಯಿ ತನ್ನ ಜೀವನವನ್ನು ಮುಡುಪಾಗಿಡ್ತಾಳೆ ಅಂದ್ರೆ ತಪ್ಪಾಗಲಾರದು. ಆದ್ರೆ ಮಕ್ಕಳನ್ನು ನೋಡಿಕೊಳ್ಳುವ ಜೊತೆಗೆ ಇಬ್ಬರ ದುಡಿಮೆ ಇತ್ತೀಚಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಹಾಗಿರುವಾಗ ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ಕಲಿಕೆ ಮುಖ್ಯವಾಗುತ್ತದೆ. ಮಕ್ಕಳಿಗೆ ಯಾವಾಗ ಎದೆ ಹಾಲು ಬಿಡಿಸಬೇಕು ಎನ್ನುವುದ್ರಿಂದ ಹಿಡಿದು ಮಕ್ಕಳು ಯಾವಾಗ ಶೌಚಾಲಯಕ್ಕೆ ಹೋಗಿ ಮಲ, ಮೂತ್ರ ವಿಸರ್ಜನೆ ಮಾಡ್ಬೇಕು ಎಂಬುದನ್ನು ಕೂಡ ಪಾಲಕರು ಕಲಿಸಬೇಕಾಗುತ್ತದೆ. ಹಾಗೆಯೇ ಮಕ್ಕಳನ್ನು ಯಾವಾಗ ಪ್ರತ್ಯೇಕವಾಗಿ ಮಲಗಿಸಬೇಕು ಎಂಬ ಪ್ರಶ್ನೆ ಬಹುತೇಕ ಪಾಲಕರನ್ನು ಕಾಡುತ್ತದೆ. ಮಕ್ಕಳನ್ನು ಬೇರೆ ರೂಮಿಗೆ ಶಿಪ್ಟ್ ಮಾಡಲು ಬೇರೆ ಬೇರೆ ಕಾರಣಗಳಿರಬಹುದು. ಆದರೆ ಪ್ರತಿಯೊಬ್ಬ ಪೋಷಕರು ಮಗುವಿನ ದೃಷ್ಟಿಕೋನದಿಂದ ಯೋಚಿಸುವುದು ಸಹ ಮುಖ್ಯ. ಮಕ್ಕಳಿಗೆ ಸ್ವತಂತ್ರ ಬದುಕು ನೀಡುವುದ್ರಲ್ಲಿ ಅವರನ್ನು ಪ್ರತ್ಯೇಕವಾಗಿ ಮಲಗಿಸುವುದು ಕೂಡ ಸೇರಿದೆ.
ಪಾಲಕರ ಜೊತೆ ಮಲಗುವ ಅಭ್ಯಾಸವಿರುವ ಮಕ್ಕಳು ಪಾಲಕರನ್ನು ಬಿಟ್ಟು ಹೋಗುವುದಿಲ್ಲ. ಬೇರೆಯವರ ಮನೆಯಲ್ಲಿ ಉಳಿಯುವುದಿಲ್ಲ. ಅವರಿಗೆ ಒಂಟಿಯಾಗಿದ್ದಾಗ ಭಯ ಶುರುವಾಗುತ್ತದೆ. ಹಾಗಾಗಿ ಮಕ್ಕಳನ್ನು ಪ್ರತ್ಯೇಕವಾಗಿ ಮಲಗಿಸಿ, ಅವರನ್ನು ಸ್ವತಂತ್ರಗೊಳಿಸಲು ಪಾಲಕರು ಮುಂದಾಗ್ತಾರೆ. ಆದ್ರೆ ಯಾವ ವಯಸ್ಸಿನಲ್ಲಿ ಅವರನ್ನು ಪ್ರತ್ಯೇಕವಾಗಿ ಮಲಗಿಸಬೇಕೆಂಬ ಗೊಂದಲವಿರುತ್ತದೆ. ಈ ಪ್ರಶ್ನೆಗೆ ನಾವಿಂದು ಉತ್ತರ ನೀಡುವ ಪ್ರಯತ್ನ ಮಾಡ್ತೇವೆ.
ಮಗುವಿಗೆ ಪ್ರತ್ಯೇಕ ಕೋಣೆ ನೀಡಲು ಸರಿಯಾದ ವಯಸ್ಸು : ಮಕ್ಕಳನ್ನು ಬೇರೆ ಕೋಣೆಯಲ್ಲಿ ಮಲಗಿಸುವುದು ಪಾಲಕರ ಮೇಲೆ ಬಿಟ್ಟಿದೆ. ಯಾಕೆಂದ್ರೆ ಕೆಲ ಪಾಲಕರಿಗೆ ಮಕ್ಕಳನ್ನು ಬಿಟ್ಟು ಮಲಗುವುದು ಕಷ್ಟ. ಕೆಲ ಪಾಲಕರು ಮಕ್ಕಳನ್ನು ಐದು ವರ್ಷದಿಂದಲೇ ಪ್ರತ್ಯೇಕವಾಗಿ ಮಲಗಿಸ್ತಾರೆ. ಮತ್ತೆ ಕೆಲ ಪಾಲಕರು 10 ವರ್ಷವಾದ್ರೂ ಜೊತೆಯಲ್ಲಿ ಮಲಗಿಸಿಕೊಳ್ತಾರೆ. ಮಕ್ಕಳನ್ನು ನೀವು ಆಪ್ತವಾಗಿ ನೋಡಿರುವ ಕಾರಣ ನಿಮ್ಮ ಮಗುವಿನ ಸ್ವಭಾವ ನಿಮಗೆ ಅರಿವಿರುತ್ತದೆ. ತಜ್ಞರ ಪ್ರಕಾರ, ಕಡಿಮೆ ವಯಸ್ಸಿನಲ್ಲಿ ಮಕ್ಕಳನ್ನು ದೂರ ಮಲಗಿಸುವುದು ಒಳ್ಳೆಯದು. ಆಗ ಮಗು, ತಾಯಿಯಿಂದ ದೂರವಿರುವುದನ್ನು ಬೇಗ ಕಲಿಯುತ್ತಾನೆ.
ಇದನ್ನೂ ಓದಿ: ಮಕ್ಕಳ ಈ ಕೆಟ್ಟ ಅಭ್ಯಾಸ ಚಿಕ್ಕಂದಿನಲ್ಲೇ ಸರಿಪಡಿಸಿ, ದೊಡ್ಡವರಾದ ಮೇಲೆ ಸರಿ ಮಾಡೋಕಾಗಲ್ಲ !
ಪಾಲಕರು ಏನು ಮಾಡ್ಬೇಕು ? : ಪಾಲಕರಾದವರು ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಂದರಿಂದ ಮೂರು ತಿಂಗಳ ವಯಸ್ಸಿನ ಮಗುವನ್ನು ಹಾಸಿಗೆಯ ಮೇಲೆ ಅಥವಾ ತುಂಬಾ ಹತ್ತಿರದ ತೊಟ್ಟಿಲಿನಲ್ಲಿ ಮಲಗಿಸಬೇಕು. ಮೂರರಿಂದ ಆರು ತಿಂಗಳ ಮಗುವನ್ನು ಹತ್ತಿರವಿರುವ ಚಿಕ್ಕ ತೊಟ್ಟಿಲಲ್ಲಿ ಮಲಗಿಸಬಹುದು. ಏಳನೇ ತಿಂಗಳಲ್ಲಿ ನೀವು ಮಗುವಿನ ಪ್ರತ್ಯೇಕ ಹಾಸಿಗೆ ತೆಗೆದುಕೊಳ್ಳಬಹುದು. ಹಾಗೆಯೇ ಕೋಣೆಯ ಪಕ್ಕದಲ್ಲಿರುವ ಕೋಣೆಯಲ್ಲಿ ಅವರನ್ನು ಮಲಗಿಸಬೇಕು. ಮಗು ಎಚ್ಚರವಾದಾಗ ಅವರ ಬಳಿ ಹೋಗಿ ಸಂತೈಸಿ ಮತ್ತೆ ನೀವು ನಿಮ್ಮ ಕೋಣೆಗೆ ವಾಪಸ್ ಆಗ್ಬಹುದು.
ಇದನ್ನೂ ಓದಿ: Parents Tips: ಮಕ್ಕಳಿಗೆ ಹಣದ ಮೌಲ್ಯ ಕಲಿಸೋದು ಹೇಗೆ? ಯಾವಾಗ?
ಮಗು ಸಾಮಾನ್ಯವಾಗಿ ರಾತ್ರಿ ಎಚ್ಚರಗೊಳ್ಳುತ್ತದೆ. ಇದ್ರಿಂದ ದಂಪತಿ ಅನ್ಯೂನ್ಯತೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಮಗುವನ್ನು ಪ್ರತ್ಯೇಕ ಕೋಣೆಯಲ್ಲಿ ಮಲಗಿಸುವುದು ಉತ್ತಮ ಆಯ್ಕೆ. ಮಗು ಒಂದು ಅಥವಾ ಎರಡನೇ ವಯಸ್ಸಿನಲ್ಲಿರುವಾಗ್ಲೇ ಪ್ರತ್ಯೇಕವಾಗಿ ಮಲಗಲು ಶುರು ಮಾಡಿದ್ರೆ ನಿಮಗೆ ತೊಂದರೆ ನೀಡುವುದಿಲ್ಲ. ಮಗು ದೊಡ್ಡದಾದ್ಮೇಲೆ ಪ್ರತ್ಯೇಕವಾಗಿ ಮಲಗಿಸುವುದು ಕಷ್ಟವಾಗುತ್ತದೆ. ಆದ್ರೆ ಚಿಕ್ಕ ಮಕ್ಕಳನ್ನು ಮಲಗಿಸುವ ವೇಳೆ ಕೆಲ ಎಚ್ಚರಿಕೆ ತೆಗೆದುಕೊಳ್ಳಬೇಕು. ಕ್ಯಾಮರಾ ಅಳವಡಿಸಿರಬೇಕು. ಅದನ್ನು ನಿಮ್ಮ ಮೊಬೈಲ್ ಗೆ ಕನೆಕ್ಟ್ ಮಾಡಿಕೊಳ್ಳಿ. ಹಾಗೆಯೇ ಮಂಚದ ಮೇಲೆ ಮಲಗಿಸುತ್ತಿದ್ದರೆ ಅಪಾಯವಾಗದಂತೆ ಎಚ್ಚರಿಕೆ ಕ್ರಮತೆಗೆದುಕೊಂಡಿರಿ.