ಬ್ರೇಕಪ್‌ಗಳು ನೋಯಿಸುತ್ತವೆ ಮತ್ತು ಸಾಯಿಸುತ್ತವೆ. ಬ್ರೇಕಪ್‌ ಆದಾಗಲೇ ಪ್ರೀತಿಯ ನೋವು ಏನು ಅಂತ ಅರ್ಥ ಆಗುವುದು. ಆದರೆ ಇದೊಂದು ತುಂಬಾ ಸಂಕಷ್ಟಕರ ಪರಿಸ್ಥಿತಿ. ಯಾರು ಯಾರಿಗೆ ನೋವು ಮಾಡಿ ಹೋಗಿರುತ್ತಾರೋ ಗೊತ್ತಿಲ್ಲ. ತೊರೆದು ಹೋದವರ ಸ್ಥಿತಿಗಿಂತ ಮೋಸ ಅನುಭವಿಸುವವರ ಸಂಕಟ ದೊಡ್ಡದು.

ಒಂದು ಕಡೆ ಕೋಪ, ಮತ್ತೊಂದೆಡೆ ಬೇಸರ, ಎಲ್ಲದರಲ್ಲೂ ನಿರುತ್ಸಾಹ, ಜೀವನವೇ ಬೇಡ ಅನ್ನಿಸುವ ನಿರಾಶೆ ಎಲ್ಲವೂ ಕಾಡುತ್ತಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಇಂಥಾ ಸಂಕಟದಲ್ಲಿ ಮುಳುಗಿರುವವರು ಕೆಲವು ತಪ್ಪುಗಳನ್ನು ಮಾಡುವುದಿದೆ.

ಇಡೀ ಜಗತ್ತು ಸೋಷಲ್‌ ಮೀಡಿಯಾದಲ್ಲಿ ಮುಳುಗಿರುವಾಗ ಇವೆಲ್ಲಾ ಸಹಜ. ಗೊತ್ತಿದ್ದೋ ಗೊತ್ತಿಲ್ಲದೆಯೋ ಬ್ರೇಕಪ್‌ ಆದವರು ಮಾಡುವ ತಪ್ಪುಗಳ ಪಟ್ಟಿಇಲ್ಲಿದೆ. ಈ ತಪ್ಪುಗಳು ಆಗದೇ ಇದ್ದರೆ ಜೀವನ ಸ್ವಲ್ಪ ಚೆನ್ನಾಗಿರುತ್ತದೆ. ಬ್ರೇಕಪ್‌ ಆದವರ ನೋವನ್ನು ಮರೆಸುವ ಆಶಯ ನನ್ನದು.

ತಕ್ಷಣ ರಿಲೇಷನ್‌ಶಿಪ್‌ ಸ್ಟೇಟಸ್‌ ಬದಲಿಸದಿರಿ

‘ಬ್ರೇಕಪ್‌ ಆದ ಮರುದಿನವೇ ನಾನು ಫೇಸ್‌ಬುಕ್‌ನಲ್ಲಿ ರಿಲೇಷನ್‌ಶಿಪ್‌ ಸ್ಟೇಟಸ್‌ ಚೇಂಜ್‌ ಮಾಡಿದೆ. ಸಿಂಗಲ್‌ ಅಂತ ಬರೆದುಕೊಂಡೆ. ಅದು ನಾನು ಮಾಡಿದ ಬಹುದೊಡ್ಡ ತಪ್ಪು ಅಂತ ಆಮೇಲೆ ಅರ್ಥವಾಯಿತು. ಯಾವಾಗ ನಾನು ಸ್ಟೇಟಸ್‌ ಹಾಕಿಕೊಂಡೆನೋ ಆ ಕ್ಷಣದಿಂದ ನನಗೆ ಗೊತ್ತಿರುವವರು, ಗೊತ್ತಿಲ್ಲದವರು ಎಲ್ಲರೂ ಮೆಸೇಜ್‌, ಕಾಲ್‌ ಮಾಡತೊಡಗಿದರು. ಏನು ಅಂತ ಕೇಳುವುದಲ್ಲದೆ ಬಿಟ್ಟಿಸಲಹೆಗಳು ಬೇರೆ. ಸುಮ್ಮನೆ ಇದ್ದಿದ್ದರೆ ಆಗುತ್ತಿತ್ತು. ಸ್ಟೇಟಸ್‌ ಚೇಂಜ್‌ ಮಾಡಿದ ಒಂದೇ ಕಾರಣಕ್ಕೆ ನಾನು ಬ್ರೇಕಪ್‌ನಿಂದ ಆಚೆ ಬರುವುದಕ್ಕೆ ಬಹಳ ಸಮಯ ಬೇಕಾಯಿತು.’

ಇದು ಬ್ರೇಕಪ್‌ ಆದ ಹುಡುಗಿಯೊಬ್ಬಳ ಮಾತು. ಬ್ರೇಕಪ್‌ ಆಯಿತು ಅಂದ ತಕ್ಷಣ ಆ ಸಂಗತಿ ಇಡೀ ಜಗತ್ತಿಗೆ ಗೊತ್ತಾಗಬೇಕಿಲ್ಲ. ನಿಮ್ಮ ಕುಟುಂಬಕ್ಕೆ, ಫ್ರೆಂಡ್ಸ್‌ಗೆ ಆಗಲೇ ಗೊತ್ತಾಗಿರುತ್ತದೆ. ಇನ್ನು ಬೇರೆಯವರಿಗೆ ಗೊತ್ತಾಗಿ ಏನಾಗಬೇಕು. ನಿಮ್ಮ ಕಷ್ಟಕ್ಕೆ ಒತ್ತಾಸೆ ಯಾರೂ ಆಗುವುದಿಲ್ಲ. ನಿಮ್ಮ ಸ್ಟೇಟಸ್‌ ಬದಲಾದ ತಕ್ಷಣ ನಿಮ್ಮ ಬಗ್ಗೆ ಗಾಸಿಪ್‌ಗಳು ಶುರುವಾಗುತ್ತದೆ. ಹಾಗಾಗಿ ಸ್ಟೇಟಸ್‌ ಹಾಗೆಯೇ ಇರಲಿ. ಎಲ್ಲವೂ ಸರಿಹೋದ ಮೇಲೆ ಸ್ಟೇಟಸ್‌ ತನ್ನಿಂತಾನೇ ಬದಲಾಗುತ್ತದೆ.

ಆನ್‌ಲೈನ್‌ ಡೇಟಿಂಗ್‌ ಪರಿಹಾರವಲ್ಲ

ಬ್ರೇಕಪ್‌ ಆಯಿತು ಅಂದಾಗ ಯಾರಾದರೂ ಬಂದು ಇನ್ನೊಬ್ಬರನ್ನು ಹುಡುಕು ಅನ್ನೋ ಸಲಹೆ ಕೊಟ್ಟೇ ಕೊಡುತ್ತಾರೆ. ಅದರಲ್ಲೂ ಆನ್‌ಲೈನ್‌ ಡೇಟಿಂಗ್‌ ಮಾಡು ಅನ್ನೋ ಸಲಹೆ ಬೇಜಾನ್‌ ಸಿಗುತ್ತದೆ. ಅದಕ್ಕೆ ಎರಡು ಕಾರಣ ಒಂದು ಹಳೆಯ ಸಂಬಂಧದ ನೆನಪುಗಳಿಂದ ಆಚೆ ಬರಬೇಕು ಅನ್ನುವುದು.

ಇನ್ನೊಂದು ತೊರೆದು ಹೋದವರಿಗೆ ಅಸೂಯೆಯಾಗಲಿ ಎಂಬ ಉದ್ದೇಶಕ್ಕೆ. ಆದರೆ ಆನ್‌ಲೈನ್‌ ಡೇಟಿಂಗ್‌, ಚಾಟಿಂಗ್‌ನಿಂದ ಅವೆರಡೂ ನೆರವೇರುವುದಿಲ್ಲ. ಅದಕ್ಕೆ ಸಾಕ್ಷಿ ಬೆಂಗಳೂರು ಹುಡುಗಿಯೊಬ್ಬಳ ಈ ಮಾತು.

‘ಬ್ರೇಕಪ್‌ ಆಯಿತು. ಫ್ರೆಂಡ್ಸ್‌ ಸಲಹೆ ಮೇರೆಗೆ ಆನ್‌ಲೈನ್‌ ಡೇಟಿಂಗ್‌ ಶುರು ಮಾಡಿದೆ. ಹಲವು ಹುಡುಗರು ಚಾಟಿಂಗ್‌ಗೆ ಸಿಕ್ಕರು. ಕಡೆಗೆ ಒಂದು ದಿನ ಅರ್ಥ ಆಯಿತು. ಇದರಿಂದ ನೋವು ಮತ್ತಷ್ಟುಜಾಸ್ತಿಯಾಗುತ್ತದೆಯೇ ಹೊರತು ಸಮಾಧಾನ ಸಿಗುವುದಿಲ್ಲ. ಮತ್ತೊಬ್ಬ ಬಂದು ಇನ್ನಷ್ಟುನೆಮ್ಮದಿ ಹಾಳಾಗುತ್ತದೆ. ನನಗೆ ಬೇಕಾದ ಹುಡುಗ ಯಾವತ್ತೋ ಸಿಗುತ್ತಾನೆ. ಅಲ್ಲಿಯವರೆಗೆ ನಾನು ಕಾಯಬೇಕಷ್ಟೇ.’

ಪ್ರತಿಕ್ಷಣ ಅವರ ಟೈಮ್‌ಲೈನ್‌ ಚೆಕ್‌ ಮಾಡೋದು

ಬ್ರೇಕಪ್‌ ಆದ ನಂತರ ಒಂದು ಅಭ್ಯಾಸ ತನ್ನಿಂತಾನೇ ರೂಢಿಯಾಗಿರುತ್ತದೆ. ಅದೇನೆಂದರೆ ತೊರೆದು ಹೋದವರ ಸೋಷಲ್‌ ಮೀಡಿಯಾ ಅಕೌಂಟ್‌ಗಳನ್ನು ನೋಡೋದು. ಅವರೇನು ಮಾಡುತ್ತಿದ್ದಾರೆ, ಅವರ ಹೊಸ ಸಂಗಾತಿ ಹೇಗಿದ್ದಾರೆ ಎಂಬುದನ್ನೆಲ್ಲಾ ನೋಡುವುದು ಒಂದು ಚಟವಾಗುತ್ತದೆ.

ಅದನ್ನು ನೋಡುತ್ತಾ ನೋಡುತ್ತಾ ನಮಗೆ ನಾವೇ ಹರ್ಟ್‌ ಮಾಡಿಕೊಳ್ಳುತ್ತಿರುತ್ತೇವೆ ಅನ್ನುವುದು ನಮಗೆ ಗೊತ್ತೇ ಆಗುವುದಿಲ್ಲ. ಆ ಸಂಬಂಧದಿಂದ ಹೊರಗೆ ಬರಬೇಕಾದರೆ ನಮ್ಮ ಜೀವನದಿಂದ ಪೂರ್ತಿ ಅವರನ್ನು ಆಚೆಗಿಡಬೇಕು. ಅವರು ಏನು ಮಾಡಿದರೂ ಅದು ನಿಮಗೆ ಸಂಬಂಧ ಪಟ್ಟಿದ್ದಲ್ಲ ಅನ್ನುವುದು ಅರ್ಥ ಮಾಡಿಕೊಳ್ಳಬೇಕು.

ಸಾಫ್ಟ್‌ವೇರ್‌ನಲ್ಲಿರುವ ಹುಡುಗನೊಬ್ಬ ಈ ಕುರಿತು ಅನುಭವದ ಮಾತು ಹೇಳುತ್ತಾನೆ.

‘ಅವಳು ನನ್ನನ್ನು ಬಿಟ್ಟುಹೋದ ಮೇಲೆ ಪ್ರತಿದಿನ ಪ್ರತಿ ಕ್ಷಣ ಅವಳ ಫೇಸ್‌ಬುಕ್‌, ಇನ್‌ಸ್ಟಾನೋಡುತ್ತಿದ್ದೆ. ಐದು ವರ್ಷದ ಪ್ರೀತಿಯನ್ನು ಮರೆಯಲು ಸಾಧ್ಯವೇ ಆಗುತ್ತಿರಲಿಲ್ಲ ನನಗೆ. ಆಮೇಲೆ ಒಂದು ದಿನ ಅವಳು ನನ್ನನ್ನು ಬ್ಲಾಕ್‌ ಮಾಡಿದಳು. ಅನಂತರ ನನಗೆ ಅರ್ಥ ಆಗಿದ್ದೇನೆಂದರೆ ಅಲ್ಲಿಯವರೆಗೂ ನಾನು ಅವಳ ಗುಂಗಲ್ಲೇ ಇದ್ದೆ. ಆ ಸಂಬಂಧದಿಂದ ಆಚೆ ಬರಬೇಕಾದರೆ ಅವರ ಯಾವ ಚಟುವಟಿಕೆಯೂ ನಮಗೆ ಗೊತ್ತಾಗಬಾರದು. ಅದರ ನಂತರ ನಾನು ಆ ನೋವಿಂದ ಆಚೆ ಬಂದೆ.’

ಹೊಸ ಸಂಗಾತಿ ಜೊತೆ ಫೋಟೋ ಪೋಸ್ಟ್‌ ಮಾಡೋದು

ತಕ್ಷಣ ಹೊಸ ಸಂಗಾತಿ ಜೊತೆ ನಿಂತು ಪೋಟೋ ತೆಗೆದು ಪೋಸ್ಟ್‌ ಮಾಡುವ ಕೆಲಸವನ್ನಂತೂ ಮಾಡಲೇಬಾರದು. ಹಳೆಯ ಸಂಬಂಧವನ್ನು, ಸಂಗಾತಿಯನ್ನು ಗೌರವಿಸುವುದು ಕೂಡ ಜೀವನದ ಒಂದು ಭಾಗ. ಹಾಗೆ ಮಾಡಿದ ತಕ್ಷಣ ಹಳೆಯ ಸಂಗಾತಿಗೆ ನೋವಾಗುತ್ತದೆ.

ಒಮ್ಮೆ ನಿಮ್ಮ ಸಂಗಾತಿ ನಿಮಗೆ ಹಾಗೆ ಮಾಡಿದರೆ ನಿಮಗೆ ಏನನ್ನಿಸಬಹುದು ಅಂತ ಯೋಚಿಸಿ ನೋಡಿ. ಫೋಟೋ ಅಪ್‌ಲೋಡ್‌ ಮಾಡುವಾಗ ದ್ವೇಷ ತೀರಿಸಿಕೊಂಡ ಸಮಾಧಾನ ಸಿಗಬಹುದು. ಆದರೆ ಆಮೇಲಾಮೇಲೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಸ್ವಲ್ಪ ದಿನ ಮೌನ ಎಲ್ಲಕ್ಕೂ ಒಳ್ಳೆಯದು.

ಎಲ್ಲವೂ ಸರಿ ಇದೆ ಅಂತ ಪೋಸ್‌ ಕೊಡಬೇಕಾಗಿಲ್ಲ

ಬ್ರೇಕಪ್‌ ಆಗಿದೆ. ಆಗಿ ಹೋಯಿತು ಅಷ್ಟೇ. ನೋವಾಗತ್ತೆ, ನೋವು ಅನುಭವಿಸಬೇಕು. ಹಾಗಂತ ಎಲ್ಲವೂ ಸರಿ ಇದೆ ಅಂತ ಸೋಷಲ್‌ ಮೀಡಿಯಾದಲ್ಲಿ ಪೋಸ್‌ ಕೊಡಬೇಕಿಲ್ಲ. ಬೇಸರವಾಗಿದ್ದರೂ ಅದನ್ನು ಸೋಷಲ್‌ ಮೀಡಿಯಾದಲ್ಲಿ ತೋರಿಸಿಕೊಳ್ಳಬೇಕಿಲ್ಲ.

ಸುಮಾರು ಸಲ ನಮ್ಮ ಜೀವನ ಸರಿ ಇದೆ ಅಂತ ತೋರಿಸುವ ಬರದಲ್ಲಿ ನಾವು ಸೋಷಲ್‌ ಮೀಡಿಯಾದಲ್ಲಿ ಮೋಟಿವೇಷನಲ್‌ ಕೋಟ್‌ಗಳನ್ನು ಹಾಕೋದು, ಲವ್‌- ಬ್ರೇಕಪ್‌ ಕುರಿತ ಸ್ಟೇಟಸ್‌ ಹಾಕೋದು ಇವನ್ನೆಲ್ಲಾ ಮಾಡಬಾರದು. ಹೀಗೆ ಮಾಡಿದಾಗ ಯಾರಾದರೂ ಸ್ಕ್ರೀನ್‌ ಶಾಟ್‌ ತೆಗೆದುಕೊಂಡು ನೂರು ಜನಕ್ಕೆ ಕಳುಹಿಸಿರುತ್ತಾರೆ. ಗಾಸಿಪ್‌ ಆಗುತ್ತದೆ. ಅದೆಲ್ಲಾ ಯಾಕೆ ಬೇಕು, ಸ್ವಲ್ಪ ಸಮಯ ಸುಮ್ಮನಿದ್ದುಬಿಡಿ. ಎಲ್ಲವೂ ಒಳ್ಳೆಯದೇ ಆಗುತ್ತದೆ.

- ಡಾ. ಸುಮಲತಾ ಜೋಷಿ