ಆತನ ಮಾತುಗಳೇ ಹಾಗೆ ಮದ್ಯ ಸೇವಿಸದೆ ಏರುವ ನಶೆಯಂತೆ. ದಿನೇ ದಿನೇ ಆತನ ಹೊಗಳಿಕೆಗಳನ್ನು ಕೇಳಲೆಂದೇ ಬೆಳಗಾಗಲಿ ಎಂದು ಕಾಯುವಂತಾಗುತ್ತದೆ. ಅವನ ಸವಿ ಮಾತುಗಳ ಅಮಲಿನ ಕಡಲಲ್ಲಿ ತೇಲುತ್ತಾ, ಅದನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಂಡು ದಿನ ರಾತ್ರಿಯಾಗಿ ಬದಲಾದದ್ದೇ ತಿಳಿಯುವುದಿಲ್ಲ. ಆಗಾಗ ಏನು ಮಾಡುತ್ತೀಯೆಂದು ವಿಚಾರಿಸುವ ಆತನ ಕಾಳಜಿಗೆ ಮನಸೋತು ಮೂಕಾಗಿಬಿಡಬೇಕು. ಇಂಥ ಸ್ವೀಟ್ ಸೋಲ್ ಒಂದು ನನಗೆ ಒಲಿದಿದೆಯಲ್ಲಾ ಎಂಬ ಅದೃಷ್ಟವನ್ನು ನೆನೆನೆನೆದು ಕಣ್ಣೀರಾಗಿ ದೇವರಿಗೆ ಕೈ ಮುಗಿಯುವಂತಾಗುತ್ತದೆ. ಇಷ್ಟೊಂದು ಒಳ್ಳೆಯವರು ಯಾರಾದರೂ ಇರಲು ಸಾಧ್ಯವೇ ಎಂದೂ ಆಗಾಗ ಅನುಮಾನ ಕಾಡುತ್ತದೆ. 

ಈ ಹೊಗಳಿಕೆಯ ಮಾತುಗಳು ನಿಜವಾಗಿದ್ದರೆ, ಕೇವಲ ಪ್ರೀತಿಯ ಹಿನ್ನೆಲೆಯಲ್ಲಿ ಬಂದಿದ್ದರೆ ಖಂಡಿತವಾಗಿಯೂ ಅಂಥ ಪಾರ್ಟ್ನರ್ ಪಡೆದವರು ಅದೃಷ್ಟವಂತರೇ. ಆದರೆ, ಈ ಮಾತುಗಳ ಹಿಂದೆ ಉದ್ದೇಶ ಬೇರೆ ಇದ್ದು, ಕೇವಲ ಹೊಗಳಿ ಹೊಗಳಿ ಸಂಗಾತಿಯನ್ನು ಹೊನ್ನಶೂಲಕ್ಕೇರಿಸುತ್ತಿದ್ದರೆ, ಹೊಗಳಿಕೆಯಿಂದಲೇ ಸಂಗಾತಿಯನ್ನು ತಮಗೆ ಬೇಕಾದಂತೆ ಕುಣಿಸುತ್ತಾ, ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಿದ್ದರೆ ಮಾತ್ರ ಅಂಥ ಪ್ರೇಮಿ ಹೊಂದಿದವರು ಅವರಿಗೆ ಗೊತ್ತಿಲ್ಲದೆಯೇ ಲವ್ ಬಾಂಬಿಂಗ್‌ನ ಸಂತ್ರಸ್ತರಾಗುತ್ತಿರುತ್ತಾರೆ. 

ಮುನಿಸಿಕೊಂಡ ಯಜಮಾನ್ರ ಮನಸ್ಸು ಗೆಲ್ಲೋದು ಹೇಗೆ?...

ಲವ್ ಬಾಂಬಿಂಗ್
ಲವ್ ಬಾಂಬಿಂಗ್ ಎನ್ನುವುದು ಮುದ್ದಾದ ಮಾತುಗಳಿಂದಲೇ ಸಂಗಾತಿಯನ್ನು ಮಾನಸಿಕವಾಗಿ ತಮ್ಮ ಖೈದಿಯಾಗಿಸಿಕೊಳ್ಳುವ ತಂತ್ರ. ಆದರೆ, ಪ್ರೇಮಿಯು ತಮ್ಮ ನಿಜವಾದ ಪ್ರೀತಿ, ಕಾಳಜಿಯನ್ನೇ ವ್ಯಕ್ತಪಡಿಸುತ್ತಿದ್ದಾರೋ ಅಥವಾ ಲವ್ ಬಾಂಬಿಂಗ್ ತಂತ್ರ ಅನುಸರಿಸುತ್ತಿದ್ದಾರೋ ಕಂಡುಕೊಳ್ಳುವುದು ಹೇಗೆ? ಲವ್ ಬಾಂಬಿಂಗ್ ಎನ್ನುವುದು ಕೆಟ್ಟದ್ದಾಗುವುದು ಹೇಗೆ, ಇದನ್ನು ಅವರೇಕೆ ಮಾಡುತ್ತಾರೆ, ಲವ್ ಬಾಂಬಿಂಗ್ ಸಂತ್ರಸ್ತರಾಗುತ್ತಿರುವುದು ತಿಳಿದ ಬಳಿಕ ಅಂಥ ಸಂಬಂಧದಿಂದ ಹೊರಬರುವುದು ಹೇಗೆ?

ಹೀಗ್ ಮಾಡ್ತಿದಾರಾ ಗಮನಿಸಿ
ನಿಮ್ಮ ಮೇಲೆ ಪ್ರೇಮಿಯು ಲವ್ ಬಾಂಬ್ ತಂತ್ರ ಅನುಸರಿಸುತ್ತಿದ್ದರಾ ಎಂದು ತಿಳಿಯಲು ಈ ನಡೆಗಳನ್ನು ಗಮನಿಸಿ. ದೊಡ್ಡದೇನೋ ಗಿಫ್ಟ್ ನೀಡಿ ನಿಮ್ಮನ್ನು ಖುಷಿ ಪಡಿಸಿದ ಬಳಿಕ ಅದಕ್ಕೆ ಪ್ರತಿಯಾಗಿ ನಿಮ್ಮಿಂದ ಏನೋ ನಿರೀಕ್ಷೆ ಇಟ್ಟುಕೊಳ್ಳುವುದು, ನಿಮಗೆ ಅತಿಯಾದ ಪ್ರೀತಿ ತುಂಬಿದ ಸಂದೇಶಗಳನ್ನು ಕಳುಹಿಸಿ ಇದ್ದಕ್ಕಿದ್ದಂತೆ ಕೆಲ ದಿನಗಳ ಕಾಲ ಮರೆಯಾಗುವುದು, ಉದ್ಯೋಗದ ಸ್ಥಳಕ್ಕೆ ಬಂದು ಸರ್ಪ್ರೈಸ್ ನೀಡಿ, ಅಥವಾ ಗೆಳೆಯರೊಂದಿಗಿದ್ದಾಗ ಸರ್ಪ್ರೈಸ್ ನೀಡುವಂತೆ ಬಂದು ತಮ್ಮೊಂದಿಗೇ ಹೆಚ್ಚು ಸಮಯ ಕಳೆಯಬೇಕೆನ್ನುವಂತೆ ಮಾಡುವುದು, ಅಥವಾ ನೀವು ಇನ್ನೊಬ್ಬರೊಂದಿಗೆ ಸೇರದಂತೆ ಮಾಡಿ ಒಂಟಿಯಾಗಿಸುವುದು, ನಿಮ್ಮನ್ನು ಸಿಕ್ಕಾಪಟ್ಟೆ ಹೊಗಳಿ, ಬಳಿಕ ತಾವು ಹೇಳಿದಂತೆ ಕೇಳಲಿಲ್ಲ ಎಂಬ ಕಾರಣಕ್ಕೆ ನಿಮ್ಮಲ್ಲಿ ಅಪರಾಧಿಭಾವ ಕಾಡುವಂತೆ ಮಾಡುವುದು... ಇತ್ಯಾದಿ ಇತ್ಯಾದಿ.

ಮದ್ವೆಯಾಗೋವಾಗ ಗಂಡಿನ ಸಂಬಳ ಕೇಳಿದ್ರೆ ಸಾಲದು, ವ್ಯಕ್ತಿತ್ವದೆಡೆಗೂ ಇರಲಿ ಗಮನ......

ಲವ್ ಬಾಂಬಿಂಗ್‌ನಿಂದ ಸಿಗುವುದೇನು?
ಸಾಮಾನ್ಯವಾಗಿ ನಾರ್ಸಿಸ್ಟ್ ಪ್ರೇಮಿಯು ತನ್ನ ಪ್ರೇಮಿಯ ಮೇಲೆ ನಿಯಂತ್ರಣ ಸಾಧಿಸಿ ಅಧಿಕಾರ ಚಲಾಯಿಸಲು ಲವ್ ಬಾಂಬಿಂಗ್ ತಂತ್ರದ ಮೊರೆ ಹೋಗುತ್ತಾರೆ. ನಿಮ್ಮನ್ನು ಪ್ರೀತಿಯಲ್ಲಿ ತೇಲಿಸಿ, ಬೇಕಾದ ಉಡುಗೊರೆಗಳನ್ನು ಕೊಡಿಸಿ, ಅತಿಯಾದ ಅಟೆನ್ಷನ್ ನೀಡುವುದರಿಂದ ನಿಮ್ಮ ಮೇಲೆ ಅಧಿಕಾರ ಚಲಾಯಿಸುವ ಸರ್ವಾಧಿಕಾರ ತನಗೆ ಸಿಗುತ್ತದೆ, ನೀವು ಅವರನ್ನು ವಿರೋಧಿಸುವ ಹಕ್ಕು ಕಳೆದುಕೊಳ್ಳುತ್ತೀರಾ ಎಂಬ ನಂಬಿಕೆ ಇಂಥ ವ್ಯಕ್ತಿತ್ವಗಳದ್ದು. ತಮ್ಮಿಂದ ಮಾತ್ರ ಪ್ರೇಮಿಗೆ ಪ್ರೀತಿ ಹಾಗೂ ಗಮನ ಸಿಗಬೇಕು. ತಮ್ಮನ್ನು ಬಿಟ್ಟು ಬೇರಾರ ಬಳಿಯೂ ನೀವು ಕ್ಲೋಸ್ ಆಗಬಾರದು, ಸಂಪೂರ್ಣವಾಗಿ ತಮ್ಮ ಮೇಲೆ ಭಾವನಾತ್ಮಕವಾಗಿ ಅವಲಂಬಿತವಾಗಬೇಕು ಎಂಬ ಬಯಕೆ ಅವರದ್ದು. ಲವ್ ಬಾಂಬಿಂಗ್ ಸಂತ್ರಸ್ತರಿಗೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದರೂ, ಇದೊಂತರಾ ಬರಬರುತ್ತಾ ಉಸಿರುಗಟ್ಟಿಸುವ ಸಂಬಂಧವೆನಿಸತೊಡಗುತ್ತದೆ. ಲವ್ ಬಾಂಬರ್ ಕೇವಲ ತನ್ನ ಇಷ್ಟಕಷ್ಟಗಳನ್ನು ಮಾತ್ರ ಗಮನಿಸುತ್ತಿರುತ್ತಾನೆ. 

ಸಾಮಾನ್ಯವಾಗಿ ಪ್ರೀತಿಯ ಆರಂಭದಲ್ಲಿ ಈ ನಡೆಗಳೆಲ್ಲ ಅತಿಯಾಗಿದ್ದು, ಇಂಥವರು ಕಮಿಟ್ ಆಗುವ ಮಟ್ಟಕ್ಕೆ ಮುಂದುವರಿಯುವುದಿಲ್ಲ. ಇದೆಲ್ಲ ಓದಿದ ಬಳಿಕ ನಿಮ್ಮ ಪಾರ್ಟ್ನರ್ ವರ್ತನೆಗೂ ಇದಕ್ಕೂ ಹೋಲಿಕೆ ಕಂಡುಬಂದಲ್ಲಿ, ಅಂಥ ಸಂಬಂಧದಲ್ಲಿ ಮುಂದುವರಿಯುವುದನ್ನು ಸ್ವಲ್ಪ ನಿಧಾನಗತಿಗೆ ತಂದು, ಕುರುಡು ಪ್ರೀತಿಯಿಂದ ಹೊರಬಂದು ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪರೀಕ್ಷಿಸಿ. ಪ್ರೀತಿ ಹಾಗೂ ಕಾಳಜಿ ಆರಂಭದಲ್ಲಿ ಎಂಥವರಿಗೂ ಖುಷಿ ನೀಡುತ್ತದೆ ನಿಜ. ಅದು ಕೊನೆವರೆಗೂ ಉಳಿಯಬೇಕೆಂದರೆ ಪ್ರೀತಿಯು ನಿಧಾನವಾಗಿ ಗೂಡು ಕಟ್ಟುವಂತೆ ನೋಡಿಕೊಳ್ಳಬೇಕು. ನೀವು ಲವ್ ಬಾಂಬಿಂಗ್‌ಗೆ ಒಳಗಾಗುತ್ತಿದ್ದೀರಿ, ಭಾವನಾತ್ಮಕವಾಗಿ ಮೋಸ ಹೋಗುತ್ತಿದ್ದೀರಿ ಎಂಬುದು ತಿಳಿದು ಬಂದರೆ, ಮೊದಲಿಗೆ ಈ ಬಗ್ಗೆ ನಿಮ್ಮ ಪ್ರೇಮಿಯ ಬಳಿ ಮಾತನಾಡಿ. ಆರಂಭದಲ್ಲಿ ಅವರು ಅರಿತುಕೊಳ್ಳುವಂತೆ ಕ್ಷಮೆ ಕೇಳಿದರೆಂದು ಮತ್ತೆ ನಿಮ್ಮ ಪೂರ್ತಿ ಜುಟ್ಟನ್ನು ಅವರಿಗೆ ನೀಡಿಬಿಡಬೇಡಿ. ಏಕೆಂದರೆ ನಿಧಾನವಾಗಿ ಅವರು ತಮ್ಮ ಮನೋವೃತ್ತಿಗೆ ಮರಳುವ ಸಾಧ್ಯತೆಗಳೇ ಹೆಚ್ಚು. ಆದರೆ ಅವಕಾಶ ನೀಡುವುದರಲ್ಲಿ ತಪ್ಪಿಲ್ಲ. ಒಂದು ವೇಳೆ ಅವರು ತಿದ್ದಿಕೊಳ್ಳದೆ, ನಿಮ್ಮನ್ನೇ ಅಪರಾಧಿ ಎಂಬಂತೆ ನೋಡಿದರೆ ಅಂಥ ಸಂಬಂಧದಿಂದ ಸಾಧ್ಯವಾದಷ್ಟು ಬೇಗ ಹೊರಬರುವುದೊಳಿತು.