Asianet Suvarna News Asianet Suvarna News

ದ್ರೌಪದಿಗೆ ಐದು ಜನ ಗಂಡಂದಿರು ಅನ್ನೋದರ ಅರ್ಥವೇನು?

ಮಹಾಭಾರತದಲ್ಲಿ ದ್ರೌಪದಿಗೆ ಐದು ಜನ ಗಂಡಂದಿರು. ಇದು ಹೀಗ್ಯಾಕೆ, ಇದರ ನಿಜವಾದ ಅರ್ಥವೇನು ಎಂಬುದು ನಿಮಗೆ ಗೊತ್ತೇ?

 

 

What does it mean Draupadi has five husbands in Mahabhaata
Author
Bengaluru, First Published Nov 8, 2021, 3:54 PM IST

ಮಹಾಭಾರತದಲ್ಲಿ (Mahabharath) ಅರಗಿನ ಅರಮನೆಯಲ್ಲಿ ಸುಟ್ಟುಹೋಗದೆ ಪಾರಾದ ಪಾಂಡವರು, ಕುಂತಿಯ ಸಮೇತ ಏಕಚಕ್ರನಗರದಲ್ಲಿ ವಾಸಿಸುತ್ತಾರೆ. ಅಲ್ಲಿಗೆ ದ್ರೌಪದಿಯ (Draupadi) ಸ್ವಯಂವರದ ಸುದ್ದಿ ಬರುತ್ತದೆ. ಐವರೂ ಪಾಂಡವರು ಬ್ರಾಹ್ಮಣ ವೇಷದಿಂದ ಅಲ್ಲಿಗೆ ಧಾವಿಸುತ್ತಾರೆ. ಸ್ವಯಂವರದಲ್ಲಿ ಎಲ್ಲ ಕ್ಷತ್ರಿಯರೂ ಸೇರುತ್ತಾರೆ. ಧುರ್ಯೋಧನ, ಕರ್ಣ ಮೊದಲಾದವರೂ ಅಲ್ಲಿಗೆ ಬಂದಿರುತ್ತಾರೆ. ಆದರೆ ಅವರೆಲ್ಲಾ ಬಿಲ್ಲನ್ನು ಎತ್ತಿ ಬಾಣ ಜೋಡಿಸಿ ಮತ್ಸ್ಯಯಂತ್ರ ಛೇದನ ಮಾಡಲಾಗದೆ ಸೋಲುತ್ತಾರೆ. ಆಗ ಮಹಾರಾಜ ದ್ರುಪದ, ಕ್ಷತ್ರಿಯರಲ್ಲದೆ ಇತರರೂ ಈ ಪ್ರಯತ್ನ ಮಾಡಬಹುದು ಎಂದು ಘೋಷಿಸುತ್ತಾನೆ. ಆಗ ಅರ್ಜುನ ಬಿಲ್ಲಿಗೆ ಬಾಣ ಜೋಡಿಸಿ ಲೀಲಾಜಾಲವಾಗಿ ಮತ್ಸ್ಯಯಂತ್ರವನ್ನು ಭೇದಿಸುತ್ತಾನೆ. ನಂತರ ಅರ್ಜುನ ದ್ರೌಪದಿಯನ್ನು ಕರೆದುಕೊಂಡು ಬಂದು, ಮನೆಯೊಳಗಿದ್ದ ತಾಯಿಗೆ, ಅಮ್ಮಾ ಭಿಕ್ಷೆ ತಂದಿದ್ದೇವೆ ಅನ್ನುತ್ತಾನೆ. ಆಗ ಕುಂತಿ ಐವರೂ ಹಂಚಿಕೊಳ್ಳಿ ಎನ್ನುತ್ತಾಳೆ. ತಾಯಿಯ ಮಾತನ್ನು ಪಾಲಿಸಲು ಪಾಂಡವರು (Pandavas) ಐವರೂ ಆಕೆಯನ್ನು ಮದುವೆಯಾಗುತ್ತಾರೆ. ಇದು ಒಂದು ಕತೆ.

ವ್ಯಾಸ ಭಾರತದಲ್ಲಿ ಈ ಕತೆ ಬೇರೆ ಬಗೆಯಲ್ಲಿದೆ. ಅಲ್ಲಿ ಅರ್ಜುನ ಗೆದ್ದು ತಂದ ಹೆಣ್ಣನ್ನು ನೋಡಿ ಉಳಿದ ನಾಲ್ವರೂ ಪಾಂಡವರು ಮೋಹಿತರಾಗುತ್ತಾರೆ. ಇದನ್ನು ಗಮನಿಸಿದ ತಾಯಿ ಕುಂತಿದೇವಿ, ದ್ರೌಪದಿಯ ಕಾರಣದಿಂದ ಪಾಂಡವರಲ್ಲಿ ಒಡಕು ಸೃಷ್ಟಿಯಾಗುವುದು ಬೇಡ ಎಂಬ ಕಾರಣದಿಂದ ದ್ರೌಪದಿ ಐವರ ಹೆಂಡತಿಯಾಗಲಿ ಎಂದು ಹೇಳಿ ಆಕೆಯ ಮನವೊಲಿಸುತ್ತಾಳೆ. ಮರುದಿನ, ಪರಿಣಯದ ಸಂದರ್ಭದಲ್ಲಿ ಐವರೂ ಪಾಂಡವರು ಮದುಮಕ್ಕಳಾಗಿ ಅಲಂಕೃತರಾಗಿ ಹಸೆಮಣೆಗೆ ಬಂದುದನ್ನು ನೋಡಿ ದ್ರುಪದ ರಾಜ ಕಂಗಾಲಾಗುತ್ತಾನೆ. ಇದು ಅಸಹ್ಯ ಕ್ರಮ, ಇದು ಸಾಧ್ಯವಿಲ್ಲ ಎನ್ನುತ್ತಾನೆ. ಆಗ ಅಲ್ಲಿಗೆ ಮಹರ್ಷಿಗಳಾದ ವೇದವ್ಯಾಸರು ಆಗಮಿಸಿ, ಒಬ್ಬಾಕೆಯನ್ನು ಐವರೂ ಮದುವೆಯಾಗುವುದು ರೂಢಿಯಲ್ಲಿದೆ, ಇದು ಶಾಸ್ತ್ರಸಮ್ಮತ, ಇದಕ್ಕೆ ಅಂಜಬೇಕಿಲ್ಲ ಎಂದು ಘೋಷಿಸುತ್ತಾರೆ. ವೇದವ್ಯಾಸರು (Vedavyasa) ಹೇಳಿದ ಬಳಿಕ ಲೋಕವೇ ಇದನ್ನು ಒಪ್ಪಿಕೊಳ್ಳುತ್ತದೆ. ಇದಕ್ಕೆ ಅವರು ಒಂದು ಪೂರ್ವಜನ್ಮದ ಕತೆಯನ್ನೂ ಹೇಳುತ್ತಾರೆ.

ಆ ಕತೆಯಲ್ಲಿ ಆಕೆ ಒಬ್ಬಳು ಮುನಿಪುತ್ರಿ. ತನಗೆ ಮದುವೆಯಾಗದೆ ಇರುವುದರಿಂದ ಬೇಸರಗೊಂಡು ಮಹಾದೇವನನ್ನು ಕುರಿತು ತಪಸ್ಸು ಮಾಡುತ್ತಾಳೆ. ಶಿವ ಪ್ರತ್ಯಕ್ಷನಾದಾಗ 'ಪತಿಂದೇಹಿ' ಎಂದು ಐದು ಬಾರಿ ಕೇಳುತ್ತಾಳೆ. ಹಾಗೇ ಮಹಾಶಿವ ಆಕೆಗೆ ಐವರು ಗಂಡಂದಿರನ್ನು ಮುಂದಿನ ಜನ್ಮದಲ್ಲಿ ಕರುಣಿಸುತ್ತಾನೆ.

ದಾಂಪತ್ಯ ಎಂಬ ಯಜ್ಞಕುಂಡದಲ್ಲಿ ಪ್ರೇಮದ ಬೆಂಕಿ ಉರಿಯುತ್ತಲೇ ಇರಬೇಕು!

ಪಂಚಭೂತಗಳ ಪ್ರತೀಕ
ಇದಕ್ಕೆ ಒಂದು ಆಧ್ಯಾತ್ಮಿಕ (Spiritual) ಅರ್ಥವೂ ಇದೆ. ದ್ರೌಪದಿ ಆದಿ ಪರಾಶಕ್ತಿಯ ಅವತಾರ ಹಾಗೂ ಸಂಕೇತ. ಅದು ಹೇಗೆ? ಹೇಗೆಂದರೆ ಆಕೆಗೆ ಕೃಷ್ಣೆ (Krishna) ಎಂಬ ಹೆಸರೂ ಇದೆ. ಕೃಷ್ಣಾ ಎಂದರೆ ಕಪ್ಪು ವರ್ಣದವಳು. ಈಕೆಯ ಮೈಬಣ್ಣ ಕಪ್ಪು. ಕಪ್ಪಿನಲ್ಲಿ ಕಾಮನಬಿಲ್ಲಿನ ಎಲ್ಲ ಏಳು ಬಣ್ಣಗಳೂ ವಿಲೀನವಾಗುತ್ತವೆ ಎಂಬುದನ್ನು ನೀವು ತಿಳಿದಿರಬಹುದು. ಹಾಗೇ ಈ ಕೃಷ್ಣೆಯಲ್ಲಿ ಪಾಂಡವರು ವಿಲೀನರಾಗುತ್ತಾರೆ. ಪಾಂಡವರು ಪಂಚಭೂತಗಳ ಪ್ರತೀಕ. ಯಮಪುತ್ರ ಧರ್ಮರಾಯ, ಇಂದ್ರಪುತ್ರ ಅರ್ಜುನ, ವಾಯುಪುತ್ರ ಭೀಮ, ಅಶ್ವಿನಿ ದೇವತೆಗಳ ಮಕ್ಕಳಾದ ನಕುಲ ಸಹದೇವರ ದೇವಾಂಶ ಸಂಭೂತರು ಹಾಗೂ ಪೃಥ್ವಿ, ನೀರು, ಗಾಳಿ, ಆಕಾಶ, ಬೆಂಕಿ ಎಂಬ ಐದು ಪಂಚಭೂತಗಳ ಅಂಶದಿಂದ ಜನಿಸಿದವರು. ಪಂಚಭೂತಗಳು ಯಾವಾಗಲೂ ಆದಿಶಕ್ತಿಯ ಅಧೀ. ಇದನ್ನೇ ದ್ರೌಪದಿಯ ಸಂಸಾರ ಪ್ರತಿನಿಧಿಸುವುದು.

ಹಾಗೆಯೇ ಇದಕ್ಕೆ ಮನೋವೈಜ್ಞಾನಿಕ (Psychological) ಹಾಗೂ ದೈಹಿಕ (Physical) ಆಯಾಮವೂ ಇದೆ. ಒಬ್ಬನೇ ಗಂಡಸು ಒಬ್ಬ ಸ್ತ್ರೀಯನ್ನು ಸಂಪೂರ್ಣವಾಗಿ ತೃಪ್ತಿಪಡಿಸಲಾರ. ದೈಹಿಕವಾಗಿಯಾಗಲೀ, ಮಾನಸಿಕವಾಗಿಯಾಗಲೀ, ಹೆಣ್ಣು ತನ್ನ ಗಂಡನಲ್ಲಿ ಹಲವು ಗಂಡಸರ ಒಳ್ಳೆಯ ಗುಣಗಳನ್ನು ಕಾಣಲು ಬಯಸುತ್ತಾಳೆ. ಹೆಣ್ಣು ಏಕಕಾಲದಲ್ಲಿ ಹಲವು ಬಾರಿ ಕಾಮೋದ್ರೇಕ ಹಾಗೂ ತೃಪ್ತಿ ಹೊಂದಬಲ್ಲಳು. ಆದರೆ ಗಂಡು ಒಮ್ಮೆಗೆ ಒಂದು ಸಲ ಮಾತ್ರ ಸಂಭೋಗ (sex) ನಡೆಸಬಲ್ಲ. 

ಈ ಬಾಲಿವುಡ್ ಜೋಡಿಗಳಲ್ಲಿ ಹೆಂಡತಿ ಗಂಡನಿಗಿಂತ ಎಷ್ಟು ದೊಡ್ಡವಳು ನೋಡಿ!

ಈಗಲೂ ಬಹುಪತಿತ್ವ ಇದೆ (Polyandry)
ಒಬ್ಬಾಕೆಯನ್ನು ಹಲವು ಮಂದಿ ಸಹೋದರರು ಮದುವೆಯಾಗುವ ಪದ್ಧತಿ ಭಾರತದಲ್ಲಿ ಮೊದಲಿನಿಂದಲೂ ಇತ್ತು. ವಿಶೇಷವಾಗಿ, ಹಿಮಾಲಯದ ಟಿಬೆಟ್‌ನ ಕೆಲವು ಭಾಗಗಳಲ್ಲಿ, ಹಿಮಾಚಲ (Himachal)  ಪ್ರದೇಶದ ಕಿನ್ನೌರ್‌- ಸ್ಪಿಟಿ ವಲಯದಲ್ಲಿ ಈ ಪದ್ಧತಿ ಇತ್ತು, ಈಗಲೂ ಕೆಲವು ಕಡೆ ಉಳಿದುಕೊಂಡಿದೆ. ಇಲ್ಲಿ ಹೆಣ್ಣು ಶಿಶುಗಳ ಪ್ರಮಾಣ ತುಂಬಾ ಕಡಿಮೆ. ಹೀಗಾಗಿ ಅಲ್ಲಿ ಗಂಡಸರ ಸಂಖ್ಯೆ ಹೆಚ್ಚಾಯಿತು. ಮದುವೆಗೆ ಹುಡುಗಿಯರು ಸಿಗಲಿಲ್ಲ. ಆಗ ಮನೆಯ ಹಿರಿಯಣ್ಣನಿಗೆ ಮದುವೆ ಮಾಡಿ ತರುವ ಹೆಣ್ಣೇ ಉಳಿದ ಸಹೋದರರಿಗೂ ಪತ್ನಿ ಎನ್ನುವ ರೂಢಿ ಹುಟ್ಟಿಕೊಂಡಿತು ಎಂದು ಸಮಾಜ ಶಾಸ್ತ್ರಜ್ಞರು ಹೇಳುತ್ತಾರೆ.

ಇದಕ್ಕೆ ಇನ್ನೊಂದು ಕಾರಣವಿದೆ. ಹಲವು ಸಹೋದರರಿಗೆ ಹಲವು ಪತ್ನಿಯರಿದ್ದರೆ, ಕುಟುಂಬದ ಆಸ್ತಿ ಒಡೆದು ಚೂರಾಗುವ ಆತಂಕ ಇರುತ್ತದೆ. ಪತ್ನಿ ಒಬ್ಬಳೇ ಆಗಿದ್ದರೆ ಆಗ ಮನೆ ಒಡೆಯುವ ಸಮಸ್ಯೆಯೇ ಇರುವುದಿಲ್ಲ. ಕುಂತಿ ಕೂಡ ದ್ರೌಪದಿ ಐವರ ಮಡದಿಯಾಗಲಿ ಎಂದದ್ದು ಪಾಂಡವರ ಒಗ್ಗಟ್ಟು ಒಡೆಯದಿರಲಿ ಎನ್ನುವ ಕಾರಣಕ್ಕಾಗಿಯೇ. ನೇಪಾಳದ ರಾಜೋ ವರ್ಮಾ ಎಂಬಾಕೆ ಮಹಿಳೆ ಐವರು ಗಂಡಂದಿರನ್ನು ಹೊಂದಿದ್ದು ಇವರೈವರೂ ಸಹೋದರರು. ಇವರ ನಡುವೆ ಜಗಳವಾಗಲೀ, ಅಸೂಯೆಯಾಗಲೀ ಇಲ್ಲ. ಅತ್ಯಂತ ಅಚ್ಚುಕಟ್ಟಾಗಿ ಹೊಂದಿಕೊಂಡಿರುವ ಇವರು ಅನೇಕ ಮಾನಶಾಸ್ತ್ರಜ್ಞರಿಗೂ ಅಧ್ಯಯನಕ್ಕೆ ವಸ್ತುವಾಗಿದ್ದಾರೆ.

ಈ ಪದ್ಧತಿ ಟಿಬೆಟ್, ಮ್ಯಾನ್ಮಾರ್‌ನ ಕೆಲವು ಕಡೆ ಕೂಡ ಇದೆ. ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಗಡಿಭಾಗದ ಕೆಲವು ಬುಡಕಟ್ಟುಗಳಲ್ಲಿ, ತಮಿಳುನಾಡಿನ ಕೆಲವು ಬುಡಕಟ್ಟುಗಳಲ್ಲಿ ಈ ಪದ್ಧತಿ ರೂಢಿಯಲ್ಲಿತ್ತು. ಆದರೆ ಇಲ್ಲೂ ಹಿಮಾಲಯದಲ್ಲೂ ಆಧುನಿಕತೆ ಬೆಳೆದು ಬಂದಂತೆ ಇದೊಂದು ಅಸಹ್ಯ ಪದ್ಧತಿ ಎಂಬ ಭಾವನೆ ಯುವಜನರಲ್ಲಿ ಬಲಿಯಿತು. ಹೀಗಾಗಿ ಈ ಪದ್ಧತಿ ಇತ್ತೀಚಿನ ದಿನಗಳಲ್ಲಿ ಕೊನೆ ಕಾಣುತ್ತಿದೆ. ಹಿಮಾಲಯದ ಕಿನ್ನೌರ್‌ ಭಾಗದಲ್ಲಿ ಈಗಲೂ ಹಳೆಯ ತಲೆಮಾರಿನ ಕೆಲವು ಕುಟುಂಬಗಳು ಬಹುಪತಿತ್ವ ಹೊಂದಿರುವುದನ್ನು ಕಾಣಬಹುದು. 

ಈ ಜನ್ಮರಾಶಿಯಲ್ಲಿ ಜನಿಸಿದವರು ನಿಮ್ಮನ್ನು ಬಿಟ್ಟುಬಿಡಲು ಹೇಸುವುದಿಲ್ಲ!

Follow Us:
Download App:
  • android
  • ios