ಅಲ್ಲೊಂದು ಕಡಿದಾದ ಬಂಡೆ. ಮಗಳು ಹಠ ಮಾಡಿ ಅಪ್ಪನನ್ನು ಅಲ್ಲಿಗೆ ಕರೆತಂದಿದ್ದಾಳೆ. ಅದಕ್ಕೊಂದು ಕಾರಣ ಇದೆ. ಅವಳಿಗೆ ಎಲ್ಲೇ ಹೋದ್ರೂ ಬೆಸ್ಟ್‌ ಕಂಪೆನಿ ಅವಳಪ್ಪ. ಆತ ಪ್ರೆಂಡ್‌, ಮಾರ್ಗದರ್ಶಿ, ಹೀರೋ ಎಲ್ಲಾ. ಆ ಮಗಳೋ ಪರಿಸರ ಪ್ರಿಯೆ. ಕಡಿದಾದ ಬಂಡೆಗಳನ್ನು ಏರಿಳಿಯೋದು, ಬೆಟ್ಟ ಹತ್ತೋದು, ಅಂಚಿಗೆ ಹೋಗಿ 360 ಡಿಗ್ರಿಯಲ್ಲಿ ಕಾಣೋ ವಿಶಾಲ ನೋಟವನ್ನು ಸವಿಯೋದು ಅಂದ್ರೆ ಅವಳಿಗೆ ಪ್ರಾಣ.

ಇಲ್ಲಿಗೆಲ್ಲ ಅಪ್ಪನ ಜೊತೆಗೇ ಹೋಗ್ಬೇಕು ಅನ್ನೋದು ಅವಳಿಗಿಷ್ಟ. ಆದರೆ ಅಪ್ಪ ಇದಕ್ಕೆಲ್ಲ ಒಪ್ಪಲ್ಲ. ‘ಬೇಕಿದ್ರೆ ನೀನು ಪ್ರೆಂಡ್ಸ್‌ ಜೊತೆಗೆ ಹೋಗು ಪುಟ್ಟಾ, ನಾನಂತೂ ಬರಲ್ಲ’ ಅಂತಾನೆ. ಹೆಚ್ಚು ಪೋರ್ಸ್‌ ಮಾಡಿದರೆ, ಏನೇನೋ ಕೆಲಸದ ನೆವ ಹೇಳಿ ಜಾರಿಕೊಳ್ತಾನೆ. ಮಗಳಿಗಿದು ದೊಡ್ಡ ನಿರಾಸೆ.

ಅಪ್ಪನ ಪ್ರಾಬ್ಲೆಂ ಏನು?

ಅಪ್ಪನಿಗಿರೋದು ಹೈಟ್‌ ಪೋಬಿಯಾ. ಅಂದರೆ ಎತ್ತರದ ಪ್ರದೇಶದಲ್ಲಿ ಬಂಡೆಯಂಚಿಗೆ ಹೋಗಿ ನಿಂತರೆ ತಲೆ ಸುತ್ತು, ಬವಳಿ ಬಂದ ಹಾಗಾಗೋದು ಇತ್ಯಾದಿ. ಇದನ್ನು ಅಕ್ರೋ ಪೋಬಿಯಾ ಅಂತ ಕರೀತೀವಿ. ಎತ್ತರದ ಜಾಗದಲ್ಲಿ ನಿಂತ ಕೂಡಲೇ ಎಲ್ಲಿ ಬಿದ್ದುಬಿಡ್ತೀವೋ ಅಂತನಿಸಿ ವಿಪರೀತ ಭಯ, ಬೆವರು, ಹೊಡೆದುಕೊಳ್ಳುವ ಎದೆ, ಬವಳಿ ಬರೋದು, ತಲೆಗೆ ಚಕ್ಕರ್‌ ಬರೋದು ಹೀಗೆಲ್ಲ ಆಗುತ್ತೆ.

ಈ ಪೋಬಿಯಾ ಇರೋದು ಎತ್ತರದ ಜಾಗ ಅಂದರೆ ಭೂತ ಕಂಡಂತೆ ಬೆಚ್ಚಿ ಬೀಳ್ತಾರೆ. ನಿದ್ದೆ ಮಾಡಿದ್ದಾಗ ಕನಸಿನಲ್ಲಿ ಇಂಥಾ ಜಾಗಗಳು ಬಂದರೂ ಅವರು ನಡುಗೋದುಂಟು ಅಂತ ಮನೋವೈದ್ಯರೊಬ್ಬರು ಇತ್ತೀಚೆಗೆ ಹೇಳಿದ್ದರು. ಈ ಹುಡುಗಿ ಅಪ್ಪ ಬಾಲ್ಯದಿಂದಲೂ ಅಕ್ರೋ ಪೋಬಿಯಾದಿಂದ ಒದ್ದಾಡುತ್ತಿದ್ದ. ಅದರಿಂದ ಹೊರಬರುವ ಬಗ್ಗೆ ಯೋಚಿಸಿರಲಿಲ್ಲ. ಆದರೆ ಮಗಳು ಆ ಬಗ್ಗೆ ಯೋಚಿಸುತ್ತಲೇ ಇದ್ದಳು. ಹೇಗಾದರೂ ಮಾಡಿ ಅಪ್ಪನನ್ನು ಕಾಡುವ ಈ ಭೂತವನ್ನು ಓಡಿಸಬೇಕು ಅನ್ನುವುದು ಆಕೆಯ ಆಸೆ.

ವನ್‌ ಪೈನ್‌ ಡೇ ಆ ಹುಡುಗಿ ಡಿಸೈಡ್‌ ಮಾಡಿಯೇ ಬಿಡ್ತಾಳೆ. ಅಪ್ಪಂಗೆ ಎಲ್ಲಿಗೆ ಹೋಗ್ತೀವಿ, ಏನ್‌ ನೋಡ್ತೀವಿ ಅಂತ ಏನೂ ಹೇಳದೇ ಕರ್ಕೊಂಡು ಬರ್ತಾಳೆ. ಅದು ಐರ್‌ಲ್ಯಾಂಡ್‌ನ ಅತೀ ಎತ್ತರದ ಜಾಗ. ಕೆಳಗೆ ವಿಶಾಲವಾಗಿ ಹಬ್ಬಿದ ನೀಲಿ ಕಡಲು. ಇದಕ್ಕಿಂತ ಸುಮಾರು 300 ಅಡಿಗಳಷ್ಟು ಎತ್ತರದಲ್ಲಿ ಬಂಡೆಯನ್ನು ಹಾಸುಗಲ್ಲಿನಂತೆ ಮಾರ್ಪಡಿಸಿದ್ದಾರೆ. ಅದರ ಕೊನೆಯಲ್ಲಿ 300 ಅಡಿ ಆಳದಲ್ಲಿ ಭೋರ್ಗರೆಯುವ ಸಮುದ್ರ.

ಬೆಚ್ಚಿಬಿದ್ದ ಅಪ್ಪ ಆ ಮೇಲೆ ಸಾವರಿಸಿಕೊಂಡ

ಮಗಳು ಇಲ್ಲಿಗೆ ಕರೆತಂದಾಗ ಅಪ್ಪನಿಗೆ ಮೊದಲು ಕಸಿವಿಸಿಯಾಯ್ತು. ಆದರೂ ಮಗಳ ಇಂಗಿತದ ಬಗ್ಗೆ ಅವನಿಗೆ ಅರಿವಿತ್ತು. ಅಂಥಾ ಜಾಗದಲ್ಲಿ ಮಗಳಿಗೆ ನಿರಾಸೆ ಮಾಡೋದು ಈತನಿಗೆ ಬೇಕಿರಲಿಲ್ಲ. ಮಗಳು ಹೇಳಿದಂತೆ ಮಾಡುತ್ತಾ ಹೋದ. ಕೊನೆಗೆ ತನಗಿದ್ದ ಭಯವನ್ನೇ ಗೆದ್ದ.

ಮಗಳು ಏನು ಮಾಡಿದಳು

ಅಂಗಾತವಾಗಿ ಹಾಸುಗಲ್ಲಿನ ಮೇಲೆ ಅಪ್ಪನಿಗೆ ಮಲಗಲು ಹೇಳಿದಳು. ಆಮೇಲೆ ತೆವಳುತ್ತಾ ತೆವಳುತ್ತಾ ಮುಂದೆ ಬರಲು ಗೈಡ್‌ ಮಾಡಿದಳು. ಹಾಗೇ ನಿಧಾನಕ್ಕೆ ಅಪ್ಪ ಅಂಚನ್ನು ತಲುಪಿದ. ಮೊದಲ ಸಲ ನೋಡದಾಗ ಹೊಟ್ಟೆಯಲ್ಲಿ ತಳಮಳ ಆಯ್ತು. ಆದರೆ ಮಗಳ ಸಲಹೆಯಂತೆ ಮಲಗಿಕೊಂಡೇ ಎತ್ತರದ ಜಾಗದಿಂದ ತಗ್ಗನ್ನು ನೋಡಿದ. ತನಗ್ಯಾವ ಅಪಾಯವೂ ಇಲ್ಲ ಅಂತ ಅರಿತ ಮನಸ್ಸೂ ಸಹಕರಿಸಿತು. ಒಂದು ಹಂತದ ಬಳಿಕ ಅಷ್ಟು ಎತ್ತರದಿಂದ ಕೆಳಗೆ ನೋಡಿದಾಗ ಹಿಂದಿನ ಪೀಲ್‌ ಆಗಲೇ ಇಲ್ಲ. ಆಗ ಅಪ್ಪನಿಗಾದ ಭಾವೋದ್ವೇಗವನ್ನು ಮಾತಿನಲ್ಲಿ ವಿವರಿಸೋದು ಕಷ್ಟ.

ಹೀಗೆ ಪುಟ್ಟ ಮಗಳೊಬ್ಬಳು ಅಪ್ಪನ ಭಯವನ್ನು ನಿವಾರಿಸಿದಳು. ಅವನಿಗೆ ಬದುಕಿನ ದರ್ಶನ ಮಾಡಿಸಿದಳು.