ಹಲವು ದಿನಗಳ ಬಳಿಕ ಕಾಲ್ ಮಾಡಿದ ಗೆಳತಿಯೊಬ್ಬಳು ಮಾತಿನ ಮಧ್ಯೆ‘ಹೇ ನೀನು ಖುಷಿಯಾಗಿದ್ದೀಯಾ, ಲೈಫ್ ಎಂಜಾಯ್ ಮಾಡ್ತ ಇದ್ದಿಯಾ?’ ಅಂತೆಲ್ಲ ಪ್ರಶ್ನೆ ಹಾಕೋಕೆ ಶುರು ಮಾಡಿದ್ಳು. ಅರೇ,ಇವಳೇಕೆ ಹೀಗೆ ಕೇಳ್ತಾ ಇದ್ದಾಳೆ ಅಂತ ತಲೆಯಲ್ಲೊಂದು ಹುಳ ಕೊರಿಯೋಕೆ ಶುರು ಮಾಡ್ತು. ಆದ್ರೂ ಕಂಟ್ರೋಲ್ ಮಾಡ್ಕೊಂಡು ಮಾತು ಮುಂದುವರಿಸಿದೆ. ಸ್ವಲ್ಪ ಹೊತ್ತಿನ ಬಳಿಕ ಅದೇ ಅರ್ಥದಲ್ಲಿ ಇನ್ನೊಂದೇನೋ ಪ್ರಶ್ನೆ ಕೇಳಿದಳು. ಈಗ ಮಾತ್ರ ನಿಜಕ್ಕೂ ತಲೆ ಕೆರೆದುಕೊಳ್ಳುವ ಸರದಿ ನನ್ನದಾಗಿತ್ತು. ಇನ್ನು ಸುಮ್ಮನಿದ್ರೆ ನೆಮ್ಮದಿ ಹರಣ ಗ್ಯಾರಂಟಿ ಎಂದು ಯಾಕೆ ಹಾಗೆ ಕೇಳ್ತಾ ಇದ್ದಿಯಾ? ನಂಗೇನಾಗಿದೆ ಎಂದು ಅವಳನ್ನೇ ಕೇಳಿದೆ. ಅದಕ್ಕವಳು ‘ಅಲ್ಲ, ನಮ್ಮ ಗ್ರೂಪ್‍ನಲ್ಲಿರುವ ಉಳಿದವರೆಲ್ಲರೂ ಫೇಸ್‍ಬುಕ್, ವಾಟ್ಸ್ಆಪ್‍ನಲ್ಲಿ ಸದಾ ಆ್ಯಕ್ಟಿವ್ ಇರ್ತಾರೆ. ಏನ್ ತಗೊಂಡ್ರೂ, ಏನ್ ತಿಂದ್ರೂ, ಎಲ್ಲಿಗೆ ಹೋದ್ರೂ ಅಂತೆಲ್ಲ ಸದಾ ಫೋಟೋಸ್ ಅಪ್ಲೋಡ್ ಮಾಡ್ತಾರೆ. ನೀನು ಏನೂ ಹಾಕಲ್ಲ ಅಲ್ಲವಾ? ಅದಕ್ಕೇ ಕೇಳ್ದೆ.’ ಅಂತೂ ಆಕೆಯ ಪ್ರಶ್ನೆ ಹಿಂದಿನ ಕಾರಣ ಸಿಕ್ಕು, ಮನಸ್ಸು ಹಗುರವಾಗುವ ಜೊತೆಗೆ ನಗುವೂ ಬಂತು. 

ನಾವು ಸುಖವಾಗಿದ್ದೇವೆ ಅಂತ ಅನಿಸೋದು ಯಾವಾಗ ಗೊತ್ತಾ?

ನಿಜ, ಇಂದು ಫೇಸ್‍ಬುಕ್, ಇನ್‍ಸ್ಟ್ರಾಗ್ರಾಂನಲ್ಲಿ ಫೋಟೋಸ್ ಅಪ್ಲೋಡ್ ಮಾಡಿಲ್ಲ, ಲೈವ್ ಅಪ್ಡೇಟ್ಸ್ ಕೊಟ್ಟಿಲ್ಲ, ವಾಟ್ಸ್ಆಪ್‍ನಲ್ಲಿ ಸ್ಟೇಟಸ್ ಹಾಕಿಲ್ಲ ಅಂದ್ರೆ ನೀವು ಲೈಫ್‍ನಲ್ಲಿ ಖುಷಿಯಾಗಿಲ್ಲ ಎಂದು ನಿರ್ಧರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾದ್ರೆ ಈ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್, ಸ್ಟೇಟಸ್ ಅಪ್ಲೋಡ್ ಮಾಡುವವರೆಲ್ಲ ಬದುಕನ್ನು ತುಂಬಾ ಎಂಜಾಯ್ ಮಾಡ್ತಿದ್ದಾರಾ? ಅವರೆಲ್ಲ ಸುಖಿಗಳಾ? ಖಂಡಿತಾ ಅಲ್ಲ, ಆದ್ರೆ ಹೊರಜಗತ್ತಿಗೆ ನಾವು ಖುಷಿಯಾಗಿದ್ದೇವೆ ಎಂದು ತೋರಿಸಿಕೊಳ್ಳಬೇಕೆಂಬ ಹಂಬಲದಿಂದ ದುಃಖದ ಮುಖಕ್ಕೆ ನಗುವಿನ ಮುಖವಾಡ ತೊಡಿಸಿರುತ್ತಾರಷ್ಟೇ. ಆದ್ರೆ ಅದನ್ನೇ ನೋಡಿ ಕೆಲವರು ‘ಅಯ್ಯೋ ಅವರೆಷ್ಟು ಅದೃಷ್ಟವಂತರು, ಸುಖಿಗಳು. ನಮಗಂತಹ ಭಾಗ್ಯವಿಲ್ಲವಲ್ಲ’ ಎಂದು ಕೊರಗುತ್ತಾರೆ. ಅದೇ ಸೋಷಿಯಲ್ ಮೀಡಿಯಾಕ್ಕೆ ಅಂಟಿಕೊಳ್ಳದೆ ಇತಿಮಿತಿಯಲ್ಲಿ ಬಳಸುವ ಪ್ರಬಲ ವ್ಯಕ್ತಿತ್ವ ನಿಮ್ಮದಾಗಿದ್ದರೆ ಇಂಥ ಪೋಸ್ಟ್‌ಗಳು ಖಂಡಿತಾ ನಿಮ್ಮ ನೆಮ್ಮದಿ ಹಾಳು ಮಾಡುವುದಿಲ್ಲ. ಜೊತೆಗೆ ಅವುಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದೂ ಇಲ್ಲ.

ಎಣ್ಣೆಯಾಗಿ ನಮ್ಮೊಳಗಿನ ಸ್ಫೂರ್ತಿಯ ದೀಪ ಎಂದೂ ಆರದಿರಲಿ..

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗುವ ಎಲ್ಲ ಸಂಗತಿಗಳು ಸತ್ಯವಾಗಿರುವುದಿಲ್ಲ. ಅದರ ಹಿಂದೆ ಬೇರೆಯೇ ಕಥೆ ಇರುತ್ತದೆ, ಇನ್ನೊಂದು ಮುಖವಿರುತ್ತದೆ. ಆದರೆ, ಆ ಮುಖ ಉಳಿದವರಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಕೆಲವರು ಖುಷಿ ಹಾಗೂ ಪ್ರತಿಷ್ಠೆಯನ್ನು ಬಿಂಬಿಸುವ ಫೋಟೋಗಳು, ಪೋಸ್ಟ್‌ಗಳನ್ನು ಹಾಕುತ್ತಾರೆ. ಇಂಥ ಮನಸ್ಥಿತಿಗೆ ಕಾರಣವೇನಿರಬಹುದು?

• ಪ್ರತಿಯೊಬ್ಬರು ತಾವು ಖುಷಿಯಾಗಿದ್ದೇವೆ ಎಂಬುದನ್ನು ತೋರ್ಪಡಿಸಲು ಪ್ರಯತ್ನಿಸುತ್ತಾರೆ. ಈ ಗುಣವೇ ಇಂದು ಸೋಷಿಯಲ್ ಮೀಡಿಯಾದಲ್ಲಿ ಎಲ್ಲವನ್ನೂ ಪೋಸ್ಟ್ ಮಾಡಬೇಕೆಂಬ ಹಪಾಹಪಿಗೆ ಕಾರಣವಾಗಿರುವುದು. ಒಬ್ಬ ವ್ಯಕ್ತಿ ಅದೆಷ್ಟೇ ಒತ್ತಡದಲ್ಲಿರಲಿ, ಆತನ ಮನಸ್ಸಿನಲ್ಲಿ ಬೆಟ್ಟದಂತಹ ದುಃಖ, ಗೊಂದಲಗಳು ಮನೆ ಮಾಡಿರಲಿ, ನಗು ನಗುತ್ತಲಿರುವ ಸೆಲ್ಫಿಯೊಂದನ್ನು ಫೇಸ್‍ಬುಕ್ ಅಥವಾ ಇನ್‍ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿ, ಎಲ್ಲವೂ ಸರಿಯಿದೆ ಎಂಬುದನ್ನು ಇತರರಿಗೆ ತಿಳಿಸಲು ಪ್ರಯತ್ನಿಸುತ್ತಾನೆ.ಮನೋವಿಜ್ಞಾನದ ಪ್ರಕಾರ ಉಳಿದವರಿಗೆ ತಾನು ಖುಷಿಯಾಗಿದ್ದೇನೆ ಎನ್ನುವುದನ್ನು ಮನದಟ್ಟು ಮಾಡಿಸುವ ಸಲುವಾಗಿ ವ್ಯಕ್ತಿ ಇಂಥ ವರ್ತನೆ ತೋರುತ್ತಾನಂತೆ.

ಪ್ರೇಮಿಯ ಮೇಲೆ ಅತಿಯಾದ ಅವಲಂಬನೆ ಒಳ್ಳೇದಲ್ಲ

• ಇತ್ತೀಚಿನ ದಿನಗಳಲ್ಲಿ ಡಯಟ್, ಹೆಲ್ತಿ ಈಟಿಂಗ್, ಹೆಲ್ತಿ ಫುಡ್ ಮುಂತಾದ ಕಾನ್ಸೆಪ್ಟ್‌ಗಳು ಭಾರೀ ಸದ್ದು ಮಾಡುತ್ತಿವೆ.ಕೆಲವರು ನಿಜ ಜೀವನದಲ್ಲೂ ಆರೋಗ್ಯಕರವಾದ ಆಹಾರಗಳನ್ನೇ ಸೇವಿಸುತ್ತಾರೆ.ಇನ್ನೂ ಕೆಲವರು ಹೊಟ್ಟೆಬಿರಿಯುವಷ್ಟು ಜಂಕ್‍ಫುಡ್, ಫಾಸ್ಟ್ ಫುಡ್‌ಗಳನ್ನು ತಿನ್ನುತ್ತಾರೆ. ಆದರೆ,ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೋ ಒಮ್ಮೆ ತರಕಾರಿ ಅಥವಾ ಹಣ್ಣುಗಳ ಸಲಾಡ್ ತಿನ್ನುವಾಗ ತೆಗೆದ ಆಕರ್ಷಕ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಈ ಫೋಟೋ ನೋಡಿದವರು ಇವರೆಷ್ಟು ಚೆನ್ನಾಗಿ ಡಯಟ್ ಮಾಡುತ್ತಾರಪ್ಪ ಎಂದು ಮೆಚ್ಚಿಕೊಳ್ಳಬೇಕು. ಮನೋವೈದ್ಯರ ಪ್ರಕಾರ ನಾನು ಆರೋಗ್ಯವಂತ ಎಂದು ಜನರಿಗೆ ತೋರಿಸಿಕೊಳ್ಳುವ ಇಂಥ ವರ್ತನೆಯು‘ಅರ್ಥೋರೆಕ್ಸಿಯಾ’ ಎಂಬ ತಿನ್ನುವ ಕಾಯಿಲೆಯ ಲಕ್ಷಣವಾಗಿರುವ ಸಾಧ್ಯತೆಯಿದೆ.
• ಪ್ರೀತಿ ಎರಡು ಹೃದಯಗಳ ವಿಷಯವಾದರೂ ಕೆಲವರಿಗೆ ಅದನ್ನು ಎಲ್ಲರಿಗೂ ತಿಳಿಸಬೇಕೆಂಬ ಹಂಬಲ. ಅದಕ್ಕಾಗಿಯೇ ಕೆಲವರು ತನ್ನ ಸಂಗಾತಿ, ಸಂಬಂಧ, ಮದುವೆ, ಪ್ರೀತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಡಾಯಿ ಕೊಚ್ಚಿಕೊಳ್ಳೋದು, ಫೋಟೋಗಳನ್ನು ಪೋಸ್ಟ್ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಅಧ್ಯಯನವೊಂದರ ಪ್ರಕಾರ ಯಾರು ತಮ್ಮ ರಿಲೇಷನ್‍ಶಿಪ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಪೋಸ್ಟ್‌ಗಳನ್ನು ಮಾಡುತ್ತಾರೋ ಅವರು ತಮ್ಮ ಸಂಗಾತಿಯ ಜೊತೆಗೆ ನಿಜಜೀವನದಲ್ಲಿ ಹೆಚ್ಚಿನ ಭಿನ್ನಾಭಿಪ್ರಾಯ ಹೊಂದಿರುತ್ತಾರೆ. 
• ಇನ್ನೂ ಕೆಲವರಿಗೆ ತಾನೆಷ್ಟು ಶ್ರೀಮಂತ ಎಂಬುದನ್ನು ಎಲ್ಲರಿಗೂ ತೋರಿಸುವ ತವಕ. ನಿಜ ಜೀವನದಲ್ಲಿ ಅದೆಷ್ಟೇ ಆರ್ಥಿಕ ಮುಗ್ಗಟ್ಟಿದ್ದರೂ ಫೇಸ್‍ಬುಕ್‍ಗೆ ಮಾತ್ರ ದುಬಾರಿ ಕಾರಿನೊಂದಿಗಿರುವ, ವಿದೇಶಕ್ಕೆ ಟ್ರಿಪ್ ಹೋದ, ಬೆಲೆಬಾಳುವ ಆಭರಣಗಳನ್ನು ಧರಿಸಿದ ಫೋಟೋಗಳನ್ನು ಹಾಕುವ ಮೂಲಕ ಐ ಆಮ್ ಎ ರಿಚ್ ಪರ್ಸನ್ ಎಂದು ಸಾರಿ ಹೇಳುತ್ತಾರೆ.